ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
21ನೇ ಅಧ್ಯಾಯ
- Verse 1: ಅದಕ್ಕೆ ಯೋಬನು ಕೊಟ್ಟ ಉತ್ತರ ಇದು :
- Verse 2: “ಗಮನಕೊಡಿ ನನ್ನ ಮಾತುಗಳಿಗೆ ನಾನು ನಿಮ್ಮಿಂದ ಬಯಸುವ ಉಪಶಮನ ಇದುವೆ:
- Verse 3: ನಾನು ಮಾತಾಡುವಾಗ ತಾಳ್ಮೆಯಿಂದಿರಿ ಬಳಿಕ ಬೇಕಾದರೆ ಪರಿಹಾಸ್ಯ ಮಾಡಿ.
- Verse 4: ನನ್ನ ದೂರು ಮನುಷ್ಯನ ವಿರುದ್ಧವೆ? ಸಾಕಷ್ಟು ಕಾರಣವಿರಲು, ನಾನು ಬೇಸರಗೊಳ್ಳಬಾರದೆ?
- Verse 5: ನನ್ನ ಕಡೆಗೆ ಗಮನ ಕೊಡಿ ಬಾಯಿಯ ಮೇಲೆ ಕೈಯಿಟ್ಟು ನಿಬ್ಬೆರಗಾಗಿರಿ.
- Verse 6: ಇದನು ನೆನೆದಾಗ ನನಗೆ ತಲ್ಲಣವಾಗುತ್ತದೆ ನನ್ನ ದೇಹಕ್ಕೆ ನಡುಕ ಬರುತ್ತದೆ:
- Verse 7: ದುರುಳರು ಮುದುಕರಾಗುವವರೆಗೂ ಬದುಕುವುದೇಕೆ? ಅಂಥವರು ಪ್ರಬಲರು, ಬಲಿಷ್ಠರು ಆಗುವುದೇಕೆ?
- Verse 8: ಅವರ ಸಂತಾನ ಅವರ ಸಮ್ಮುಖದಲ್ಲಿ ಸುಸ್ಥಿರವಾಗಿದೆ ಅವರ ಕುಟುಂಬ ಅವರ ಕಣ್ಮುಂದೆಯೇ ಅಚಲವಾಗಿದೆ.
- Verse 9: ಅವರ ಮನೆ ನಿರ್ಭೀತ, ಹಾಗೂ ಸುರಕ್ಷಿತ ಅವರ ಮೇಲೆ ಬೀಳದು ದೇವರ ದಂಡ.
- Verse 10: ಅವರ ಹೋರಿ ತಪ್ಪದೆ ಫಲವತ್ತಾಗಿಸುತ್ತದೆ ಅವರ ಗೋವು ಕಂದುಹಾಕದೆ ಈಯುತ್ತದೆ.
- Verse 11: ಅವರ ಮಕ್ಕಳು ಮುನ್ನಡೆಯುತ್ತಾರೆ ಮಂದೆಯಂತೆ ಅವರ ಬಾಲಬಾಲೆಯರು ಕುಣಿದಾಡುತ್ತಾರೆ ಜಿಂಕೆಯಂತೆ.
- Verse 12: ಹಾಡುತ್ತಾರೆ ತಂಬೂರಿ ವೀಣೆಗಳನು ನುಡಿಸುತ್ತಾ ಉಲ್ಲಾಸಿಸುತ್ತಾರೆ ಕೊಳಲಿನ ಸ್ವರ ಕೇಳುತ್ತಾ.
- Verse 13: ದಿನಗಳನು ಕಳೆಯುತ್ತಾರೆ ಸುಖಸಂತೋಷದಿಂದ ಸಮಾಧಿ ಸೇರುತ್ತಾರೆ ಸಮಾಧಾನದಿಂದ.
- Verse 14: ಆದರೆ ಈ ದುರುಳರೇ, ದೇವರಿಗೆ, ‘ನಮ್ಮನ್ನು ಬಿಟ್ಟು ತೊಲಗು, ನಮಗೆ ಬೇಡವಾಗಿದೆ ನಿನ್ನ ಮಾರ್ಗದ ಅರಿವು’.
- Verse 15: ‘ಈ ಸರ್ವಶಕ್ತ ಎಷ್ಟರವನು : ಆತನ ಸೇವೆ ನಮಗೇಕೆ? ಆತನಿಗೆ ಪ್ರಾರ್ಥನೆಮಾಡಿ ಪ್ರಯೋಜನವೇನು?’ ಎಂದಿದ್ದಾರೆ.
- Verse 16: ಆಹಾ! ಸದ್ಯಕ್ಕೆ ಸುಖಶಾಂತಿ ನೆಲಸಿಲ್ಲ ಅವರ ಕೈಯಲಿ ಆ ದುರುಳರ ಆಲೋಚನೆ ನನ್ನಿಂದ ದೂರವಿರಲಿ.
- Verse 17: ಆ ದುರುಳರ ದೀಪ ಆರಿಹೋದದ್ದು ಎಷ್ಟುಸಾರಿ? ಅವರಿಗೆ ವಿಪತ್ತು ಸಂಭವಿಸಿದ್ದು ಎಷ್ಟುಸಾರಿ? ಅವರ ಕೋಪ ಅವರಿಗೆ ಸಂಕಟ ತಂದದ್ದು ಎಷ್ಟುಬಾರಿ?
- Verse 18: ಅವರು ಗಾಳಿಗೆ ತೂರಿಹೋದ ಹುಲ್ಲಾದುದು ಎಷ್ಟು ಸಲ? ಬಿರುಗಾಳಿ ಕೊಚ್ಚಿಕೊಂಡುಹೋದ ಹೊಟ್ಟಾದುದು ಎಷ್ಟು ಸಲ?
