पवित्र बाइबिल
ಹಳೆಯ ಒಡಂಬಡಿಕೆ
ನ್ಯಾಯಸ್ಥಾಪಕರು
18ನೇ ಅಧ್ಯಾಯ
1 : ಆ ಕಾಲದಲ್ಲಿ ಇಸ್ರಯೇಲರಿಗೆ ಅರಸನಿರಲಿಲ್ಲ. ದಾನ್ ಕುಲದವರಿಗೆ ಆವರೆಗೂ ಇಸ್ರಯೇಲರಲ್ಲಿ ಆಸ್ತಿಪಾಸ್ತಿ ಸಿಕ್ಕದೆ ಇದ್ದುದರಿಂದ ಅವರು ತಮಗಾಗಿ ವಾಸಸ್ಥಳವನ್ನು ಹುಡುಕುತ್ತಿದ್ದರು.
2 : ಚೊರ್ಗಾ, ಎಷ್ಟಾವೋಲ್ ಎಂಬ ಊರುಗಳಿಂದ ತಮ್ಮ ಕುಲದಲ್ಲಿ ಐದುಮಂದಿ ಪರಾಕ್ರಮಶಾಲಿಗಳಾದ ಗೂಢಚಾರರನ್ನು ಆರಿಸಿ ಅವರಿಗೆ, “ನೀವು ಹೋಗಿ (ಲಯಿಷ್) ದೇಶವನ್ನು ಸಂಚರಿಸಿ ನೋಡಿ ಬನ್ನಿ,” ಎಂದು ಆಜ್ಞಾಪಿಸಿ ಕಳುಹಿಸಿದನರು . ಇವರು ಪ್ರಯಾಣ ಮಾಡುತ್ತಾ ಎಫ್ರಯಿಮ್ ಬೆಟ್ಟದ ಸೀಮೆಯಲ್ಲಿ ಇದ್ದ ಮೀಕನ ಮನೆಗೆ ಬಂದು ಇಳಿದುಕೊಂಡರು.
3 : ಇವರು ಮೀಕನ ಮನೆಯ ಹತ್ತಿರದಲ್ಲಿ ಆ ಯೌವನಸ್ಥನಾದ ಲೇವಿಯನು ಮಾತಾಡುವುದನ್ನು ಕೇಳಿ ಗುರುತು ಹಿಡಿದು ಅವನ ಬಳಿಗೆ ಹೋಗಿ, “ನಿನ್ನನ್ನು ಇಲ್ಲಿಗೆ ಕರೆತಂದವರಾರು? ಇಲ್ಲಿ ಏನು ಕೆಲಸ ಮಾಡುತ್ತಿರುವೆ? ಏನು ಸಂಬಳ ಸಿಕ್ಕುತ್ತಿದೆ?” ಎಂದು ಅವನನ್ನು ವಿಚಾರಿಸಿದರು. ಅವನು,
4 : ‘ಮೀಕನು ತನಗೆ ಇಂಥಿಂಥವುಗಳನ್ನು ಸಂಬಳವಾಗಿ ಕೊಡುತ್ತಾನೆಂದೂ ತಾನು ಅವನ ಯಾಜಕನಾಗಿದ್ದೇನೆಂದೂ ಹೇಳಿದನು.
5 : ಆಗ ಅವರು, “ದಯವಿಟ್ಟು ನಮ್ಮ ಪ್ರಯಾಣ ಸಫಲ ಆಗುವುದೋ ಇಲ್ಲವೋ ಎಂಬುದನ್ನು ದೇವರ ಸನ್ನಿಧಿಯಲ್ಲಿ ವಿಚಾರಿಸು,” ಎಂದು ಬೇಡಿಕೊಂಡರು.
6 : ಅವನು, “ಸಮಾಧಾನದಿಂದ ಹೋಗಿ ಸರ್ವೇಶ್ವರ ನಿಮ್ಮ ಪ್ರಯಾಣವನ್ನು ಆಶೀರ್ವದಿಸುವರು,” ಎಂದನು.
