पवित्र बाइबिल
ಹಳೆಯ ಒಡಂಬಡಿಕೆ
ಹೋಶೇಯ
13ನೇ ಅಧ್ಯಾಯ
- Verse 1: ಪೂರ್ವದಲ್ಲಿ ಎಫ್ರಯಿಮ್ ಮಾತನಾಡಿದಾಗ ಎಲ್ಲರೂ ನಡುಗುತ್ತಿದ್ದರು. ಅದು ಇಸ್ರಯೇಲಿನಲ್ಲಿ ಅಷ್ಟು ಉನ್ನತ ಸ್ಥಿತಿಗೆ ಏರಿತ್ತು. ಆದರೆ ಅದು ಬಾಳ್ ದೇವತೆಗೆ ಆರಾಧನೆ ಸಲ್ಲಿಸಿದ್ದರಿಂದ ಪಾಪಕಟ್ಟಿಕೊಂಡು ಪತನವಾಯಿತು.
- Verse 2: ಈಗ ಎಫ್ರಯಿಮರ ಪಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅವರು ಬೆಳ್ಳಿಬಂಗಾರವನ್ನು ಕರಗಿಸಿ ಇಷ್ಟಬಂದಂತೆ ಬೊಂಬೆಗಳನ್ನು ಮಾಡಿಕೊಂಡಿದ್ದಾರೆ. ಅವೆಲ್ಲವು ಶಿಲ್ಪಿಗಳ ಕೈಕೆಲಸವೇ ಹೊರತು ಮತ್ತೇನು ಅಲ್ಲ. ಇಂಥ ವಿಗ್ರಹಗಳನ್ನು ಪೂಜೆಗಾಗಿ ಪ್ರತಿಷ್ಠಾಪನೆಮಾಡುತ್ತಾರೆ. ಬುದ್ಧಿಜೀವಿಗಳಾದ ಇವರು ಬಸವನಿಗೆ ಮುದ್ದಿಡುತ್ತಾರೆ.
- Verse 3: ಇವರು ಪ್ರಾತಃಕಾಲದ ಮೋಡದಂತೆ ಮಾಯವಾಗುತ್ತಾರೆ. ಇಬ್ಬನಿಯಂತೆ ಕರಗಿಹೋಗುತ್ತಾರೆ. ಬಿರುಗಾಳಿಗೆ ಸಿಕ್ಕಿದ ಹೊಟ್ಟಿನಂತೆ ತೂರಿಹೋಗುತ್ತಾರೆ; ಗವಾಕ್ಷಿಯ ಹೊಗೆಯಂತೆ ಗಾಳಿಯಲ್ಲಿ ತೇಲಿಹೋಗುತ್ತಾರೆ.
- Verse 4: ಸರ್ವೇಶ್ವರ ಇಂತೆನ್ನುತ್ತಾರೆ: “ಈಜಿಪ್ಟಿನಿಂದ ನಿನ್ನನ್ನು ಬಿಡಿಸಿಕೊಂಡು ಬಂದಾಗಲಿಂದ ನಾನೇ ನಿನ್ನ ಸರ್ವೇಶ್ವರನಾದ ದೇವರು. ನಾನಲ್ಲದೆ ಬೇರೆ ದೇವರುಗಳು ನಿನಗಿಲ್ಲ. ನಾನಲ್ಲದೆ ನಿನಗೆ ಬೇರೆ ಉದ್ಧಾರಕರಿಲ್ಲ.
- Verse 5: ಬೆಂಗಾಡಿನಲ್ಲಿ, ಘೋರ ಮರುಭೂಮಿಯಲ್ಲಿ ನಿನ್ನನ್ನು ಕಾಪಾಡಿದವನು ನಾನೇ.
- Verse 6: ಅನ್ನ ಆಹಾರ ಯಥೇಚ್ಛವಾಗಿ ಸಿಕ್ಕಿದಾಗ ನಿನ್ನವರು ತಿಂದು ತೃಪ್ತರಾದರು; ಅಹಾಂಭಾವ ಅವರ ನೆತ್ತಿಗೇರಿತು. ಆಗ ಅವರು ನನ್ನನ್ನು ಮರೆತುಬಿಟ್ಟರು.
- Verse 7: ಆದುದರಿಂದ ನಾನು ಅವರಿಗೆ ಸಿಂಹದಂತಿರುವೆನು. ದಾರಿಯ ಮಗ್ಗುಲಲ್ಲಿ ಹೊಂಚುಹಾಕುವ ಚಿರತೆಯಂತಿರುವೆನು.
- Verse 8: ಮರಿಗಳನ್ನು ಕಳೆದುಕೊಂಡ ಕರಡಿಯಂತೆ ಅವರ ಮೇಲೆ ಬೀಳುವೆನು. ಅವರ ಎದೆಯನ್ನು ಬಗಿದುಹಾಕುವೆನು. ಮೃಗರಾಜರಂತೆ ಅವರನ್ನು ನುಂಗಿಬಿಡುವೆನು. ಕಾಡುಮೃಗದಂತೆ ಅವರನ್ನು ಸೀಳಿಬಿಡುವೆನು.
