पवित्र बाइबिल
ಹಳೆಯ ಒಡಂಬಡಿಕೆ
ಯೆಶಾಯ
18ನೇ ಅಧ್ಯಾಯ
1 : ಎಥಿಯೋಪಿಯದ ನದಿಗಳಾಚೆ ಇರುವ ಸೀಮೆಗೆ ಧಿಕ್ಕಾರ ! ರೆಕ್ಕೆಗಳನ್ನು ಪಟಪಟನೆ ಬಡಿಯುವ ಮಿಡತೆಗಳಿಂದ ಕೂಡಿರುವ ನಾಡಿಗೆ ಧಿಕ್ಕಾರ !
2 : ಜೊಂಡು ಮರದ ದೋಣಿಗಳಲ್ಲಿ ನೈಲುನದಿಯ ಮಾರ್ಗವಾಗಿ, ರಾಯಭಾರಿಗಳನ್ನು ಕಳುಹಿಸುವ ಆ ದೇಶಕ್ಕೆ ಧಿಕ್ಕಾರ ! ಶೀಘ್ರವಾಗಿ ಬರುತ್ತಿರುವ ದೂತರೇ, ಹಿಂದಕ್ಕೆ ಹೋಗಿ, ಎತ್ತರವಾದ ನುಣುಪಾದ ಮೈಕಟ್ಟುಳ್ಳ, ಸರ್ವರಿಗೂ ಭಯಪ್ರದರಾಗಿರುವ, ಪ್ರಬಲ ಆಕ್ರಮಣಕಾರಿಗಳೂ ಆದ, ನದಿಗಳಿಂದ ಸೀಳಿಹೋಗಿರುವ ರಾಷ್ಟ್ರದವರ ಬಳಿಗೆ ತೆರಳಿ.
3 : ಸಮಸ್ತ ಭೂನಿವಾಸಿಗಳೇ, ಜಗದ ಸಕಲ ಜನಾಂಗಗಳೇ, ಕೇಳಿ : ಬೆಟ್ಟಗಳ ಮೇಲೆ ಧ್ವಜಾರೋಹಣ ಮಾಡುವಾಗ ಕಣ್ಣಿಟ್ಟು ನೋಡಿ, ತುತೂರಿಯನ್ನು ಊದುವಾಗ ಕಿವಿಗೊಟ್ಟು ಕೇಳಿ,
4 : ಸರ್ವೇಶ್ವರ ನನಗೆ ಹೀಗೆಂದು ಹೇಳಿದ್ದಾರೆ : “ಬಿಸಿಹಗಲಿನ ಸೂರ್ಯನಂತೆ, ಕೊಯಿಲುಗಾಲದಲ್ಲಿರುವ ಮಂಜಿನಂತೆ, ನಾನು ನನ್ನ ನಿವಾಸಸ್ಥಾನದಿಂದ ಸುಮ್ಮನೆ ನೋಡುತ್ತಿರುವೆನು.”
5 : ಗಿಡದಲ್ಲಿ ಮೊಗ್ಗು ಕಚ್ಚಿ, ಹೂ ಅರಳಿ, ಹೀಚು ದೋರೆಗಾಯಿಯಾಗುತ್ತಿರುವಾಗ, ಕೊಯಿಲು ಕಾಲಕ್ಕೆ ಮುಂಚೆಯೇ ಅದರ ಕೊಂಬೆಗಳನ್ನೂ ಕವಲುಗಳನ್ನೂ ಶತ್ರುಗಳು ಕತ್ತರಿಸಿಹಾಕುವರು.
6 : ಹೀಗೆ ಕಡಿಯಲ್ಪಟ್ಟವರ ಶವಗಳೆಲ್ಲ ರಣಹದ್ದುಗಳ ಮತ್ತು ಕಾಡುಮೃಗಗಳ ಪಾಲಾಗುವುವು; ಪಕ್ಷಿಗಳಿಗೆ ಬೇಸಿಗೆಯ ಆಹಾರವಾಗುವುವು, ಪ್ರಾಣಿಗಳಿಗೆ ಚಳಿಗಾಲದ ಉಣಿಸಾಗುವುವು.
7 : ಆಗ ಎತ್ತರವಾದ, ನುಣುಪಾದ ಮೈಕಟ್ಟುಳ್ಳ, ಸರ್ವರಿಗೂ ಭಯಪ್ರದರಾದ, ಪ್ರಬಲ ಆಕ್ರಮಣಕಾರಿಗಳಾದ, ನದಿಗಳಿಂದ ಸೀಳಿಹೋಗಿರುವ ರಾಷ್ಟ್ರದವರು ಸರ್ವೇಶ್ವರ ಸ್ವಾಮಿಯ ಹೆಸರಾಂತ ಸಿಯೋನ್ ಪರ್ವತಕ್ಕೆ ಬರುವರು. ಸೇನಾಧೀಶ್ವರ ಸರ್ವೇಶ್ವರ ಅವರಿಂದ ಕಾಣಿಕೆಗಳನ್ನು ಸ್ವೀಕರಿಸುವರು.