ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
145ನೇ ಅಧ್ಯಾಯ
1 : ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ I ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆ ನಮನ II
2 : ಹೊಗಳುವೆನು ನಾ ದಿನದಿನವೂ ನಿನ್ನನು I ಭಜಿಸುವೆನೆಂದೆಂದಿಗೂ ನಿನ್ನ ಹೆಸರನು II
3 : ಪ್ರಭು ಮಹಾತ್ಮನು, ಸ್ತುತ್ಯರ್ಹನು I ಆತನ ಮಹಿಮೆ ಅಗಮ್ಯವಾದದು II
4 : ತಲೆಮಾರು ತಲೆಮಾರಿಗೆ ನುತಿಸುವುದು ನಿನ್ನ ಕಾರ್ಯಗಳನು I ತಿಳಸುವುದು ಪ್ರಭು, ನೀ ಮಾಡಿದೆಲ್ಲಾ ಮಹತ್ಕಾರ್ಯಗಳನು II
5 : ಧ್ಯಾನಿಸುವೆನು ನಿನ್ನ ಅದ್ಭುತಕಾರ್ಯಗಳನು I ನಿನ್ನ ಮಹೋನ್ನತ ಮಹಿಮಾಪ್ರಭಾವವನು II
6 : ಜನರು ಸಾರುವರು ನಿನ್ನ ಅದ್ಭುತ ಶಕ್ತಿಯನು I ನಾ ಪ್ರಸಿದ್ಧಪಡಿಸುವೆನು ನಿನ್ನ ಮಹಿಮೆಯನು II
7 : ಪ್ರಕಟಿಸುವರವರು ನಿನ್ನ ಮಹೋಪಕಾರವನು I ಹಾಡಿ ಹೊಗಳುವರು ನಿನ್ನ ನ್ಯಾಯನೀತಿಯನು II
8 : ಪ್ರಭು ದಯಾನಿಧಿ, ಕೃಪಾಸಾಗರನು I ಸಹನಶೀಲನು, ಪ್ರೀತಿಪೂರ್ಣನು II
9 : ಪ್ರಭುವಿನ ಕರುಣೆ ಎಲ್ಲರ ಮೇಲೆ I ಆತನ ಕೃಪೆಯು ಸೃಷ್ಟಿಯ ಮೇಲೆ II
10 : ಪ್ರಭು, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು I ಕೊಂಡಾಡುವುದು ನಿನ್ನನು ಭಕ್ತ ಸಮೂಹವು II
11 : ಪ್ರಸಿದ್ಧಪಡಿಸುವರು ನಿನ್ನ ರಾಜ್ಯದ ಮಹತ್ವವನು I ವರ್ಣಿಸುವರವರು ನಿನ್ನ ಶಕ್ತಿ ಸಾಮರ್ಥ್ಯವನು II
12 : ಅರಿವರಿಂತು ಜನರು ನಿನ್ನ ಶೂರ ಕಾರ್ಯಗಳನು I ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ ಪ್ರಭಾವವನು II
13 : ಶಾಶ್ವತವಾದುದು ನಿನ್ನ ರಾಜ್ಯವು I ಇರುವುದೆಂದಿಗು ನಿನ್ನ ಆಳ್ವಿಕೆಯು II
14 : ನುಡಿಯಲಿ ಪ್ರಭು ಸದಾ ಪ್ರಾಮಾಣಿಕನು I ನಡೆಯಲಿ ಆತನು ಸದಾ ಪ್ರೀತಿಮಯನು II
15 : ಎತ್ತುವನಾತ ಬಿದ್ದವರನೆಲ್ಲ I ಉದ್ಧರಿಪನು ಕುಗ್ಗಿದವರನೆಲ್ಲ II
16 : ಎಲ್ಲ ಜೀವಿಗಳ ಕಣ್ಣು ಪ್ರಭು, ನಾಟಿವೆ ನಿನ್ನ ಕಡೆಗೆ I ಕಾಲಕಾಲಕೆ ಕೊಡುವೆ ಆಹಾರವನು ಅವುಗಳಿಗೆ II
17 : ಎಲ್ಲ ಜೀವಿಗಳಿಗೆ ನೀ ಕೈ ನೀಡುವವನು I ಎಲ್ಲರ ಕೋರಿಕೆಗಳನು ಈಡೇರಿಸುವವನು II
18 : ಪ್ರಭುವಿನ ಮಾರ್ಗ ಧರ್ಮಸಮ್ಮತ I ಆತನ ಕಾರ್ಯವೆಲ್ಲ ಪುನೀತ II
19 : ಹತ್ತಿರ ಇಹನು ಪ್ರಭು ಕರೆಯುವವರೆಲ್ಲರಿಗೆ I ಯಥಾರ್ಥವಾಗಿ ಆತನನು ಅರಸುವವರಿಗೆ II
20 : ಹೆದರಿ ನಡೆಯುವವರ ಇಷ್ಟವನು ಈಡೇರಿಸುವನು I ಅವರ ಮೊರೆಯನು ಕೇಳಿ ಅವರನು ರಕ್ಷಿಸುವನು II
21 : ಸಲಹುವನು ತನ್ನನು ಪ್ರೀತಿಸುವವರೆಲ್ಲರನು I ನಾಶಮಾಡುವನು ದುರ್ಮಾರ್ಗಿಗಳೆಲ್ಲರನು II
22 : ಉಸುರುತಿದೆ ನನ್ನ ನಾಲಿಗೆ ಪ್ರಭುವಿನ ಸ್ತೋತ್ರವನು I ನರರೆಲ್ಲರು ಸ್ತುತಿಸಲಿ ಸತತ ಆತನ ಶ್ರೀನಾಮವನು II