ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆಶಾಯ
47ನೇ ಅಧ್ಯಾಯ
- Verse 1: “ಕೆಳಕ್ಕಿಳಿದು ಬಾ, ಯುವತಿಯೇ ಧೂಳಲ್ಲಿ ಕುಳಿತುಕೋ, ಬಾಬೆಲೆ ! ಕುವರಿಯೇ, ಕುಕ್ಕರಿಸು ನೆಲದಲಿ ಸಿಂಹಾಸನವಿಲ್ಲ ಇಲ್ಲಿ. ಎಲೈ, ಕಸ್ದೀಯರ ನಗರಿಯೇ, ನೀನಲ್ಲ ಇನ್ನು ಕೋಮಲೆ,, ಸುಕುಮಾರಿ ಎಂದು ಎನಿಸಿಕೊಳ್ಳೆ.
- Verse 2: ಬೀಸುವ ಕಲ್ಲನು ಹಿಡಿ, ಹಿಟ್ಟಿಗಾಗಿ ನೆರಿಗೆಯನ್ನು ಹರಿ, ಮುಸುಕನ್ನು ತೆಗೆದುಹಾಕಿ ಹೊಳೆಗಳನ್ನು ಹಾದುಹೋಗು, ನಡೆ ಬರೆಗಾಲಿನಲ್ಲಿ.
- Verse 3: ಮುಯ್ಯಿ ತೀರಿಸುವೆನು ಯಾರನ್ನೂ ಕರುಣಿಸದೆ ಬೀದಿಪಾಲಾಗುವೆ ನೀನು ಲಜ್ಜೆಗೆಟ್ಟು, ಮಾನವಿಲ್ಲದೆ.”
- Verse 4: ನಮ್ಮ ಉದ್ಧಾರಕನ ನಾಮಧೇಯ ಸೇನಾಧೀಶ್ವರ ಸರ್ವೇಶ್ವರ ಆತನೇ ಇಸ್ರಯೇಲರಿಗೆ ಪರಮಪವಿತ್ರ.
- Verse 5: “ಕಸ್ದೀಯ ನಗರಿಯೇ, ಕುಳಿತುಕೊ ಮೌನವಾಗಿ ಕತ್ತಲೆಯೊಳಗೆ ಇನ್ನು ಎನಿಸಿಕೊಳ್ಳೆ ರಾಣಿಯೆಂದು ರಾಜ್ಯಗಳಿಗೆ.”
- Verse 6: “ನಾ ರೋಷಗೊಂಡು ನನ್ನ ಜನರನ್ನೇ ನಿನ್ನ ಕೈವಶಮಾಡಿದೆ ನನಗೆ ಸ್ವಂತವಾದವರನ್ನೇ ಈ ಪರಿ ಹೊಲೆಗೆಡಿಸಿದೆ. ನೀನಾದರೋ ಕರುಣೆ ತೋರಿಸದೆಹೋದೆ ಮುದುಕರ ಮೇಲೂ ತೂಕದ ನೊಗವನು ಹೊರಿಸಿದೆ.
- Verse 7: ನನ್ನ ಜನರ ಹಿಂಸೆಬಾಧೆಗಳನ್ನು ಗಮನಿಸದೆ ಬರಲಿರುವ ಪರಿಣಾಮವನ್ನು ನೆನೆಸಿಕೊಳ್ಳದೆ ನೀನೇ ಶಾಶ್ವತ ರಾಣಿಯೆಂದು ಮೆರೆದೆ.
- Verse 8: ಭೋಗಾಸಕ್ತಳೆ, ನೆಮ್ಮದಿಯಾಗಿ ನೆಲೆಗೊಂಡಿರುವವಳೇ, ‘ಏಕೈಕಳು ನಾನೇ, ನನ್ನ ಹೊರತು ಇನ್ನಾರು ಇಲ್ಲ,’ ಎನ್ನುವವಳೇ, ‘ವಿಧವೆಯಾಗೆನು, ಪುತ್ರಶೋಕ ಎನಗಿರದು’ ಎನ್ನುವವಳೇ, ಇದನು ಕೇಳು :
- Verse 9: ಒಂದೇ ದಿನದೊಳಗೆ, ಒಂದೇ ಕ್ಷಣದೊಳಗೆ ಪುತ್ರಶೋಕ, ವೈಧವ್ಯ - ಇವೆರಡು ಒದಗುವುವು ನಿನಗೆ. ಎಷ್ಟೇ ಮಂತ್ರತಂತ್ರಗಳನು ನಡೆಸಿದರೂ ಅನುಭವಿಸುವೆ ನೀ ಪೂರ್ತಿಯಾಗಿ ಇವುಗಳನು.
