P. O. C ബൈബിള്
ಹಳೆಯ ಒಡಂಬಡಿಕೆ
ಆದಿಕಾಂಡ
40ನೇ ಅಧ್ಯಾಯ
- Verse 1: ಈ ಘಟನೆಗಳಾದ ಬಳಿಕ ಈಜಿಪ್ಟಿನ ಅರಸನಾದ ಫರೋಹನ ಮುಖ್ಯಪಾನದಾಯಕ ಮತ್ತು ಮುಖ್ಯ ಅಡಿಗೆಭಟ್ಟ ಯಾವುದೋ ವಿಷಯದಲ್ಲಿ ತಮ್ಮ ದಣಿಗೆ ದ್ರೋಹಮಾಡಿದ್ದರು.
- Verse 2: ಫರೋಹನು ಆ ಇಬ್ಬರು ನೌಕರರ ಮೇಲೆ, ಅಂದರೆ ಪಾನಸೇವಕರಲ್ಲಿ ಮುಖ್ಯಸ್ಥನ ಮೇಲೆಯೂ ಅಡಿಗೆಭಟ್ಟರ ಮುಖ್ಯಸ್ಥನ ಮೇಲೆಯೂ ಕೋಪಗೊಂಡು,
- Verse 3: ಅವರನ್ನು ಅಂಗರಕ್ಷಕರ ದಳಪತಿಯ ವಠಾರದಲ್ಲಿದ್ದ ಸೆರೆಯಲ್ಲಿ ಹಾಕಿಸಿದ್ದನು.
- Verse 4: ದಳಪತಿ ಜೋಸೆಫನನ್ನು ಅವರ ಉಪಚಾರಕ್ಕೆ ನೇಮಿಸಿದ್ದನು. ಜೋಸೆಫನು ಅವರಿಗೆ ಸೇವೆಮಾಡಬೇಕಾಗಿತ್ತು.
- Verse 5: ಕೆಲವು ಕಾಲವದ ಮೇಲೆ, ಆ ಇಬ್ಬರು ನೌಕರರಿಗೂ ಅಂದರೆ, ಈಜಿಪ್ಟಿನ ಅರಸ ಸೆರೆಗೆ ಹಾಕಿಸಿದ್ದ ಪಾನಸೇವಕನಿಗೂ ಅಡಿಗೆಭಟ್ಟನಿಗೂ, ಒಂದೇ ರಾತ್ರಿ ಕನಸುಬಿತ್ತು. ಅವರ ಕನಸುಗಳಿಗೆ ಬೇರೆಬೇರೆ ಅರ್ಥವಿತ್ತು.
- Verse 6: ಬೆಳಿಗ್ಗೆ ಜೋಸೆಫನು ಅವರ ಬಳಿಗೆ ಬಂದಾಗ ಚಿಂತಾಕ್ರಾಂತರಾಗಿರುವುದು ಕಾಣಿಸಿತು.
- Verse 7: ಅದನ್ನು ಗಮನಿಸಿದ ಜೋಸೆಫನು, “ಈ ದಿನ ನಿಮ್ಮ ಮುಖ ಕಳೆಗುಂದಿದೆ ಏಕೆ?” ಎಂದು ತನ್ನೊಂದಿಗೆ ಸೆರೆಯಲ್ಲಿದ್ದ ಆ ನೌಕರರನ್ನು ಕೇಳಿದ.
- Verse 8: ಅವರು, “ನಮಗೆ ಸ್ವಪ್ನಬಿತ್ತು; ಅದರ ಅರ್ಥ ಹೇಳುವವರು ಯಾರೂ ಇಲ್ಲ,” ಎಂದರು. ಜೋಸೆಫನು ಅವರಿಗೆ, “ಸ್ವಪ್ನಗಳ ಅರ್ಥ ದೇವರಿಂದ ದೊರಕಬಹುದಲ್ಲವೆ? ದಯವಿಟ್ಟು ನಿಮ್ಮ ಸ್ವಪ್ನಗಳನ್ನು ನನಗೆ ತಿಳಿಸಿ,” ಎಂದ.
