ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
18ನೇ ಅಧ್ಯಾಯ
1 : ಪ್ರಭುವೇ, ನೀನೆ ನನ್ನ ಬಲವು I ನನಗಿದೆ ನಿನ್ನಲೇ ಒಲವು II
2 : ಪ್ರಭುವೇ ನನ್ನ ಕಲ್ಲುಕೋಟೆ, ನನಗೆ ವಿಮೋಚಕ I ಆತನೇ ನನ್ನ ದೇವ, ನನ್ನಾಶ್ರಯ ದುರ್ಗ I ಆತನೆನಗೆ ಗುರಾಣಿ, ಗಿರಿ, ರಕ್ಷಣಾಶೃಂಗ II
3 : ಪ್ರಭು ಸ್ತುತ್ಯಾರ್ಹನು I ಶತ್ರುಗಳಿಂದ ಕಾಪಾಡುವನು, ನಾನವಗೆ ಮೊರೆಯಿಡಲು II
4 : ನನಗೆ ಸುತ್ತಿಕೊಂಡವು ಮೃತ್ಯುಪಾಶಗಳು I ನಡುಕ ಹುಟ್ಟಿಸಿದ್ದವು ವಿನಾಶಪ್ರವಾಹಗಳು II
5 : ಆವರಿಸಿಕೊಂಡವು ಪಾತಾಳ ಪಾಶಗಳು I ನನ್ನ ಕಣ್ಮುಂದಿದ್ದವು ಮರಣಕರ ಉರುಲುಗಳು II
6 : ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ ಪ್ರಭುವಿಗೆ I ಪ್ರಾರ್ಥನೆ ಮಾಡಿದೆ ಆ ನನ್ನ ದೇವನಲಿ I ನನ್ನ ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ II
7 : ಆಗ ಕಂಪಿಸಿತು ಭೂಮಿ ಗಡಗಡನೆ I ಕದಲಿದವು ಬೆಟ್ಟದ ಬುಡಗಳು ಮಿಲಮಿಲನೆ I ಏಕೆನೆ, ಸಿಟ್ಟೇರಿತ್ತು ಆತನಿಗೆ II
8 : ಹೊರಬಂದಿತು ಹೊಗೆ ಆತನ ಮೂಗಿಂದ I ಹೊರಟಿತು ಅಗ್ನಿಜ್ವಾಲೆ ಆತನ ಬಾಯಿಂದ I ಕಾದುಕೆಂಡವಾಗಿಸಿತದು ಎದುರಿಗೆ ಸಿಕ್ಕಿದ್ದನೆಲ್ಲ II
9 : ಆಕಾಶವನೆ ಬಾಗಿಸಿ ಆತನಿಳಿದು ಬರಲು I ಸೇರಿತು ಆತನ ಕಾಲಡಿ ಕಾರ್ಮುಗಿಲು II
10 : ಬಂದಿಳಿದನು ‘ಕೆರೂಬಿ’ ವಾಹನಾರೂಢನಾಗಿ I ಇಳಿದು ಬಂದನು ವಾಯುರೆಕ್ಕೆಗಳ ವೇಗದಲಿ II
11 : ಕತ್ತಲನು ಕವಿಸಿಕೊಂಡನು ಸುತ್ತಲು ಛತ್ರಾಂಬರದೊಳು I ಮರೆಯಾದನು ಜಲಮಯ ನೀಲಮೇಘಗಳ ಮಧ್ಯದೊಳು II
12 : ಹೊಳೆಯಿತು ಮಿಂಚು ಆತನ ತೇಜದ ಸನ್ನಿಧಿಯಿಂದ I ಸುರಿಯಿತು ಕಲ್ಮಳೆ, ಉರಿಗೆಂಡ ಕಾರ್ಮೋಡಗಳಿಂದ II