7 : ಆ ಐದು ಮಂದಿ ಹೊರಟು ಲಯಿಷಿಗೆ ಬಂದರು. ಇಲ್ಲಿನ ಜನರು ನಿರ್ಭೀತರಾಗಿ ಚೀದೋನ್ಯರಂತೆ ಸುಖಸಮಾಧಾನಗಳಿಂದ ಜೀವಿಸುತ್ತಾರೆ; ಇವರನ್ನು ಅಡಗಿಸುವ ಅಧಿಕಾರಿಗಳು ದೇಶದಲ್ಲಿಲ್ಲ. ಇವರು ಚೀದೋನ್ಯರಿಗೆ ದೂರವಾಗಿದ್ದು ಯಾರೊಡನೆಯೂ ಬಳಕೆಯಿಲ್ಲದವರು ಎಂಬುದನ್ನು ತಿಳಿದುಕೊಂಡು ಹಿಂದಿರುಗಿ,
8 : ಚೊರ್ಗಾ, ಎಷ್ಟಾವೋಲ್ ಎಂಬ ಊರುಗಳಲ್ಲಿ ಇರುವ ತಮ್ಮ ಬಂಧುಗಳ ಬಳಿಗೆ ಬಂದರು. ಆ ಬಂಧುಗಳು, “ನೀವು ಯಾವ ವರ್ತಮಾನ ತಂದಿದ್ದೀರಿ?” ಎಂದು ಅವರನ್ನು ಕೇಳಲು
9 : ಅವರು, “ಏಳಿ, ಅವರಿಗೆ ವಿರುದ್ಧ ಯುದ್ಧಕ್ಕೆ ಹೋಗೋಣ. ನಾವು ಆ ದೇಶವನ್ನು ನೋಡಿದೆವು; ಅದು ಬಹು ಉತ್ತಮ ದೇಶ. ನೀವು ಸುಮ್ಮನೆ ಕುಳಿತುಕೊಳ್ಳುವುದೇಕೆ? ತಡಮಾಡದೆ ಹೊರಡಿ; ಆ ದೇಶವನ್ನು ನಮ್ಮದಾಗಿಸಿಕೊಳ್ಳೋಣ.
10 : ನೀವು ಅಲ್ಲಿಗೆ ಹೋಗುವುದಾದರೆ ಅಲ್ಲಿನ ಜನರು ನಿರ್ಭಯದಿಂದ ಜೀವಿಸುವವರೆಂದೂ ಅವರ ದೇಶ ಬಹು ವಿಸ್ತಾರವಾಗಿದೆಯೆಂದೂ ತಿಳಿದುಕೊಳ್ಳುವಿರಿ. ದೇವರು ಅದನ್ನು ನಿಮ್ಮ ಕೈಗೆ ಒಪ್ಪಿಸಿದ್ದಾರೆ. ಅದರಲ್ಲಿ ದೊರಕದಿರುವ ಪದಾರ್ಥಗಳು ಲೋಕದಲ್ಲೇ ಇಲ್ಲ,” ಎಂದರು.
11 : ಆಗ ಚೊರ್ಗಾ, ಎಷ್ಟಾವೋಲ್ ಊರುಗಳಿಂದ ಆರುನೂರು ಮಂದಿ ದಾನ್ ಕುಲದವರು ಯುದ್ಧಸನ್ನದ್ಧರಾಗಿ ಹೊರಟರು.
12 : ಗುಡ್ಡಹತ್ತಿ ಯೆಹೂದದ ಕಿರ್ಯತ್ಯಾರೀಮಿನ ಬಳಿಯಲ್ಲಿ ಇಳಿದುಕೊಂಡರು. ಆದುದರಿಂದ ಆ ಸ್ಥಳಕ್ಕೆ ಇಂದಿನವರೆಗೂ ‘ದಾನ್ಯರ ಪಾಳೆಯ’ ಎಂಬ ಹೆಸರಿದೆ; ಅದು ಕಿರ್ಯತ್ಯಾರೀಮಿನ ಪಶ್ಚಿಮದಲ್ಲಿದೆ.
13 : ಅವರು ಅಲ್ಲಿಂದ ಮುಂದಕ್ಕೆ ಪ್ರಯಾಣ ಮಾಡಿ ಎಫ್ರಯಿಮ್ ಪರ್ವತಪ್ರದೇಶದಲ್ಲಿದ್ದ ಮೀಕನ ಮನೆಯ ಹತ್ತಿರಕ್ಕೆ ಬಂದರು.
14 : ಲಯಿಷ್ ದೇಶವನ್ನು ಸಂಚರಿಸಿ ನೋಡುವುದಕ್ಕೆ ಹೋಗಿದ್ದ ಐದು ಮಂದಿ ತಮ್ಮ ಬಂಧುಗಳಿಗೆ, “ಈ ಗ್ರಾಮದಲ್ಲಿ ಒಂದು ‘ಏಫೋದು’, ದೇವತಾಪ್ರತಿಮೆಗಳು, ಕೆತ್ತನೆಯ ಮತ್ತು ಎರಕದ ವಿಗ್ರಹಗಳು ಇರುತ್ತವೆ ಎಂಬುದು ನಿಮಗೆ ಗೊತ್ತುಂಟೇ?
