P. O. C ബൈബിള്
ಹಳೆಯ ಒಡಂಬಡಿಕೆ
ಎಸ್ತೇರಳು
1ನೇ ಅಧ್ಯಾಯ
1 : ಭಾರತ (ಇಂಡಿಯಾ) ದೇಶ ಮೊದಲುಗೊಂಡು ಇಥಿಯೋಪಿಯ ದೇಶದವರೆಗೂ ಇದ್ದ ನೂರಿಪ್ಪತ್ತೇಳು ಸಂಸ್ಥಾನಗಳನ್ನು ಅರಸ ಅಹಷ್ವೇರೋಷನು ಆಳುತ್ತಿದ್ದನು.
2 : ಅರಸನು ತನ್ನ ರಾಜಧಾನಿಯಾಗಿದ್ದ ಶೂಷನ್ ನಗರದಲ್ಲಿ ರಾಜಸಿಂಹಾಸನವನ್ನೇರಿ ಆಡಳಿತ ನಡೆಸುತ್ತಿದ್ದ ಮೂರನೆಯ ವರ್ಷದಲ್ಲಿ ತನ್ನ ಎಲ್ಲಾ ಉನ್ನತ ಅಧಿಕಾರಿಗಳಿಗೂ ಪರಿವಾರದವರಿಗೂ ಒಂದು ಔತಣವನ್ನೇರ್ಪಡಿಸಿದನು.
3 : ಪರ್ಷಿಯ ಮತ್ತು ಮೇದ್ಯ ದೇಶಗಳ ದಂಡನಾಯಕರೂ ಪದಾಧಿಕಾರಿಗಳೂ ಸಂಸ್ಥಾನದ ಅಧಿಕಾರಿಗಳೂ ಅರಸನ ಮುಂದೆ ಉಪಸ್ಥಿತರಿದ್ದರು.
4 : ಅರಸನು ತನ್ನ ಘನರಾಜ್ಯದ ಸಿರಿಸಂಪತ್ತನ್ನು, ವೈಭವವನ್ನು ಹಾಗು ರಾಜ್ಯದ ಆಡಂಬರವನ್ನು ಅವರೆಲ್ಲರ ಮುಂದೆ ಬಹುದಿನಗಳವರೆಗೆ ಅಂದರೆ, ನೂರೆಂಬತ್ತು ದಿನಗಳವರೆಗೆ ಪ್ರದರ್ಶಿಸಿದನು.
5 : ಆ ದಿನಗಳು ಕಳೆದ ನಂತರ ಅರಸನು ಶೂಷನ್ ನಗರದ ನಿವಾಸಿಗಳಿಗೆ ಶ್ರೀಮಂತ-ಬಡವ ಎಂಬ ಯಾವ ಭೇದಭಾವ ಮಾಡದೆ ಎಲ್ಲರಿಗೂ ಅರಮನೆಯ ತೋಟದ ಅಂಗಳದಲ್ಲಿ ಏಳು ದಿನಗಳ ಪರಿಯಂತರ ದೊಡ್ಡ ಔತಣವನ್ನೇರ್ಪಡಿಸಿದನು.
6 : ಅಂಗಳದಲ್ಲಿ ಬಿಳಿ, ಹಸಿರು, ನೀಲಿವರ್ಣದ ಪರದೆಗಳು ರಕ್ತವರ್ಣದ ನಾರಿನ ಹಗ್ಗಗಳಿಂದ ಅಮೃತಶಿಲೆಯ ಬೆಳ್ಳಿಯ ಉಂಗುರಗಳಿಗೆ ತೂಗುಹಾಕಲಾಗಿದ್ದವು. ಜರತಾರಿ ಎಳೆಗಳಿಂದ ಕಸೂತಿಮಾಡಿದ ಸುಖಾಸನ ಪೀಠಗಳು, ಕೆಂಪು, ಬಿಳಿ, ಹಳದಿ ಹಾಗೂ ಕಪ್ಪು ವರ್ಣದ ಅಮೃತಶಿಲೆಯ ಹಾಸುಗಲ್ಲುಗಳಿಂದ ರಚಿತವಾದ ನೆಲದ ಮೇಲೆ ಇಡಲಾಗಿದ್ದವು.
7 : ನಾನಾ ಆಕಾರದ ಬಂಗಾರದ ಪಾತ್ರೆಗಳಲ್ಲಿ ಅರಸನ ಔದಾರ್ಯಕ್ಕೆ ತಕ್ಕಂತೆ ಧಾರಾಳವಾಗಿ ದ್ರಾಕ್ಷಾರಸವನ್ನು ಕುಡಿಯಲು ಕೊಡುವ ವ್ಯವಸ್ಥೆ ಮಾಡಲಾಗಿತ್ತು.
