ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
31ನೇ ಅಧ್ಯಾಯ
- Verse 1: ಮಸ್ಸಾರಾಜ್ಯದ ಅರಸ ಲೆಮೂವೇಲನ ವಚನಗಳು: ಅವನ ತಾಯಿ ಅವನಿಗೆ ಉಪದೇಶಿಸಿದ ಹಿತೋಕ್ತಿಗಳು:
- Verse 2: ಮಗನೇ, ನನ್ನ ಕರುಳಿನ ಕುಡಿಯೇ, ನನ್ನ ಹರಕೆಯ ಮಗನೇ, ನಾನು ಹೇಳುವುದನ್ನು ಕೇಳು:
- Verse 3: ನಿನ್ನ ಪೌರುಷತ್ವವನ್ನೆಲ್ಲಾ ಸ್ತ್ರೀಯರಿಗೆ ಒಪ್ಪಿಸದಿರು; ಅರಸನನ್ನೆ ನಾಶಮಾಡಬಲ್ಲ ಅವರಿಗಾಗಿ ಹಣವನ್ನೆಲ್ಲ ವ್ಯಯಮಾಡದಿರು.
- Verse 4: ಕುಡುಕತನ ರಾಜನಿಗೆ ತಕ್ಕುದ್ದಲ್ಲ; ಲೆಮೂವೇಲನೇ ಕೇಳು, ಅದು ರಾಜನಿಗೆ ಯೋಗ್ಯವಲ್ಲ; ಮದ್ಯಪಾನಾಸಕ್ತಿ ಅಧಿಕಾರಿಗಳಿಗೆ ಹಿತವಲ್ಲ.
- Verse 5: ಕುಡಿದರೆ ಕರ್ತವ್ಯವನ್ನು ಮರೆಯುತ್ತಾರೆ; ದೀನದಲಿತರಿಗೆ ನ್ಯಾಯ ತೀರಿಸದೆ ತಾರತಮ್ಯ ಮಾಡುತ್ತಾರೆ.
- Verse 6: ಸಾರಾಯಿ ಸಾಯುತ್ತಿರುವವನಿಗಿರಲಿ; ಮದ್ಯ, ಮನೋವ್ಯಥೆಪಡುವವನಿಗಿರಲಿ.
- Verse 7: ಅವರು ಕುಡಿದು ಬಡತನ ಮರೆಯಲಿ, ತಮ್ಮ ಯಾತನೆಯನ್ನು ನೆನೆಯದಿರಲಿ.
- Verse 8: ಬಾಯಿಲ್ಲದವರ ಹಾಗೂ ದೀನದಲಿತರ ಪರವಾಗಿ ನ್ಯಾಯ ದೊರಕುವಂತೆ ಬಾಯಿಬಿಚ್ಚಿ ಮಾತಾಡು.
- Verse 9: ಅವರ ಪರವಾಗಿ ಮಾತಾಡಿ ನ್ಯಾಯವಾದ ತೀರ್ಪುಕೊಡು; ದೀನದರಿದ್ರರ ಹಕ್ಕು ಬಾಧ್ಯತೆಯನ್ನು ಕಾಪಾಡು.
- Verse 10: ಗುಣವತಿಯಾದ ಹೆಂಡತಿ ಎಲ್ಲಿ ಸಿಕ್ಕಾಳು? ಆಕೆ ಹವಳಕ್ಕಿಂತಲೂ ಬಹು ಮೌಲ್ಯಳು.
- Verse 11: ಗಂಡನು ಆಕೆಯಲ್ಲಿ ಹೃತ್ಪೂರ್ವಕ ನಂಬಿಕೆಯಿಡುವನು; ಅವನಿಗೆ ಆದಾಯದ ಕೊರತೆ ಇರದು.
- Verse 12: ಜೀವಮಾನವಿಡೀ ಆಕೆ ಅವನಿಗೆ ಒಳ್ಳೆಯದನ್ನೆ ಮಾಡುವಳು; ಎಂದಿಗೂ ಆಕೆ ಅವನಿಗೆ ಕೇಡನ್ನು ಬಗೆಯಳು.
- Verse 13: ಉಣ್ಣೆಯನ್ನೂ ಸೆಣಬನ್ನೂ ಹುಡುಕಿ ತರುವಳು; ತನ್ನ ಕೈಗಳಿಂದಲೇ ಬಟ್ಟೆಯನ್ನು ನೇಯುವಳು.
- Verse 14: ವ್ಯಾಪಾರದ ಹಡಗುಗಳಂತೆ ದೂರದಿಂದ ಆಹಾರ ಪದಾರ್ಥಗಳನ್ನು ತರುವಳು.
- Verse 15: ಇನ್ನೂ ಕತ್ತಲಿರುವಾಗಲೆ ಎದ್ದುಬಿಡುತ್ತಾಳೆ, ಮನೆಯವರಿಗೆ ತಿಂಡಿತೀರ್ಥ ಅಣಿಮಾಡುತ್ತಾಳೆ, ಕೆಲಸಗಿತ್ತಿಯರಿಗೆ ದಿನಗೆಲಸಗಳನ್ನು ನೇಮಿಸುತ್ತಾಳೆ.
