पवित्र बाइबिल
ಹಳೆಯ ಒಡಂಬಡಿಕೆ
ಯೆಶಾಯ
45ನೇ ಅಧ್ಯಾಯ
- Verse 1: ಇಂತೆಂದರು ಸರ್ವೇಶ್ವರ ತಾನು ಅಭಿಷೇಕಿಸಿದ ಕೋರೆಷನಿಗೆ “ರಾಷ್ಟ್ರಗಳನ್ನು ನೀ ಸದೆಬಡಿಯುವಂತೆ ರಾಜಮಹಾರಾಜರನು ನಿಶ್ಯಸ್ತ್ರರನ್ನಾಗಿ ಮಾಡುವಂತೆ ಮುಚ್ಚಲಾಗದ ಹಾಗೆ ಬಾಗಿಲು ಹೆಬ್ಬಾಗಿಲುಗಳನ್ನು ತೆರೆಯುವಂತೆ ನಾ ನಿನ್ನ ಕೈಹಿಡಿದು ನಡೆಸುವೆನು ಮುಂದೆ.
- Verse 2: ನಿನ್ನ ಮುಂದೆ ಸಾಗುವೆನು ನಾನು ಸಮಮಾಡುವೆನು ಬೆಟ್ಟಗುಡ್ಡಗಳನು ಒಡೆದುಹಾಕುವೆನು ಕಂಚಿನ ಕದಗಳನು ಮುರಿದುಬಿಡುವೆನು ಕಬ್ಬಿಣದ ಅಗುಳಿಗಳನು.
- Verse 3: ಹೆಸರು ಹಿಡಿದು ನಿನ್ನ ಕರೆಯುವ ಸರ್ವೇಶ್ವರ ನಾನು ಕೊಡುವೆ ನಾ ನಿನಗೆ ಕತ್ತಲಲಿ ಬಚ್ಚಿಟ್ಟ ಭಂಡಾರಗಳನು ಗುಪ್ತಸ್ಥಳಗಳಲ್ಲಿ ಮರೆಮಾಡಿರುವ ನಿಧಿನಿಕ್ಷೇಪಗಳನು. ಈ ಪರಿ ಅರಿತುಕೊಳ್ಳುವೆ ನೀನು ನಾನೇ ಇಸ್ರಯೇಲರ ದೇವರೆಂಬುದನು.
- Verse 4: ನನ್ನ ಸೇವಕನಾದ ಯಕೋಬನ ನಿಮಿತ್ತ ನಾನು ಆರಿಸಿಕೊಂಡ ಇಸ್ರಯೇಲಿನ ನಿಮಿತ್ತ ನನ್ನ ಅರಿವೇ ಇಲ್ಲದ ನಿನ್ನನು ಹೆಸರು ಹಿಡಿದು ಕರೆದಿರುವೆನು, ಬಿರುದಿತ್ತು ಸನ್ಮಾನಿಸಿರುವೆನು.
- Verse 5: ಸರ್ವೇಶ್ವರ ನಾನಲ್ಲದೆ ಬೇರಾರು ಅಲ್ಲ ನನ್ನ ಹೊರತು ಯಾವ ದೇವರು ಇಲ್ಲ. ನೀನು ನನ್ನನ್ನು ಅರಿಯದವನಾಗಿರುವೆ ಆದರೂ ನಿನ್ನನ್ನು ಶಸ್ತ್ರಧಾರಿಯಾಗಿಸುವೆ.
- Verse 6: ಇದ ಕಂಡು ತಿಳಿಯುವರೆಲ್ಲರು ಪೂರ್ವದಿಂದ ಪಶ್ಚಿಮದವರೆಗು : ನಿನ್ನ ವಿನಾ ದೇವರಾರು ಇಲ್ಲವೆಂದು ನಾನೇ ಸರ್ವೇಶ್ವರ ಮತ್ತಾರು ಅಲ್ಲವೆಂದು;
- Verse 7: ಬೆಳಕಿಗೂ ಕತ್ತಲಿಗೂ ನಾನೆ ಸೃಷ್ಟಿಕರ್ತನೆಂದು ಸುಖದುಃಖಗಳಿಗೆ ಕಾರಣಕರ್ತನೆಂದು ಸಕಲವನು ನಡೆಸುವ ಸರ್ವೇಶ್ವರ ನಾನೇ ಎಂದು.
