ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯಾಜಕಕಾಂಡ
18ನೇ ಅಧ್ಯಾಯ
- Verse 1: ಇಸ್ರಯೇಲರಿಗೆ ಈ ಆಜ್ಞೆಗಳನ್ನು ಕೊಡಬೇಕೆಂದು ಸರ್ವೇಶ್ವರ ಸ್ವಾಮಿ ಮೋಶೆಗೆ ತಿಳಿಸಿದರು:
- Verse 2: “ನಾನು ನಿಮ್ಮ ದೇವರಾಗಿರುವ ಸರ್ವೇಶ್ವರ.
- Verse 3: ನೀವು ವಾಸವಾಗಿದ್ದ ಈಜಿಪ್ಟಿನ ಆಚಾರಗಳನ್ನು ಅನುಸರಿಸಬಾರದು; ನಾನು ನಿಮ್ಮನ್ನು ಕರೆದೊಯ್ಯುತ್ತಿರುವ ಕಾನಾನ್ ನಾಡಿನ ಆಚರಣೆಗಳನ್ನು ಕೂಡ ನೀವು ಅನುಸರಿಸಬಾರದು. ಅವರಲ್ಲಿರುವ ನಿಯಮಗಳಿಗೆ ನೀವು ಒಳಗಾಗಕೂಡದು.
- Verse 4: ಸರ್ವೇಶ್ವರನೆಂಬ ನಾನೇ ನಿಮ್ಮ ದೇವರಾಗಿರುವುದರಿಂದ ನನ್ನ ನಿರ್ಣಯಗಳ ಪ್ರಕಾರವೇ ನೀವು ನಡೆಯಬೇಕು; ನನ್ನ ವಿಧಿಗಳನ್ನೇ ಅನುಸರಿಸಬೇಕು.
- Verse 5: ನನ್ನ ಆಜ್ಞಾವಿಧಿಗಳ ಪ್ರಕಾರ ನಡೆದುಕೊಳ್ಳುವವರು ಆ ಆಜ್ಞಾವಿಧಿಗಳಿಂದ ಜೀವಿಸುವರು. ಆದುದರಿಂದ ನೀವು ಅವುಗಳನ್ನೇ ಅನುಸರಿಸಬೇಕು. ನಾನೇ ಸರ್ವೇಶ್ವರ.
- Verse 6: ನಿಮ್ಮಲ್ಲಿ ಯಾರೂ ರಕ್ತಸಂಬಂಧವುಳ್ಳವರೊಡನೆ ಮೈಗೂಡಿಸಕೂಡದು; ನಾನೇ ಸರ್ವೇಶ್ವರ.
- Verse 7: “ನಿನ್ನ ತಂದೆಯೊಡನೇ ಆಗಲಿ, ತಾಯಿಯೊಡನೆ ಆಗಲಿ ಸಂಭೋಗಿಸಕೂಡದು, ತಾಯಿಯೊಡನೆ ಎಷ್ಟು ಮಾತ್ರವೂ ಸಂಗಮಿಸಬಾರದು. ಆಕೆ ನಿನ್ನ ಹೆತ್ತ ತಾಯಿ.
- Verse 8: “ಮಲತಾಯಿಯನ್ನು ಸಂಭೋಗಿಸಬಾರದು; ಹಾಗೆ ಮಾಡಿದರೆ ತಂದೆಗೆ ಮಾನಭಂಗವಾಗುವುದು. ಆಕೆ ನಿನ್ನ ತಂದೆಯ ಅರ್ಧಾಂಗಿ.
- Verse 9: “ತಂದೆಯ ಮಗಳನ್ನಾಗಲಿ, ತಾಯಿಯ ಮಗಳನ್ನಾಗಲಿ ಸಂಭೋಗಿಸಬಾರದು; ಅವರು ಒಡಹುಟ್ಟಿದವರು; ಪರಸ್ತ್ರೀಯರಲ್ಲಿ ಹುಟ್ಟಿದವರಾದರೂ ಅವರು ನಿಮಗೆ ಅಕ್ಕತಂಗಿಯರು.
