పరిశుద్ధ గ్రంథము
ಹಳೆಯ ಒಡಂಬಡಿಕೆ
ಯಾಜಕಕಾಂಡ
17ನೇ ಅಧ್ಯಾಯ
1 : ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದರು:
2 : “ನೀನು ಆರೋನನಿಗೂ ಅವನ ಮಕ್ಕಳಿಗೂ ಹಾಗು ಇಸ್ರಯೇಲರಿಗೂ ಹೇಳಬೇಕಾದುದು ಇದು:
3 : ಇಸ್ರಯೇಲರಲ್ಲಿ ಯಾರಾದರು ಹೋರಿಯನ್ನಾಗಲಿ, ಕುರಿಯನ್ನಾಗಲಿ, ಆಡನ್ನಾಗಲಿ ಬಲಿಕೊಡುವಾಗ ಅದನ್ನು ಸರ್ವೇಶ್ವರನಿಗೆ ಸಮರ್ಪಿಸಲು ದೇವಗುಡಾರದ ಬಾಗಿಲಿಗೆ ತರದೆ
4 : ಪಾಳೆಯದ ಒಳಗಾಗಲಿ, ಹೊರಗಾಗಲಿ ಕೊಯ್ದರೆ ಅಂಥವನನ್ನು ಕೊಲೆಪಾತಕ ಮಾಡಿದವನೆಂದು ನೀವು ನಿರ್ಣಯಿಸಬೇಕು. ಅವನು ರಕ್ತವನ್ನು ಸುರಿಸಿದವನಾದ್ದರಿಂದ ಕುಲದಿಂದ ಬಹಿಷ್ಕೃತನಾಗಬೇಕು
5 : ಏಕೆಂದರೆ ಬಲಿಪ್ರಾಣಿಗಳನ್ನು ಬಯಲಿನಲ್ಲಿ ವಧಿಸುತ್ತಿದ್ದ ಇಸ್ರಯೇಲರು ಇನ್ನು ಮೇಲೆ ಅವುಗಳನ್ನು ದೇವದರ್ಶನದ ಗುಡಾರದ ಬಾಗಿಲಿಗೆ ಯಾಜಕನ ಬಳಿಗೆ ತಂದು ಸರ್ವೇಶ್ವರನ ಮುಂದೆ ಶಾಂತಿಸಮಾಧಾನದ ಬಲಿಯಾಗಿ ಸರ್ವೇಶ್ವರನಿಗೆ ಸಮರ್ಪಿಸಬೇಕು.
6 : ಯಾಜಕನು ಅವುಗಳ ರಕ್ತವನ್ನು ದೇವದರ್ಶನದ ಗುಡಾರದ ಬಾಗಿಲಿನ ಮುಂದಿರುವ ಬಲಿಪೀಠಕ್ಕೆ ಚಿಮುಕಿಸಿ, ಅವುಗಳ ಕೊಬ್ಬನ್ನು ಹೋಮಮಾಡಿ, ಸರ್ವೇಶ್ವರನಿಗೆ ಸುವಾಸನೆಯನ್ನುಂಟುಮಾಡಬೇಕು.
7 : ಅವರು ಇದುವರೆಗೆ ಪೂಜಿಸುತ್ತಿದ್ದ ಅಜದೇವತೆಗಳಿಗೆ ಇನ್ನು ಮುಂದೆ ಬಲಿಕೊಟ್ಟು ದೇವದ್ರೋಹಿಗಳಾಗಬಾರದು. ಅವರಿಗೂ ಅವರ ಸಂತತಿಯವರಿಗೂ ಇದು ಶಾಶ್ವತನಿಯಮ.
8 : “ಇದಲ್ಲದೆ ನೀನು ಅವರಿಗೆ ಹೀಗೆಂದು ಆಜ್ಞಾಪಿಸು: ಇಸ್ರಯೇಲರಲ್ಲಿ ಆಗಲಿ, ಅವರ ನಡುವೆ ವಾಸಿಸುವ ಅನ್ಯದೇಶದವರಲ್ಲಿ ಆಗಲಿ ಯಾವನಾದರು ದಹನಬಲಿಯನ್ನು ಆಥವಾ ಬೇರೆ ವಿಧವಾದ ಬಲಿದಾನ ಮಾಡುವಾಗ
9 : ಆ ಪ್ರಾಣಿಯನ್ನು ಸರ್ವೇಶ್ವರನಿಗೆ ಸಮರ್ಪಿಸುವುದಕ್ಕಾಗಿ ದೇವದರ್ಶನದ ಗುಡಾರದ ಬಾಗಿಲಿಗೆ ತರದಿದ್ದರೆ ಅವನನ್ನು ಕುಲದಿಂದ ತೆಗೆದುಹಾಕಬೇಕು.
