ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಲೂಕ
9ನೇ ಅಧ್ಯಾಯ
- Verse 1: ಯೇಸುಸ್ವಾಮಿ ಹನ್ನೆರಡು ಮಂದಿ ಪ್ರೇಷಿತರನ್ನು ಒಟ್ಟಿಗೆ ಕರೆದು ಎಲ್ಲ ದೆವ್ವಗಳನ್ನು ಬಿಡಿಸಲೂ ರೋಗ ನಿವಾರಣೆಮಾಡಲೂ ಅವರಿಗೆ ಶಕ್ತಿಯನ್ನು ಮತ್ತು ಅಧಿಕಾರವನ್ನು ಕೊಟ್ಟರು.
- Verse 2: ಅನಂತರ ದೇವರ ಸಾಮ್ರಾಜ್ಯವನ್ನು ಕುರಿತು ಬೋಧಿಸುವುದಕ್ಕೂ ರೋಗಿಗಳನ್ನು ಗುಣಪಡಿಸುವುದಕ್ಕೂ ಅವರನ್ನು ಕಳುಹಿಸಿದರು.
- Verse 3: ಕಳುಹಿಸುವಾಗ ಅವರಿಗೆ ಇಂತೆಂದರು, “ಪ್ರಯಾಣಕ್ಕೆಂದು ಏನನ್ನೂ ತೆಗೆದುಕೊಳ್ಳಬೇಡಿ; ದಂಡ, ಜೋಳಿಗೆ, ಬುತ್ತಿ ಅಥವಾ ಹಣ ಯಾವುದೂ ಬೇಡ. ಎರಡು ಅಂಗಿಗಳೂ ಬೇಕಾಗಿಲ್ಲ.
- Verse 4: ಯಾವ ಮನೆಯವರು ನಿಮ್ಮನ್ನು ಬರಮಾಡಿಕೊಳ್ಳುತ್ತಾರೋ ಆ ಮನೆಯಲ್ಲೇ ತಂಗಿರಿ. ಅಲ್ಲಿಂದಲೇ ಮುಂದಕ್ಕೆ ಸಾಗಿರಿ.
- Verse 5: ಯಾವ ಊರಿನವರಾದರೂ ನಿಮ್ಮನ್ನು ಸ್ವಾಗತಿಸದೆಹೋದಲ್ಲಿ, ನೀವು ಆ ಊರನ್ನು ಬಿಟ್ಟುಹೋಗುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಕೂಡ ಝಾಡಿಸಿಬಿಡಿ. ಅದು ಅವರ ವಿರುದ್ಧ ಸಾಕ್ಷಿಯಾಗಿರಲಿ,” ಎಂದರು.
- Verse 6: ಪ್ರೇಷಿತರು ಹೊರಟು ಹಳ್ಳಿಹಳ್ಳಿಗೂ ಹೋಗಿ ಎಲ್ಲ ಕಡೆ ಶುಭಸಂದೇಶವನ್ನು ಬೋಧಿಸಿದರು; ರೋಗಿಗಳನ್ನು ಗುಣಪಡಿಸಿದರು.
- Verse 7: ನಡೆಯುತ್ತಿದ್ದ ಎಲ್ಲ ಸಂಗತಿಗಳು ಸಾಮಂತರಾಜ ಹೆರೋದನ ಕಿವಿಗೆ ಬಿದ್ದುವು. ಅವನ ಮನಸ್ಸು ಕಳವಳಗೊಂಡಿತ್ತು. ಏಕೆಂದರೆ, ‘ಯೊವಾನ್ನನು ಮರಳಿ ಜೀವಂತನಾಗಿ ಎದ್ದಿದ್ದಾನೆ’ ಎಂದು ಕೆಲವರೂ
- Verse 8: ‘ಎಲೀಯನು ಪುನಃ ಕಾಣಿಸಿಕೊಂಡಿದ್ದಾನೆ’, ಎಂದು ಇನ್ನು ಕೆಲವರೂ ‘ಪ್ರಾಚೀನ ಪ್ರವಾದಿಗಳಲ್ಲಿ ಒಬ್ಬನು ಮರಳಿ ಜೀವಂತನಾಗಿದ್ದಾನೆ,’ ಎಂದು ಮತ್ತೆ ಕೆಲವರೂ ಹೇಳುತ್ತಿದ್ದರು.