8 : ಮಧುಪಾನ ಸೇವನೆಯಲ್ಲಿ ಪ್ರತಿಯೊಬ್ಬನಿಗೂ ತನ್ನ ಇಚ್ಛಾನುಸಾರ ಕೊಡಬೇಕೆಂತಲೂ ಯಾರಿಗೂ ಒತ್ತಾಯ ಮಾಡಬಾರದೆಂದೂ ಸೇವಕರಿಗೆ ಅರಸನು ಆದೇಶವಿತ್ತಿದ್ದನು.
9 : ವಷ್ಟಿರಾಣಿಯು, ಮಹಿಳೆಯರಿಗೋಸ್ಕರ ಅರಮನೆಯಲ್ಲಿ ಪ್ರತ್ಯೇಕ ಏರ್ಪಾಡು ಮಾಡಿಸಿದ್ದಳು.
10 : ಏಳನೆಯ ದಿನ ಅರಸ ಅಹಷ್ವೇರೋಷನು ಮಧುಪಾನ ಮಾಡಿ ಆನಂದ ಲಹರಿಯಲ್ಲಿದ್ದಾಗ ಬಹುಸುಂದರಿಯಾದ ತನ್ನ
11 : ಪತ್ನಿಯ ರೂಪರಾಶಿಯನ್ನು ತನ್ನ ಪ್ರಜೆಗಳ ಹಾಗೂ ಪದಾಧಿಕಾರಿಗಳ ಮುಂದೆ ಪ್ರದರ್ಶಿಸುವ ಸಲುವಾಗಿ ರಾಜಮುಕುಟವನ್ನು ಧರಿಸಿದ ಆಕೆಯನ್ನು ರಾಜಸನ್ನಿಧಿಗೆ ಕರೆತರುವಂತೆ ಆಸ್ಥಾನ ಸೇವಕರಾದ ಮೆಹೂಮಾನ್, ಬಿಜೆತಾ, ಹರ್ಬೋನಾ, ಬಿಗೆತಾ, ಅಬಗೆತಾ, ಜೇತರ್, ಕರ್ಕಸ್ ಎಂಬ ಏಳುಮಂದಿ ಕಂಚುಕಿಯರಿಗೆ ಅಪ್ಪಣೆಮಾಡಿದನು.
12 : ಆದರೆ, ಕಂಚುಕಿಗಳು ರಾಜಾಜ್ಞೆಯನ್ನು ವಷ್ಟಿರಾಣಿಗೆ ತಿಳಿಸಿದಾಗ, ಆಕೆ ಬರಲು ನಿರಾಕರಿಸಿದಳು. ಇದನ್ನು ಕೇಳಿದಾಗ ಅರಸನು ಕುಪಿತಗೊಂಡು, ರೌದ್ರಾವೇಶನಾದನು.
13 : ವಿಧಿನಿಯಮಗಳನ್ನು ಬಲ್ಲ ಪಂಡಿತರೆಲ್ಲರ ಮುಂದೆ ಅರಮನೆಯ ಸಂಗತಿಗಳನ್ನು ಇಡುವ ಪದ್ಧತಿಯಿತ್ತು.
14 : ಅರಸ ಅಹಷ್ವೇರೋಷನ ಆಸ್ಥಾನದಲ್ಲಿ ರಾಜಸಾನ್ನಿಧ್ಯ ಸೇವಕರೂ ಪದಾಧಿಕಾರಿಗಳೂ ಆಗಿದ್ದ ಕರ್ಷೆನಾ, ಶೇತಾರ್, ಅದ್ಮಾತಾ, ತರ್ಷೀಷ್, ಮೆರೆಸ್, ಮರ್ಸೆನಾ, ಮೆಮೂಕಾನ್ ಎಂಬ ಏಳು ಮಂದಿ ಪರ್ಷಿಯ ಮತ್ತು ಮೇದ್ಯ ದೇಶಗಳ ರಾಜಪ್ರಮುಖರು ಇದ್ದರು. ಸಮಯೋಚಿತ ವ್ಯವಹಾರ ಜ್ಞಾನಹೊಂದಿದವರಾದ ಇವರನ್ನು ಅರಸನು, ಈ ವಿಷಯವಾಗಿ ವಿಚಾರಿಸಿದನು.
15 : “ಕಂಚುಕಿಗಳ ಮುಖಾಂತರ ತಿಳಿಯಪಡಿಸಿದ ರಾಜಾಜ್ಞೆಯನ್ನು ಉಲ್ಲಂಘಿಸಿದ ವಷ್ಟಿರಾಣಿಯ ವಿರುದ್ಧ ಯಾವ ನ್ಯಾಯಬದ್ಧವಾದ ಕ್ರಮ ತೆಗೆದುಕೊಳ್ಳಬೇಕು?” ಎಂದು ಕೇಳಿದನು.
16 : ಅರಸನ ಮುಂದೆಯೂ ನೆರೆದಿದ್ದ ಪದಾಧಿಕಾರಿಗಳ ಮುಂದೆಯೂ ಇದಕ್ಕೆ ಉತ್ತರ ಈಯುತ್ತ ಮೆಮೂಕನು: “ವಷ್ಟಿರಾಣಿಯು ಬಗೆದಿರುವ ಅವಮಾನ ಅರಸನೊಬ್ಬನ ವಿರುದ್ಧ ಮಾತ್ರವಲ್ಲ, ಅರಸನ ರಾಜ್ಯದಲ್ಲಿರುವ ಎಲ್ಲಾ ಪದಾಧಿಕಾರಿಗಳ ಹಾಗೂ ಪ್ರಜೆಗಳ ವಿರುದ್ಧವೂ ಆಗಿದೆ.
