ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
10ನೇ ಅಧ್ಯಾಯ
- Verse 1: ಮಗನು ಜ್ಞಾನಿಯಾದರೆ ತಂದೆಗೆ ಸುಖ; ಅಜ್ಞಾನಿಯಾದರೆ ತಾಯಿಗೆ ದುಃಖ.
- Verse 2: ಅನ್ಯಾಯದ ಸಂಪತ್ತು ನಿಷ್ಪ್ರಯೋಜಕ; ಧರ್ಮವು ಮೃತ್ಯುವಿನಿಂದ ರಕ್ಷಕ.
- Verse 3: ಸತ್ಪುರುಷನನ್ನು ಸರ್ವೇಶ್ವರ ಹಸಿವೆಗೊಳಿಸನು; ದುಷ್ಟನ ಆಶೆಯನ್ನಾತ ಭಂಗಪಡಿಸುವನು.
- Verse 4: ಜೋಲುಗೈ ತರುತ್ತದೆ ದಾರಿದ್ರ್ಯ; ಚುರುಕು ಕೈ ತರುತ್ತದೆ ಐಶ್ವರ್ಯ.
- Verse 5: ಸುಗ್ಗಿಯಲ್ಲಿ ಕೂಡಿಸುವವನು ಬುದ್ಧಿವಂತ; ಕೊಯ್ಲಿನಲ್ಲಿ ತೂಕಡಿಸುವವನು ಲಜ್ಜೆಗೆಡುಕ.
- Verse 6: ಸಜ್ಜನರ ತಲೆಯ ಮೇಲೆ ಆಶೀರ್ವಾದ; ದುರ್ಜನರ ಬಾಯಿ ಹಿಂಸಾಚಾರದ ಮುಚ್ಚಳ.
- Verse 7: ಸಜ್ಜನರ ಸ್ಮರಣೆ ಮಂಗಳಕರ; ದುರ್ಜನರ ಹೆಸರು ಅಸಹ್ಯಕರ.
- Verse 8: ಬುದ್ಧಿಜೀವಿಗಳು ಆಜ್ಞೆಗಳನ್ನು ಅಂಗೀಕರಿಸುವರು; ಹರಟೆಕೋರ ಹುಚ್ಚರು ನೆಲ ಕಚ್ಚುವರು.
- Verse 9: ನಿರ್ದೋಷಿ ನಡೆಯುವನು ನಿರ್ಭಯನಾಗಿ; ವಕ್ರಮಾರ್ಗಿ ಸಿಕ್ಕಿಬಿಡುವನು ಬಟ್ಟಬಯಲಾಗಿ.
- Verse 10: ಕಣ್ಣು ಮಿಟುಕಿಸುವವನು ತೊಂದರೆಗೆ ಕಾರಣನು; ನೆಟ್ಟಗೆ ಗದರಿಸುವವನು ಸಮಾಧಾನಕರನು.
- Verse 11: ಸಜ್ಜನನ ಬಾಯಿ ಜೀವದ ಬುಗ್ಗೆ; ದುರ್ಜನನ ಬಾಯಿತುಂಬ ಚಿತ್ರಹಿಂಸೆ.
- Verse 12: ಜಗಳವೆಬ್ಬಿಸುತ್ತದೆ ದ್ವೇಷ; ಪಾಪಗಳ ಮರೆಸುತ್ತದೆ ಪ್ರೇಮ.
- Verse 13: ಬುದ್ಧಿವಂತನ ಬಾಯಿಂದ ಜ್ಞಾನ; ಬುದ್ಧಿಹೀನನ ಬೆನ್ನಿಗೆ ಬೆತ್ತ.
- Verse 14: ಬುದ್ಧಿವಂತರು ಜ್ಞಾನದ ಭಂಡಾರಿಗಳು; ಮೂರ್ಖನ ಮಾತುಗಳು ವಿನಾಶದ ಸೋಪಾನಗಳು.
- Verse 15: ಐಶ್ವರ್ಯವಂತನಿಗೆ ಐಶ್ವರ್ಯವೇ ಬಲವಾದ ಡೆಂಕಣ; ಬಡವನ ಅಳಿವಿಗೆ ಬಡತನವೇ ಕಾರಣ.
- Verse 16: ಸಜ್ಜನರ ದುಡಿತ ಜೀವಾಸ್ಪದ; ದುರ್ಜನರ ಆದಾಯ ಪಾಪಾಸ್ಪದ.
