ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆಶಾಯ
24ನೇ ಅಧ್ಯಾಯ
1 : ಇಗೋ, ಸರ್ವೇಶ್ವರ ಬರಿದುಮಾಡುವರು ಧರೆಯನು, ನಿರ್ಜನ ಪ್ರದೇಶವಾಗಿಸುವರು ವಿರೂಪಗೊಳಿಸಿ ಅದನು, ಚದರಿಸುವರು ಅದರ ನಿವಾಸಿಗಳನು.
2 : ಪ್ರಜೆಗೆ ಹೇಗೋ ಹಾಗೆ ಯಾಜಕನಿಗೆ, ದಾಸನಿಗೆ ಹೇಗೋ ಹಾಗೆ ದಣಿಗೆ , ದಾಸಿಗೆ ಹೇಗೋ ಹಾಗೆ ಯಜಮಾನಿಗೆ, ಕೊಳ್ಳುವವನಿಗೆ ಹೇಗೋ ಹಾಗೆ ಕೊಡುವವನಿಗೆ, ಸಾಲ ಕೊಡುವವನಿಗೆ ಹೇಗೋ ಹಾಗೆ ಸಾಲ ಪಡೆಯುವವನಿಗೆ, ಬಡ್ಡಿ ತೆಗೆಯುವವನಿಗೆ ಹೇಗೋ ಹಾಗೆ ಬಡ್ಡಿ ತೆರುವವನಿಗೆ, ಬರುವುದು ಒಂದೇ ಗತಿ ಇವರೆಲ್ಲರಿಗೆ.
3 : ಬೆಟ್ಟ ಬರಿದಾಗಿ ಸಂಪೂರ್ಣ ಸುಲಿಗೆಯಾಗುವುದು ಜಗವು, ಸರ್ವೇಶ್ವರ ಸ್ವಾಮಿಯ ನುಡಿಗಳಿವು:
4 : ಸೊರಗಿಹೋಗುವುದು ಲೋಕ ದುಃಖಿಸುತ್ತಾ ಕುಗ್ಗಿಹೋಗುವುದು ಬುವಿ ಗೋಳಾಡುತ್ತಾ ಕಂಗೆಟ್ಟುಹೋಗುವನು ಪ್ರತಿಯೊಬ್ಬ ವಿಶ್ವವಿಖ್ಯಾತ.
5 : ಭೂನಿವಾಸಿಗಳು ಮೀರಿಹರು ದೈವಾಜ್ಞೆಗಳನು ಉಲ್ಲಂಘಿಸಿಹರು ದೈವನಿಯಮಗಳನು, ಭಂಗಪಡಿಸಿಹರು ಶಾಶ್ವತ ಒಡಂಬಡಿಕೆಯನ್ನು, ಮಲಿನವಾಗಿಸಿಹರು ನಡತೆಯಿಂದ ಲೋಕವನು.
6 : ಇದಕಾರಣ ಕಬಳಿಸಿದೆ ಜಗವನು ಶಾಪ, ತಟ್ಟಿದೆ ಆ ಜನರಿಗೆ ದಂಡನೆಯ ತಾಪ. ಸುಟ್ಟಮೇಲೆ ಉಳಿದಿಹರು ಅವರಲಿ ಕೆಲವರು ಮಾತ್ರ.
7 : ಬಾಡಿಹೋಗಿದೆ ದ್ರಾಕ್ಷಾಲತೆ, ದುಬಾರಿಯಾಗಿದೆ ದ್ರಾಕ್ಷಾರಸ, ನರಳುತಿದೆ ನಲಿಯುತ್ತಿದ್ದ ಜನಸಮೂಹ.
8 : ನಿಂತುಹೋಗಿದೆ ದಮ್ಮಡಿಗಳ ಹರ್ಷನಾದ, ಕೊನೆಗೊಂಡಿದೆ ಉಲ್ಲಾಸಿಗಳ ಕೋಲಾಹಲ, ಅಡಗಿಹೋಗಿದೆ ಕಿನ್ನರಿಯ ಮಧುರಸ್ವರ.
9 : ಇನ್ನಿಲ್ಲ ಮದ್ಯಪಾನ ಗೀತಾಗಾನ, ಕಹಿಪಾನವಾಯಿತು ಕುಡುಕನಿಗೆ ಸುರಾಪಾನ.
10 : ಪಾಳುಬಿದ್ದಿದೆ ಅಸ್ತವ್ಯಸ್ತವಾದ ನಗರ, ಯಾರೂ ಪ್ರವೇಶಿಸದಂತೆ ಮುಚ್ಚಿದೆ ಪ್ರತಿಯೊಂದು ಗೃಹ.
11 : ಮದ್ಯಪಾನವಿಲ್ಲವೆಂದು ಬೀದಿಗಳಲಿ ಬೊಬ್ಬೆ ಇಡುತಿಹರೆಲ್ಲ, ಅಸ್ತಮಿಸಿಹೋಯಿತು ಜಗದ ಉಲ್ಲಾಸವೆಲ್ಲ, ಸೆರೆಯಾಗಿ ತೊಲಗಿತು ಅದರ ಸಡಗರವೆಲ್ಲ.
12 : ಪಾಳುಬಿದ್ದಿದೆ ನಗರ, ಮುರಿದು ಬಿದ್ದಿದೆ ಪುರದ್ವಾರ.