13 : ಗುಡುಗಿದನು ಸರ್ವೇಶ್ವರ ಗಗನಮಂಡಲದಿಂದ I ಮೊಳಗಿತು ವಾಣಿ ಆ ಪರಾತ್ಪರನ ವದನದಿಂದ I ಸುರಿಯಿತಿದೋ ಕಲ್ಮಳೆ, ಉರಿಗೆಂಡ ಮೇಲಿಂದ II
14 : ಚದರಿಸಿದನು ಶತ್ರುಗಳನು ಬಾಣಗಳನ್ನೆಸೆದು I ತಳಮಳಗೊಳಿಸಿದನವರನು ಸಿಡಿಲನು ಹೊಡೆದು II
15 : ಪ್ರಭು, ನಿನ್ನ ಗದರಿಕೆಯಿಂದ, ನಿನ್ನಾ ಶ್ವಾಸಭರದಿಂದ I ಕಾಣಿಸಿಕೊಂಡಿತು ಇಂಗಿಹೋದ ಸಮುದ್ರದ ತಳ I ತೋರಿಬಂದಿತು ಭೂಲೋಕದ ಅಸ್ತಿಭಾರ II
16 : ಮೇಲಣಲೋಕದಿಂದ ಹಿಡಿದುಕೊಂಡನು ಕೈಚಾಚಿ I ಸೆಳೆದುಕೊಂಡ ಆ ಜಲರಾಶಿಗಳಿಂದೆನ್ನನು ಕೈನೀಡಿ II
17 : ಬಿಡಿಸಿ ರಕ್ಷಿಸಿದನೆನ್ನಾ ಶತ್ರುಗಳಿಂದ I ನನಗಿಂತ ಪುಷ್ಟ, ಬಲಿಷ್ಟ ಹಗೆಗಳಿಂದ II
18 : ನನ್ನ ಮೇಲೆರಗಿದ್ದರೂ ಹಗೆಗಳು ದುರಂತಕಾಲದಲಿ I ನನಗುದ್ಧಾರಕನಾದ ಪ್ರಭು, ಆ ವಿಪತ್ಕಾಲದಲಿ II
19 : ಬಿಕ್ಕಟ್ಟಿನಿಂದ ಬಿಡಿಸಿ ತಂದನು ಬಯಲಿಗೆ I ಅಕ್ಕರೆಯಿಂದ ಮೆಚ್ಚಿ ರಕ್ಷಕನಾದ ನನಗೆ II
20 : ನನಗೊಳಿತು ಮಾಡಿದನಾತ ಸನ್ನಡತೆಗೆ ತಕ್ಕಂತೆ I ಪ್ರತಿಫಲವನಿತ್ತನು ನನ್ನ ಹಸ್ತಶುದ್ಧತೆಗೆ ತಕ್ಕಹಾಗೆ II
21 : ದೇವರನು ತೊರೆದು ದುರುಳನಾಗದೆ I ನಾನನುಸರಿಸಿದೆ ಪ್ರಭುವಿನ ಮಾರ್ಗವನೆ II
22 : ಆತನ ವಿಧಿನಿಯಮಗಳನು ಅಲಕ್ಷ್ಯಮಾಡದೆ I ಆತನಾಜ್ಞೆಗಳನ್ನಿಟ್ಟೆ ಸದಾ ನನ್ನ ಕಣ್ಗಳ ಮುಂದೆ II
23 : ಪಾಪದಲಿ ಬೀಳದೆ ನಡೆದೆ ಎಚ್ಚರಿಕೆಯಾಗಿ I ಆತನ ದೃಷ್ಟಿಯಲಿದ್ದೆ ನಿರ್ದೋಷಿಯಾಗಿ II
24 : ನಾ ನೀತಿವಂತ, ನಿರಪರಾಧಿಯೆಂದರಿತು I ನನಗಿತ್ತನಾ ಪ್ರಭು ತಕ್ಕ ಪ್ರತಿಫಲವನು II
25 : ಕರುಣೆಯುಳ್ಳವನಿಗಾತ ಕರುಣಾಮಯಿ I ದೋಷರಹಿತನಿಗಾತ ನಿರ್ದೋಷಿ II
