ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಉಪದೇಶಕ
10ನೇ ಅಧ್ಯಾಯ
- Verse 1: ಸತ್ತ ನೊಣಗಳಿಂದ ಗಂದಿಗನ ತೈಲ ಕೂಡ ನಾರುತ್ತದೆ. ಅಂತೆಯೇ ಹುಚ್ಚುತನ ಕೊಂಚವಾದರೂ ಜ್ಞಾನಮಾನಗಳನ್ನು ಕೆಡಿಸಿಬಿಡುತ್ತದೆ.
- Verse 2: ಜ್ಞಾನಿಯ ಬುದ್ಧಿ ಬಲಗೈಯಾದರೆ ಅಜ್ಞಾನಿಯ ಬುದ್ಧಿ ಎಡಗೈ.
- Verse 3: ಬುದ್ಧಿತಪ್ಪಿ ತಿರುಗಾಡುವ ಹುಚ್ಚನು ದಾರಿಯಲ್ಲೆಲ್ಲಾ ತನ್ನ ಹುಚ್ಚುತನವನ್ನು ಪ್ರಕಟಮಾಡುತ್ತಾನೆ.
- Verse 4: ರಾಜನು ಸಿಟ್ಟುಗೊಂಡನೆಂದು ಉದ್ಯೋಗಕ್ಕೇ ರಾಜೀನಾಮೆ ಕೊಟ್ಟುಬಿಡಬೇಡ; ತಾಳ್ಮೆಯಿಂದ ಘನದೋಷಗಳನ್ನೂ ಅಳಿಸಬಹುದು.
- Verse 5: ಲೋಕದಲ್ಲಿ ನಾನು ಮತ್ತೊಂದು ಅನ್ಯಾಯವನ್ನು ಕಂಡೆ. ಅದು ಅಧಿಪತಿಗಳ ತಪ್ಪಿನಿಂದಾದುದು.
- Verse 6: ಅದು ಯಾವುದೆಂದರೆ, ಮೂಢರನ್ನು ಮಹಾಪದವಿಗೆ ಏರಿಸುತ್ತಾರೆ; ಘನವಂತರನ್ನು ಹೀನಸ್ಥಿತಿಯಲ್ಲಿ ಇರಿಸುತ್ತಾರೆ.
- Verse 7: ಗುಲಾಮನು ಕುದುರೆಸವಾರಿ ಮಾಡುವುದನ್ನೂ ಯಜಮಾನನು ಮನೆಯಾಳಂತೆ ನೆಲದ ಮೇಲೆ ನಡೆಯುವುದನ್ನೂ ನೋಡಿದ್ದೇನೆ.
- Verse 8: ತಾನು ತೋಡಿದ ಗುಂಡಿಯಲ್ಲಿ ತಾನೇ ಬೀಳುವನು; ಗೋಡೆ ಒಡೆಯುವವನನ್ನು ಹಾವು ಕಡಿಯುವುದು.
- Verse 9: ಬಂಡೆ ಸೀಳುವವನು ಬಂಡೆಯಿಂದಲೇ ಗಾಯಗೊಳ್ಳುವನು; ಮರಕಡಿಯುವವನು ಅದರಿಂದಲೇ ಅಪಾಯಕ್ಕೆ ಗುರಿಯಾಗುವನು.
- Verse 10: ಮೊಂಡುಕೊಡಲಿಯ ಬಾಯನ್ನು ಮೊನೆಮಾಡದಿದ್ದರೆ ಹೆಚ್ಚು ಬಲಪ್ರಯೋಗ ಮಾಡಬೇಕಾಗುವುದು. ಕಾರ್ಯಸಿಧ್ಧಿಗೆ ಜ್ಞಾನವೇ ಸಾಧನ.
- Verse 11: ಹಾವಾಡಿಗ ಹಾವಾಡಿಸುವುದಕ್ಕೆ ಮುಂಚೆಯೇ ಹಾವಿನಿಂದ ಕಡಿಸಿಕೊಂಡರೆ ಏನು ಪ್ರಯೋಜನ?