- Verse 17: ಶಿಸ್ತನ್ನು ಕೈಗೊಳ್ಳುವವನು ಜೀವಮಾರ್ಗದಲ್ಲಿರುವನು; ತಿದ್ದುಪಾಟನ್ನು ತಿರಸ್ಕರಿಸುವವನು ದಾರಿ ತಪ್ಪುವನು.
- Verse 18: ಹೊಟ್ಟೆಯಲ್ಲಿ ಹಗೆ ಇಟ್ಟುಕೊಳ್ಳುವವನು ಸಟೆಗಾರ; ಚಾಡಿ ಹೇಳಿ ಕೇಡುಮಾಡುವುದು ಮೂರ್ಖತನ.
- Verse 19: ವಾಚಾಳಿಗೆ ಪಾಪ ತಪ್ಪದು; ಮೌನಿಗೆ ಜ್ಞಾನ ಕೆಡದು.
- Verse 20: ಸಜ್ಜನರ ನಾಲಿಗೆ ಚೊಕ್ಕಬೆಳ್ಳಿ; ದುರ್ಜನರ ಹೃದಯ ಹುಲ್ಲುಕಡ್ಡಿ.
- Verse 21: ಸಜ್ಜನರ ಭಾಷಣದಿಂದ ಬಹುಜನರಿಗೆ ಪೋಷಣ; ಬುದ್ಧಿಹೀನತೆಯಿಂದ ಮೂರ್ಖರಿಗೆ ನಾಶನ.
- Verse 22: ಸರ್ವೇಶ್ವರನ ಆಶೀರ್ವಾದ ಭಾಗ್ಯದಾಯಕ; ಅದಕ್ಕೆ ಬಾಹಿರವಾದುದು ಕಷ್ಟದುಃಖ.
- Verse 23: ಮೂರ್ಖನಿಗೆ ಕೆಡುಕುಮಾಡುವ ಚಟ; ಬುದ್ಧಿವಂತನಿಗೆ ಜ್ಞಾನಗಳಿಸುವ ಹಟ.
- Verse 24: ದುರ್ಜನರು ಭಯಪಡುವುದೇ ಸಂಭವಿಸುವುದು; ಸಜ್ಜನರು ಇಷ್ಟಪಡುವುದೇ ಲಭಿಸುವುದು.
- Verse 25: ಬಿರುಗಾಳಿ ಬೀಸಿದರೆ ದುರ್ಜನರು ಇಲ್ಲವಾಗುವರು; ಸಜ್ಜನರಾದರೋ ಸದಾಕಾಲ ಸ್ಥಿರವಾಗಿ ನಿಲ್ಲುವರು.
- Verse 26: ಹಲ್ಲಿಗೆ ಹುಳಿ ಹೇಗೋ, ಕಣ್ಣಿಗೆ ಹೊಗೆ ಹೇಗೋ; ಯಜಮಾನನಿಗೆ ಮೈಗಳ್ಳನು ಹಾಗೆ.
- Verse 27: ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರು ಬಾಳುವರು ದೀರ್ಘಕಾಲ; ದುರುಳ ಜನರ ಜೀವಮಾನವೋ ಅಲ್ಪಕಾಲ.
- Verse 28: ಸಜ್ಜನರ ನಂಬಿಕೆ ಆನಂದಕರ; ದುರ್ಜನರ ನಿರೀಕ್ಷೆ ವಿನಾಶಕರ.
- Verse 29: ಸನ್ಮಾರ್ಗಿಗೆ ಸರ್ವೇಶ್ವರನೆ ಆಶ್ರಯ; ಕೆಡುಕನಿಗೆ ಆತನೆ ಪ್ರಳಯ.
- Verse 30: ಸಜ್ಜನರು ಎಂದಿಗೂ ಕದಲರು; ದುರ್ಜನರು ನಾಡಿನಲ್ಲಿ ನಿಲ್ಲರು.
- Verse 31: ಸಜ್ಜನರ ಬಾಯಲ್ಲಿ ಜ್ಞಾನ ಮೊಳೆಯುವುದು; ನೀಚನ ನಾಲಿಗೆಯೂ ಕತ್ತರಿಸಿ ಹೋಗುವುದು.
- Verse 32: ಸಜ್ಜನರ ಬಾಯಲ್ಲಿ ಹಿತವಚನ; ದುರ್ಜನರ ಬಾಯಲ್ಲಿ ನೀಚವಚನ.