- Verse 9: ಆಗ ಆ ಮುಖ್ಯ ಪಾನಸೇವಕ ಜೋಸೆಫನಿಗೆ, “ನನ್ನ ಕನಸಿನಲ್ಲಿ ಒಂದು ದ್ರಾಕ್ಷಾಲತೆ ನನ್ನೆದುರಿಗೆ ಇರುವುದನ್ನು ಕಂಡೆ.
- Verse 10: ಅದಕ್ಕೆ ಮೂರು ಕವಲುಗಳಿದ್ದವು. ಅದು ಚಿಗುರುತ್ತಲೇ ಹೂಗಳನ್ನು ಬಿಟ್ಟಿತು. ಆ ಹೂಗಳು ಗೊಂಚಲುಗಳಾಗಿ ಹಣ್ಣಾದವು.
- Verse 11: ಫರೋಹನ ಪಾನಪಾತ್ರೆ ನನ್ನ ಕೈಯಲ್ಲಿತ್ತು. ನಾನು ಆ ಗೊಂಚಲುಗಳನ್ನು ಕೊಯ್ದು ಪಾತ್ರೆಯಲ್ಲಿ ಹಿಂಡಿ ಆ ಪಾತ್ರೆಯನ್ನು ಫರೋಹನ ಕೈಗೆ ಒಪ್ಪಿಸಿದೆ,” ಎಂದು ಹೇಳಿದ.
- Verse 12: ಅದಕ್ಕೆ ಜೋಸೆಫನು, “ಆ ಕನಸಿನ ಅರ್ಥ ಇದು: ಆ ಮೂರು ಕೊಂಬೆಗಳು ಮೂರು ದಿನಗಳು;
- Verse 13: ಇನ್ನು ಮೂರು ದಿನಗಳೊಳಗೆ ನೀನು ತಲೆಯೆತ್ತುವಂತೆ ಫರೋಹನು ಮಾಡುವನು; ನಿನ್ನನ್ನು ಮರಳಿ ನೌಕರಿಗೆ ಸೇರಿಸಿಕೊಳ್ಳುವನು; ನೀನು ಮುಂದಿನಂತೆಯೇ ಫರೋಹನಿಗೆ ಪಾನಸೇವಕನಾಗಿದ್ದು ಅವನ ಕೈಗೆ ಪಾನಪಾತ್ರೆಯನ್ನು ಒಪ್ಪಿಸುವೆ.
- Verse 14: ಆದರೆ ನೀನು ಸುಖದಿಂದಿರುವಾಗ ನನ್ನನ್ನು ಮರೆಯದೆ ನನಗೊಂದು ಉಪಕಾರ ಮಾಡು. ಫರೋಹನಿಗೆ ನನ್ನ ವಿಷಯ ತಿಳಿಸಿ ನನ್ನನ್ನು ಈ ಸೆರೆಯಿಂದ ಬಿಡುಗಡೆಮಾಡು.
- Verse 15: ನಾನು ಹಿಬ್ರಿಯ ದೇಶದವನು. ಕೆಲವರು ನನ್ನನ್ನು ಗುಲಾಮನನ್ನಾಗಿ ಈ ದೇಶಕ್ಕೆ ಹಿಡಿದುತಂದರು. ಇಲ್ಲಿಯೂ ಸೆರೆಗೆ ಗುರಿಯಾಗಿಸುವಂಥ ದ್ರೋಹವನ್ನು ನಾನೇನು ಮಾಡಿಲ್ಲ,” ಎಂದನು.
