ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
2ನೇ ಅಧ್ಯಾಯ
- Verse 1: ಮಗನೇ, ನನ್ನ ಮಾತುಗಳನ್ನು ಅಂಗೀಕರಿಸು; ನಿಧಿಯಂತೆ ನನ್ನ ವಿಧಿಗಳನ್ನು ಕಾದಿರಿಸು.
- Verse 2: ಜ್ಞಾನದ ಕಡೆಗೆ ಕಿವಿಗೊಡು, ವಿವೇಕದ ಕಡೆಗೆ ಮನತಿರುಗಿಸು.
- Verse 3: ಬುದ್ಧಿಗಾಗಿ ಮೊರೆಯಿಡು, ವಿವೇಕಕ್ಕಾಗಿ ಕೂಗಿಕೊಳ್ಳು.
- Verse 4: ಹಣದಂತೆ ಅದನ್ನು ಹುಡುಕು, ನಿಧಿಯಂತೆ ಅದನ್ನು ತಡಕು.
- Verse 5: ಆಗ ಅರಿತುಕೊಳ್ಳುವೆ ದೈವಭಯವನ್ನು, ಪಡೆದುಕೊಳ್ಳುವೆ ದೈವಜ್ಞಾನವನ್ನು.
- Verse 6: ಜ್ಞಾನವನ್ನು ನೀಡುವಾತ ಸರ್ವೇಶ್ವರನೇ; ತಿಳುವಳಿಕೆ, ವಿವೇಕ ಹೊರಡುವುದು ಆತನ ಬಾಯಿಂದಲೇ.
- Verse 7: ಜ್ಞಾನವನ್ನು ಸಜ್ಜನರಿಗೆ ಸೇರಿಸಿಡುವನಾತ, ಸನ್ಮಾರ್ಗಿಗಳಿಗೆ ಕವಚವಾಗಿರುವನಾತ.
- Verse 8: ನ್ಯಾಯಮಾರ್ಗವನ್ನು ಕಾಯುವನಾತ, ಭಕ್ತರ ಹಾದಿಯನ್ನು ಭದ್ರವಾಗಿಸುವನಾತ.
- Verse 9: ಆಗ ನೀತಿನ್ಯಾಯಗಳನ್ನು ನೀನರಿತುಕೊಳ್ಳುವೆ, ಸಕಲ ಸನ್ಮಾರ್ಗಸತ್ಯತೆಗಳನ್ನೂ ತಿಳಿದುಕೊಳ್ಳುವೆ.
- Verse 10: ಜ್ಞಾನ ಉದಯಿಸುವುದು ನಿನ್ನ ಹೃದಯದೊಳಗೆ, ತಿಳುವಳಿಕೆ ಬೆಳಗುವುದು ನಿನ್ನ ಆತ್ಮದೊಳಗೆ.
- Verse 11: ಬುದ್ಧಿಯು ನಿನಗೆ ಕಾವಲಾಗಿರುವುದು, ವಿವೇಕವು ನಿನ್ನನ್ನು ಕಾಪಾಡುವುದು.
- Verse 12: ಹೀಗೆ ದುರ್ಮಾರ್ಗದಿಂದ ತಪ್ಪಿಸಿಕೊಳ್ಳುವೆ, ಮೂರ್ಖ ಮಾತುಗಾರನಿಂದ ಮರೆಯಾಗುವೆ.
- Verse 13: ಅಂಥವರು ಹಿಡಿವುದು ಕತ್ತಲು ಹಾದಿಯನ್ನು, ತೊರೆದುಬಿಡುವರು ಸತ್ಯದ ಮಾರ್ಗವನ್ನು.
- Verse 14: ಅವರು ಸಂತೋಷಿಸುವುದು ಕೇಡನ್ನು ಮಾಡುವುದರಲ್ಲಿ. ಉಲ್ಲಾಸಿಸುವುದು ಕೆಟ್ಟವರ ದುಷ್ಟತನದಲ್ಲಿ,
- Verse 15: ಅವರ ಮಾರ್ಗ ಅಂಕು, ಅವರ ನಡತೆ ಡೊಂಕು.
- Verse 16: ವಿವೇಕವು ನಿನ್ನನ್ನು ತಪ್ಪಿಸುವುದು ಜಾರಳಿಂದ, ಸವಿಮಾತಾಡುವ ಆ ಪರಸ್ತ್ರೀಯಳಿಂದ.
- Verse 17: ನಿನ್ನನ್ನು ಅದು ತಪ್ಪಿಸುವುದು ತನ್ನ ಯೌವನಕಾಲದ ಪ್ರಿಯನನ್ನು ತ್ಯಜಿಸಿದವಳಿಂದ, ತನ್ನ ದೇವರ ಮುಂದೆ ಮಾಡಿದ ಒಪ್ಪಂದವನ್ನು ಮರೆತವಳಿಂದ.
- Verse 18: ಅವಳ ಮನೆ ಪಾತಾಳಕ್ಕಿಳಿಸುವ ದಾರಿ, ಅವಳ ಮಾರ್ಗ ಪ್ರೇತಲೋಕಕ್ಕೆ ಹಾದಿ.
- Verse 19: ಅವಳ ಬಳಿಗೆ ಹೋಗುವವರು ಹಿಂದಿರುಗುವುದಿಲ್ಲ, ಅವರಿಗೆ ಜೀವಮಾರ್ಗ ಪುನಃ ದೊರಕುವುದಿಲ್ಲ.
- Verse 20: ನೀನಾದರೊ ಸಜ್ಜನರ ಮಾರ್ಗದಲ್ಲಿ ನಡೆವೆ, ನೀತಿವಂತರ ಹಾದಿಯನ್ನು ಹಿಡಿವೆ.
- Verse 21: ಸತ್ಯವಂತರು ನಾಡಿನಲ್ಲಿ ಬಾಳುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು.
- Verse 22: ದುರುಳರಾದರೋ ನಾಡಿನಿಂದ ಬೇರ್ಪಡುವರು, ದ್ರೋಹಿಗಳು ಅಲ್ಲಿಂದ ಅಳಿದು ನಾಶವಾಗುವರು.