- Verse 9: ಹೆರೋದನಾದರೋ, ‘ಯೊವಾನ್ನನೇ! ಅವನನ್ನು ನಾನೇ ಶಿರಚ್ಛೇದನ ಮಾಡಿಸಿದೆನಲ್ಲಾ; ಮತ್ತೆ ಇವನಾರು? ಇವನ ಬಗ್ಗೆ ಇಂಥಾ ವಿಷಯಗಳನ್ನೆಲ್ಲ ಕೇಳುತ್ತಾ ಇರುವೆನಲ್ಲಾ!’ ಎಂದುಕೊಂಡು, ಯೇಸುವನ್ನು ನೋಡಲು ಅವಕಾಶ ಹುಡುಕುತ್ತಿದ್ದನು.
- Verse 10: ಇತ್ತ ಪ್ರೇಷಿತರು ಹಿಂದಿರುಗಿ ಬಂದು ತಾವು ಮಾಡಿದ್ದೆಲ್ಲವನ್ನೂ ಯೇಸುಸ್ವಾಮಿಗೆ ವರದಿಮಾಡಿದರು. ಯೇಸು ಅವರನ್ನು ಪ್ರತ್ಯೇಕವಾಗಿ ಕರೆದುಕೊಂಡು ಬೆತ್ಸಾಯಿದ ಎಂಬ ಊರಿನತ್ತ ಹೋದರು.
- Verse 11: ಇದನ್ನು ತಿಳಿದುಕೊಂಡು ಜನಸಮೂಹ ಅವರನ್ನು ಹಿಂಬಾಲಿಸಿತು. ಯೇಸು ಅವರನ್ನು ಸ್ವಾಗತಿಸಿ, ದೇವರ ಸಾಮ್ರಾಜ್ಯದ ವಿಷಯವಾಗಿ ಹೇಳಿ, ಅಗತ್ಯವಿದ್ದವರಿಗೆ ಆರೋಗ್ಯದಾನ ಮಾಡಿದರು.
- Verse 12: ಅಷ್ಟರಲ್ಲಿ ಸಾಯಂಕಾಲವಾಗುತ್ತಾ ಬಂದಿತು. ಹನ್ನೆರಡು ಮಂದಿ ಪ್ರೇಷಿತರು ಯೇಸುವಿನ ಬಳಿಗೆ ಬಂದು, “ಇದು ನಿರ್ಜನ ಪ್ರದೇಶ, ಜನರನ್ನು ಕಳುಹಿಸಿಬಿಡಿ; ಅವರು ಸಮೀಪದ ಊರುಕೇರಿಗಳಿಗೆ ಹೋಗಿ ಊಟವಸತಿಯನ್ನು ಒದಗಿಸಿಕೊಳ್ಳಲಿ,” ಎಂದರು.
- Verse 13: ಅದಕ್ಕೆ ಯೇಸು, “ನೀವೇ ಅವರಿಗೆ ಊಟಕ್ಕೆ ಏನಾದರು ಕೊಡಿ,” ಎಂದರು. ಅವರು, “ನಮ್ಮಲ್ಲಿರುವುದು ಐದು ರೊಟ್ಟಿ ಮತ್ತು ಎರಡು ಮೀನು ಮಾತ್ರ; ನಾವು ಹೋಗಿ ಇವರೆಲ್ಲರಿಗೆ ಬೇಕಾಗುವಷ್ಟು ಊಟ ಕೊಂಡುಕೊಂಡು ಬರಬೇಕೆ?” ಎಂದರು.
- Verse 14: ಏಕೆಂದರೆ ಅಲ್ಲಿ ಗಂಡಸರೇ ಸುಮಾರು ಐದು ಸಾವಿರಮಂದಿ ಇದ್ದರು. ಆಗ ಯೇಸು ಶಿಷ್ಯರಿಗೆ, “ಇವರನ್ನು ಐವತ್ತು ಐವತ್ತರಂತೆ ಪಂಕ್ತಿಯಾಗಿ ಕೂರಿಸಿರಿ,” ಎಂದು ಹೇಳಲು,
- Verse 15: ಅವರು ಹಾಗೆಯೇ ಎಲ್ಲರನ್ನು ಕುಳ್ಳಿರಿಸಿದರು.
