P. O. C ബൈബിള്
ಹಳೆಯ ಒಡಂಬಡಿಕೆ
ವಿಮೋಚನಕಾಂಡ
33ನೇ ಅಧ್ಯಾಯ
- Verse 1: ಮೋಶೆಗೆ ಸರ್ವೇಶ್ವರ ಸ್ವಾಮಿ ಹೇಳಿದ ಮಾತುಗಳಿವು: “ನೀನು ಈಜಿಪ್ಟಿನಿಂದ ಕರೆದುತಂದ ಜನರನ್ನು ನಿನ್ನ ಸಂಗಡ ಕರೆದುಕೊಂಡು ಈ ಸ್ಥಳಬಿಟ್ಟು ತೆರಳು. ನಾನು ಅಬ್ರಹಾಮ್, ಇಸಾಕ್, ಯಕೋಬ್ ಎಂಬುವರೊಡನೆ ಅವನ ಸಂತತಿಯವರಿಗೆ ಕೊಡುವುದಾಗಿ ಪ್ರಮಾಣ ಮಾಡಿದ ನಾಡಿಗೆ ಹೊರಟುಹೋಗು.
- Verse 2: ನಾನು ಒಬ್ಬ ದೂತನನ್ನು ನಿನಗೆ ಮುಂದಾಗಿ ಕಳಿಸಿ ಕಾನಾನ್ಯರನ್ನು, ಅಮೋರಿಯರನ್ನು, ಹಿತ್ತಿಯರನ್ನು, ಪೆರಿಜೀಯರನ್ನು, ಹಿವ್ವಿಯರನ್ನು, ಹಾಗು ಯೆಬೂಸಿಯರನ್ನು ಅಲ್ಲಿಂದ ಹೊರದೂಡುವೆನು.
- Verse 3: ಅದು ಹಾಲೂ ಜೇನೂ ಹರಿಯುವ ಶ್ರೀಮಂತ ನಾಡು. ನಾನು ಸ್ವತಃ ನಿಮ್ಮ ಸಂಗಡ ಬರುವುದಿಲ್ಲ. ಏಕೆಂದರೆ ನೀವು ನನ್ನ ಆಜ್ಞೆಗೆ ತಲೆಬಾಗದ ಹಟಮಾರಿ ಜನ; ದಾರಿಯಲ್ಲೇ ನಾನು ನಿಮ್ಮನ್ನು ಸಂಹರಿಸಬೇಕಾಗಬಹುದು.
- Verse 4: ಈ ದುಃಖಕರವಾದ ಮಾತುಗಳನ್ನು ಕೇಳಿ, ಇಸ್ರಯೇಲರು ಶೋಕತಪ್ತರಾದರು; ಒಬ್ಬರೂ ಒಡವೆ ವಸ್ತುಗಳನ್ನು ಧರಿಸಿಕೊಳ್ಳಲಿಲ್ಲ.
- Verse 5: ಏಕೆಂದರೆ ಮೋಶೆಯ ಮುಖಾಂತರ ಸರ್ವೇಶ್ವರ, “ನೀವು ನನ್ನ ಆಜ್ಞೆಗಳಿಗೆ ಬಗ್ಗದ ಹಟಮಾರಿಗಳು. ನಾನು ಕ್ಷಣಮಾತ್ರ ನಿಮ್ಮೊಡನೆ ಬರುವುದಾದರೆ ನಿರ್ಮೂಲವಾಗಿಬಿಡುವಿರಿ, ಎಚ್ಚರಿಕೆ! ಆದ್ದರಿಂದ ನಿಮ್ಮ ಒಡವೆವಸ್ತುಗಳನ್ನು ತೆಗೆದುಬಿಡಿ. ನಿಮಗೇನು ಮಾಡಬೇಕೆಂದು ಆಲೋಚಿಸುವೆನು,” ಎಂದಿದ್ದರು.
- Verse 6: ಅಂತೆಯೇ ಇಸ್ರಯೇಲರು ಹೋರೆಬ್ ಬೆಟ್ಟದಿಂದೀಚೆಗೆ ಒಡವೆವಸ್ತುಗಳನ್ನು ತೊಟ್ಟುಕೊಳ್ಳದೆ ಇದ್ದರು.
- Verse 7: ಮೋಶೆ ಗುಡಾರವನ್ನು ಪಾಳೆಯದ ಹೊರಗೆ ದೂರದಲ್ಲಿ ಹಾಕಿಸುತ್ತಿದ್ದನು. ಅದಕ್ಕೆ ‘ದೇವದರ್ಶನದ ಗುಡಾರ’ ಎಂದು ಹೆಸರಿಟ್ಟನು. ಸರ್ವೇಶ್ವರನಿಂದ ಉತ್ತರವನ್ನು ಬಯಸುತ್ತಿದ್ದವರೆಲ್ಲರು ಪಾಳೆಯದ ಹೊರಗಿದ್ದ ಆ ದೇವದರ್ಶನದ ಗುಡಾರಕ್ಕೆ ಹೋಗುತ್ತಿದ್ದರು.