26 : ಶುದ್ಧನಿಗಾತ ಪರಿಶುದ್ಧನು I ಮೂರ್ಖನಿಗಾತ ಮಹಾವಕ್ರನು II
27 : ದೀನದಲಿತರನು ಉದ್ಧರಿಸುವವನು ನೀನು I ತಗ್ಗಿಸಿಬಿಡುವೆಯಲ್ಲವೆ ಪ್ರಭು, ಸೊಕ್ಕಿನ ಲೋಚಕರನು? II
28 : ಹೊತ್ತಿಸುವೆ ಪ್ರಭು, ನೀನೆನ್ನ ಬಾಳಿನ ದೀಪವನು I ಕತ್ತಲನು ನೀಗಿಸಿ ಜ್ಯೋತಿ ಬೆಳಗುವನಾ ದೇವನು II
29 : ನಿನ್ನ ಶಕ್ತಿಯಿದ್ದಲ್ಲಿ ನಾ ದಂಡಿನ ಮೇಲೆ ಬೀಳಬಲ್ಲೆ I ದೇವನೆರವಿದ್ದಲ್ಲಿ ನಾ ಕೋಟೆಕೊತ್ತಲನೆ ಹಾರಬಲ್ಲೆ II
30 : ದೇವರ ಮಾರ್ಗ ದೋಷರಹಿತ I ಸರ್ವೇಶ್ವರನ ವಚನ ಪರಮಪುನೀತ I ಆಶ್ರಿತರೆಲ್ಲರಿಗಾತ ರಕ್ಷಣಾಕವಚ II
31 : ಪ್ರಭುವಲ್ಲದೆ ಇನ್ನಾವ ದೇವರುಂಟು? I ನಮ್ಮ ದೇವನಲ್ಲದೆ ಉದ್ಧಾರಕನೆಲ್ಲುಂಟು? II
32 : ನಡುಕಟ್ಟಾಗಿ ನನಗೆ ಬಿಗಿದಿದ್ದಾನೆ ಶೌರ್ಯ I ಆತನಿಂದಲೇ ಸರಾಗ ನನ್ನ ಮಾರ್ಗ II
33 : ನನಗಿತ್ತನಾತ ಹುಲ್ಲೆಯಂತ ಮೊನೆಗಾಲು I ಎನ್ನ ಬಿಗಿ ನಿಲ್ಲಿಸಿದ ಮಲೆಗಳ ಮೇಲೂ II
34 : ಯುದ್ಧವಿದ್ಯೆಯ ಕಲಿತೆ ಆತನಿಂದಲೆ I ಎಂದೇ ನಾ ಕಂಚಿನ ಬಿಲ್ಲನೆ ಬಗ್ಗಿಸಬಲ್ಲೆ II
35 : ನನ್ನ ಪರ ನೀನೇ ಗುರಾಣಿ ಹಿಡಿದು ರಕ್ಷಿಸಿದೆ I ನಿನ್ನ ಬಲಗೈ ನನಗೆ ಆಧಾರವಾಗಿದೆ I ನಿನ್ನ ಕೃಪಾವರ ತಂದಿತು ನನಗೆ ದೊಡ್ಡಸ್ತಿಕೆ II
36 : ನೀನಿತ್ತೆ ನನ್ನ ಪಾದಗಳಿಗೆ ವಿಶಾಲಸ್ಥಳ I ನನ್ನ ಹೆಜ್ಜೆಗಳು ಕದಲವು ಈ ನಿಮಿತ್ತ II
37 : ಹಿಡಿದುಕೊಳ್ವೆನು ಶತ್ರುಗಳನು ಬೆನ್ನಟ್ಟಿ I ಅವರನು ನಿರ್ಮೂಲ ಮಾಡದೆ ಬರೆನು ಹಿಂತಿರುಗಿ II
38 : ಅವರನು ಮತ್ತೆ ಏಳದಂತೆ ಹೊಡೆದೆ I ಅವರು ಕಾಲಿಗೆ ಬೀಳುವಂತೆ ಮಾಡಿದೆ II
39 : ನನಗಿತ್ತೆ ನೀ ಕದನಕ್ಕಾಗುವ ಶೌರ್ಯವೆಂಬ ನಡುಕಟ್ಟು I ತಗ್ಗಿಸಿದೆ ಎದುರಾಳಿಗಳನು ನನಗಧೀನ ಮಾಡಿಬಿಟ್ಟು II
