ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
17ನೇ ಅಧ್ಯಾಯ
- Verse 1: ಜಗಳ ತುಂಬಿದ ಮನೆಯಲ್ಲಿ ಹಬ್ಬದೂಟ ಮಾಡುವುದಕ್ಕಿಂತಲು ಶಾಂತಿ ಸಮಾಧಾನದಿಂದ ಕೂಡಿದ ಒಣ ತುತ್ತೇ ಲೇಸು.
- Verse 2: ಜಾಣನಾದ ಆಳು ಮಾನಕಳೆದ ಮನೆಮಗನ ಮೇಲೆ ಅಧಿಕಾರ ನಡೆಸುವನು, ಮನೆಮಕ್ಕಳ ಬಾಧ್ಯತೆಯಲ್ಲೂ ಪಾಲುಗಾರನಾಗುವನು.
- Verse 3: ಪುಟಕುಲುಮೆಗಳು ಬೆಳ್ಳಿಬಂಗಾರಗಳನ್ನು ಶೋಧಿಸುತ್ತವೆ; ಸರ್ವೇಶ್ವರನು ಹೃದಯಗಳನ್ನು ಶೋಧಿಸುತ್ತಾನೆ.
- Verse 4: ಕೆಡುಕನು ಕೆಟ್ಟತುಟಿ ಆಡುವುದನ್ನು ಗಮನಿಸುತ್ತಾನೆ; ಸುಳ್ಳುಗಾರ ನಷ್ಟಮಾಡುವ ನಾಲಿಗೆಗೆ ಕಿವಿಗೊಡುತ್ತಾನೆ.
- Verse 5: ಬಡವರನ್ನು ಗೇಲಿಮಾಡುವವನು ತನ್ನ ಸೃಷ್ಟಿಕರ್ತನನ್ನೇ ಹೀನೈಸುತ್ತಾನೆ; ಪರರ ಕಷ್ಟದುಃಖಗಳನ್ನು ನೋಡಿ ಹಿಗ್ಗುವವನು ದಂಡನೆಗೆ ಗುರಿಯಾಗುತ್ತಾನೆ.
- Verse 6: ಮಕ್ಕಳ ಮಕ್ಕಳು ಮುದುಕರ ಮುಕುಟ; ಮಕ್ಕಳಿಗೆ ಹೆತ್ತವರೇ ಭೂಷಣ.
- Verse 7: ಉತ್ತಮವಾದ ಮಾತು ಮೂರ್ಖನಿಗೆ ಹಿಡಿಸದು; ಸುಳ್ಳುಮಾತು ಉತ್ತಮನಿಗೆ ಮತ್ತೂ ಹಿಡಿಸದು.
- Verse 8: ಕೊಡುವವನ ಕಣ್ಣಿಗೆ ಲಂಚವು ಚಿಂತಾಮಣಿಯಂತೆ; ಎತ್ತ ತಿರುಗಿದರತ್ತ ಅದರಿಂದ ಜಯವಂತೆ!
- Verse 9: ತಪ್ಪನ್ನು ಮನ್ನಿಸುವವನು ಪ್ರೀತಿಯನ್ನು ಅರಸುತ್ತಾನೆ; ತಪ್ಪನ್ನು ಎತ್ತಿ ಆಡುವವನು ಆಪ್ತನನ್ನೂ ಕಳೆದುಕೊಳ್ಳುತ್ತಾನೆ.
- Verse 10: ಮಂದಮತಿಗೆ ನೂರು ಗುದ್ದು; ಬುದ್ಧಿವಂತನಿಗೆ ಒಂದು ಮಾತು.
- Verse 11: ದುರಾತ್ಮನ ಕಣ್ಣೆಲ್ಲಾ ದಂಗೆ ಏಳುವುದರ ಮೇಲೆ; ಕ್ರೂರದೂತನು ಎರಗಿ ಬರುವನು ಅವನ ಮೇಲೆ.
- Verse 12: ಮೂರ್ಖತನದಲ್ಲಿ ಮುಳುಗಿರುವ ಮೂಢನಿಗೆ ಎದುರಾಗುವುದಕ್ಕಿಂತಲು ಮರಿಗಳನ್ನು ಕಳೆದುಕೊಂಡ ಕರಡಿಗೆ ಎದುರಾಗುವುದು ಲೇಸು.
- Verse 13: ಯಾರು ಉಪಕಾರಕ್ಕೆ ಅಪಕಾರ ಮಾಡುತ್ತಾರೊ ಅಂಥವರ ಮನೆಯಿಂದ ಕೇಡು ತೊಲಗದು.