- Verse 8: ವರ್ಷಿಸಲಿ ಸದ್ಧರ್ಮವನು ಆಕಾಶಮಂಡಲ ಸುರಿಸಲಿ ಮೇಲಿಂದ ಅದನ್ನು ಆ ಗಗನಮಂಡಲ; ಅಂಕುರಿಸಲಿ ಜೀವೋದ್ಧಾರವನು ಭೂಮಂಡಲ ಬೆಳೆಯಲಿ ಅದರೊಡನೆಯೇ ಸದ್ಧರ್ಮದ ಫಲ, ಸರ್ವೇಶ್ವರನಾದ ನಾನೇ ಕರ್ತ ಇದಕ್ಕೆಲ್ಲಾ.”
- Verse 9: ಧಿಕ್ಕಾರ ! ತನ್ನನು ರೂಪಿಸಿದವನೊಡನೇ ವ್ಯಾಜ್ಯ ಮಾಡುವವನಿಗೆ; ಅವನು ಕೂಡ ಮಣ್ಣುಮಡಕೆಗಳಲ್ಲಿ ಒಂದು ಮಡಕೆ ಅಲ್ಲವೇ? “ಏನು ಮಾಡುತ್ತಿ” ಎಂದು ಮಣ್ಣು ಕುಂಬಾರನನು ಕೇಳುವುದುಂಟೆ? ‘ನಾನು ನಿನ್ನ ಕೈಯ ಕೃತಿ ಅಲ್ಲ’ ಎಂದು ಆ ಮಡಕೆ ಹೇಳುವುದುಂಟೆ?
- Verse 10: ‘ನೀನು ಹುಟ್ಟಿಸುವುದೇನು’ ಎಂದು ತಂದೆಯನು ಕೇಳುವವನಿಗೆ ಧಿಕ್ಕಾರ ! ‘ನೀನು ಹೆರುವುದೇನು’ ಎಂದು ತಾಯಿಯನು ಕೇಳುವವನಿಗೆ ಧಿಕ್ಕಾರ !
- Verse 11: ಸರ್ವೇಶ್ವರ ಇಸ್ರಯೇಲಿನ ಪರಮಪಾವನ ಸ್ವಾಮಿ, ಅದರ ಸೃಷ್ಟಿಕರ್ತ. ಆ ಸರ್ವೇಶ್ವರನ ನುಡಿಯಿದು : “ನನ್ನ ಮಕ್ಕಳ ಬಗ್ಗೆ ನೀ ಕೇಳುವುದೆಂತು? ನನ್ನ ಕೈಯ ಕೃತಿಗಳ ಬಗ್ಗೆ ನೀ ವಿಧಿಸುವುದೆಂತು?
- Verse 12: ಜಗವನು, ಅದರಲ್ಲಿನ ಮನುಜರನು ಸೃಜಿಸಿದವನು ನಾನೇ, ಆಕಾಶಮಂಡಲವನು ವಿಶಾಲವಾಗಿ ಹರಡಿದ್ದು ನನ್ನ ಕೈಗಳೇ, ಸೂರ್ಯ, ಚಂದ್ರ, ನಕ್ಷತ್ರಗಳನು ನಿಯಂತ್ರಿಸುವವನು ನಾನೆ.
- Verse 13: ಧರ್ಮಸಾಧನೆಗಾಗಿ ಕೋರೆಷನನ್ನು ಉದಯಗೊಳಿಸಿರುವೆನು ಅವನ ಮಾರ್ಗಗಳನ್ನು ನಾನೇ ಸರಾಗಮಾಡುವೆನು ನನ್ನ ನಗರವನು ಪುನರ್ ನಿರ್ಮಾಣಮಾಡುವನು ಅವನು ಸೆರೆಯಾದ ನನ್ನ ಜನರನು ಬಿಡುಗಡೆ ಮಾಡುವನು ಸಂಬಳವನ್ನಾಗಲಿ ಸಂಭಾವನೆಯನ್ನಾಗಲಿ ಸ್ವೀಕರಿಸನು. ಇದ ನುಡಿದಿರುವೆನು ಸೇನಾಧೀಶ್ವರ ಸರ್ವೇಶ್ವರನಾದ ನಾನು.”
