ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆಜೆಕಿಯೇಲನು
40ನೇ ಅಧ್ಯಾಯ
- Verse 1: ನಾವು ಸೆರೆಯಾದ ಇಪ್ಪತ್ತೈದನೆಯ ವರ್ಷದ ಅಂದರೆ, ಪಟ್ಟಣವು ಹಾಳಾದ ಹದಿನಾಲ್ಕನೆಯ ವರ್ಷದ ಮೊದಲನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಹೌದು, ಆ ದಿನದಲ್ಲೇ ನಾನು ಸರ್ವೇಶ್ವರಸ್ವಾಮಿಯ ಹಸ್ತಸ್ಪರ್ಶದಿಂದ ಪರವಶನಾದೆ. ಆಗ ಅವರು ನನ್ನನ್ನು ಅಲ್ಲಿಗೆ ಒಯ್ದರು.
- Verse 2: ನನ್ನನ್ನು ಇಸ್ರಯೇಲ್ ನಾಡಿಗೆ ತಂದು, ಅತ್ಯುನ್ನತ ಪರ್ವತದ ಮೇಲೆ ಇಳಿಸಿದರೆಂದು ದೇವರ ದರ್ಶನದಲ್ಲಿ ನನಗೆ ಕಂಡುಬಂದಿತು. ದಕ್ಷಿಣ ಕಡೆಯಲ್ಲಿ ಆ ಪರ್ವತದ ಮೇಲೆ ಪಟ್ಟಣದಂತಿರುವ ಒಂದು ಕಟ್ಟಡ ಕಾಣಿಸಿತು.
- Verse 3: ಅವರು ನನ್ನನ್ನು ಅಲ್ಲಿಗೆ ತರಲು, ಇಗೋ, ತಾಮ್ರದಂತೆ ಹೊಳೆಯುವ ಒಬ್ಬ ಪುರುಷನು ನಾರಿನ ಹುರಿಯನ್ನೂ ಅಳತೆ ಕೋಲನ್ನೂ ಕೈಯಲ್ಲಿ ಹಿಡಿದುಕೊಂಡು ಬಾಗಿಲಲ್ಲಿ ನಿಂತಿದ್ದನು.
- Verse 4: ಆ ಪುರುಷ ನನಗೆ, “ನರಪುತ್ರನೇ, ನೀನು ಕಣ್ಣಿಟ್ಟು ನೋಡು, ಕಿವಿಗೊಟ್ಟು ಕೇಳು; ನಾನು ನಿನಗೆ ತೋರಿಸುವುದನ್ನೆಲ್ಲಾ ಮನಸ್ಸಿಟ್ಟು ತಿಳಿದುಕೋ; ನಾನು ನಿನಗೆ ತೋರಿಸುವುದನ್ನು ನೀನು ನೋಡಬೇಕೆಂದೇ ನಿನ್ನನ್ನು ಇಲ್ಲಿಗೆ ತರಲಾಗಿದೆ; ನೀನು ನೋಡುವುದನ್ನೆಲ್ಲ ಇಸ್ರಯೇಲ್ ವಂಶದವರಿಗೆ ಪ್ರಕಟಿಸು,” ಎಂದು ಹೇಳಿದನು.
- Verse 5: ಇಗೋ, ಒಂದು ಗೋಡೆಯು ಆ ಕಟ್ಟಡವನ್ನು ಸುತ್ತಿಕೊಂಡಿತ್ತು. ಆ ಪುರುಷನ ಕೈಯಲ್ಲಿ ಮೂರು ಮೀಟರ್ ಅಳತೆಕೋಲೊಂದಿತ್ತು. ಆ ಗೋಡೆ ಮೂರು ಮೀಟರ್ ದಪ್ಪ ಹಾಗು ಮೂರು ಮೀಟರ್ ಎತ್ತರ ಇತ್ತು.
- Verse 6: ಆಮೇಲೆ ಅವನು ಪೂರ್ವದಿಕ್ಕಿನ ಹೆಬ್ಬಾಗಿಲಿಗೆ ಬಂದು ಮೆಟ್ಟಲುಗಳನ್ನು ಹತ್ತಿ ಹೊಸ್ತಿಲಿನ ಅಗಲವನ್ನು ಅಳೆದನು. ಒಂದೊಂದು ಹೊಸ್ತಿಲಿನ ಅಗಲವು ಮೂರು ಮೀಟರ್ ಇತ್ತು.