- Verse 19: ದುಷ್ಟ ತಂದೆಯ ಪಾಪಫಲವನು ಮಕ್ಕಳಿಗೆ ಕಾದಿಟ್ಟಿದ್ದಾರೆಯೇ ದೇವರು? ಅವನಿಗೇ ಆ ದಂಡನೆ ಆಗಲಿ ಆ ದುಷ್ಟನೇ ಅದನ್ನು ಅನುಭವಿಸಲಿ.
- Verse 20: ಅವನೇ ತನ್ನ ವಿನಾಶವನು ಕಣ್ಣಾರೆ ಕಾಣಲಿ ಅವನೇ ಸರ್ವಶಕ್ತನಾ ರೌದ್ರರಸವನು ಸವಿಯಲಿ.
- Verse 21: ಅವನ ಆಯುಸ್ಸೇ ಕತ್ತರಿಸಿಹೋದ ಮೇಲೆ ಅವನಿಗೆಲ್ಲಿಯದು ತನ್ನಾನಂತರ ಬರುವ ಸಂತತಿಯ ಚಿಂತೆ?
- Verse 22: ದೇವರಿಗೆ ಜ್ಞಾನಬೋಧೆ ಮಾಡಬಲ್ಲವನು ಇದ್ದಾನೆಯೇ? ಉನ್ನತರಿಗೂ ನ್ಯಾಯತೀರಿಸುವಂಥವನು ಆತನೇ ಅಲ್ಲವೇ?
- Verse 23: ಒಬ್ಬ ಸಾಯುತ್ತಾನೆ ಸಮೃದ್ಧನಾಗಿರುವಾಗ ಸುಖಶಾಂತಿಯಿಂದ ನೆಮ್ಮದಿಯಾಗಿರುವಾಗ.
- Verse 24: ಅವನ ದೇಹ ಬೆಳೆದು ಕೊಬ್ಬೇರಿರುತ್ತದೆ ಅವನ ಅಸ್ತಿಗಳ ಮಜ್ಜೆ ಸಾರವತ್ತಾಗಿರುತ್ತದೆ.
- Verse 25: ಮತ್ತೊಬ್ಬ ಕಿಂಚಿತ್ತೂ ಸುಖಾನುಭವವಿಲ್ಲದೆ ಮನೋವ್ಯಥೆಪಡುತ್ತಾ ಪ್ರಾಣಬಿಡುತ್ತಾನೆ.
- Verse 26: ಇವರಿಬ್ಬರೂ ಮಣ್ಣಿನಲ್ಲಿ ಹೂಣಲ್ಪಡುತ್ತಾರೆ ಹುಳುಗಳು ಅವರನು ಮುತ್ತಿಕೊಳ್ಳುತ್ತವೆ.
- Verse 27: ಕೇಳಿ, ನಿಮ್ಮ ಆಲೋಚನೆಗಳನು ನಾನು ಬಲ್ಲೆ ನನಗೆ ವಿರುದ್ಧ ನೀವು ಮಾಡುವ ಕುಯುಕ್ತಿ ನನಗೆ ತಿಳಿದಿದೆ.
- Verse 28: ನಿಮ್ಮ ಪ್ರಶ್ನೆ ಇದು: “ಆ ಖದೀಮನ ಮನೆ ಏನಾಯಿತು? ಆ ದುರುಳರು ನಿವಾಸಿಸುತ್ತಿದ್ದ ಗುಡಾರ ಏನಾಯಿತು?”
- Verse 29: ದಾರಿಹೋಕರನ್ನು ನೀವು ವಿಚಾರಿಸಿಲ್ಲವೆ? ಅವರು ಕೊಟ್ಟ ದೃಷ್ಟಾಂತ ನಿಮಗೆ ಹಿಡಿಸಲಿಲ್ಲವೆ?
- Verse 30: ದುರುಳನು ಆಪತ್ತಿನಾ ದಿನ ಸುರಕ್ಷಿತನಾಗಿರುತ್ತಾನೆ ದೇವರ ಆ ಕೋಪೋದ್ರೇಕದ ದಿನ ಆಶ್ರಯ ಪಡೆಯುತ್ತಾನೆ.
- Verse 31: ಅವನಿಗೆ ‘ನೀನು ದುರ್ಮಾರ್ಗಿ’ ಎಂದು ಮುಖಾಮುಖಿಯಾಗಿ ಹೇಳಿದವರಾರು? ಅವನು ಮಾಡಿದ ದುಷ್ಕೃತ್ಯಗಳಿಗೆ ಮುಯ್ಯಿತೀರಿಸುವವರಾರು?
- Verse 32: ಮೆರವಣಿಗೆಯಾಗಿ ಅವನನ್ನು ಸಮಾಧಿಗೆ ಒಯ್ಯುತ್ತಾರೆ ಅವನ ಗೋರಿಗೆ ಕಾವಲು ಕೂಡ ಇಡುತ್ತಾರೆ.
- Verse 33: ಅವನಿಗೆ ಹಿಡಿಸುತ್ತದೆ ತಗ್ಗಿನಾ ಹೆಂಟೆಮಣ್ಣು ಅವನನು ಹಿಂಬಾಲಿಸುತ್ತಾರೆ ಅಸಂಖ್ಯಾತ ಜನರು ಮುಂದಕ್ಕೂ ಹಿಂಬಾಲಿಸುತ್ತಾರೆ ಲೆಕ್ಕವಿಲ್ಲದ ಜನರು.
- Verse 34: ಇಂತಿರಲು ನಿಮ್ಮ ಉಪಶಮನದ ಮಾತು ವ್ಯರ್ಥ ನಿಮ್ಮ ಮಾತುಗಳ ಸಾರಾಂಶ ಮಿತ್ರದ್ರೋಹ.”