ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
18ನೇ ಅಧ್ಯಾಯ
- Verse 1: ಬೇರೆಯವರೊಡನೆ ಸೇರದವನು ಸ್ವೇಚ್ಛಾನುಸಾರ ನಡೆಯುವನು; ಇತರರು ಸುಜ್ಞಾನವೆನ್ನುವುದನ್ನೇ ವಿರೋಧಿಸುವನು.
- Verse 2: ಮತಿಗೆಟ್ಟವನಿಗೆ ವಿವೇಕವು ಅನಿಷ್ಟ; ಸ್ವಾರ್ಥವನ್ನು ಪ್ರಕಟಿಸುವುದೆಂದರೆ ಅವನಿಗೆ ಬಲು ಇಷ್ಟ.
- Verse 3: ದುರಾಚಾರವಿದ್ದಲ್ಲಿ ತಾತ್ಸಾರ; ಮಾನ ಕಳೆದುಕೊಂಡಲ್ಲಿ ಧಿಕ್ಕಾರ.
- Verse 4: ಸತ್ಪುರುಷನ ನುಡಿ ಜಲನಿಧಿ; ಜ್ಞಾನದ ಬುಗ್ಗೆ ಹರಿಯುವ ತೊರೆ.
- Verse 5: ದುಷ್ಟನಿಗೆ ಪಕ್ಷಪಾತ ತೋರುವುದು ಸಲ್ಲ; ಸಜ್ಜನನಿಗೆ ನ್ಯಾಯ ತಪ್ಪಿಸುವುದು ಸರಿಯಲ್ಲ.
- Verse 6: ಕಲಹವೆಬ್ಬಿಸುವುದು ಬುದ್ಧಿಹೀನನ ತುಟಿ; ಪೆಟ್ಟಿಗಾಗಿ ಕೂಗಿಕೊಳ್ಳುವುದು ಅವನ ಬಾಯಿ.
- Verse 7: ಬುದ್ಧಿಹೀನನಿಗೆ ಬಾಯೇ ನಾಶ, ತುಟಿಗಳೇ ಅವನಿಗೆ ಪಾಶ.
- Verse 8: ಚಾಡಿಕೋರನ ಮಾತುಗಳು ರುಚಿಕರವಾದ ತುತ್ತುಗಳು; ಅವು ಅಡಿಹೊಟ್ಟೆಗೆ ಇಳಿಯುವ ಕವಳಗಳು.
- Verse 9: ಸೋಮಾರಿಯಾದ ಕೆಲಸಗಳ್ಳನು, ಕೆಡುಕನಿಗೆ ರಕ್ತಸಂಬಂಧಿಕನು.
- Verse 10: ಸರ್ವೇಶ್ವರನ ನಾಮ ಬಲವಾದ ಗೋಪುರ; ಅದರೊಳಗೆ ಓಡಿ ಆಶ್ರಯ ಪಡೆದರೆ ಸುಭದ್ರ.
- Verse 11: ಐಶ್ವರ್ಯವಂತನಿಗೆ ಹಣವೆ ಬಲವಾದ ಕೋಟೆ; ಅದುವೇ ಎತ್ತರವಾದ ಪೌಳಿಗೋಡೆ.
- Verse 12: ಭಂಗಕ್ಕೆ ಮುಂಚೆ ಗರ್ವದ ಗುಂಡಿಗೆ; ಗೌರವಕ್ಕೆ ಮೊದಲು ನಮ್ರತೆ.
- Verse 13: ಕೇಳಿಸಿಕೊಳ್ಳದೆ ಉತ್ತರಕೊಡುವವನು ಹುಚ್ಚ; ನಿಂದೆ ಅವಮಾನಕ್ಕೆ ಅವನು ಯೋಗ್ಯ.
- Verse 14: ಆತ್ಮವು ವ್ಯಾಧಿಯನ್ನು ಸಹಿಸಬಲ್ಲದು; ಆತ್ಮವೇ ನೊಂದರೆ ಸಹಿಸುವವರಾರು?
- Verse 15: ಬುದ್ಧಿವಂತನ ಮನಸ್ಸು ತಿಳುವಳಿಕೆಯನ್ನು ಗಳಿಸುತ್ತದೆ; ಜ್ಞಾನಿಯ ಕಿವಿಯು ತಿಳುವಳಿಕೆಯನ್ನು ಹುಡುಕುತ್ತದೆ.
- Verse 16: ಕಾಣಿಕೆ ತರುವವನಿಗೆ ಬಾಗಿಲು ತೆರೆಯುತ್ತದೆ; ಶ್ರೀಮಂತನ ಸಾನ್ನಿಧ್ಯಕ್ಕೂ ಅದು ನಡೆಸುತ್ತದೆ.
- Verse 17: ಮೊದಲು ವಾದಿಸುವವನು ನ್ಯಾಯವಾದಿಯೆಂದೇ ತೋರುವನು; ಅವನ ಬಂಡವಾಳ ಗೊತ್ತಾಗುವುದು ಪ್ರತಿವಾದಿ ಎದ್ದ ಮೇಲೆ.
- Verse 18: ಚೀಟುಹಾಕುವುದರಿಂದ ವ್ಯಾಜ್ಯಗಳ ಶಮನ; ಜಟ್ಟಿಗಳ ನಡುವೆ ಕಾಳಗದ ವಿರಾಮ.
- Verse 19: ಸಹಾಯ ಹೊಂದಿದ ಸೋದರ ದುರ್ಗಕ್ಕಿಂತಲು ದುಸ್ತರ; ಅವನೊಡನೆ ಜಗಳ ಕೋಟೆ ಮನೆಗೆ ಹಾಕಿದ ಅಗುಳಿ.
- Verse 20: ಬಾಯಿ ಬಿತ್ತಿದ ಬೆಳೆಯಿಂದ ಮನುಷ್ಯ ಹೊಟ್ಟೆ ತುಂಬುವನು; ತುಟಿಗಳು ಕೊಟ್ಟ ಫಲದಿಂದ ತಿಂದು ತೇಗುವನು.
- Verse 21: ಜನನ ಮರಣಗಳ ಶಕ್ತಿ ನಾಲಿಗೆಗಿದೆ; ವಚನ ಪ್ರಿಯರು ಅದರ ಫಲವನ್ನು ರುಚಿಸುವರು.
- Verse 22: ಮಡದಿಯನ್ನು ಪಡೆಯುವುದು ಪುಣ್ಯಪಡೆದ ಹಾಗೆ, ಅದು ಸರ್ವೇಶ್ವರನ ಅನುಗ್ರಹಪಡೆದ ಹಾಗೆ.
- Verse 23: ಬಡವರು ಮಾಡುವ ಬಿನ್ನಹ ನಮ್ರ; ಬಲ್ಲಿದರು ಕೊಡುವ ಬದಲು ಉಗ್ರ.
- Verse 24: ಗೆಳೆಯರಂತೆ ನಟಿಸಿ ನಾಶಗೊಳಿಸುವವರು ಅನೇಕರುಂಟು; ಸಹೋದರನಿಗಿಂತ ಪ್ರಿಯನಾದ ಸ್ನೇಹಿತನೂ ಉಂಟು.