வேதாகமம்
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
18ನೇ ಅಧ್ಯಾಯ
- Verse 1: ಆಗ ಶೂಹ್ಯನಾದ ಬಿಲ್ದದನು ಹೀಗೆಂದು ಉತ್ತರಿಸಿದ:
- Verse 2: “ಯೋಬನೇ, ಇನ್ನೆಷ್ಟರವರೆಗೆ ಮಾತುಗಳಿಗಾಗಿ ಹೊಂಚುಹಾಕುತ್ತಿರುವೆ? ಮೊದಲು ಆಲೋಚಿಸಿನೋಡು, ಆಮೇಲೆ ಬಾ ಮಾತುಕತೆಗೆ.
- Verse 3: ನಮ್ಮನ್ನು ಮೃಗಗಳೆಂದು ಎಣಿಸಿರುವೆಯಾ? ನಿನ್ನ ದೃಷ್ಟಿಯಲಿ ನಾವೇನು ಅಷ್ಟು ದಡ್ಡರೆ?
- Verse 4: ಸಿಟ್ಟಿನಿಂದ ನಿನ್ನನ್ನೆ ಸೀಳಿಕೊಳ್ಳುತ್ತಿರುವವನೇ, ನಿನ್ನ ನಿಮಿತ್ತ ಇಡೀಲೋಕ ಬಿಕೋ ಎನ್ನಬೇಕೆ? ಬೆಟ್ಟಗುಡ್ಡಗಳು ಸ್ಥಳಬಿಟ್ಟು ಜರುಗಬೇಕೆ?
- Verse 5: ಹೌದು, ದುರುಳನ ದೀಪ ಆರಿಹೋಗುವುದು ಅವನ ಒಲೆಯು ಉರಿಯದೆ ಹೋಗುವುದು.
- Verse 6: ಅವನ ಗುಡಾರದ ಬೆಳಕು ಕತ್ತಲಾಗುವುದು ಅವನ ಮೇಲಣ ಸೊಡರು ನಂದಿಹೋಗುವುದು.
- Verse 7: ಅವನ ಬಿರುಸಾದ ಹೆಜ್ಜೆಗಳು ಜಡವಾಗುವುವು ಅವನು ಹಾಕಿದ ಯೋಜನೆಗಳು ಅವನನ್ನೆ ಕೆಡವಿಹಾಕುವುವು.
- Verse 8: ಅವನನ್ನು ಅವನ ಕಾಲುಗಳೆ ಬಲೆಗೆ ಬೀಳಿಸುವುವು ಅವನನ್ನು ಪಾಳುಗುಂಡಿಯ ಮೇಲೆ ನಡೆಸುವುವು.
- Verse 9: ಕತ್ತರಿಬೋನು ಅವನ ಹಿಮ್ಮಡಿಯನ್ನು ಕಚ್ಚುವುದು ಆ ಕಳ್ಳ ಉರುಲು ಅವನನ್ನು ಸಿಕ್ಕಿಸಿಕೊಳ್ಳುವುದು.
- Verse 10: ಅವನಿಗಾಗಿ ಜಾಲವನ್ನು ಅವಿತಿಡಲಾಗಿದೆ ದಾರಿಯಲಿ ಅವನಿಗಾಗಿ ಪಾಶವನ್ನು ಹೂತಿಡಲಾಗಿದೆ ನೆಲದಲಿ.
- Verse 11: ಸುತ್ತಲಿನ ಅಪಾಯಗಳು ಅವನನ್ನು ಹೆದರಿಸುತ್ತವೆ ಅವನ ಹಿಮ್ಮಡಿ ತುಳಿಯುತ್ತಾ ಅವು ಬೆನ್ನು ಹತ್ತುತ್ತವೆ.
- Verse 12: ಕುಂದಿಹೋಗುವುದು ಅವನ ಕಿಮ್ಮತ್ತು ಅವನು ಬೀಳುವುದನ್ನೇ ಕಾದಿದೆ ಆಪತ್ತು.
- Verse 13: ರೋಗರುಜಿನಗಳು ಅವನ ಚರ್ಮವನು ಚೂರುಚೂರಾಗಿ ತಿಂದುಬಿಡುವುವು ಅಂಗಾಂಗವಾಗಿ ಮೃತ್ಯುಕಾರಕ ರೋಗವು ಅವನನ್ನು ನುಂಗಿಬಿಡುವುದು.
- Verse 14: ನೆಮ್ಮದಿಯ ಗುಡಾರದಿಂದ ಅವನನ್ನು ಎಳೆದು ಹಾಕುವುದು ಹೊರಗೆ ಸಾಗಿಸಿಕೊಂಡು ಹೋಗುವುದವನನ್ನು ಅತಿಭಯಂಕರ ರಾಜನೆಡೆಗೆ.
- Verse 15: ಅನ್ಯಜನರು ವಾಸಮಾಡುವರು ಅವನ ಗುಡಾರದೊಳಗೆ ಗಂಧಕವನ್ನು ಸುರಿಸಲಾಗುವುದು ಅವನ ಮನೆಯ ಮೇಲೆ.
- Verse 16: ಒಣಗುವುದು ಅವನ ಬುಡ ಕೆಳಗಡೆ ಬಾಡುವುದು ಅವನ ರೆಂಬೆ ಮೇಲ್ಗಡೆ.
- Verse 17: ಅವನ ಸ್ಮರಣೆ ಅಳಿದುಹೋಗುವುದು ಜಗದಲಿ ಇಲ್ಲವಾಗುವುದು ಅವನ ಹೆಸರು ನಾಡಿನಲಿ.
- Verse 18: ಅವನನ್ನು ಬೆಳಕಿನಿಂದ ತಳ್ಳುವರು ಕತ್ತಲಿಗೆ ಅಟ್ಟಿಬಿಡುವರು ಅವನನ್ನು ಲೋಕದಿಂದಲೆ.
- Verse 19: ಅವನ ಮಗ, ಮೊಮ್ಮಗರಾರೂ ಇರರು ಸ್ವಜನರಲಿ ಯಾರೂ ಉಳಿಯರು ಅವನು ವಾಸಿಸಿದ ಸ್ಥಳದಲಿ.
- Verse 20: ಅವನ ಗತಿಯನು ಕೇಳಿ ಚಕಿತಗೊಳ್ವರು ಪಡುವಣದವರು ಅಂತೆಯೇ ಭಯಭ್ರಾಂತರಾಗುವರು ಮೂಡಣದವರು.
- Verse 21: ಕೇಡಿಗರ ನಿವಾಸಗಳ ಗತಿ ಹೀಗೆಯೇ ದೇವರನು ಅಲಕ್ಷಿಸುವವನ ಸ್ಥಿತಿ ಇದುವೇ.”