- Verse 8: ಮೋಶೆ ಗುಡಾರಕ್ಕೆ ಹೋಗುವಾಗಲೆಲ್ಲಾ ಜನರೆಲ್ಲರು ಎದ್ದು ತಮ್ಮತಮ್ಮ ಡೇರೆಗಳ ಬಾಗಿಲಲ್ಲಿ ನಿಂತು ಮೋಶೆ ಆ ಗುಡಾರದೊಳಗೆ ಹೋಗುವ ತನಕ ಅವನ ಹಿಂದೆ ನೋಡುತ್ತಿದ್ದರು.
- Verse 9: ಮೋಶೆ ಗುಡಾರದೊಳಕ್ಕೆ ಹೋದಕೂಡಲೆ ಮೇಘಸ್ತಂಭವೊಂದು ಇಳಿದು ಆ ಗುಡಾರದ ಬಾಗಿಲಲ್ಲಿ ನಿಲ್ಲುತ್ತಿತ್ತು. ಆಗ ಮೋಶೆಯ ಸಂಗಡ ಸರ್ವೇಶ್ವರ ಮಾತಾಡುತ್ತಿದ್ದರು.
- Verse 10: ಆ ಮೇಘಸ್ತಂಭ ಗುಡಾರದ ಬಾಗಿಲಲ್ಲಿ ನಿಲ್ಲುವುದನ್ನು ಜನರೆಲ್ಲರು ನೋಡಿ, ಎದ್ದುನಿಂತು ತಮ್ಮತಮ್ಮ ಡೇರೆಗಳ ಬಾಗಿಲಲ್ಲೇ ಅಡ್ಡಬೀಳುತ್ತಿದ್ದರು.
- Verse 11: ಒಬ್ಬ ಮನುಷ್ಯ ತನ್ನ ಗೆಳೆಯನೊಡನೆ ಹೇಗೆ ಮಾತಾಡುತ್ತಾನೋ ಹಾಗೆಯೇ ಸರ್ವೇಶ್ವರ ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡುತ್ತಿದ್ದರು. ತರುವಾಯ ಮೋಶೆ ಪಾಳೆಯಕ್ಕೆ ಮರಳಿ ಬರುತ್ತಿದ್ದನು. ಆದರೆ ನೂನನ ಮಗನಾದ ಯೆಹೋಶುವ ಎಂಬ ಹೆಸರುಳ್ಳ ಯುವಕನೊಬ್ಬನು ಮೋಶೆಯ ಶಿಷ್ಯನಾಗಿ ಆ ಗುಡಾರದಲ್ಲೇ ಇರುತ್ತಿದ್ದನು. ಅದನ್ನು ಬಿಟ್ಟು ಹೋಗುತ್ತಿರಲಿಲ್ಲ.
- Verse 12: ಮೋಶೆ ಸರ್ವೇಶ್ವರ ಸ್ವಾಮಿಗೆ, ” ಈ ಜನರನ್ನು ಇಂಥ ಈ ನಾಡಿಗೆ ನಡೆಸಿಕೊಂಡು ಹೋಗಬೇಕೆಂದು ನನಗೆ ನೀವು ವಿಧಿಸಿದಿರಿ. ನನ್ನ ಸಂಗಡ ಬೇರೆ ಯಾರನ್ನು ಕಳುಹಿಸುವಿರೆಂದು ನನಗೆ ತಿಳಿಸಲಿಲ್ಲ. ‘ನಿನ್ನನ್ನು ಹೆಸರಿಡಿದು ಗುರುತಿಸಿದ್ದೇನೆ. ನಿನಗೆ ನನ್ನ ದಯೆ ದೊರಕಿದೆ,’ ಎಂದು ಹೇಳಿದ್ದೀರಿ.
- Verse 13: ನನಗೆ ನಿಮ್ಮ ದಯೆ ದೊರಕಿದೆಯಾದರೆ ನಾನು ನಿಮ್ಮನ್ನು ಬಲ್ಲವನಾಗಿರುವಂತೆ ನಿಮ್ಮ ಮಾರ್ಗವನ್ನು ನನಗೆ ತೋರಿಸಿರಿ. ಆಗ ನಿಮ್ಮ ದಯೆ ನನಗೆ ದೊರಕಿದೆಯೆಂದು ತಿಳಿದುಕೊಳ್ಳುತ್ತೇನೆ. ಈ ಜನ ನಿಮ್ಮ ಪ್ರಜೆಯೆಂಬುದನ್ನು ನೆನಪಿನಲ್ಲಿಡಿ,” ಎಂದು ಅರಿಕೆ ಮಾಡಿದನು.
- Verse 14: ಅದಕ್ಕೆ ಸರ್ವೇಶ್ವರ, “ನನ್ನ ಪ್ರಸನ್ನತೆ ನಿನ್ನ ಜೊತೆಯಲ್ಲಿ ಬರುವುದು. ನಾನು ನಿನಗೆ ವಿಶ್ರಾಂತಿ ನೀಡುವೆನು,” ಎಂದರು.