40 : ಆ ಶತ್ರುಗಳೋಡಿದರು ನನಗೆ ಬೆಂಗೊಟ್ಟು I ಆ ಹಗೆಗಳನು ನಿರ್ಮೂಲ ಮಾಡಿದೆ ನಾ ಗುರಿಯಿಟ್ಟು II
41 : ಎಲ್ಲಿ ಯಾಚಿಸಿದರೂ ಅವರಿಗಿರಲಿಲ್ಲ ರಕ್ಷಕ I ಸರ್ವೇಶ್ವರನಿಗೆ ಮೊರೆಯಿಟ್ಟರು ದೊರಕಲಿಲ್ಲ ಉತ್ತರ II
42 : ಪುಡಿಪುಡಿ ಮಾಡಿದೆ ನಾನವರನು ಗಾಳಿಗೆ ತೂರುವ ಧೂಳಿನಂತೆ I ಎತ್ತೆಸೆದುಬಿಟ್ಟೆ ನಾನವರನು ಮೋರಿಯ ಕೆಸರಿನಂತೆ II
43 : ಜನರ ಒಳಕಲಹದಿಂದೆನ್ನ ನೀ ತಪ್ಪಿಸಿದೆ I ನನ್ನನುಳಿಸಿ ಜನಾಂಗಗಳಿಗೆ ಜನಪನಾಗಿಸಿದೆ I ನಾನರಿಯದ ಜನರನೂ ನನಗಧೀನರನ್ನಾಗಿಸಿದೆ II
44 : ದೇಶಾಂತರದವರೂ ಮುದುರಿಕೊಂಡರು ನನ್ನ ಮುಂದೆ I ವಿಧೇಯರಾದರೆನಗೆ ನನ್ನ ಸುದ್ದಿ ಕೇಳಿದ ಮಾತ್ರಕೆ II
45 : ಎದೆಗುಂದಿದವರಾದರು ಆ ವಿದೇಶಿಯರು I ತಮ್ಮ ಕೋಟೆಯಿಂದ ನಡುಗುತ್ತಾ ಹೊರಬಂದರು II
46 : ಸರ್ವೇಶ್ವರನು ಚೈತನ್ಯಸ್ವರೂಪನು I ನನ್ನುದ್ಧಾರಕನಾದವಗೆ ಸ್ತುತಿಸ್ತೋತ್ರವು I ನನ್ನ ರಕ್ಷಿಸುವ ದೇವರಿಗೆ ಜಯಕಾರವು II
47 : ನನ್ನ ಶತ್ರುಗಳಿಗೆ ವಿಧಿಸುವನಾದೇವ ಪ್ರತಿದಂಡನೆ I ಜನಾಂಗಗಳನು ಅಧೀನಪಡಿಸುವನಾತ ನನಗೆ II
48 : ಶತ್ರುಗಳಿಂದ ನೀನೆನ್ನ ಮುಕ್ತಗೊಳಿಸಿದೆ I ಎದುರಾಳಿಗೆ ತಪ್ಪಿಸಿ ನನ್ನನ್ನುನ್ನತಿಗೇರಿಸಿದೆ I ಹಿಂಸಾತ್ಮಕರಿಂದ ನೀಯೆನ್ನ ಸಂರಕ್ಷಿಸಿದೆ II
49 : ಎಂತಲೆ, ಅನ್ಯಜನಗಳ ಮಧ್ಯೆ ನಿನ್ನ ಸ್ತುತಿಪೆನು I ನಿನ್ನ ನಾಮವನು ಸರ್ವೇಶ್ವರಾ, ಸಂಕೀರ್ತಿಪೆನು II
50 : ತಾನೇ ನೇಮಿಸಿದ ಅರಸನಿಗೆ I ಆತನೀವನು ವಿಶೇಷ ರಕ್ಷಣೆ II
51 : ಅನುಗ್ರಹಿಸುವನಾತ ಅನಂತಾನಂತ ಕೃಪೆ I ತಾನಭಿಷೇಕಿಸಿದ ದಾವೀದನಿಗೆ, ಆತನ ಸಂತತಿಗೆ II