- Verse 12: ಜ್ಞಾನಿಯ ಮಾತು ಹಿತಕರ; ಅಜ್ಞಾನಿಯ ಮಾತು ಅವನಿಗೆ ವಿನಾಶಕರ. ಅದು ಬುದ್ಧಿಹೀನತೆಯಿಂದ ಆರಂಭವಾಗುತ್ತದೆ. ಮೋಸ, ಮರುಳುತನದಲ್ಲಿ ಮುಕ್ತಾಯಗೊಳ್ಳುತ್ತದೆ.
- Verse 13: ಜ್ಞಾನಿಯ ಮಾತು ಹಿತಕರ; ಅಜ್ಞಾನಿಯ ಮಾತು ಅವನಿಗೆ ವಿನಾಶಕರ. ಅದು ಬುದ್ಧಿಹೀನತೆಯಿಂದ ಆರಂಭವಾಗುತ್ತದೆ. ಮೋಸ, ಮರುಳುತನದಲ್ಲಿ ಮುಕ್ತಾಯಗೊಳ್ಳುತ್ತದೆ.
- Verse 14: ಅಜ್ಞಾನಿ ಮಾತಿನ ಮಲ್ಲ. ಭವಿಷ್ಯತ್ತನ್ನು ಮಾನವ ತಿಳಿಯನು; ತಾನು ಕಾಲವಾದ ಮೇಲೆ ಏನಾಗುವುದೆಂದು ಅವನು ಯಾರಿಂದ ತಿಳಿಯಬಲ್ಲನು?
- Verse 15: ಪಟ್ಟಣಕ್ಕೆ ದಾರಿತಿಳಿಯದವನಿಗೆ ಮೂಢರು ತಿಳಿಸಲು ಪಡುವ ಪ್ರಯಾಸ ಕೇವಲ ಆಯಾಸ.
- Verse 16: ಓ ನಾಡೇ, ನಿನ್ನ ಒಡೆಯ ಬಾಲಕನಾಗಿದ್ದು ನಿನ್ನ ನಾಯಕರೆಲ್ಲರು ಹೊತ್ತಾರೆಯೇ ಔತಣಕ್ಕೆ ಕುಳಿತುಕೊಳ್ಳುವಂಥವರಾಗಿದ್ದಾರೆ, ಅದು ನಿನ್ನ ದೌರ್ಭಾಗ್ಯವೇ ಸರಿ.
- Verse 17: ನಾಡೇ, ನಿನ್ನ ಒಡೆಯ ಕುಲೀನನಾಗಿದ್ದು, ನಿನ್ನ ನಾಯಕರೆಲ್ಲ ಸಕಾಲದಲ್ಲಿ ಊಟಮಾಡಿ, ಕುಡುಕರಾಗುವುದರ ಬದಲು ಶಕ್ತಿಯುತರಾದರೆ, ಅದು ನಿನ್ನ ಸೌಭಾಗ್ಯವೇ ಸರಿ.
- Verse 18: ಮೈಗಳ್ಳನ ಮನೆ ಅಂಕುಡೊಂಕಾಗಿರುತ್ತದೆ; ಸೋಮಾರಿಯ ಸೂರು ಸೋರುತ್ತಿರುತ್ತದೆ.
- Verse 19: ವಿನೋದಕ್ಕಾಗಿ ಔತಣ, ಆನಂದಕ್ಕಾಗಿ ಮದ್ಯಪಾನ; ಎಲ್ಲವನ್ನು ಒದಗಿಸಿಕೊಡುವುದಕ್ಕಾಗಿ ಹಣ.
- Verse 20: ಅರಸನನ್ನು ಮನಸ್ಸಿನಲ್ಲಿಯೂ ನಿಂದಿಸಬೇಡ; ಧನಿಕನನ್ನು ಮಲಗುವ ಕೋಣೆಯಲ್ಲೂ ದೂಷಿಸಬೇಡ; ಆಕಾಶದ ಹಕ್ಕಿ ಆ ಸುದ್ದಿಯನ್ನು ಮುಟ್ಟಿಸೀತು; ಹಾರುವ ಪಕ್ಷಿ ಆ ಸಮಾಚಾರವನ್ನು ತಿಳಿಸೀತು!