- Verse 7: ಅಲ್ಲಿ ಒಂದೊಂದು ಕೋಣೆಯ ಉದ್ದ ಮೂರು ಮೀಟರ್, ಅಗಲ ಮೂರು ಮೀಟರ್.
- Verse 8: ಆ ಗೋಡೇಕೋಣೆಗಳು ಒಂದಕ್ಕೊಂದು ಎರಡುವರೆ ಮೀಟರ್ ದೂರವಾಗಿದ್ದವು; ದೇವಸ್ಥಾನಕ್ಕೆ ಎದುರಾಗಿರುವ ಹೆಬ್ಬಾಗಿಲ ಕೈಸಾಲೆಯ ಹೊಸ್ತಿಲಿನ ಅಗಲವು ಮೂರು ಮೀಟರ್.
- Verse 9: ಆಮೇಲೆ ಅವನು ಹೆಬ್ಬಾಗಿಲ ಕೈಸಾಲೆಯ ಅಗಲವನ್ನು ಅಳೆದನು; ಅದು ನಾಲ್ಕು ಮೀಟರ್ ಇತ್ತು; ನಿಲವು ಕಂಬಗಳ ಅಗಲ ಒಂದೊಂದು ಮೀಟರ್. ಹೆಬ್ಬಾಗಿಲ ಕೈಸಾಲೆಯು ದೇವಸ್ಥಾನಕ್ಕೆ ಎದುರಾಗಿತ್ತು.
- Verse 10: ಪೂರ್ವದಿಕ್ಕಿನ ಹೆಬ್ಬಾಗಿಲಿನ ಎರಡು ಪಕ್ಕಗಳಲ್ಲಿ ಮೂರು ಮೂರು ಗೋಡೇಕೋಣೆಗಳಿದ್ದವು; ಅವೆಲ್ಲಾ ಒಂದೇ ಅಳತೆ; ಎರಡು ಪಕ್ಕಗಳಲ್ಲಿನ ನಿಲವು ಕಂಬಗಳೂ ಒಂದೇ ಅಳತೆಯಾಗಿದ್ದವು.
- Verse 11: ಅನಂತರ ಅವನು ಹೆಬ್ಬಾಗಿಲ ದ್ವಾರವನ್ನು ಅಳೆದನು. ಅಗಲ ಐದು ಮೀಟರ್, ಉದ್ದ ಆರುವರೆ ಮೀಟರ್.
- Verse 12: ಎರಡು ಪಕ್ಕಗಳಲ್ಲಿನ ಗೋಡೇಕೋಣೆಗಳ ಮುಂದೆ ಒಂದೊಂದು ಐವತ್ತು ಸೆಂಟಿಮೀಟರ್ ಅವಕಾಶ; ಎರಡು ಕಡೆಯ ಗೋಡೇಕೋಣೆಗಳ ಅಗಲವು ಮೂರು ಮೀಟರ್.
- Verse 13: ಅವನು ಒಂದು ಕಡೆಯ ಗೋಡೆಕೋಣೆಗಳ ಮಾಳಿಗೆಯ ಹೊರಕೊನೆಯಿಂದ ಇನ್ನೊಂದು ಕಡೆಯ ಗೋಡೇಕೋಣೆಗಳ ಮಾಳಿಗೆಯ ಹೊರ ಕೊನೆಗೆ, ಅಂದರೆ ಒಂದು ಕೋಣೆಯ ಬಾಗಿಲಿನಿಂದ ಇನ್ನೊಂದು ಕೋಣೆಯ ಬಾಗಿಲಿಗೆ ಹೆಬ್ಬಾಗಿಲಿನ ಅಗಲವನ್ನು ಅಳೆಯಲು ಹನ್ನೆರಡುವರೆ ಮೀಟರಿತ್ತು.
- Verse 14: ಪ್ರಾಕಾರದಲ್ಲಿನ ನಿಲವು ಕಂಬದವರೆಗೆ ನಿಲವುಕಂಬಗಳನ್ನು ಅಳತೆಮಾಡಲು ಮೂವತ್ತು ಮೀಟರ್ ಇದ್ದವು. ಹೆಬ್ಬಾಗಿಲನ್ನು ಸುತ್ತುಮುತ್ತಲು ಅಳೆದನು.