- Verse 16: ಅನಂತರ ಯೇಸು ಆ ಐದು ರೊಟ್ಟಿಗಳನ್ನೂ ಎರಡು ಮೀನುಗಳನ್ನೂ ತೆಗೆದುಕೊಂಡು ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೇವರಿಗೆ ಸ್ತೋತ್ರಸಲ್ಲಿಸಿದರು. ತರುವಾಯ ಅವುಗಳನ್ನು ಮುರಿದು ಜನಸಮೂಹಕ್ಕೆ ಬಡಿಸುವಂತೆ ಶಿಷ್ಯರಿಗೆ ಕೊಟ್ಟರು.
- Verse 17: ಎಲ್ಲರೂ ಹೊಟ್ಟೆ ತುಂಬ ತಿಂದು ಸಂತೃಪ್ತರಾದರು. ಇನ್ನು ಉಳಿದಿದ್ದ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಹನ್ನೆರಡು ಬುಟ್ಟಿ ತುಂಬ ಆದುವು.
- Verse 18: ಒಮ್ಮೆ ಯೇಸುಸ್ವಾಮಿ ಏಕಾಂಗಿಯಾಗಿ ಪ್ರಾರ್ಥನೆ ಮಾಡುತ್ತಿದ್ದಾಗ ಶಿಷ್ಯರು ಸಮೀಪದಲ್ಲೇ ಇದ್ದರು. “ಜನಸಾಮಾನ್ಯರು ನನ್ನನ್ನು ಯಾರೆನ್ನುತ್ತಾರೆ?” ಎಂದು ಯೇಸು ಅವರನ್ನು ಪ್ರಶ್ನಿಸಿದರು.
- Verse 19: ಅದಕ್ಕೆ ಅವರು, “ಹಲವರು ತಮ್ಮನ್ನು ‘ಸ್ನಾನಿಕ ಯೊವಾನ್ನ’ ಎನ್ನುತ್ತಾರೆ; ಕೆಲವರು ‘ಎಲೀಯನು’ ಎನ್ನುತ್ತಾರೆ; ಮತ್ತೆ ಕೆಲವರು ‘ಪ್ರಾಚೀನ ಪ್ರವಾದಿಗಳಲ್ಲಿ ಒಬ್ಬನು ಮರಳಿ ಜೀವಂತನಾಗಿದ್ದಾನೆ’ ಎನ್ನುತ್ತಾರೆ,” ಎಂದು ಉತ್ತರವಿತ್ತರು.
- Verse 20: ಆಗ ಯೇಸು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಪುನಃ ಪ್ರಶ್ನಿಸಿದರು. ಅದಕ್ಕೆ ಪೇತ್ರನು, “ದೇವರಿಂದ ಅಭಿಷಿಕ್ತರಾದ ಲೋಕೋದ್ಧಾರಕ ತಾವೇ" ಎಂದು ಉತ್ತರ ಕೊಟ್ಟನು.
- Verse 21: ಈ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಯೇಸು ಶಿಷ್ಯರನ್ನು ಆಜ್ಞಾಪೂರ್ವಕವಾಗಿ ಎಚ್ಚರಿಸಿದರು.
- Verse 22: ಇದಲ್ಲದೆ, “ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾಪ್ರಮುಖರಿಂದಲೂ ಮುಖ್ಯಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಆತನು ತಿರಸ್ಕೃತನಾಗಿ ಕೊಲ್ಲಲ್ಪಡುವನು. ಆದರೆ ಮೂರನೇ ದಿನ ಆತನು ಪುನರುತ್ಥಾನ ಹೊಂದುವನು," ಎಂದು ಅವರಿಗೆ ತಿಳಿಸಿದರು.
- Verse 23: ಯೇಸುಸ್ವಾಮಿ ಎಲ್ಲರನ್ನು ನೋಡಿ ಹೇಳಿದ್ದೇನೆಂದರೆ: “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ, ತನ್ನ ಶಿಲುಬೆಯನ್ನು ಅನುದಿನವೂ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.
- Verse 24: ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ನಿತ್ಯಕ್ಕೂ ಉಳಿಸಿಕೊಳ್ಳುವನು.
- Verse 25: ಒಬ್ಬನು ಪ್ರಪಂಚವನ್ನೆಲ್ಲಾ ಗೆದ್ದುಕೊಂಡು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅಥವಾ ತೆತ್ತರೆ ಅವನಿಗೆ ಅದರಿಂದ ಬರುವ ಲಾಭವಾದರೂ ಏನು?