- Verse 14: ವಾಗ್ವಾದವು ಏರಿಗೆ ಬಿರುಕು ಬಿದ್ದಂತೆ; ಸಿಟ್ಟೇರುವುದಕ್ಕೆ ಮುಂಚೆ ಜಗಳವನ್ನು ತೊರೆದುಬಿಡು.
- Verse 15: ದುರ್ಜನರನ್ನು ಸಜ್ಜನರೆಂದೂ, ಸಜ್ಜನರನ್ನು ದುರ್ಜನರೆಂದೂ ನಿರ್ಣಯಿಸುವ ಇಬ್ಬರೂ ಸರ್ವೇಶ್ವರನಿಗೆ ಅಸಹ್ಯರು.
- Verse 16: ಜ್ಞಾನವನ್ನು ಕೊಳ್ಳಲು ಮೂಢನ ಕೈಯಲ್ಲಿ ಹಣವೇಕೆ? ಇದನ್ನು ಕೊಳ್ಳಲು ಬೇಕಾದ ಬುದ್ಧಿಯೇ ಅವನಿಗಿಲ್ಲವಲ್ಲಾ!
- Verse 17: ಮಿತ್ರನ ಪ್ರೀತಿ ನಿರಂತರ; ಕಷ್ಟಕ್ಕಾದವನೆ ಹುಟ್ಟುನಂಟ.
- Verse 18: ಬೇರೆಯವನ ಸಾಲಕ್ಕಾಗಿ ಕೈ ಮೇಲೆ ಕೈಹಾಕಿ ಹೊಣೆಯಾಗಿ ನಿಂತವನು ಬುದ್ಧಿಹೀನನೆ ಸರಿ.
- Verse 19: ಕಲಹಪ್ರಿಯನು ಪಾಪಪ್ರಿಯನು; ಕದವನ್ನು ಎತ್ತರಿಸಿದವನು ಕೇಡನ್ನು ಬರಮಾಡಿಕೊಳ್ಳುವನು.
- Verse 20: ವಕ್ರಮನಸ್ಸುಳ್ಳವನು ಒಳಿತನ್ನು ಕಾಣನು; ಕೆಟ್ಟ ನಾಲಿಗೆಯವನು ಸಂಕಟಕ್ಕೆ ಸಿಕ್ಕಿಕೊಳ್ಳುವನು.
- Verse 21: ಹೆಡ್ಡನನ್ನು ಹೆತ್ತವನಿಗೆ ವ್ಯಥೆ; ಮೂರ್ಖನ ತಂದೆಗೆ ಕಡುಚಿಂತೆ.
- Verse 22: ಹರ್ಷ ಹೃದಯ ಒಳ್ಳೆಯ ಔಷಧ; ಕುಗ್ಗಿದ ಮನದಿಂದ ಅಸ್ಥಿಪಂಜರ.
- Verse 23: ಲಂಚವನ್ನು ಗುಟ್ಟಾಗಿ ಪಡೆದ ದುಷ್ಟನು ಡೊಂಕಾಗಿಸುತ್ತಾನೆ ನ್ಯಾಯ ನಿರ್ಣಯವನ್ನು.
- Verse 24: ವಿವೇಕಿಗೆ ಜ್ಞಾನವೇ ಗುರಿ ಧ್ಯೇಯ; ಮೂಢನ ದೃಷ್ಟಿ ದಿಗಂತದಷ್ಟು ವಿಶಾಲ.
- Verse 25: ಬುದ್ಧಿಹೀನನಾದ ಮಗನು ತಂದೆಗೆ ಕಿರಿಕಿರಿ; ಹೆತ್ತತಾಯಿಗೆ ಅವನು ಕರಕರೆ.
- Verse 26: ನೀತಿವಂತನಿಗೆ ದಂಡ ಸರಿಯಲ್ಲ; ಸಜ್ಜನನಿಗೆ ಶಿಕ್ಷೆ ನ್ಯಾಯವಲ್ಲ.
- Verse 27: ಹಿಡಿದು ಮಾತಾಡುವವನು ಜ್ಞಾನಿ; ಶಾಂತ ಗುಣವುಳ್ಳವನು ವಿವೇಕಿ.
- Verse 28: ಮೂಢನು ಕೂಡ ಮೌನತಾಳಿದರೆ ಜ್ಞಾನಿಯೆನಿಸಿಕೊಳ್ಳುವನು; ತುಟಿಗಳನ್ನು ಬಿಗಿಹಿಡಿದರೆ ವಿವೇಕಿ ಎನಿಸಿಕೊಳ್ಳುವನು.