- Verse 10: “ಮಗನ ಮಗಳನ್ನಾಗಲಿ ಮಗಳ ಮಗಳನ್ನಾಗಲಿ ಸಂಭೋಗಿಸಬಾರದು; ಅವರು ನಿಮಗೆ ಮಕ್ಕಳಂಥವರು.
- Verse 11: “ತಂದೆಯ ಮತ್ತೊಬ್ಬ ಹೆಂಡತಿಯಲ್ಲಿ ಹುಟ್ಟಿದವಳನ್ನು ಸಂಭೋಗಿಸಬಾರದು; ಆಕೆ ಸಹೋದರಿ.
- Verse 12: “ತಂದೆಯ ಒಡಹುಟ್ಟಿದವಳೊಡನೆ ಸಂಭೋಗ ಮಾಡಬಾರದು; ಆಕೆ ತಂದೆಯ ರಕ್ತ ಸಂಬಂಧಿ.
- Verse 13: “ತಾಯಿಯ ಒಡಹುಟ್ಟಿದವಳೊಡನೆ ಸಂಭೋಗ ಮಾಡಬಾರದು; ಆಕೆ ತಾಯಿಯ ರಕ್ತಸಂಬಂದಿ.
- Verse 14: “ತಂದೆಯ ಅಣ್ಣತಮ್ಮಂದಿರ ಹೆಂಡತಿಯನ್ನು ಸಂಭೋಗಿಸಬಾರದು; ಅವರು ದೊಡ್ಡಮ್ಮ, ಚಿಕ್ಕಮ್ಮ ನಿಮಗೆ.
- Verse 15: “ಸೊಸೆಯನ್ನು ಸಂಗಮಿಸಬಾರದು; ಆಕೆ ಮಗನ ಹೆಂಡತಿ.
- Verse 16: “ಅತ್ತಿಗೆ ನಾದಿನಿಯರನ್ನು ಸಂಭೋಗಿಸಬಾರದು; ಅವರು ಅಣ್ಣತಮ್ಮಂದಿರ ಹೆಂಡತಿಯರು.
- Verse 17: “ಮದುವೆ ಮಾಡಿಕೊಂಡವಳ ಮಗಳನ್ನಾಗಲಿ ಮೊಮ್ಮಗಳನ್ನಾಗಲಿ ಸಂಗಮಿಸಬಾರದು. ಅವರು ರಕ್ತಸಂಬಂಧಿಗಳು, ಅದು ಅಧರ್ಮ.
- Verse 18: “ಹೆಂಡತಿ ಜೀವದಿಂದಿರುವಾಗಲೆ ಆಕೆಯ ಒಡಹುಟ್ಟಿದವಳನ್ನು ಮದುವೆಮಾಡಿಕೊಂಡು ಹೆಂಡತಿಗೆ ಮನಸ್ತಾಪವನ್ನುಂಟು ಮಾಡಬಾರದು.
- Verse 19: “ಮುಟ್ಟಿನಿಂದ ಅಶುದ್ಧಳಾದ ಮಹಿಳೆಯನ್ನು ಸಂಗಮಿಸಬಾರದು.
- Verse 20: ಪರಸ್ತ್ರೀ ಸಂಭೋಗದಿಂದ ಅಶುದ್ಧರಾಗಬಾರದು.
- Verse 21: ನಿಮ್ಮ ಮಕ್ಕಳಲ್ಲಿ ಯಾರನ್ನೂ ಮೋಲೆಕ ದೇವತೆಗೆ ಸಮರ್ಪಿಸಿ ನಿಮ್ಮ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡಬಾರದು; ಸರ್ವೇಶ್ವರ ನಾನೇ.
- Verse 22: ಸ್ತ್ರೀಯನ್ನು ಸಂಗಮಿಸುವಂತೆ ಪುರುಷನನ್ನು ಸಂಗಮಿಸಬಾರದು; ಅದು ಹೇಸಿಗೆಯಾದುದು.
