ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಪ್ರೇಷಿತರ ಕಾರ್ಯಕಲಾಪಗಳು
25ನೇ ಅಧ್ಯಾಯ
- Verse 1: ಫೆಸ್ತನು ಅಧಿಕಾರ ವಹಿಸಿಕೊಂಡು ಮೂರು ದಿನಗಳಾದನಂತರ ಸೆಜರೇಯದಿಂದ ಜೆರುಸಲೇಮಿಗೆ ಹೋದನು.
- Verse 2: ಅಲ್ಲಿ ಮುಖ್ಯಯಾಜಕರು ಮತ್ತು ಯೆಹೂದ್ಯರ ಮುಖಂಡರು ಪೌಲನ ವಿರುದ್ಧ ಅವನಿಗೆ ದೂರಿತ್ತರು.
- Verse 3: ಅವರು ಫೆಸ್ತನನ್ನು ವಿನಂತಿಸಿ, ಪೌಲನನ್ನು ಜೆರುಸಲೇಮಿಗೆ ಕರೆತರಿಸುವ ಉಪಕಾರವನ್ನು ಮಾಡಬೇಕೆಂದು ಕೇಳಿಕೊಂಡರು. ಏಕೆಂದರೆ, ಮಾರ್ಗದಲ್ಲೇ ಪೌಲನನ್ನು ಕೊಲ್ಲುವ ಸಂಚನ್ನು ಹೂಡಿದ್ದರು.
- Verse 4: ಫೆಸ್ತನು ಅವರಿಗೆ, “ಪೌಲನು ಸೆಜರೇಯದಲ್ಲಿ ಕೈದಿಯಾಗಿದ್ದಾನೆ. ನಾನು ಬೇಗನೆ ಅಲ್ಲಿಗೆ ಹಿಂದಿರುಗಲಿದ್ದೇನೆ.
- Verse 5: ಅವನಲ್ಲಿ ಏನಾದರೂ ತಪ್ಪಿದ್ದರೆ ನಿಮ್ಮ ಪ್ರಮುಖರು ನನ್ನ ಜೊತೆಯಲ್ಲೇ ಅಲ್ಲಿಗೆ ಬಂದು ಆಪಾದಿಸಲಿ,” ಎಂದು ಹೇಳಿದನು.
- Verse 6: ಫೆಸ್ತನು ಅವರೊಂದಿಗೆ ಎಂಟು-ಹತ್ತು ದಿನಗಳನ್ನು ಕಳೆದು, ಸೆಜರೇಯಕ್ಕೆ ಮರಳಿ ಬಂದನು. ಮಾರನೆಯ ದಿನ ಅವನು ನ್ಯಾಯಸ್ಥಾನದಲ್ಲಿ ಕುಳಿತು ಪೌಲನನ್ನು ತನ್ನ ಮುಂದೆ ಕರೆದುತರಬೇಕೆಂದು ಆಜ್ಞಾಪಿಸಿದನು.
- Verse 7: ಪೌಲನು ಅಲ್ಲಿಗೆ ಬಂದಾಗ, ಜೆರುಸಲೇಮಿನಿಂದ ಆಗಮಿಸಿದ್ದ ಯೆಹೂದ್ಯರು ಅವನ ಸುತ್ತಲೂ ನಿಂತು ಅವನ ವಿರುದ್ಧ ಹಲವಾರು ತೀವ್ರ ಆಪಾದನೆಗಳನ್ನು ಹೊರಿಸಿದರು. ಆದರೆ ಅವುಗಳನ್ನು ರುಜುವಾತುಪಡಿಸಲು ಅವರಿಂದಾಗಲಿಲ್ಲ.
- Verse 8: ಪೌಲನು ತನ್ನ ಪರವಾಗಿ ತಾನೇ ವಾದಿಸುತ್ತಾ, “ನಾನು ಯೆಹೂದ್ಯರ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಲಿ, ಮಹಾದೇವಾಲಯಕ್ಕೆ ವಿರುದ್ಧವಾಗಲಿ, ಅಥವಾ ಚಕ್ರವರ್ತಿಗೆ ವಿರುದ್ಧವಾಗಲಿ, ಏನನ್ನೂ ಮಾಡಿಲ್ಲ,” ಎಂದನು.