- Verse 14: ಕೇಳಿರಿ ಸರ್ವೇಶ್ವರನ ಈ ಮಾತನ್ನು : “ನಿಮ್ಮದಾಗುವುದು ಈಜಿಪ್ಟಿನ ಸಿರಿಯು, ಸುಡಾನಿನ ಸಂಪದವು. ನಿಮ್ಮನ್ನು ಸೇರಿ ನಿಮಗಧೀನರಾಗುವರು ಎತ್ತರದ ಸೆಬಾಯರು. ಬೇಡಿತೊಟ್ಟು ಅಡ್ಡಬೀಳುವರು ನಿಮ್ಮ ಮುಂದೆ ಅರಿಕೆಮಾಡಿಕೊಳ್ಳುವರು ಹೀಗೆಂದೆ : ‘ನಿಶ್ಚಯವಾಗಿ ನಿಮ್ಮಲ್ಲಿಹರು ದೇವರು ಅವರಲ್ಲದೆ ದೇವರಿಲ್ಲ ಬೇರೆಯಾರು.’
- Verse 15: ಇಸ್ರಯೇಲರ ದೇವರೇ, ಉದ್ಧಾರಕನೇ, ನಿಶ್ಚಯವಾಗಿ ದೇವರಾದ ನೀನು ಮರೆಯಾಗಿರುವೆ.
- Verse 16: ಮೂರ್ತಿಗಳನು ಮಾಡುವವರೆಲ್ಲರು ಈಡಾಗುವರು ನಾಚಿಕೆಗೆ ಮಾನಭಂಗಪಟ್ಟು ಒಟ್ಟಿಗೆ ಮುಳುಗುವರವರು ಅವಮಾನದೊಳಗೆ.
- Verse 17: ಇಸ್ರಯೇಲಿಗಾದರೋ, ದೊರೆವುದು ಶಾಶ್ವತ ರಕ್ಷಣೆ ಸರ್ವೇಶ್ವರನಿಂದ; ಯುಗಯುಗಾಂತರಕ್ಕೂ ಅದಕ್ಕಾಗದು ಲಜ್ಜೆ, ಮಾನಭಂಗ.”
- Verse 18: ಕೇಳಿ, ಆಕಾಶಮಂಡಲವನ್ನು ಸೃಷ್ಟಿಸಿದ ಸರ್ವೇಶ್ವರನ ಮಾತನ್ನು : ಭೂಲೋಕವನ್ನು ನಿರ್ಮಿಸಿ, ರೂಪಿಸಿ, ಸ್ಥಾಪಿಸಿದ ದೇವರು ಆತನು. ಅದನ್ನು ಶೂನ್ಯಸ್ಥಾನವಾಗಿ ಸೃಷ್ಟಿಸದೆ, ಜನನಿವಾಸಕ್ಕಾಗಿಯೇ ರೂಪಿಸಿದವನು ಆತನು. ಅಂಥವನು ಇಂತೆನ್ನುತ್ತಾನೆ : “ಸರ್ವೇಶ್ವರ ನಾನೇ; ನಾನಲ್ಲದೆ ಇನ್ನಾರೂ ಇಲ್ಲ.
- Verse 19: ನಾನು ಗುಟ್ಟುಗುಟ್ಟಾಗಿ ಮಾತಾಡಿದವನಲ್ಲ ಕಗ್ಗತ್ತಲೆಯೊಳಗಿನಿಂದ ನುಡಿದವನಲ್ಲ ಶೂನ್ಯದಲ್ಲಿ ನನ್ನ ಹುಡುಕಿರಿ ಎಂದು ಯಕೋಬ ವಂಶಕ್ಕೆ ಹೇಳಿದವನಲ್ಲ. ಸರ್ವೇಶ್ವರನಾದ ನಾನು ಸತ್ಯಾನುಸಾರ ನುಡಿಯುವವನು, ನೆಟ್ಟನೆಯ ಮಾತುಗಳನ್ನೆ ಸ್ಪಷ್ಟವಾಗಿ ಹೇಳುವವನು.”
