पवित्र बाइबिल
ಹೊಸ ಒಡಂಬಡಿಕೆ
2 ಕೊರಿಂಥಿಯರಿಗೆ
4ನೇ ಅಧ್ಯಾಯ
- Verse 1: ದೇವರ ಕರುಣೆಯಿಂದ ಈ ಸೇವೆಯನ್ನು ಕೈಗೊಂಡಿರುವ ನಾವು ಧೈರ್ಯಗೆಟ್ಟು ಹಿಂಜರಿಯುವುದಿಲ್ಲ.
- Verse 2: ಲಜ್ಜೆಗೆಟ್ಟ ಗುಪ್ತಕಾರ್ಯಗಳಿಂದ ನಾವು ದೂರವಿದ್ದೇವೆ. ನಮ್ಮ ನಡತೆಯಲ್ಲಿ ಮೋಸ, ವಂಚನೆ ಎಂಬುದಿಲ್ಲ. ದೇವರ ವಾಕ್ಯವನ್ನು ನಾವು ಅಪಾರ್ಥಗೊಳಿಸುವುದಿಲ್ಲ. ಬದಲಿಗೆ ಸತ್ಯವನ್ನು ಪ್ರಾಮಾಣಿಕವಾಗಿ ಸಾರುತ್ತೇವೆ. ಹೀಗೆ ದೇವರ ಸಮ್ಮುಖದಲ್ಲಿ ಸಜ್ಜನರಾದವರಿಗೆ ಸಾಕ್ಷಿಗಳಾಗಿದ್ದೇವೆ.
- Verse 3: ನಾವು ಪ್ರಚಾರಮಾಡುವ ಶುಭಸಂದೇಶ ಕೆಲವರಿಗೆ ಇನ್ನೂ ಮುಸುಕಿನ ಮರೆಯಾಗಿದ್ದರೆ, ಹಾಗಿರುವುದು ವಿನಾಶ ಮಾರ್ಗದಲ್ಲಿರುವವರಿಗೆ ಮಾತ್ರ.
- Verse 4: ಇವರು ವಿಶ್ವಾಸಿಸುವುದಿಲ್ಲ. ಏಕೆಂದರೆ, ಪೃಥ್ವಿಯ ಮಿಥ್ಯ ದೈವವು ಇವರ ಮನಸ್ಸನ್ನು ಮಂಕಾಗಿಸಿದೆ; ದೇವರ ಪ್ರತಿರೂಪವಾಗಿರುವ ಕ್ರಿಸ್ತಯೇಸುವಿನ ಮಹಿಮೆಯನ್ನು ಸಾರುವ ಶುಭಸಂದೇಶದ ಬೆಳಕನ್ನು ಕಾಣದಂತೆ ಇವರನ್ನು ಕುರುಡಾಗಿಸಿದೆ.
- Verse 5: ನಾವು ನಮ್ಮನ್ನೇ ಕುರಿತು ಪ್ರಚಾರಮಾಡುತ್ತಿಲ್ಲ. ಆದರೆ ಕ್ರಿಸ್ತಯೇಸುವೇ ಪ್ರಭುವೆಂದೂ ಅವರಿಗೋಸ್ಕರ ನಾವು ನಿಮ್ಮ ದಾಸರೆಂದೂ ಪ್ರಚುರಪಡಿಸುತ್ತಿದ್ದೇವೆ.
- Verse 6: “ಕತ್ತಲೆಯಿಂದ ಬೆಳಕು ಹೊಳೆಯಲಿ,” ಎಂದ ದೇವರೇ, ತಮ್ಮ ಜ್ಯೋತಿಯಿಂದ ನಮ್ಮ ಅಂತರಂಗವನ್ನು ಬೆಳಗಿಸಿದ್ದಾರೆ. ಇದರ ಪರಿಣಾಮವಾಗಿ ಕ್ರಿಸ್ತಯೇಸುವಿನ ಮುಖಮಂಡಲದಲ್ಲಿ ಪ್ರಜ್ವಲಿಸುತ್ತಿರುವ ದೇವರ ಮಹಿಮೆಯ ದಿವ್ಯಜ್ಞಾನವು ನಮ್ಮಲ್ಲಿ ಉದಯಿಸುವಂತಾಗಿದೆ.
- Verse 7: ನಾವು ಇಂಥ ಆಧ್ಯಾತ್ಮಿಕ ಮಾಣಿಕ್ಯವನ್ನು ಪಡೆದಿದ್ದರೂ ಮಣ್ಣಿನ ಮಡಕೆಗಳಂತೆ ಇದ್ದೇವೆ. ಹೀಗೆ, ಈ ಪರಮೋನ್ನತ ಶಕ್ತಿ ನಮಗೆ ಸೇರಿದ್ದಲ್ಲ. ದೇವರಿಗೆ ಸೇರಿದ್ದೆಂದು ವ್ಯಕ್ತವಾಗುತ್ತದೆ.
- Verse 8: ನಾವು ಇಕ್ಕಟ್ಟುಬಿಕ್ಕಟ್ಟುಗಳಿಗೆ ಒಳಗಾಗಿದ್ದರೂ ನಜ್ಜುಗುಜ್ಜಾಗಲಿಲ್ಲ; ಸಂಶಯ ಸಂದೇಹಗಳಿಗೊಳಗಾದರೂ ನಿರಾಶೆಗೊಳ್ಳಲಿಲ್ಲ.