- Verse 16: ಆಲೋಚನೆಮಾಡಿ ಹೊಲವನ್ನು ಕೊಂಡುಕೊಳ್ಳುತ್ತಾಳೆ; ಕೈಗೆಲಸದ ಆದಾಯದಿಂದಲೆ ತೋಟ ಮಾಡಿಸುತ್ತಾಳೆ.
- Verse 17: ನಡುಕಟ್ಟಿ ಕೆಲಸಕ್ಕೆ ನಿಲ್ಲುತ್ತಾಳೆ, ದುಡಿಮೆಯಲ್ಲಿ ತೋಳ್ಬಲವನ್ನು ತೋರ್ಪಡಿಸುತ್ತಾಳೆ.
- Verse 18: ತನ್ನ ಕೆಲಸದಿಂದ ಲಭಿಸುವ ಆದಾಯದ ರುಚಿ ಆಕೆಗಿದೆ; ಆಕೆಯ ಮನೆದೀಪ ರಾತ್ರಿಯೆಲ್ಲ ಆರದಿದೆ.
- Verse 19: ರಾಟೆಯನ್ನು ತಾನೆ ಆಡಿಸುತ್ತಾಳೆ; ಕದಿರನ್ನು ಕೈಯಿಂದ ಹಿಡಿಯುತ್ತಾಳೆ.
- Verse 20: ಬಡವರಿಗೆ ಕೈಬಿಚ್ಚಿ ಕೊಡುತ್ತಾಳೆ; ದಿಕ್ಕಿಲ್ಲದವರಿಗೆ ಕೈಚಾಚಿ ನೀಡುತ್ತಾಳೆ.
- Verse 21: ಚಳಿಗಾಲದಲ್ಲಿ ಮನೆಯವರಿಗಾಗಿ ಆಕೆ ಚಿಂತಿಸಬೇಕಿಲ್ಲ; ಏಕೆಂದರೆ ಎಲ್ಲರಿಗೂ ಬೆಚ್ಚನೆಯ ಕಂಬಳಿಗಳಿವೆ.
- Verse 22: ತನಗೆ ಬೇಕಾದ ರತ್ನಗಂಬಳಿಯನ್ನು ತಾನೆ ನೇಯ್ದಿದ್ದಾಳೆ; ಆಕೆಯ ಉಡುಪೋ ನಾರುಮಡಿ, ರಕ್ತಾಂಬರ.
- Verse 23: ಆಕೆಯ ಗಂಡ ನಾಡಿಗರಲ್ಲಿ ಗಣ್ಯ; ನ್ಯಾಯಸ್ಥಾನದಲ್ಲಿ ಸನ್ಮಾನಿತ.
- Verse 24: ದುಪ್ಪಟಿಗಳನ್ನು ನೇಯ್ದು ಮಾರಾಟ ಮಾಡುತ್ತಾಳೆ; ನಡುಕಟ್ಟುಗಳನ್ನು ಮಾಡಿ ವರ್ತಕರಿಗೆ ವಿಕ್ರಯಿಸುತ್ತಾಳೆ.
- Verse 25: ಘನತೆ, ಗೌರವ, ಆಕೆಯ ಬಟ್ಟೆಬರೆ; ಭವಿಷ್ಯತ್ತಿನಲ್ಲಿ ಆಕೆಗೆ ನಿರ್ಭೀತ ನಗೆ.
- Verse 26: ಆಕೆಯ ಬಾಯಿಂದ ಬರುವ ಮಾತು ಜ್ಞಾನಪೂರ್ಣ; ಆಕೆ ಹೇಳುವ ಬುದ್ಧಿಮಾತು ಪ್ರೀತಿಪ್ರೇರಿತ.
- Verse 27: ಮನೆಗೆಲಸವನ್ನೆಲ್ಲ ಚೆನ್ನಾಗಿ ನೋಡಿಕೊಳ್ಳುತ್ತಾಳೆ; ಆಕೆ ಕೆಲಸಮಾಡದೆ ಊಟಮಾಡುವವಳಲ್ಲ.
- Verse 28: ಮಕ್ಕಳು ಆಕೆಯನ್ನು ಧನ್ಯಳೆಂದು ಹೊಗಳುವರು.
- Verse 29: ಗಂಡನು, “ಗುಣವತಿಯರು ಎಷ್ಟೋಮಂದಿ ಇರುವರು; ಅವರೆಲ್ಲರಿಗಿಂತ ನೀನೆ, ಶ್ರೇಷ್ಠಳು” ಎಂದು ಕೊಂಡಾಡುವನು.
- Verse 30: ಆಕರ್ಷಣೆ ನೆಚ್ಚತಕ್ಕದಲ್ಲ. ಅಲಂಕಾರ ನೆಲೆಯಾದುದಲ್ಲ; ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವಳೆ ಸ್ತುತ್ಯಾರ್ಹಳು.
- Verse 31: ಆಕೆಯ ಕೈ ಕೆಲಸಕ್ಕೆ ತಕ್ಕ ಪ್ರತಿಫಲ ಲಭಿಸಲಿ; ಆಕೆಯ ಕಾರ್ಯಗಳೇ ಆಕೆಯನ್ನು ಪುರದ್ವಾರಗಳಲ್ಲಿ ಹೊಗಳಲಿ!