- Verse 9: ಫೆಸ್ತನು ಯೆಹೂದ್ಯರ ಮೆಚ್ಚುಗೆಯನ್ನು ಗಳಿಸಿಕೊಳ್ಳುವಸಲುವಾಗಿ ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಿ, ಅಲ್ಲಿ ನನ್ನ ಮುಂದೆ ಇವುಗಳ ವಿಷಯವಾಗಿ ವಿಚಾರಣೆಗೆ ಒಳಗಾಗಲು ಇಷ್ಟಪಡುತ್ತೀಯಾ?” ಎಂದು ಕೇಳಿದನು.
- Verse 10: ಅದಕ್ಕೆ ಪೌಲನು, “ನಾನು ಚಕ್ರವರ್ತಿಯ ನ್ಯಾಯಸ್ಥಾನದ ಮುಂದೆ ನಿಂತಿದ್ದೇನೆ. ಇಲ್ಲಿಯೇ ನನ್ನ ವಿಚಾರಣೆಯಾಗತಕ್ಕದ್ದು. ತಮಗೆ ಚೆನ್ನಾಗಿ ತಿಳಿದಿರುವಂತೆ ನಾನು ಯೆಹೂದ್ಯರಿಗೆ ಯಾವ ಅನ್ಯಾಯವನ್ನೂ ಮಾಡಿಲ್ಲ.
- Verse 11: ಹಾಗೇನಾದರೂ ಮಾಡಿ, ಮರಣದಂಡನೆಗೆ ಅರ್ಹನಾಗಿದ್ದರೆ, ಅದಕ್ಕೆ ಗುರಿಯಾಗಲು ಹಿಂಜರಿಯುವುದಿಲ್ಲ. ಆದರೆ ಅವರು ನನ್ನ ವಿರುದ್ಧ ತಂದಿರುವ ಆಪಾದನೆಗಳು ಜೊಳ್ಳಾಗಿದ್ದ ಪಕ್ಷದಲ್ಲಿ, ಯಾರೂ ನನ್ನನ್ನು ಇವರ ಕೈಗೊಪ್ಪಿಸಲಾಗದು. ನಾನು ಚಕ್ರವರ್ತಿಗೇ ಅಪೀಲುಮಾಡಿಕೊಳ್ಳುತ್ತೇನೆ,” ಎಂದನು.
- Verse 12: ಆಗ ಫೆಸ್ತನು ತನ್ನ ಸಲಹೆಗಾರರೊಡನೆ ಸಮಾಲೋಚಿಸಿ, “ನೀನು ಅಪೀಲು ಮಾಡಿರುವುದು ಚಕ್ರವರ್ತಿಗೇ ಅಲ್ಲವೆ? ಚಕ್ರವರ್ತಿಯ ಬಳಿಗೇ ಹೋಗು,” ಎಂದು ಉತ್ತರಿಸಿದನು.
- Verse 13: ಕೆಲವು ದಿನಗಳಾದ ನಂತರ ರಾಜ ಅಗ್ರಿಪ್ಪನು ಬೆರ್ನಿಸಳೊಂದಿಗೆ ಫೆಸ್ತನನ್ನು ಅಭಿನಂದಿಸಲು ಸೆಜರೇಯಕ್ಕೆ ಬಂದನು.
- Verse 14: ಅವರು ಹಲವು ದಿನಗಳವರೆಗೆ ಅಲ್ಲೇ ತಂಗಿದ್ದರು. ಫೆಸ್ತನು ಪೌಲನ ವಿಷಯವನ್ನು ಅವನ ಮುಂದೆ ಪ್ರಸ್ತಾಪಿಸುತ್ತಾ, “ಫೆಲಿಕ್ಸನು ಕೈದಿಯಾಗಿ ಬಿಟ್ಟುಹೋದ ಒಬ್ಬ ವ್ಯಕ್ತಿ ಇಲ್ಲಿದ್ದಾನೆ.
- Verse 15: ನಾನು ಜೆರುಸಲೇಮಿಗೆ ಹೋಗಿದ್ದಾಗ ಯೆಹೂದ್ಯರ ಮುಖ್ಯಯಾಜಕರೂ ಪ್ರಮುಖರೂ ಅವನ ವಿರುದ್ಧ ಆಪಾದನೆಗಳನ್ನು ತಂದರು. ಅವನಿಗೆ ದಂಡನೆ ವಿಧಿಸುವಂತೆ ಕೇಳಿಕೊಂಡರು.