- Verse 16: ಜೋಸೆಫನು ಹೇಳಿದ ಅರ್ಥ ಶುಭಕರ ಆದುದೆಂದು ತಿಳಿದ ಆ ಮುಖ್ಯ ಅಡಿಗೆಭಟ್ಟ ಅವನಿಗೆ, “ನಾನು ಕಂಡ ಕನಸನ್ನು ಹೇಳುತ್ತೇನೆ, ಕೇಳು: ಸೊಗಸಾದ ರೊಟ್ಟಿ ಪದಾರ್ಥಗಳು ತುಂಬಿದ್ದ ಮೂರು ಪುಟ್ಟಿಗಳು ನನ್ನ ತಲೆಯ ಮೇಲೆ ಇದ್ದವು.
- Verse 17: ಮೇಲಣ ಪುಟ್ಟಿಯಲ್ಲಿ ಫರೋಹನಿಗಾಗಿಯೆ ವಿಧವಿಧವಾದ ರೊಟ್ಟಿ ಪದಾರ್ಥಗಳು ಇದ್ದವು. ಪಕ್ಷಿಗಳು ಬಂದು ಅವುಗಳನ್ನು ನನ್ನ ತಲೆಯ ಮೇಲಿದ್ದ ಪುಟ್ಟಿಯಿಂದಲೆ ತಿನ್ನುತ್ತಿದ್ದವು,” ಎಂದು ಹೇಳಿದ.
- Verse 18: ಅದಕ್ಕೆ ಜೋಸೆಫನು, “ನಿನ್ನ ಕನಸಿನ ಅರ್ಥ ಇದು: ಆ ಮೂರು ಪುಟ್ಟಿಗಳೇ ಮೂರು ದಿನಗಳು.
- Verse 19: ಇನ್ನು ಮೂರು ದಿನದೊಳಗೆ ಫರೋಹನು ನಿನ್ನ ಕುತ್ತಿಗೆಗೆ ನೇಣುಹಾಕಿಸುವನು; ಮರಕ್ಕೆ ತೂಗುಹಾಕಿಸುವನು; ಹಕ್ಕಿಗಳು ಬಂದು ನಿನ್ನ ಮಾಂಸವನ್ನು ತಿಂದುಬಿಡುವುವು,” ಎಂದನು.
- Verse 20: ಮೂರನೆಯ ದಿನ ಫರೋಹನು ಹುಟ್ಟಿದ ಹಬ್ಬದಿನವಾಗಿತ್ತು. ಅವನು ತನ್ನ ಪರಿವಾರದವರಿಗೆಲ್ಲ ಔತಣವನ್ನು ಏರ್ಪಡಿಸಿದ್ದ. ಮುಖ್ಯ ಪಾನಸೇವಕನನ್ನೂ ಮುಖ್ಯ ಅಡಿಗೆಭಟ್ಟನನ್ನೂ ಬಿಡಿಸಿ ಬರಮಾಡಿದ, ತನ್ನ ಪರಿವಾರದವರ ಮಧ್ಯದಲ್ಲೆ ಅವರ ತಲೆಯನ್ನು ಎತ್ತಿಸಿದ.
- Verse 21: ಪಾನಸೇವಕರ ಮುಖ್ಯಸ್ಥನನ್ನು ಪುನಃ ಅವನ ನೌಕರಿಗೆ ಏರಿಸಿದ; ಅವನು ಪಾನಪಾತ್ರೆಯನ್ನು ಫರೋಹನ ಕೈಗೆ ಒಪ್ಪಿಸುವಂಥವನಾದ.
- Verse 22: ಆದರೆ ಮುಖ್ಯ ಅಡಿಗೆಭಟ್ಟನನ್ನು ನೇಣು ಹಾಕಿಸಿದ. ಹೀಗೆ ಜೋಸೆಫನು ಹೇಳಿದ ಅರ್ಥ ಕಾರ್ಯಗತವಾಯಿತು.
- Verse 23: ಆದರೆ ಮುಖ್ಯ ಪಾನಸೇವಕನು ಜೋಸೆಫನನ್ನು ನೆನಪಿಗೆ ತಂದುಕೊಳ್ಳಲಿಲ್ಲ, ಅವನನ್ನು ಮರೆತೇಬಿಟ್ಟ.