- Verse 15: ಪ್ರವೇಶಸ್ಥಾನದ ಹೊರಗಡೆಯಿಂದ ಒಳಕೈಸಾಲೆಯ ಕೊನೆಯತನಕ ಹೆಬ್ಬಾಗಿಲು ಇಪ್ಪತ್ತೈದು ಮೀಟರ್ ಉದ್ದವಾಗಿತ್ತು.
- Verse 16: ಗೋಡೇಕೋಣೆಗಳಲ್ಲೂ ಒಳಗಣ ಎರಡು ಕಡೆಯ ನಿಲುವುಕಂಬಗಳಲ್ಲೂ ಕೈಸಾಲೆಗಳಲ್ಲೂ ತೆರೆಯಲಾಗದ ಕಿಟಕಿಗಳು ಹೆಬ್ಬಾಗಿಲೊಳಗೆ ಸುತ್ತಮುತ್ತಲು ಇದ್ದವು; ಹೊರಗಣ ನಿಲವುಕಂಬಗಳಲ್ಲಿ ಖರ್ಜೂರ ವೃಕ್ಷಗಳು ಚಿತ್ರಿತವಾಗಿದ್ದವು.
- Verse 17: ಅನಂತರ ಆ ಪುರುಷ ನನ್ನನ್ನು ಹೊರಗಣ ಪ್ರಾಕಾರಕ್ಕೆ ಕರೆದುತಂದನು; ಇಗೋ, ಕೋಣೆಗಳೂ ಪ್ರಾಕಾರದ ಸುತ್ತಲು ಹಾಕಿದ ನೆಲಗಟ್ಟೂ ಕಾಣಿಸಿದವು. ಒಟ್ಟಾಗಿ ನೆಲೆಗಟ್ಟಿನ ಮೇಲೆ ಮೂವತ್ತು ಕೋಣೆಗಳಿದ್ದವು.
- Verse 18: ಆ ಕೆಳಗಣ ನೆಲೆಗಟ್ಟು ಹೆಬ್ಬಾಗಿಲುಗಳ ಎರಡು ಪಕ್ಕಗಳಲ್ಲೂ ಹಾಸಲಾಗಿದ್ದ ಅವುಗಳಷ್ಟು ಅಗಲವಾಗಿತ್ತು.
- Verse 19: ಅವನು ಪೂರ್ವದಲ್ಲೂ ಉತ್ತರದಲ್ಲೂ ಕೆಳಗೂ ಹೆಬ್ಬಾಗಿಲಿನ ಒಳಗಡೆಯಿಂದ ಒಳಗಣ ಪ್ರಾಕಾರದ ಹೊರಗಡೆಯ ತನಕ ಅಳೆಯಲು ಐವತ್ತು ಮೀಟರ್ ಇತ್ತು.
- Verse 20: ಇದಲ್ಲದೆ ಹೊರಗಣ ಪ್ರಾಕಾರದ ಉತ್ತರದ ಹೆಬ್ಬಾಗಿಲಿನ ಅಗಲವನ್ನೂ ಉದ್ದವನ್ನೂ ಅಳೆದನು.
- Verse 21: ಅದರೊಳಗೆ ಎರಡು ಕಡೆ ಗೋಡೇ ಕೋಣೆಗಳು ಮೂರು ಮೂರಿದ್ದವು; ಅಲ್ಲಿನ ನಿಲವುಕಂಬಗಳೂ ಕೈಸಾಲೆಯೂ ಮೊದಲನೆಯ ಹೆಬ್ಬಾಗಿಲಿನ ಅಳತೆಯಂತಿದ್ದವು. ಆ ಹೆಬ್ಬಾಗಿಲಿನ ಉದ್ದ ಇಪ್ಪತ್ತೈದು ಮೀಟರ್, ಅಗಲ ಹನ್ನೆರಡುವರೆ ಮೀಟರ್.