- Verse 9: “ಇಸ್ರಯೇಲ್, ನಿನ್ನನ್ನು ನಾಶಮಾಡುವೆನು, ನಿನಗೆ ನೆರವಾಗಬಲ್ಲವರು ಯಾರು?
- Verse 10: ‘ನನಗೆ ರಾಜನು ಬೇಕು, ರಾಜಾಧಿಕಾರಿಗಳು ಬೇಕು’ ಎಂದು ಹೇಳಿಕೊಂಡಿದ್ದಿಯಲ್ಲಾ; ನಿನ್ನನ್ನು ರಕ್ಷಿಸಬಲ್ಲ ರಾಜನೆಲ್ಲಿ? ನಿನ್ನನ್ನು ಕಾಪಾಡಬಲ್ಲ ನಗರಪಾಲಕರೆಲ್ಲಿ?
- Verse 11: ಇಷ್ಟವಿಲ್ಲದೆ ಸಿಟ್ಟಿನಿಂದ ನಿನಗೆ ರಾಜನನ್ನು ಕೊಟ್ಟೆ. ಈಗ ಕಡುಕೋಪದಿಂದ ಆ ರಾಜರನ್ನು ತೆಗೆದುಬಿಡುತ್ತೇನೆ.
- Verse 12: “ಎಫ್ರಯಿಮಿನ ಅಕ್ರಮಗಳೆಲ್ಲ ದಾಖಲಾಗಿವೆ. ಅದರ ಪಾಪಕೃತ್ಯಗಳನ್ನೆಲ್ಲ ಒಂದೂ ಬಿಡದೆ ಲೆಕ್ಕಹಾಕಿಡಲಾಗಿದೆ.
- Verse 13: ಎಫ್ರಯಿಮಿಗೆ ಪ್ರಸವವೇದನೆ ಬಂದಿದೆ. ಅಷ್ಟೇ ಅಲ್ಲ. ಅದೊಂದು ಮಂಕು ಮಗುವಿನಂತಿದೆ. ಹುಟ್ಟಿ, ಹೊರಗೆ ಬರಬಹುದಾದರೂ, ಅದು ಬಾರದೆ ಇದೆ.
- Verse 14: ಅದನ್ನು ಪಾತಾಳದ ಹಿಡಿತದಿಂದ ನಾನು ಬಿಡಿಸಲಾರೆ. ಮರಣದ ಬಾಧೆಯಿಂದ ಅವರನ್ನು ರಕ್ಷಿಸಲಾರೆ. ‘ಮರಣವೇ, ನಿನ್ನ ಮಾರಕ ವ್ಯಾಧಿಗಳಿಂದ ಅವರನ್ನು ಬಾಧಿಸು. ಪಾತಾಳವೇ, ಅವರನ್ನು ಕಬಳಿಸಿ ನಾಶಗೊಳಿಸು. ಕರುಣೆ ನನ್ನಿಂದ ದೂರವಾಗಿದೆ.
- Verse 15: ಎಫ್ರಯಿಮ್ ಕಳೆಗಳ ನಡುವೆ ಸೊಂಪಾಗಿ ಬೆಳೆದ ಜೊಂಡಿನಂತಿದೆ. ಆದರೆ ಸರ್ವೇಶ್ವರ ಮರುಭೂಮಿಯಿಂದ ಮೂಡಣಗಾಳಿ ಬೀಸುವಂತೆ ಮಾಡುವರು. ಅದರ ಬುಗ್ಗೆ ಬತ್ತಿಹೋಗುವುದು. ಅದರ ಒರತೆ ಒಣಗಿಹೋಗುವುದು. ಅದರ ಸಿರಿಸಂಪತ್ತಿನ ನಿಧಿಯನ್ನು ಶತ್ರುಗಳು ಸೂರೆಮಾಡುವರು.
- Verse 16: ಸಮಾರ್ಯವು ತನ್ನ ದೇವರಿಗೆ ವಿರುದ್ಧ ದಂಗೆ ಎದ್ದಿದೆ. ಅದಕ್ಕೆ ತಕ್ಕ ಪ್ರತಿಫಲವನ್ನು ಅನುಭವಿಸಲೇಬೇಕು. ಅದರ ಜನರು ಖಡ್ಗದಿಂದ ಹತರಾಗುವರು; ಶತ್ರುಗಳು ಅಲ್ಲಿನ ಮಕ್ಕಳನ್ನು ಬಂಡೆಗೆ ಅಪ್ಪಳಿಸುವರು. ಗರ್ಭಿಣಿಯರ ಹೊಟ್ಟೆಯನ್ನು ಸೀಳಿಹಾಕುವರು.”