- Verse 16: ನಾನು ಅವರಿಗೆ, ‘ಆಪಾದಿತನೂ ಆಪಾದಿಸುವವರೂ ಮುಖಾಮುಖಿಯಾಗಿ ನಿಲ್ಲಬೇಕು ; ತನ್ನ ಮೇಲೆ ಹೊರಿಸಲಾದ ಆಪಾದನೆಗಳ ವಿರುದ್ಧ ವಾದಿಸಲು ಆಪಾದಿತನಿಗೆ ಅವಕಾಶ ಕೊಡಬೇಕು. ಹಾಗೆ ಮಾಡದೆ ಅವರ ಕೈಗೊಪ್ಪಿಸುವುದು ರೋಮನರ ಪದ್ಧತಿಯಲ್ಲ,’ ಎಂದು ಹೇಳಿದೆ.
- Verse 17: ಆದುದರಿಂದ ಅವರು ನನ್ನೊಡನೆ ಇಲ್ಲಿಗೆ ಬಂದರು. ನಾನು ತಡಮಾಡದೆ ಮರುದಿನವೇ ನ್ಯಾಯಸ್ಥಾನದಲ್ಲಿ ಕುಳಿತು ಅವನನ್ನು ನನ್ನ ಮುಂದೆ ತರುವಂತೆ ಆಜ್ಞೆಮಾಡಿದೆ.
- Verse 18: ಆಪಾದಿಸಿದವರು ಅವನ ವಿರುದ್ಧ ಎದ್ದುನಿಂತು ಮಾತನಾಡಿದಾಗ ನಾನು ಭಾವಿಸಿದಂತಹ ಅಪರಾಧವೊಂದನ್ನೂ ಅವನ ಮೇಲೆ ಹೊರಿಸಲಿಲ್ಲ.
- Verse 19: ಅವನೊಡನೆ ಅವರಿಗಿದ್ದ ವಾದವಿವಾದ ಅವರ ಧರ್ಮಾಚರಣೆಗಳಿಗೆ ಸಂಬಂಧಪಟ್ಟಿತ್ತು. ಯೇಸು ಎಂಬ ಒಬ್ಬ ವ್ಯಕ್ತಿಯನ್ನು ಕುರಿತೂ ವಿವಾದ ಇತ್ತು. ಯೇಸು ಸತ್ತಿದ್ದರೂ ಜೀವಂತನಾಗಿದ್ದಾನೆಂದು ಪೌಲನು ಸಾಧಿಸುತ್ತಿದ್ದನು.
- Verse 20: ಈ ವಿಷಯಗಳ ಬಗ್ಗೆ ಹೇಗೆ ವಿಚಾರಣೆಮಾಡುವುದೆಂದು ನನಗೆ ತೋಚಲಿಲ್ಲ. ಆದುದರಿಂದ, ‘ನೀನು ಜೆರುಸಲೇಮಿಗೆ ಹೋಗಿ, ಅಲ್ಲಿ ಈ ವಿಷಯಗಳ ಬಗ್ಗೆ ವಿಚಾರಣೆಗೆ ಒಳಗಾಗಲು ಇಷ್ಟಪಡುತ್ತೀಯಾ?’ ಎಂದು ಪೌಲನನ್ನು ಕೇಳಿದೆ. ಅದಕ್ಕೆ ಅವನು, ‘ಚಕ್ರವರ್ತಿಯೇ ನನ್ನ ವಾದವನ್ನು ತೀರ್ಮಾನಿಸಲಿ. ಅಲ್ಲಿಯವರೆಗೆ ನನಗೆ ರಕ್ಷಣೆ ಬೇಕು,’ ಎಂದು ವಿನಂತಿಸಿದ.
- Verse 21: ಅಂತೆಯೇ ಅವನನ್ನು ಚಕ್ರವರ್ತಿಯ ಬಳಿಗೆ ಕಳುಹಿಸಲಾಗುವ ತನಕ ಕಾವಲಿನಲ್ಲಿ ಇಡಬೇಕೆಂದು ಆಜ್ಞೆಮಾಡಿದೆ,” ಎಂದನು.