- Verse 22: ಅಲ್ಲಿನ ಕಿಟಕಿಗಳೂ ಕೈಸಾಲೆಯೂ ಚಿತ್ರಿತವಾಗಿದ್ದ ಖರ್ಜೂರ ವೃಕ್ಷಗಳೂ ಮೂಡಣ ಹೆಬ್ಬಾಗಿಲುಗಳ ಅಳತೆಯಷ್ಟಿದ್ದವು; ಏಳು ಮೆಟ್ಟಲು ಹತ್ತಿ ಅಲ್ಲಿಗೆ ಸೇರುತ್ತಿದ್ದರು; ಕೈಸಾಲೆ ಒಳಗಡೆಯಿತ್ತು;
- Verse 23: ಹೊರಗಣ ಪ್ರಾಕಾರದ ಬಡಗಣ ಮೂಡಣ ಹೆಬ್ಬಾಗಿಲುಗಳಿಗೆ ಎದುರಾಗಿ ಒಳಗಣ ಪ್ರಾಕಾರಕ್ಕೂ ಹೆಬ್ಬಾಗಿಲುಗಳು ಇದ್ದವು. ಒಂದು ಬಾಗಿಲಿನಿಂದ ಎದುರು ಬಾಗಿಲಿಗೆ ಐವತ್ತು ಮೀಟರ್ ಅಳೆದನು.
- Verse 24: ಆಮೇಲೆ ಅವನು ನನ್ನನ್ನು ದಕ್ಷಿಣಕ್ಕೆ ಕರೆತಂದನು. ಇಗೋ, ಅಲ್ಲಿಯೂ ಒಂದು ಹೆಬ್ಬಾಗಿಲು; ಅವನು ಅಲ್ಲಿನ ನಿಲವುಕಂಬಗಳನ್ನೂ ಕೈಸಾಲೆಯನ್ನೂ ಅಳೆಯಲು ಹಿಂದಣ ಅಳತೆಗಳೇ ಕಂಡುಬಂದವು.
- Verse 25: ಅದರಲ್ಲೂ ಅದರ ಕೈಸಾಲೆಯಲ್ಲೂ ಎಲ್ಲ ಕಡೆ ಅಂಥ ಕಿಟಕಿಗಳೇ ಇದ್ದವು; ಹೆಬ್ಬಾಗಿಲಿನ ಉದ್ದ ಇಪ್ಪತ್ತೈದು ಮೀಟರ್, ಅಗಲ ಹನ್ನೆರಡುವರೆ ಮೀಟರ್.
- Verse 26: ಅಲ್ಲಿ ಹತ್ತುವುದಕ್ಕೆ ಏಳು ಮೆಟ್ಟಲುಗಳಿದ್ದವು; ಕೈಸಾಲೆ ಒಳಗಡೆಯಿತ್ತು; ಕೈಸಾಲೆಯ ಎದುರು ಬದುರಿನ ನಿಲವುಕಂಬಗಳಲ್ಲಿ ಖರ್ಜೂರ ವೃಕ್ಷಗಳು ಚಿತ್ರಿತವಾಗಿದ್ದವು.
- Verse 27: ಒಳಗಿನ ಪ್ರಾಕಾರದಲ್ಲೂ ದಕ್ಷಿಣಕ್ಕೆ ಹೆಬ್ಬಾಗಿಲಿತ್ತು. ದಕ್ಷಿಣದಲ್ಲಿ ಒಂದು ಬಾಗಿಲಿನಿಂದ ಎದುರುಬಾಗಿಲಿಗೆ ಅಳೆದಾಗ ಐವತ್ತು ಮೀಟರ್ ಇತ್ತು.
- Verse 28: ಆಮೇಲೆ ಅವನು ನನ್ನನ್ನು ದಕ್ಷಿಣ ಬಾಗಿಲ ಮಾರ್ಗವಾಗಿ ಒಳಗಣ ಪ್ರಾಕಾರಕ್ಕೆ ಕರೆದುತಂದನು. ಅವನು ಆ ದಕ್ಷಿಣ ಹೆಬ್ಬಾಗಿಲನ್ನೂ ಅಲ್ಲಿನ ಗೋಡೇಕೋಣೆ, ನಿಲವುಕಂಬ, ಕೈಸಾಲೆ ಇವುಗಳನ್ನೂ ಅಳೆಯಲು ಅಷ್ಟೇ ಅಳತೆಗಳಿದ್ದವು.