15 : ಈ ವಿಷಯದಲ್ಲಿ ಏನು ಮಾಡಬೇಕೆಂಬುದನ್ನು ಆಲೋಚಿಸಿರಿ,” ಎಂದು ಹೇಳಿ ಅಲ್ಲಿಂದ ಮೀಕನ ಮನೆಯಲ್ಲಿದ್ದ ಆ ಯೌವನಸ್ಥನಾದ ಲೇವಿಯನ ಬಳಿಗೆ ಬಂದರು. ಅವನ ಯೋಗಕ್ಷೇಮವನ್ನು ವಿಚಾರಿಸತೊಡಗಿದರು.
16 : ಇಷ್ಟರಲ್ಲಿ ಯುದ್ಧಸನ್ನದ್ಧರಾದ ಆರು ನೂರು ಮಂದಿ ದಾನ್ಯರು ಬಂದು ಬಾಗಿಲಲ್ಲಿ ನಿಂತರು.
17 : ಯಾಜಕನೂ ಬಂದು ಇವರೊಡನೆ ಬಾಗಿಲಲ್ಲಿ ನಿಂತಿದ್ದಾಗ ಆ ಐದು ಮಂದಿ ಮನೆಯನ್ನು ಹೊಕ್ಕು ಕೆತ್ತನೆಯ ಮತ್ತು ಎರಕದ ವಿಗ್ರಹಗಳನ್ನೂ ‘ಏಫೋದ’ನ್ನೂ ದೇವತಾಪ್ರತಿಮೆಗಳನ್ನೂ ತೆಗೆದುಕೊಂಡರು.
18 : ಅವುಗಳನ್ನು ಅವರು ಮೀಕನ ಮನೆಯನ್ನು ಹೊಕ್ಕು ತೆಗೆದುಕೊಂಡು ಬರುವಾಗ ಯಾಜಕನು ಕಂಡು ಅವರಿಗೆ, “ನೀವು ಮಾಡಿದ್ದೇನು?” ಎಂದನು.
19 : ಅವರು ಅವನಿಗೆ, “ಬಾಯಿಮುಚ್ಚಿ ಸುಮ್ಮನಿರಿ, ನಮ್ಮ ಜೊತೆಯಲ್ಲಿ ಬಂದು ನಮಗೆ ತಂದೆಯೂ ಯಾಜಕನೂ ಆಗಿರು. ಒಂದೇ ಒಂದು ಮನೆಗೆ ಯಾಜಕನಾಗಿರುವುದು ಉತ್ತಮವೋ ಅಥವಾ ಇಸ್ರಯೇಲರ ಒಂದು ಕುಲಕ್ಕೂ ಗೋತ್ರಕ್ಕೂ ಯಾಜಕನಾಗಿರುವುದು ಉತ್ತಮವೋ?” ಎಂದರು.
20 : ಯಾಜಕನು ಈ ಮಾತನ್ನು ಕೇಳಿ ಸಂತೋಷಪಟ್ಟು ಏಫೋದನ್ನೂ ದೇವತಾಪ್ರತಿಮೆಗಳನ್ನೂ ಕೆತ್ತನೆಯ ವಿಗ್ರಹವನ್ನೂ ತೆಗೆದುಕೊಂಡು ಅವರೊಡನೆ ಬಂದನು.
21 : ತರುವಾಯ ಅವರು ತಮ್ಮ ಮಡದಿ ಮಕ್ಕಳನ್ನೂ ಕುರಿದನ ಮೊದಲಾದ ಸೊತ್ತನ್ನೂ ಮುಂದಾಗಿ ಕಳುಹಿಸಿ ತಾವೂ ಹಿಂದಿನಿಂದ ಹೊರಟರು.
22 : ಅವರು ಮೀಕನ ಮನೆಗೆ ದೂರವಾದ ಮೇಲೆ ಮೀಕನೂ ಅವನ ನೆರೆಹೊರೆಯವರೆಲ್ಲರೂ ದಾನರನ್ನು ಹಿಂದಟ್ಟಿದರು.
23 : ಅವರ ಸಮೀಪಕ್ಕೆ ಹೋಗಿ ಅವರನ್ನು ಕೂಗಿದರು. ದಾನ್ಯರು ಹಿಂದಿರುಗಿ ನೋಡಿ ಮೀಕನಿಗೆ, “ನಿನಗೇನಾಯಿತು? ಗುಂಪುಕೂಡಿಸಿಕೊಂಡು ಬಂದದ್ದೇಕೆ?” ಎಂದು ಕೇಳಿದರು.