- Verse 15: ಆಗ ಮೋಶೆ: “ನೀವೇ ನಮ್ಮ ಸಂಗಡ ಬಾರದೆ ಹೋದರೆ ನಮ್ಮನ್ನು ಇಲ್ಲಿಂದ ಕಳುಹಿಸಬೇಡಿ.
- Verse 16: ನನಗೂ ನಿಮ್ಮ ಪ್ರಜೆಗಳಾದ ಇವರಿಗೂ ನಿಮ್ಮ ಅನುಗ್ರಹ ದೊರಕಿದೆ ಎಂಬುದು ನೀವೇ ನಮ್ಮ ಸಂಗಡ ಬರುವುದರಿಂದಲೇ ಹೊರತು ಬೇರೆ ಯಾವುದರಿಂದ ತಿಳಿದೀತು? ನೀವು ಬರುವುದರಿಂದ ನಾನೂ ನಿಮ್ಮ ಪ್ರಜೆಗಳಾದ ಇವರೂ ಜಗದಲ್ಲಿರುವ ಬೇರೆ ಎಲ್ಲಾ ಜನಗಳಿಗಿಂತಲೂ ವಿಶಿಷ್ಟರಾದವರೆಂಬುದು ಖಚಿತವಾಗುವುದು,” ಎಂದನು.
- Verse 17: ಅದಕ್ಕೆ ಸರ್ವೇಶ್ವರ, “ನಿನ್ನ ಕೋರಿಕೆಯಂತೆ ಮಾಡುವೆನು. ಏಕೆಂದರೆ ನೀನು ನನ್ನ ಅನುಗ್ರಹಕ್ಕೆ ಪಾತ್ರನು; ನಿನ್ನನ್ನು ಹೆಸರಿಡಿದು ಗುರುತಿಸಿದ್ದೇನೆ,” ಎಂದು ಮೋಶೆಗೆ ಹೇಳಿದರು.
- Verse 18: ಆಗ ಮೋಶೆ, “ನಿಮ್ಮ ಮಹಿಮೆಯನ್ನು ದಯಮಾಡಿ ನನಗೆ ತೋರಿಸಿ,” ಎಂದು ವಿನಂತಿಸಿದನು.
- Verse 19: ಸರ್ವೇಶ್ವರ, “ನನ್ನ ಒಳ್ಳೆಯತನವೆಲ್ಲ ನಿನ್ನೆದುರಿಗೆ ಹಾದುಹೋಗುವಂತೆ ಮಾಡುವೆನು. ಸರ್ವೇಶ್ವರನಾದ ನನ್ನ ನಾಮದ ಮಹತ್ವವನ್ನು ನಿನ್ನೆದುರಿಗೆ ಪ್ರಕಟಿಸುವೆನು. ಯಾರ್ಯಾರ ಮೇಲೆ ದಯೆಯಿಡಲು ಆಶಿಸುತ್ತೇನೋ ಅವರ ಮೇಲೆ ದಯೆಯಿಡುತ್ತೇನೆ. ಯಾರ್ಯಾರನ್ನು ಕರುಣಿಸಲು ಆಶಿಸುತ್ತೇನೋ ಅವರನ್ನು ಕರುಣಿಸುತ್ತೇನೆ,” ಎಂದರು.
- Verse 20: ಮತ್ತೆ ಅವರು, “ಆದರೆ ನೀನು ನನ್ನ ಮುಖವನ್ನು ನೋಡಲಾಗದು. ಏಕೆಂದರೆ ನನ್ನನ್ನು ನೋಡಿದ ಮಾನವ ಜೀವಂತನಾಗಿ ಉಳಿಯಲಾರ,” ಎಂದು ಹೇಳೀದರು.
- Verse 21: ಇನ್ನೂ ಮೋಶೆಗೆ, “ಇಗೋ ಇಲ್ಲಿ ಸಮೀಪದಲ್ಲೇ ಒಂದು ಸ್ಥಳವಿದೇ. ನೀನು ಆ ಬಂಡೆಯ ಮೇಲೆ ನಿಂತಿರು.
- Verse 22: ನನ್ನ ಮಹಿಮೆ ನಿನ್ನೆದುರಿಗೆ ದಾಟಿ ಹೋಗುವಾಗ ನಾನು ಆ ಬಂಡೆಯ ಸಂದಿನಲ್ಲಿ ನಿನ್ನನ್ನು ಇರಿಸಿ, ನಿನ್ನ ಮುಂದೆ ನಾನು ಹಾದುಹೋಗುವ ತನಕ ನಿನ್ನನ್ನು ನನ್ನ ಕೈಯಿಂದ ಮುಚ್ಚುವೆನು.
- Verse 23: ಬಳಿಕ ನಾನು ಕೈ ತೆಗೆವೆನು, ಆಗ ನೀನು ನನ್ನ ಹಿಂಭಾಗವನ್ನು ನೋಡುವೆ. ಆದರೆ ನನ್ನ ಮುಖ ನಿನಗೆ ಕಾಣಿಸದು,” ಎಂದು ಸರ್ವೇಶ್ವರ ಹೇಳಿದರು.