10 : “ಅಷ್ಟುಮಾತ್ರವಲ್ಲ, ಇಸ್ರಯೇಲರಲ್ಲಾಗಲಿ, ಅವರ ನಡುವೆ ವಾಸಿಸುವ ಅನ್ಯದೇಶದವರಲ್ಲಾಗಲಿ ಯಾರಾದರು ರಕ್ತಭೋಜನ ಮಾಡಿದರೆ ಸರ್ವೇಶ್ವರ ಅಂಥ ವ್ಯಕ್ತಿಯ ವಿರುದ್ಧ ಉಗ್ರಕೋಪಗೊಳ್ಳುವರು; ಅವನನ್ನು ತನ್ನ ಪ್ರಜೆಯಿಂದ ತೆಗೆದುಹಾಕುವರು.
11 : ಏಕೆಂದರೆ ದೇಹಕ್ಕೆ ರಕ್ತವೇ ಪ್ರಾಣಾಧಾರ. ಆ ರಕ್ತವನ್ನು ನೀವು ಬಲಿಪೀಠಕ್ಕೆ ಪ್ರೋಕ್ಷಿಸಿ ನಿಮ್ಮ ನಿಮ್ಮ ದೋಷ ಪರಿಹಾರ ಮಾಡಿಕೊಳ್ಳಬೇಕೆಂದು ಸರ್ವೇಶ್ವರ ಅನುಗ್ರಹಿಸಿದ್ದಾರೆ. ರಕ್ತವು ಪ್ರಾಣಾಧಾರವಾಗಿರುವ ಕಾರಣ ಅದರಿಂದ ದೋಷಪರಿಹಾರವಾಗುತ್ತದೆ.
12 : ಎಂದೇ ನಿಮ್ಮಲ್ಲಿಯಾಗಲಿ, ನಿಮ್ಮ ನಡುವೆ ವಾಸಮಾಡುವ ಅನ್ಯದೇಶೀಯವರಲ್ಲಾಗಲಿ ಯಾರೂ ರಕ್ತಭೋಜನ ಮಾಡಬಾರದೆಂದು ಸರ್ವೇಶ್ವರ ಇಸ್ರಯೇಲರಿಗೆ ಆಜ್ಞಾಪಿಸಿದ್ದಾರೆ.
13 : “ಇಸ್ರಯೇಲರಲ್ಲಾಗಲಿ ಅವರ ನಡುವೆ ವಾಸಮಾಡುವ ಅನ್ಯದೇಶೀಯರಲ್ಲಾಗಲಿ ಯಾರಾದರು ಬೇಟೆಮಾಡಿ ತಿನ್ನಬಹುದಾದ ಪ್ರಾಣಿಯನ್ನು ಅಥವಾ ಪಕ್ಷಿಯನ್ನು ಹಿಡಿದರೆ ಅವನು ಅದರ ರಕ್ತವನ್ನು ಸುರಿದು ಮಣ್ಣಿನಿಂದ ಮುಚ್ಚಿಡಬೇಕು.
14 : ಏಕೆಂದರೆ ಪ್ರತಿ ದೇಹಕ್ಕೂ ರಕ್ತವೇ ಪ್ರಾಣಾಧಾರ. ಆದಕಾರಣ ಸರ್ವೇಶ್ವರ ಇಸ್ರಯೇಲರಿಗೆ, ಪ್ರತಿ ಪ್ರಾಣಿಗೂ ರಕ್ತವೇ ಪ್ರಾಣಾಧಾರವಾದ್ದರಿಂದ ನೀವು ಯಾವ ವಿಧವಾದ ಪ್ರಾಣಿಯ ರಕ್ತವನ್ನೂ ಉಣ್ಣಬಾರದು; ರಕ್ತಭೋಜನ ಮಾಡಿದವನಿಗೆ ಬಹಿಷ್ಕಾರ ಹಾಕಬೇಕು,’ ಎಂದು ಆಜ್ಞಾಪಿಸಿದ್ದಾರೆ.
15 : “ತಾನಾಗಿ ಸತ್ತುಬಿದ್ದದ್ದನ್ನಾಗಲಿ, ಕಾಡುಮೃಗ ಕೊಂದದ್ದನ್ನಾಗಲಿ ತಿಂದವನು ಸ್ವದೇಶದವನಾಗಿರಲಿ, ಅಥವಾ ಅನ್ಯದೇಶೀಯನಾಗಿರಲಿ ಅಂಥವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನ ಮಾಡಬೇಕು; ಆ ದಿನದ ಸಂಜೆಯವರೆಗೆ ಅಶುದ್ಧನಾಗಿದ್ದು ಬಳಿಕ ಶುದ್ಧನಾಗುವನು.
16 : ಅವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳದೆ ಹಾಗು ಸ್ನಾನಮಾಡಿಕೊಳ್ಳದೆ ಹೋದರೆ ತನ್ನ ಪಾಪದ ಫಲವನ್ನು ಅನುಭವಿಸಬೇಕು.