- Verse 10: ಕೇಡನು ನೀ ಮಾಡಿದೆ ಭಯಪಡದೆ ನೋಡರಾರೂ ಎಂದುಕೊಂಡಿದ್ದೆ, ನೀನು ಜ್ಞಾನಿ ವಿವೇಕಿಯೆಂದು ತಿಳಿದುಕೊಂಡೇ ಮರುಳಾದೆ; ‘ಏಕೈಕಳು ನಾನೇ, ಇನ್ನಾರೂ ಇಲ್ಲ’ ಎಂದುಕೊಂಡೆ.
- Verse 11: ಇಂತಿರಲು ನಿನಗೊದಗುವುದು ಮಂತ್ರಕ್ಕು ಮೀರಿದ ಆಪತ್ತು ನಿನ್ನ ಮೇಲೆರಗುವುದು ಪರಿಹರಿಸಲಾಗದ ವಿಪತ್ತು ತಟ್ಟನೆ ತಟ್ಟುವುದು ನಿನಗೆ ತಪ್ಪಿಸಲಾಗದ ಕುತ್ತು.
- Verse 12: ಪ್ರಯೋಗಿಸಿ ನೋಡು ನಿನ್ನ ಅಗಣಿತ ಮಂತ್ರತಂತ್ರಗಳನು ಬಾಲ್ಯಾರಭ್ಯ ನೀ ಕಲಿತ ಮಾಯಮಾಟಗಳನು ಪ್ರಾಯಶಃ ನಿನಗವು ಪ್ರಯೋಜನವಾದಾವು ಬಹುಶಃ ನಿನಗವು ಭಯಹುಟ್ಟಿಸಿಯಾವು.
- Verse 13: ಬೇಸರವಾಯಿತೆ ನಿನಗೆಕೇಳಿ ಮಂತ್ರಾಲೋಚನೆಗಳನು? ಉದ್ಧರಿಸಲಿ ಬರಲಿರುವ ಆ ವಿಪತ್ತುಗಳಿಂದ ನಿನ್ನನು ಖಗೋಳಜ್ಞರು, ಜೋಯಿಸರು ನೋಡಿ ಪಂಚಾಂಗವನು.
- Verse 14: ಇರುವರವರೆಲ್ಲರು ಒಣಹುಲ್ಲಿನ ಕೂಳೆಯಂತೆ ಸುಟ್ಟುಬಿಡುವುದವರನು ಉರಿಯುವ ಚಿತೆ ತುತ್ತಾಗುವರವರು ಆ ಜ್ವಾಲಾಗ್ನಿಗೆ ತಪ್ಪದೆ. ಅದು ಚಳಿಗೆ ಮೈಕಾಯಿಸಿಕೊಳ್ಳುವ ಬೆಂಕಿಯಂತಲ್ಲ ಮೈಬೆಚ್ಚಗಾಗಿಸಿಕೊಳ್ಳುವ ಉರಿಯಂತಲ್ಲ.
- Verse 15: ಇಂತಾಗುವುದು ನೀ ಗೈದ ಪ್ರಯತ್ನಗಳೆಲ್ಲ. ಬಾಲ್ಯದಿಂದ ನಿನ್ನೊಡನೆ ವ್ಯವಹರಿಸಿದವರು ಸರಿವರು ದೂರಕೆ ಹಿಂದಿರುಗುವರೆಲ್ಲರು ತಂತಮ್ಮ ನಾಡಿಗೆ ಅಂತ್ಯದಲಿ ಯಾರೂ ಆಗರು ರಕ್ಷಣೆ ನಿನಗೆ.”