17 : ಹೇಗೆಂದರೆ, ವಷ್ಟಿರಾಣಿಯ ಈ ವರ್ತನೆ ಇತರ ಎಲ್ಲಾ ಸ್ತ್ರೀಯರಿಗೂ ತಿಳಿದುಬಂದು ಅವರೂ ತಮ್ಮ ಗಂಡಂದಿರನ್ನು ತಿರಸ್ಕಾರಭಾವದಿಂದ ಕಾಣತೊಡಗುವರು. ‘ಅಹಷ್ವೇರೋಷನು ರಾಣಿ ವಷ್ಟಿಗೆ ತನ್ನ ಮುಂದೆ ಬರಲು ಹೇಳಿಕಳುಹಿಸಿದನು; ಆದರೆ ಆಕೆ ಬರಲು ನಿರಾಕರಿಸಿದಳು,’ ಎಂದು ಹೇಳಿಕೊಂಡು ಹೀಯಾಳಿಸುವರು.
18 : ಇದಲ್ಲದೆ, ರಾಣಿಯ ಈ ವರ್ತನೆಯ ಬಗ್ಗೆ ಕೇಳಿಸಿಕೊಂಡ ಪರ್ಷಿಯ, ಮೇದ್ಯ ದೇಶಗಳ ಕುಲೀನ ಸ್ತ್ರೀಯರೂ ಇದೇ ರೀತಿ ಅರಸರ ಪದಾಧಿಕಾರಿಗಳೊಂದಿಗೆ ವರ್ತಿಸುವರು. ಹೀಗೆ ತಿರಸ್ಕಾರವೂ ಕೋಪವೂ ಉಂಟಾಗುವುದು.
19 : ಅರಸರು ಸಮ್ಮತಿಸುವುದಾದರೆ, ವಷ್ಟಿರಾಣಿಯು ಅರಸರ ಸನ್ನಿಧಿಗೆ ಇನ್ನೆಂದೂ ಬಾರದಂತೆ ನಿಷೇಧಾಜ್ಞೆಯಾಗಬೇಕು. ಪಟ್ಟದರಸಿ ಆದ ಆಕೆಯ ಸ್ಥಾನವನ್ನು ಅವಳಿಗಿಂತಲೂ ಉತ್ತಮಳಾದ ಮತ್ತೊಬ್ಬಳಿಗೆ ಕೊಡುವಂತಾಗಬೇಕು. ಈ ಬಗ್ಗೆ ರಾಜಾಜ್ಞೆಯೊಂದನ್ನು ಹೊರಡಿಸಿ ಅದು ರದ್ದಾಗದಂತೆ ಪರ್ಷಿಯರ, ಮೇದ್ಯರ ಶಾಸನಗಳಲ್ಲಿ ಲಿಖಿತವಾಗಬೇಕು.
20 : ಅರಸರ ಈ ನಿರ್ಣಯವು ತಮ್ಮ ಹಿರಿಯರಿಂದ ಹಿಡಿದು ಕಿರಿಯರವರೆಗೂ ಎಲ್ಲಾ ಮಹಿಳೆಯರು ತಮ್ಮ ಗಂಡಂದಿರೊಂದಿಗೆ ಗೌರವದಿಂದ ವರ್ತಿಸುವರು,” ಎಂದು ಸಲಹೆ ನೀಡಿದನು.
21 : ಮೆಮೂಕನು ನೀಡಿದ ಈ ಸಲಹೆ ಅರಸನಿಗೂ ಪದಾಧಿಕಾರಿಗಳಿಗೂ ಸರಿಕಂಡುಬಂತು. ಅರಸನು ಅದರಂತೆ ಮಾಡಿದನು.
22 : ಪ್ರತಿಯೊಂದು ಕುಟುಂಬದಲ್ಲೂ ಪುರುಷನೇ ಅಧಿಕಾರ ವಹಿಸಬೇಕು, ಅವನು ಸ್ವಜನರ ಭಾಷೆಯಲ್ಲೇ ವ್ಯವಹಾರ ನಡೆಸಬೇಕು ಎಂದು ತನ್ನ ಎಲ್ಲಾ ರಾಜಸಂಸ್ಥಾನಗಳಲ್ಲಿ ಪತ್ರಗಳ ಮುಖೇನ ಪ್ರಕಟಿಸಿದನು. ಇವು ಆಯಾ ಪ್ರಾಂತ್ಯಗಳ ಹಾಗೂ ಜನಸಾಮಾನ್ಯರ ಭಾಷೆಗಳಲ್ಲೂ ಬರೆಯಲಾದವು.