ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
2 ಯೊವಾನ್ನನು
1ನೇ ಅಧ್ಯಾಯ
1 : ದೇವರಿಂದ ಆಯ್ಕೆಯಾದ ಶ್ರೀಮಾತೆಗೂ ಆಕೆಯ ಮಕ್ಕಳಿಗೂ - ಸಭಾಹಿರಿಯನಾದ ನಾನು ಬರೆಯುವ ಪತ್ರ.
2 : ನಮ್ಮಲ್ಲಿ ನೆಲೆಗೊಂಡಿರುವ ಹಾಗೂ ನಮ್ಮಲ್ಲಿ ಶಾಶ್ವತವಾಗಿರುವ ಸತ್ಯದ ಪ್ರಯುಕ್ತ ನಾನು ಮತ್ತು ಸತ್ಯವನ್ನು ಅರಿತಿರುವ ಎಲ್ಲರು ನಿಮ್ಮಲ್ಲಿ ಪ್ರೀತಿಯನ್ನಿಟ್ಟಿದ್ದೇವೆ.
3 : ಪಿತನಾದ ದೇವರಿಂದಲೂ ಅವರ ಪುತ್ರ ಯೇಸುಕ್ರಿಸ್ತರಿಂದಲೂ ಕೃಪೆ, ಕರುಣೆ, ಶಾಂತಿ, ಸಮಾಧಾನಗಳು ಸತ್ಯಪೂರ್ವಕವಾಗಿಯೂ ಪ್ರೀತಿಪೂರ್ವಕವಾಗಿಯೂ ನಮ್ಮಲ್ಲಿ ನೆಲೆಸಲಿ!
4 : ನಿನ್ನ ಮಕ್ಕಳಲ್ಲಿ ಕೆಲವರು ಪಿತನು ವಿಧಿಸಿದಂತೆ ಸತ್ಯಸಂಧರಾಗಿ ನಡೆಯುವುದನ್ನು ಕಂಡು ನನಗಾದ ಆನಂದ ಅಷ್ಟಿಷ್ಟಲ್ಲ.
5 : ಶ್ರೀಮಾತೆಯೇ, ನಾನು ಮಾಡುವ ಬಿನ್ನಹವಿದು: ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದು ಮೊತ್ತಮೊದಲಿನಿಂದಲೂ ನಮಗೆ ಕೊಡಲಾದ ಆಜ್ಞೆಯೇ ಹೊರತು ಹೊಸದೇನೂ ಅಲ್ಲ.
6 : ದೇವರ ಆಜ್ಞೆಗಳನ್ನು ಅನುಸರಿಸಿ ನಡೆಯುವುದೇ ಪ್ರೀತಿ. ಪ್ರೀತಿಮಾರ್ಗದಲ್ಲಿ ನಡೆಯಬೇಕೆಂಬುದೇ ನೀವು ಮೊತ್ತಮೊದಲಿನಿಂದಲೂ ಕೇಳಿರುವ ಆಜ್ಞೆ.
7 : ಅನೇಕ ಮಂದಿ ವಂಚಕರು ಲೋಕದಲ್ಲಿ ತಲೆದೋರಿದ್ದಾರೆ. ಯೇಸುಕ್ರಿಸ್ತರು ಮನುಷ್ಯ ಆಗಿಬಂದರೆಂಬುದನ್ನು ಇವರು ಒಪ್ಪಿಕೊಳ್ಳುವುದಿಲ್ಲ. ಇಂಥವನು ವಂಚಕನೂ ಕ್ರಿಸ್ತವಿರೋಧಿಯೂ ಹೌದು.
8 : ನಿಮ್ಮ ದುಡಿಮೆಯ ಫಲವನ್ನು ಕಳೆದುಕೊಳ್ಳದೆ ಅದನ್ನು ಪೂರ್ಣವಾಗಿ ಪಡೆಯುವಂತೆ ನೀವು ಎಚ್ಚರಿಕೆ ವಹಿಸಬೇಕು.
9 : ಕ್ರಿಸ್ತಯೇಸುವಿನ ಉಪದೇಶದಲ್ಲಿ ನೆಲೆಸದೆ ಅದರ ಎಲ್ಲೆಮೀರಿ ನಡೆಯುವವನಲ್ಲಿ ದೇವರು ಇರುವುದಿಲ್ಲ. ಆ ಉಪದೇಶದಲ್ಲಿ ನೆಲೆಸಿರುವವನಲ್ಲಿ ಪಿತ ಮತ್ತು ಪುತ್ರ ಇಬ್ಬರೂ ಇರುತ್ತಾರೆ.
10 : ಈ ಉಪದೇಶವನ್ನು ಒಪ್ಪದಿರುವ ಯಾವನಾದರೂ ನಿಮಗೆ ಉಪದೇಶಮಾಡಬಂದರೆ, ಮನೆಯೊಳಗೆ ಸೇರಿಸಬೇಡಿ; ಅವನನ್ನು ಹರಸಲೂಬೇಡಿ.
11 : ಏಕೆಂದರೆ, ಹರಸುವವನು ಅವನ ದುಷ್ಕೃತ್ಯಗಳಲ್ಲಿ ಪಾಲುಗಾರನಾಗುತ್ತಾನೆ.
12 : ನಾನು ನಿಮಗೆ ತಿಳಿಸಬೇಕಾದ ವಿಷಯಗಳು ಬಹಳಷ್ಟಿವೆ. ಆದರೆ ಅವುಗಳನ್ನು ಕಾಗದಪತ್ರಗಳ ಮೂಲಕ ತಿಳಿಸಲು ನನಗೆ ಇಷ್ಟವಿಲ್ಲ. ನಾನೇ ನಿಮ್ಮಲ್ಲಿಗೆ ಬಂದು ನಿಮ್ಮ ಸಂಗಡ ಮಾತನಾಡುವ ನಿರೀಕ್ಷೆ ಇದೆ. ಹೀಗೆ ಮುಖಾಮುಖಿಯಾಗಿ ಮಾತನಾಡುವುದರಿಂದ ಪೂರ್ಣಸಂತೋಷವೂ ಆಗುತ್ತದೆ.
13 : ದೇವರಿಂದ ಆಯ್ಕೆಯಾದ ನಿನ್ನ ಸಹೋದರಿಯ ಮಕ್ಕಳು ನಿನಗೆ ನಮಸ್ಕಾರ ಹೇಳಿದ್ದಾರೆ.