- Verse 9: ಶತ್ರುಗಳು ಅನೇಕರಿದ್ದರೂ ಮಿತ್ರನೊಬ್ಬನು ಇಲ್ಲದಿರಲಿಲ್ಲ. ಪ್ರಾಣ ಹಿಂಸೆಗಳಿಗೀಡಾಗಿದ್ದರೂ ಪ್ರಾಣನಷ್ಟವನ್ನು ಅನುಭವಿಸಲಿಲ್ಲ.
- Verse 10: ಯೇಸುವಿನ ದಿವ್ಯಜೀವವು ನಮ್ಮ ದೇಹದಲ್ಲಿ ಗೋಚರವಾಗುವಂತೆ ಅವರ ಮರಣಯಾತನೆಯನ್ನು ನಿರಂತರವಾಗಿ ಅನುಭವಿಸುತ್ತಾ ಬಾಳುತ್ತಿದ್ದೇವೆ.
- Verse 11: ಯೇಸುವಿನ ಅಮರ ಜೀವವು ನಮ್ಮ ನಶ್ವರ ಶರೀರದಲ್ಲಿ ಗೋಚರವಾಗುವಂತೆ ಬದುಕಿರುವಾಗಲೇ ನಾವು ಯೇಸುವಿಗೋಸ್ಕರ ಸತತ ಸಾವಿಗೆ ಈಡಾಗಿದ್ದೇವೆ.
- Verse 12: ಹೀಗೆ ನಮ್ಮಲ್ಲಿ ಸಾವು ಕಾರ್ಯಗತವಾಗುತ್ತಿದ್ದರೆ ನಿಮ್ಮಲ್ಲಿ ಜೀವ ಕಾರ್ಯಗತವಾಗುತ್ತಿದೆ.
- Verse 13: “ನಾನು ವಿಶ್ವಾಸವಿಟ್ಟೆನು. ಆದ್ದರಿಂದ ಮಾತನಾಡಿದೆನು,” ಎಂದು ಪವಿತ್ರಗ್ರಂಥದಲ್ಲಿ ಬರೆಯಲಾಗಿದೆ. ಇದೇ ಮನೋಭಾವನೆಯಿಂದ ಕೂಡಿರುವ ನಾವು ಮಾತನಾಡಲೇಬೇಕು. ಏಕೆಂದರೆ ನಮಗೆ ವಿಶ್ವಾಸವಿದೆ.
- Verse 14: ಪ್ರಭು ಯೇಸುವನ್ನು ಪುನರುತ್ಥಾನಗೊಳಿಸಿದ ದೇವರು ನಮ್ಮನ್ನು ಯೇಸುಕ್ರಿಸ್ತರೊಡನೆ ಪುನರುತ್ಥಾನಗೊಳಿಸಿ ತಮ್ಮ ಸಾನ್ನಿಧ್ಯಕ್ಕೆ ಬರಮಾಡಿಕೊಳ್ಳುವರು ಎಂಬುದನ್ನು ನಾವು ಬಲ್ಲೆವು. ಅಂತೆಯೇ ನಿಮ್ಮನ್ನೂ ಬರಮಾಡಿಕೊಳ್ಳುವರು.
- Verse 15: ಇದೆಲ್ಲವೂ ನಿಮ್ಮ ಒಳಿತಿಗಾಗಿಯೇ. ಹೀಗೆ ಅನೇಕರಲ್ಲಿ ದೇವರ ವರಪ್ರಸಾದವು ಉಕ್ಕಿ ಹರಿಯುವುದು; ಅವರಲ್ಲಿ ಕೃತಜ್ಞತಾಭಾವನೆಯನ್ನು ಹೆಚ್ಚಿಸುವುದು; ಇದರಿಂದಾಗಿ ದೇವರ ಮಹಿಮೆ ಬೆಳಗುವುದು.
- Verse 16: ಹೀಗಿರಲು, ನಾವು ಎದೆಗುಂದುವುದಿಲ್ಲ. ನಮ್ಮ ಭೌತಿಕ ದೇಹವು ನಶಿಸುತ್ತಿದ್ದರೂ ನಮ್ಮ ಅಂತರಂಗವು ದಿನೇದಿನೇ ನೂತನವಾಗುತ್ತದೆ.
- Verse 17: ನಾವು ಅನುಭವಿಸುತ್ತಿರುವ ಕಷ್ಟಸಂಕಟಗಳು ಅಲ್ಪವಾದುವು, ಕ್ಷಣಿಕವಾದುವು. ಅವುಗಳಿಂದ ಲಭಿಸುವ ಮಹಿಮೆಯಾದರೋ ಅಪಾರವಾದುದು, ಅನಂತವಾದುದು.
- Verse 18: ನಮ್ಮ ಗಮನವು ಕೇಂದ್ರೀಕೃತವಾಗಿರುವುದು ಗೋಚರವಾದುವುಗಳ ಮೇಲಲ್ಲ, ಅಗೋಚರವಾದುವುಗಳ ಮೇಲೆ. ಗೋಚರವಾದುವುಗಳು ತಾತ್ಕಾಲಿಕ; ಅಗೋಚರವಾದುವುಗಳು ಶಾಶ್ವತ.