- Verse 29: ಅದರಲ್ಲಿಯೂ ಅದರ ಕೈಸಾಲೆಯಲ್ಲಿಯೂ ಕಿಟಕಿಗಳು ಎಲ್ಲ ಕಡೆಯಿದ್ದವು. ಹೆಬ್ಬಾಗಿಲಿನ ಉದ್ದ ಇಪ್ಪತ್ತೈದು ಮೀಟರ್, ಅಗಲ ಹನ್ನೆರಡುವರೆ ಮೀಟರ್.
- Verse 30: ಅದರಲ್ಲಿಯೂ ಅದರ ಕೈಸಾಲೆಯಲ್ಲಿಯೂ ಕಿಟಕಿಗಳು ಎಲ್ಲ ಕಡೆಯಿದ್ದವು. ಹೆಬ್ಬಾಗಿಲಿನ ಉದ್ದ ಇಪ್ಪತ್ತೈದು ಮೀಟರ್, ಅಗಲ ಹನ್ನೆರಡುವರೆ ಮೀಟರ್.
- Verse 31: ಆ ಹೆಬ್ಬಾಗಿಲ ಕೈಸಾಲೆ ಹೊರಗಣ ಪ್ರಾಕಾರಕ್ಕೆ ಅಭಿಮುಖವಾಗಿತ್ತು; ಅದರ ನಿಲವುಕಂಬಗಳಲ್ಲಿ ಖರ್ಜೂರ ವೃಕ್ಷಗಳು ಚಿತ್ರಿತವಾಗಿದ್ದವು; ಅಲ್ಲಿ ಹತ್ತುವುದಕ್ಕೆ ಎಂಟು ಮೆಟ್ಟಲುಗಳಿದ್ದವು.
- Verse 32: ಅವನು ನನ್ನನ್ನು ಒಳಗಣ ಪ್ರಾಕಾರದ ಪೂರ್ವಕ್ಕೆ ಕರೆದುತಂದು ಅಲ್ಲಿನ ಹೆಬ್ಬಾಗಿಲನ್ನೂ ಅದರ ಗೋಡೇಕೋಣೆ, ನಿಲವುಕಂಬ, ಕೈಸಾಲೆ ಇವುಗಳನ್ನೂ ಅಳೆಯಲು ಆ ಅಳತೆಗಳೇ ಕಂಡುಬಂದವು.
- Verse 33: ಅದರಲ್ಲಿಯೂ ಅದರ ಕೈಸಾಲೆಯಲ್ಲಿಯೂ ಎಲ್ಲಾ ಕಡೆ ಕಿಟಕಿಗಳಿದ್ದವು. ಆ ಹೆಬ್ಬಾಗಿಲಿನ ಉದ್ದ ಇಪ್ಪತ್ತೈದು ಮೀಟರ್, ಅಗಲ ಹನ್ನೆರಡುವರೆ ಮೀಟರ್.
- Verse 34: ಅದರ ಕೈಸಾಲೆ ಹೊರಗಣ ಪ್ರಾಕಾರಕ್ಕೆ ಅಭಿಮುಖವಾಗಿತ್ತು. ಕೈಸಾಲೆಯ ಎದುರುಬದುರಿನ ನಿಲವುಕಂಬಗಳಲ್ಲಿ ಖರ್ಜೂರ ವೃಕ್ಷಗಳು ಚಿತ್ರಿತವಾಗಿದ್ದವು; ಇಲ್ಲಿ ಹತ್ತುವುದಕ್ಕೆ ಎಂಟು ಮೆಟ್ಟಲುಗಳಿದ್ದವು.
- Verse 35: ಆಮೇಲೆ ಅವನು ನನ್ನನ್ನು ಉತ್ತರ ಬಾಗಿಲಿಗೆ ಕರೆದುತಂದು ಅದನ್ನೂ ಅದರ ಗೋಡೇಕೋಣೆ, ನಿಲವುಕಂಬ, ಕೈಸಾಲೆ ಇವುಗಳನ್ನೂ ಅಳೆಯಲು ಅಲ್ಲಿಯೂ ಆ ಅಳತೆಗಳೇ ಕಂಡುಬಂದವು;
- Verse 36: ಅದರಲ್ಲಿ ಎಲ್ಲಾ ಕಡೆ ಕಿಟಕಿಗಳಿದ್ದವು; ಅದರ ಉದ್ದ ಇಪ್ಪತ್ತೈದು ಮೀಟರ್, ಅಗಲ ಹನ್ನೆರಡುವರೆ ಮೀಟರ್.