24 : ಅವನು, “ನೀವು ಯಾಜಕನನ್ನೂ ನಾನು ಮಾಡಿಸಿಕೊಂಡ ದೇವರುಗಳನ್ನೂ ಅಪಹರಿಸಿಕೊಂಡಿದ್ದೀರಿ, ನನಗೆ ಇನ್ನೇನಿದೆ; ಹೀಗಿರಲಾಗಿ ನಿನಗೇನಾಯಿತೆಂದು ನೀವೇ ನನ್ನನ್ನು ಕೇಳುವುದು ಹೇಗೆ?” ಎಂದನು.
25 : ದಾನ್ಯರು ಅವನಿಗೆ, “ನಮ್ಮಲ್ಲಿ ಕೆಲವರು ಸಿಟ್ಟಿನವರು. ಅವರು ನಿಮ್ಮ ಮೇಲೆ ಬಿದ್ದರೆ ನೀನೂ ನಿನ್ನ ಮನೆಯವರೂ ಪ್ರಾಣನಷ್ಟಪಡುವಿರಿ. ಆದುದರಿಂದ ಬಾಯಿಮುಚ್ಚಿಕೊಂಡು ಹೋಗಿ,” ಎಂದು ಹೇಳಿ ಮುಂದೆ ನಡೆದರು.
26 : ಅವರು ತನಗಿಂಥ ಬಲಿಷ್ಠರೆಂದು ಮೀಕನು ತಿಳಿದು ಹಿಂದಿರುಗಿ ಮನೆಗೆ ಹೋದನು.
27 : ದಾನ್ಯರು ಮೀಕನು ಮಾಡಿಸಿದ್ದ ವಿಗ್ರಹಗಳನ್ನೂ ಅವನ ಯಾಜಕನನ್ನೂ ಅಪಹರಿಸಿಕೊಂಡು, ಲಯಿಷಿಗೆ ಹೋಗಿ, ಅಲ್ಲಿ ಸುಖದಿಂದಲೂ ನಿರ್ಭಯದಿಂದಲೂ ವಾಸವಾಗಿದ್ದ ಅಲ್ಲಿನ ಜನರ ಮೇಲೆ ಬಿದ್ದು ಅವರನ್ನು ಕತ್ತಿಯಿಂದ ಸಂಹರಿಸಿ ಅವರ ಪಟ್ಟಣವನ್ನು ಸುಟ್ಟುಬಿಟ್ಟರು.
28 : ಆ ಪಟ್ಟಣ ಚೀದೋನಿಗೆ ದೂರವಾಗಿದ್ದರಿಂದಲೂ ಸಮೀಪದಲ್ಲಿ ಪರಿಚಯಸ್ಥರಾರೂ ಇಲ್ಲದ್ದರಿಂದಲೂ ಅವರಿಗೆ ಸಹಾಯ ದೊರಕಲಿಲ್ಲ. ಬೇತ್ ರೆಹೋಬಿನ ತಗ್ಗಿನಲ್ಲಿದ್ದ ಈ ಪಟ್ಟಣವನ್ನು ದಾನ್ಯರು ತಿರುಗಿ ಕಟ್ಟಿಸಿ ಅದರಲ್ಲಿ ವಾಸಿಸಿದರು.
29 : ಮುಂಚೆ ಲಯಿಷ್ ಎಂಬ ಹೆಸರಿದ್ದ ಆ ಪಟ್ಟಣಕ್ಕೆ ಈಗ ‘ದಾನ್’ ಎಂದು ಹೆಸರಿಟ್ಟರು. ದಾನ್ ಎಂಬುದು ಇವರ ಮೂಲ ಪುರುಷನೂ ಇಸ್ರಯೇಲನ ಮಗನೂ ಆದವನ ಹೆಸರು.
30 : ಇದಲ್ಲದೆ ದಾನ್ಯರು ಆ ವಿಗ್ರಹವನ್ನು ತಮ್ಮ ಪಟ್ಟಣದಲ್ಲಿಟ್ಟರು. ಇಸ್ರಯೇಲರು ಸೆರೆಗೆ ಹೋಗುವವರೆಗೆ ಮೋಶೆಯ ಮೊಮ್ಮಗನೂ ಗೇರ್ಷೋಮನ ಮಗನೂ ಆದ ಯೆಹೋನಾತಾನನೂ ಅವನ ವಂಶದವರೂ ದಾನ್ಯರಿಗೆ ಯಾಜಕರಾಗಿದ್ದರು.
31 : ಶಿಲೋವಿನಲ್ಲಿ ದೇವಸ್ಥಾನವಿದ್ದ ಕಾಲದಲ್ಲೆಲ್ಲಾ ದಾನ್ಯರಲ್ಲಿ ಮೀಕನು ಮಾಡಿಸಿದ ವಿಗ್ರಹವಿತ್ತು.