13 : ಉಳಿಯುವುವು ಜನಾಂಗಗಳು ಜಗದ ಮಧ್ಯೆ, ಎಣ್ಣೆಯ ಬೀಜವನು ಉದುರಿಸಿದ ಮೇಲೆ ಮಿಗುವ ಹೀಚಿನಂತೆ, ದ್ರಾಕ್ಷಿ ಹಣ್ಣನು ಕೊಯ್ದ ಮೇಲೆ ಉಳಿದ ಕೂಳೆಯಂತೆ.
14 : ಆರ್ಭಟಿಸುವರು ಅಳಿದುಳಿದವರು ಆನಂದದಿಂದ, ಕೊಂಡಾಡುವರು ಸರ್ವೇಶ್ವರನ ಮಹಿಮೆಯನು ಪಡುವಣದಿಂದ,
15 : ಎಂದೇ ಮೂಡಣದವರೇ, ಸನ್ಮಾನಿಸಿರಿ ಸರ್ವೇಶ್ವರ ಸ್ವಾಮಿಯನು, ಕರಾವಳಿಯವರೇ, ಘನಪಡಿಸಿರಿ ಇಸ್ರಯೇಲಿನ ದೇವರಾದ ಸ್ವಾಮಿಯ ನಾಮವನು.
16 : ಜಗದ ಕಟ್ಟಕಡೆಯಿಂದ ಕೇಳಿಬರುತಿದೆ, ‘ಸತ್ಯಸ್ವರೂಪನಿಗೆ ಸ್ತೋತ್ರ’ ಎಂಬ ಗೀತೆ. ಆದರೆ ನಶಿಸಿಹೋಗುತ್ತಿರುವೆನು ನಾನು, ಹೌದು, ನಶಿಸಿ ನಾಶವಾಗುತ್ತಿರುವೆನು, ಏನೆಂದು ಹೇಳಲಿ ನನ್ನ ಗತಿಯನು. ಇದೋ, ಬಾಧಿಸುತ್ತಿಹರು ದ್ರೋಹಿಗಳು, ದ್ರೋಹದ ಮೇಲೆ ದ್ರೋಹವೆಸಗುತಿಹರು.
17 : ಎಲೈ ಭೂನಿವಾಸಿಗಳೇ, ಕೇಳಿರೆಲ್ಲರು, ಕಾದಿದೆ ನಿಮಗೆ ಭಯಭೀತಿ, ಕುಳಿ ಮತ್ತು ಬಲೆಯು.
18 : ಬೀಳುವನು ಕುಳಿಯಲ್ಲಿ, ಭಯಭೀತಿಯ ಸಪ್ಪಳಕ್ಕೆ ಓಡಿಹೋಗುವವನು, ಸಿಕ್ಕಿಬೀಳುವನು ಬಲೆಯಲ್ಲಿ ಕುಳಿಯ ಹತ್ತಿ ಬರುವವನು. ತೆರೆದಿವೆ ನೋಡಿ, ಆಕಾಶದ ದ್ವಾರಗಳು, ಕಂಪಿಸುತ್ತಿವೆ ಬುವಿಯ ಅಸ್ತಿವಾರಗಳು.
19 : ಬಿರುಕು ಬಿಡುವುದು ಭೂಮಿ ಸೀಳುಪಾಳಾಗಿ ಕತ್ತರಿಸುವುದು ಕದಲಿಹೋಗಿ.
20 : ಓಲಾಡುವುದು ಭೂಮಿ ಅಮಲೇರಿದವನಂತೆ, ತೂಗಾಡುವುದು ಬಿರುಗಾಳಿಗೆ ಸಿಕ್ಕಿದ ಗುಡಿಸಲಂತೆ, ಕುಸಿದು ಬೀಳುವುದು ದ್ರೋಹದ ಭಾರಕೆ, ಮರಳಿ ಏಳದಂತೆ.
21 : ಆ ದಿನ ಸರ್ವೇಶ್ವರ ದಂಡಿಸುವರು ಮೇಲಣ ಸೇನಾಶೂರರನು, ಕೆಳಗಣ ಭೂ ರಾಜರನು.
22 : ತಳ್ಳುವವರನು ಖೈದಿಗಳ ಗುಂಪಿನಂತೆ ನೆಲಮಾಳಿಗೆಗೆ, ಇರುವರವರು ಸೆರೆಯಲಿ ಬಹುದಿನಗಳವರೆಗೆ, ತದನಂತರ ಗುರಿಯಾಗುವರು ದಂಡನೆಗೆ.
23 : ನಾಚುವನು ಚಂದ್ರ, ಹೇಸುವನು ಸೂರ್ಯ, ಏಕೆನೆ ಆಳುವರು ಸೇನಾಧೀಶ್ವರ ಸರ್ವೇಶ್ವರ ಸಿಯೋನ್ ಪರ್ವತದೊಳು, ಜೆರುಸಲೇಮ್ ನಗರದೊಳು. ಪ್ರತ್ಯಕ್ಷವಾಗುವುದಾತನ ಮಹಿಮಾಪ್ರಭಾವವು, ಅಲ್ಲಿನ ಜನನಾಯಕರ ಸಮ್ಮುಖದೊಳು.