- Verse 37: ಆದರೆ ನಿಲವುಕಂಬಗಳು ಹೊರಗಣ ಪ್ರಾಕಾರಕ್ಕೆ ಅಭಿಮುಖವಾಗಿದ್ದವು. ಆ ಎದುರುಬದುರಿನ ನಿಲವುಕಂಬಗಳಲ್ಲಿ ಖರ್ಜೂರ ವೃಕ್ಷಗಳು ಚಿತ್ರಿತವಾಗಿದ್ದವು; ಅಲ್ಲಿ ಹತ್ತುವುದಕ್ಕೆ ಎಂಟು ಮೆಟ್ಟಲುಗಳಿದ್ದವು.
- Verse 38: ಹೆಬ್ಬಾಗಿಲ ನಿಲವುಕಂಬಗಳ ಪಕ್ಕದಲ್ಲಿ ಒಂದು ಕೊಠಡಿಯೂ ಅದರ ದ್ವಾರವೂ ಕಾಣಿಸಿದವು. ಆ ಕೋಣೆಯೊಳಗೆ ದಹನ ಬಲಿಪ್ರಾಣಿಗಳ ಮಾಂಸವನ್ನು ತೊಳೆಯುತ್ತಿದ್ದರು.
- Verse 39: ಹೆಬ್ಬಾಗಿಲ ಕೈಸಾಲೆಯಲ್ಲಿ ಎರಡು ಕಡೆಯಲ್ಲೂ ಎರಡೆರಡು ಪೀಠಗಳಿದ್ದವು. ಅವುಗಳ ಮೇಲೆ ದಹನಬಲಿಪ್ರಾಣಿ, ದೋಷಪರಿಹಾರಕ ಬಲಿಪ್ರಾಣಿ, ಪ್ರಾಯಶ್ಚಿತ್ತ ಬಲಿಪ್ರಾಣಿ, ಇವುಗಳನ್ನು ವಧಿಸುತ್ತಿದ್ದರು.
- Verse 40: ಉತ್ತರ ಹೆಬ್ಬಾಗಿಲ ಪ್ರವೇಶಸ್ಥಾನದ ಮೆಟ್ಟಲುಗಳ ಹತ್ತಿರ, ಆ ಬಾಗಿಲ ಕೈಸಾಲೆಯ ಹೊರಗೆ, ಒಂದು ಕೊನೆಯಲ್ಲಿ ಎರಡು ಪೀಠಗಳು ಇದ್ದವು.
- Verse 41: ಹೆಬ್ಬಾಗಿಲಿನ ಎರಡು ಪಕ್ಕಗಳಲ್ಲಿ ಇತ್ತ ನಾಲ್ಕು, ಅತ್ತ ನಾಲ್ಕು ಪೀಠಗಳು, ಒಟ್ಟಿಗೆ ಬಲಿಪ್ರಾಣಿಗಳನ್ನು ವಧಿಸುವ ಎಂಟು ಪೀಠಗಳಿದ್ದವು.
- Verse 42: ಇದಲ್ಲದೆ ದಹನಬಲಿಗೆ ಉಪಯುಕ್ತವಾದ, ಕೆತ್ತಿದ ಕಲ್ಲಿನ ನಾಲ್ಕು ಪೀಠಗಳಿದ್ದವು; ಅವುಗಳ ಉದ್ದ ಎಪ್ಪತ್ತೈದು ಸೆಂಟಿಮೀಟರ್, ಎತ್ತರ ಐವತ್ತು ಸೆಂಟಿಮೀಟರ್, ಅವುಗಳ ಮೇಲೆ ದಹನಬಲಿಪಶುಗಳ ವಧೆಯ ಉಪಕರಣಗಳನ್ನು ಇಡುತ್ತಿದ್ದರು.
- Verse 43: ಅಂಚಿನಲ್ಲಿ ಎಪ್ಪತ್ತೈದು ಮಿಲಿಮೀಟರ್ ದಿಂಡು ಕಟ್ಟಿತ್ತು; ನೈವೇದ್ಯ ಮಾಂಸವು ಪೀಠಗಳ ಮೇಲಿತ್ತು.
