P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
141ನೇ ಅಧ್ಯಾಯ
1 : ಬೇಗನೆ ಬಾ ಪ್ರಭು, ಮೊರೆಯಿಡುವೆ ನಿನಗೆ I ಮೊರೆಯಿಡುವಾಗಲೆಲ್ಲ ಕಿವಿಗೊಡು ನನಗೆ II
2 : ಸಮರ್ಪಕವಾಗಲಿ ನನ್ನ ಪ್ರಾರ್ಥನೆ ಧೂಪಾರತಿಯಂತೆ I ಕೈಮುಗಿದು ಮಾಡುವ ವಂದನೆ ಸಂಧ್ಯಾಬಲಿಯರ್ಪಣೆಯಂತೆ II
3 : ಕಾವಲಿರಿಸು ಪ್ರಭು ನನ್ನ ಬಾಯಿಗೆ I ಪಹರೆಯಿರಲಿ ನನ್ನ ತುಟಿ ಕದಗಳಿಗೆ II
4 : ಮಾಡು ನನ್ನ ಹೃದಯ ದುರಾಚಾರವನು ಮೆಚ್ಚದಂತೆ I ಕಾಪಾಡು ದುರ್ಜನರೊಡಗೂಡಿ ಕೇಡನು ಮಾಡದಂತೆ I ನೋಡು ದುರುಳರೌತಣಗಳಲಿ ನಾ ಪಾಲ್ಗೊಳ್ಳದಂತೆ II
5 : ಸಜ್ಜನರು ವಿಧಿಸುವಾ ಶಿಕ್ಷೆ ಎನಗೆ ಕಟಾಕ್ಷ I ದುರ್ಜನರಿಂದ ನನಗಾಗದಿರಲಿ ಅಭಿಷೇಕ I ಸತತ ಪ್ರಾರ್ಥಿಸುವೆ ಆ ದುಷ್ಕೃತ್ಯಗಳ ವಿರುದ್ಧ II
6 : ದುರುಳರ ಒಡೆಯರು ಶಿಖರದಿಂದ ಬಿದ್ದಾಗ ಕೆಳಕೆ I ನನ್ನ ಮಾತು ಯಥಾರ್ಥವೆಂದು ಜನ ಕಿವಿಗೊಡುವರೆನಗೆ II
7 : ಉತ್ತ ಹೊಲದ ಹೆಂಟೆಗಳನು ಒಡೆದು ಚದರಿಸುವ ಹಾಗೆ I ಎರಚಲಾಗುವುದು ಅವರ ಎಲುಬುಗಳನು ಸನರಕದ ಬಾಯಿಗೆ II
8 : ಹೇ ಪ್ರಭೂ, ದೇವಾ, ನನ್ನ ದೃಷ್ಟಿ ನಿನ್ನ ಮೇಲಿದೆ I ವಿನಾಶಕೊಪ್ಪಿಸಬೇಡೆನ್ನ, ನಿನ್ನಾಶ್ರಯ ಕೋರಿರುವೆ II
9 : ಕಾಪಾಡು ಕೆಡುಕರೊಡ್ಡಿದ ಉರುಲಿನಿಂದ I ತಪ್ಪಿಸೆನ್ನನು ಅವರಿಟ್ಟ ಬೋನಿನಿಂದ II
10 : ದುರುಳರೊಡ್ಡಿದ ಉರುಲಲಿ ಆ ದುರುಳರೆ ಸಿಕ್ಕಿಬೀಳಲಿ I ನಾನಾದರೊ ನುಗ್ಗಿ ನಡೆವೆನು ಸುರಕ್ಷಿತವಾಗಿಯೆ ಅಲ್ಲಿ II