- Verse 20: “ಅಳಿದುಳಿದ ಅನ್ಯಜನರೇ, ನೆರೆದು ಬನ್ನಿ, ಒಟ್ಟಿಗೆ ನನ್ನ ಬಳಿಗೆ ಬನ್ನಿ. ತಮ್ಮ ಮರದ ಬೊಂಬೆಯನು ಹೊತ್ತು ತಿರುಗುವವರು ರಕ್ಷಿಸಲಾಗದ ದೇವತೆಗೆ ಮೊರೆಯಿಡುವ ಬುದ್ಧಿಹೀನರು.
- Verse 21: ಹೇಳಿ, ನ್ಯಾಯಸ್ಥಾನಕ್ಕೆ ಬಂದು ನಿಮ್ಮ ವಾದವನ್ನು ಮಂಡಿಸಿ; ನಿಮ್ಮ ದೇವರುಗಳು ತಮ್ಮತಮ್ಮೊಳಗೆ ಪರ್ಯಾಲೋಚಿಸಿ ನೋಡಲಿ. ಪ್ರಾರಂಭದಿಂದಲೂ ಈ ವಿಷಯವನ್ನು ಪ್ರಕಟಿಸಿದವರು ಯಾರು? ಅದು ನಡೆಯುವುದಕ್ಕೆ ಮುಂಚೆಯೇ ತಿಳಿಸಿದವನು ನಾನಲ್ಲದೆ ಇನ್ಯಾರು? ನನ್ನ ಹೊರತು ಇನ್ನು ಯಾವ ದೇವರೂ ಇಲ್ಲ; ನಾನಲ್ಲದೆ ಸತ್ಯಸ್ವರೂಪನು, ಉದ್ಧಾರಕನು ಆದ ದೇವನಿಲ್ಲವೇ ಇಲ್ಲ.
- Verse 22: “ಎಲ್ಲೆ ಎಲ್ಲೆಗಳಲ್ಲಿರುವ ಜನರೇ, ತಿರುಗಿಕೊಳ್ಳಿರಿ ನನ್ನ ಕಡೆಗೆ, ಆಗ ಉದ್ಧಾರವಾಗುವಿರಿ. ದೇವರು ಬೇರಾರೂ ಇಲ್ಲ, ನಾನೊಬ್ಬನೆ ಎಂಬುದನರಿಯಿರಿ.
- Verse 23: ಪ್ರತಿಯೊಬ್ಬರು ಮೊಣಕಾಲೂರುವರು ನನಗೆ ಎಲ್ಲರು ನಾನೇ ದೇವರೆಂದು ಮಾಡುವರು ಪ್ರತಿಜ್ಞೆ. ಆ ನುಡಿ ಹೊರಟಿದೆ ನನ್ನ ಸತ್ಯದ ಬಾಯಿಂದ ಅದನ್ನು ಹಿಂತೆಗೆಯೆನು ನನ್ನ ಮೇಲಿಟ್ಟ ಆಣೆಯಿಂದ.
- Verse 24: “ಜೀವೋದ್ಧಾರವು, ಶಕ್ತಿಯು ಸರ್ವೇಶ್ವರನಲ್ಲಿ ಮಾತ್ರ ಉಂಟು ಆತನ ವಿರೋಧಿಗಳೆಲ್ಲರೂ ಆತನನ್ನೇ ಮರೆಹೋಗುವರು ನಾಚಿಕೆಪಟ್ಟು.
- Verse 25: ಪಡೆವರು ಇಸ್ರಯೇಲಿನ ವಂಶಜರೆಲ್ಲರು ಸರ್ವೇಶ್ವರನಲ್ಲೇ ಜೀವೋದ್ಧಾರವನು, ಆನಂದವನು.”