- Verse 44: ಆಮೇಲೆ ಆ ಪುರುಷ ನನ್ನನ್ನು ಒಳಗಣ ಪ್ರಾಕಾರಕ್ಕೆ ಕರೆದುತಂದನು. ಇಗೋ, ಅಲ್ಲಿ ಎರಡು ಕೋಣೆಗಳು ಕಾಣಿಸಿದವು. ಉತ್ತರ ಹೆಬ್ಬಾಗಿಲ ಪಕ್ಕದಲ್ಲಿ ಒಂದು ಕೋಣೆಯು ದಕ್ಷಿಣಕ್ಕೆ ಅಭಿಮುಖವಾಗಿತ್ತು; ದಕ್ಷಿಣ ಹೆಬ್ಬಾಗಿಲ ಪಕ್ಕದಲ್ಲಿ ಇನ್ನೊಂದು ಕೋಣೆ ಉತ್ತರಕ್ಕೆ ಅಭಿಮುಖವಾಗಿತ್ತು.
- Verse 45: ಆಗ ಅವನು ನನಗೆ ದಕ್ಷಿಣಕ್ಕೆ ಅಭಿಮುಖವಾಗಿರುವ ಈ ಕೋಣೆ ದೇವಾಲಯ ಪಾರುಪತ್ಯವನ್ನು ನಡೆಸುವ ಯಾಜಕರಿಗೆ ನೇಮಕವಾಗಿದೆ.
- Verse 46: ಉತ್ತರಕ್ಕೆ ಅಭಿಮುಖವಾಗಿರುವ ಆ ಕೋಣೆ ಬಲಿಪೀಠದ ಕಾರ್ಯದರ್ಶಿಗಳಾದ ಯಾಜಕರಿಗೆ ನೇಮಕವಾಗಿದೆ. ಚಾದೋಕನ ಸಂತತಿಯವರಾದ ಇವರು ಲೇವಿಯ ಕುಲದವರಲ್ಲಿ ಸರ್ವೇಶ್ವರನ ಸನ್ನಿಧಿಸೇವಕರಾಗಿದ್ದಾರೆ ಎಂದು ಹೇಳಿದನು.
- Verse 47: ಆಮೇಲೆ ಅವನು ಪ್ರಾಕಾರವನ್ನು ಅಳೆಯಲು ಅದು ಐವತ್ತು ಮೀಟರ್ ಉದ್ದವಾಗಿಯೂ ಐವತ್ತು ಮೀಟರ್ ಅಗಲವಾಗಿಯೂ ಚಚ್ಚೌಕವಾಗಿತ್ತು; ಬಲಿಪೀಠವು ದೇವಸ್ಥಾನದ ಮುಂದೆ ಇತ್ತು.
- Verse 48: ಕೂಡಲೆ ಆ ಪುರುಷ ನನ್ನನ್ನು ದೇವಸ್ಥಾನದ ದ್ವಾರಮಂಟಪಕ್ಕೆ ಕರೆದುತಂದು ಅದನ್ನು ಅಳೆದನು. ಅದರ ಎದುರುಬದುರಿನ ನಿಲವುಕಂಬಗಳ ಅಗಲ ಎರಡುವರೆ ಮೀಟರುಗಳು, ಬಾಗಿಲಿನ ಎರಡು ಪಕ್ಕದ ಗೋಡೆಗಳ ಅಗಲ ಅರ್ಧರ್ಧ ಮೀಟರ್,
- Verse 49: ದ್ವಾರಮಂಟಪದ ಉದ್ದ ಹತ್ತು ಮೀಟರ್, ಅಗಲ ಐದುವರೆ ಮೀಟರ್ ಇದ್ದವು. ಹತ್ತು ಮೆಟ್ಟಲುಗಳನ್ನು ಹತ್ತಿ ಅಲ್ಲಿಗೆ ಸೇರುತ್ತಿದ್ದರು. ಎರಡು ಕಡೆಯ ನಿಲವುಕಂಬಗಳ ಪಕ್ಕದಲ್ಲಿ ಒಂದೊಂದು ಉಪಸ್ತಂಭ ಇತ್ತು.