- Verse 23: ಪ್ರಾಣಿ ಸಂಗಮವನ್ನು ಮಾಡಿ ಅಶುದ್ಧರಾಗಬಾರದು; ಯಾವ ಸ್ತ್ರೀಯೂ ಸಂಗಮಕ್ಕಾಗಿ ಪ್ರಾಣಿಯನ್ನು ಸಂಪರ್ಕಿಸಬಾರದು; ಅದು ವ್ಯತಿರಿಕ್ತವಾದುದು.
- Verse 24: “ಇಂಥ ದುರಾಚಾರಗಳಾವುದರಿಂದಲೂ ನೀವು ಅಶುದ್ಧರಾಗಬಾರದು. ಏಕೆಂದರೆ ನಾನು ನಿಮಗೆ ಮುಂಚಿತವಾಗಿ ಹೊರಡಿಸುವ ಜನಾಂಗಗಳವರು ಇಂಥ ಅನಾಚಾರಗಳಿಂದಲೇ ಅಶುದ್ಧರಾದರು.
- Verse 25: ಹೀಗೆ ಅವರ ನಾಡು ಅಶುದ್ಧವಾಗಿ ಹೋದುದರಿಂದ ಅವರ ಪಾಪಕೃತ್ಯಗಳಿಗಾಗಿ ಅವರನ್ನು ಶಿಕ್ಷಿಸಿದ್ದೇನೆ. ಆ ನಾಡು ತನ್ನಲ್ಲಿ ವಾಸಿಸಿದವರನ್ನು ಕಕ್ಕಿಬಿಟ್ಟಿತು.
- Verse 26: ಆದುದರಿಂದ ಸ್ವದೇಶದವರಾದ ನಿಮ್ಮಲ್ಲಿಯಾಗಲಿ, ನಿಮ್ಮ ನಡುವೆ ವಾಸಿಸುವ ಅನ್ಯದೇಶೀಯರಲ್ಲಾಗಲಿ ಯಾರೂ ಇಂಥ ಹೇಸಿಗೆಯಾದ ಕಾರ್ಯಗಳಲ್ಲಿ ಒಂದನ್ನೂ ಮಾಡದೆ ಎಲ್ಲರೂ ನನ್ನ ಆಜ್ಞೆಗಳನ್ನು ಅನುಸರಿಸಿ ನಡೆಯಬೇಕು.
- Verse 27: ನಿಮಗಿಂತ ಮುಂಚೆ ನಾಡಿನಲ್ಲಿ ಇದ್ದವರು ಇಂಥ ಅಸಹ್ಯವಾದ ಕೆಲಸಗಳನ್ನು ಮಾಡಿದ್ದರಿಂದ ಆ ನಾಡು ಕೆಟ್ಟುಹೋಯಿತು.
- Verse 28: ನಿಮಗಿಂತ ಮುಂಚೆಯಿದ್ದ ಜನಾಂಗಗಳನ್ನು ಆ ನಾಡು ಕಕ್ಕಿಬಿಟ್ಟ ಪ್ರಕಾರವೇ ಅದು ನಿಮ್ಮಿಂದ ಅದು ಮಲಿನವಾದರೆ ನಿಮ್ಮನ್ನೂ ಅಂತೆಯೇ ಕಕ್ಕಿಬಿಡುವುದು.
- Verse 29: ಯಾರಾದರೂ ಈ ಅಸಹ್ಯವಾದ ಕಾರ್ಯಗಳಲ್ಲಿ ಒಂದನ್ನು ಮಾಡಿದ್ದೇ ಆದರೆ ಅವನನ್ನು ಕುಲದಿಂದ ತೆಗೆದುಬಿಡಬೇಕು.
- Verse 30: ಆದುದರಿಂದ ನಿಮಗಿಂತ ಮುಂಚೆ ನಡೆಯುತ್ತಿದ್ದ ಅಸಹ್ಯವಾದ ಆಚರಣೆಗಳನ್ನು ನಡೆಸಿ ನಿಮ್ಮನ್ನೇ ಅಶುದ್ಧಮಾಡಿಕೊಳ್ಳದೆ ನನ್ನ ವಿಧಿಗಳನ್ನು ಅನುಸರಿಸಿ ನಡೆಯಬೇಕು. ನಾನೇ ನಿಮ್ಮ ದೇವರಾದ ಸರ್ವೇಶ್ವರ.