- Verse 22: ಆಗ ಅಗ್ರಿಪ್ಪನು ಫೆಸ್ತನಿಗೆ, “ಆ ಮನುಷ್ಯ ಹೇಳುವುದನ್ನು ನಾನು ಖುದ್ದಾಗಿ ಕೇಳಲಾಶಿಸುತ್ತೇನೆ,” ಎಂದನು. “ನಾಳೆಯೇ ಅದಕ್ಕೆ ವ್ಯವಸ್ಥೆ ಮಾಡುತ್ತೇನೆ,” ಎಂದು ಉತ್ತರವಿತ್ತನು ಫೆಸ್ತ.
- Verse 23: ಮಾರನೆಯ ದಿನ ಅಗ್ರಿಪ್ಪ ಮತ್ತು ಬೆರ್ನಿಸ್ ಮಹಾಸಡಗರದಿಂದ ಆಗಮಿಸಿದರು. ಸೇನಾಧಿಪತಿಗಳ ಹಾಗೂ ಪುರಪ್ರಮುಖರ ಸಮೇತ ಆಸ್ಥಾನವನ್ನು ಪ್ರವೇಶಿಸಿದರು. ಫೆಸ್ತನ ಆಜ್ಞೆಯ ಪ್ರಕಾರ ಪೌಲನನ್ನು ಹಾಜರುಪಡಿಸಲಾಯಿತು.
- Verse 24: ಆಗ ಫೆಸ್ತನು, “ಅಗ್ರಿಪ್ಪರಾಜರೇ, ಇಲ್ಲಿ ನೆರೆದಿರುವ ಮಹಾಜನರೇ, ನೀವು ನೋಡುತ್ತಿರುವ ಈ ವ್ಯಕ್ತಿಯ ವಿರುದ್ಧ ಇಲ್ಲಿಯೂ ಜೆರುಸಲೇಮಿನಲ್ಲಿಯೂ ಯೆಹೂದ್ಯರೆಲ್ಲರೂ ನನ್ನಲ್ಲಿ ಮನವಿಮಾಡಿಕೊಂಡಿದ್ದಾರೆ. ಇವನನ್ನು ಜೀವಸಹಿತ ಬಿಡಬಾರದೆಂದು ಕೂಗಾಡುತ್ತಿದ್ದಾರೆ.
- Verse 25: ಇವನಿಗೆ ಮರಣದಂಡನೆ ವಿಧಿಸುವಂಥ ಅಪರಾಧವೇನೂ ನನಗೆ ಕಂಡುಬರಲಿಲ್ಲ. ಅಲ್ಲದೆ ಇವನು ಚಕ್ರವರ್ತಿಗೇ ಅಪೀಲುಮಾಡಿಕೊಂಡಿದ್ದಾನೆ. ಆದ್ದರಿಂದ ನಾನು ಇವನನ್ನು ಅವರಲ್ಲಿಗೆ ಕಳುಹಿಸಲು ನಿರ್ಧರಿಸಿದ್ದೇನೆ.
- Verse 26: ಆದರೆ ಇವನ ಬಗ್ಗೆ ಮಹಾಸನ್ನಿಧಿಗೆ ಬರೆಯಲು ನಿರ್ದಿಷ್ಟವಾದುದೇನೂ ನನಗೆ ತೋಚುವುದಿಲ್ಲ. ಒಂದು ವಿಚಾರಣೆ ನಡೆಸಿದರೆ, ಅವರಿಗೆ ಬರೆಯಲು ಏನಾದರೂ ದೊರಕಬಹುದೆಂದು ತಿಳಿದು ಇವನನ್ನು ನಿಮ್ಮ ಮುಂದೆ, ಮುಖ್ಯವಾಗಿ ಅಗ್ರಿಪ್ಪ ರಾಜರೇ, ತಮ್ಮ ಮುಂದೆ, ಹಾಜರುಪಡಿಸಿರುತ್ತೇನೆ.
- Verse 27: ಏಕೆಂದರೆ, ಒಬ್ಬ ಕೈದಿಯ ವಿರುದ್ಧ ಇರುವ ಆಪಾದನೆಗಳನ್ನು ಸ್ಪಷ್ಟವಾಗಿ ಸೂಚಿಸದೆ ಅವನನ್ನು ಕಳುಹಿಸುವುದು ಸರಿಯಲ್ಲವೆಂದು ನನಗೆ ಅನಿಸುತ್ತದೆ,” ಎಂದನು.