- Verse 26: ಯಾರು ನನ್ನನ್ನೂ ನನ್ನ ಮಾತುಗಳನ್ನೂ ಕುರಿತು ನಾಚಿಕೆಪಡುತ್ತಾರೋ, ಅಂಥವರನ್ನು ಕುರಿತು ನರಪುತ್ರನು ಸಹ, ತನ್ನ ಪಿತನ ಹಾಗೂ ದೇವದೂತರ ಪ್ರಭಾವದೊಡನೆ ಬರುವಾಗ, ನಾಚಿಕೆಪಡುವನು.
- Verse 27: “ಇಲ್ಲಿರುವವರಲ್ಲಿ ಕೆಲವರು, ದೇವರ ಸಾಮ್ರಾಜ್ಯವನ್ನು ನೋಡದೆ ಸಾವನ್ನು ಸವಿಯುವುದಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ,” ಎಂದರು.
- Verse 28: ಇದನ್ನೆಲ್ಲ ಹೇಳಿ ಸುಮಾರು ಎಂಟು ದಿನಗಳಾದ ಬಳಿಕ ಪೇತ್ರ, ಯೊವಾನ್ನ ಮತ್ತು ಯಕೋಬ ಇವರನ್ನು ತಮ್ಮೊಡನೆ ಕರೆದುಕೊಂಡು ಯೇಸುಸ್ವಾಮಿ ಪ್ರಾರ್ಥನೆಮಾಡಲು ಬೆಟ್ಟವನ್ನು ಹತ್ತಿದರು.
- Verse 29: ಪ್ರಾರ್ಥನೆಮಾಡುವ ಸಮಯದಲ್ಲಿ ಯೇಸುವಿನ ಮುಖಚರ್ಯೆಯು ಮಾರ್ಪಟ್ಟಿತು. ಅವರ ಉಡುಪು ಬೆಳ್ಳಗೆ ಪ್ರಜ್ವಲಿಸಿತು.
- Verse 30: ಇದ್ದಕ್ಕಿದ್ದ ಹಾಗೆ ಮೋಶೆ ಮತ್ತು ಎಲೀಯ ಎಂಬ ಇಬ್ಬರು ಪ್ರವಾದಿಗಳು ಅವರೊಡನೆ ಮಾತನಾಡುತ್ತಿದ್ದರು.
- Verse 31: ದಿವ್ಯ ವೈಭವದಿಂದ ಕಂಗೊಳಿಸುತ್ತಿದ್ದ ಇವರಿಬ್ಬರು ಯೇಸು ಜೆರುಸಲೇಮಿನಲ್ಲಿ ಪ್ರಾಣತ್ಯಾಗಮಾಡಿ ದೈವೇಚ್ಛೆಯನ್ನು ನೆರವೇರಿಸಲಿದ್ದ ವಿಷಯವಾಗಿ ಸಂಭಾಷಿಸುತ್ತಿದ್ದರು.
- Verse 32: ಗಾಢ ನಿದ್ರೆಯಲ್ಲಿದ್ದ ಪೇತ್ರ ಮತ್ತು ಸಂಗಡಿಗರು ಎಚ್ಚೆತ್ತಾಗ ಯೇಸುವಿನ ಮಹಿಮೆಯನ್ನೂ ಅವರೊಡನೆ ನಿಂತಿದ್ದ ಆ ಇಬ್ಬರನ್ನೂ ಕಂಡರು.
- Verse 33: ಅವರಿಬ್ಬರೂ ಯೇಸುವನ್ನು ಬಿಟ್ಟುಹೋಗುತ್ತಿರುವಾಗ, ಪೇತ್ರನು ಯೇಸುವಿಗೆ, “ಗುರುದೇವಾ, ನಾವು ಇಲ್ಲೇ ಇರುವುದು ಒಳ್ಳೆಯದು; ಅಪ್ಪಣೆಯಾಗಲಿ, ಮೂರು ಗುಡಾರಗಳನ್ನು ಕಟ್ಟುವೆವು - ತಮಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದು,” ಎಂದನು. ತಾನು ಏನು ಹೇಳುತ್ತಿರುವೆನೆಂದೇ ಪೇತ್ರನು ಗ್ರಹಿಸಲಿಲ್ಲ.
- Verse 34: ಆತನು ಇದನ್ನು ಹೇಳುತ್ತಿದ್ದ ಹಾಗೆ ಮೇಘವೊಂದು ಬಂದು ಅವರನ್ನಾವರಿಸಿತು. ಆ ಮೇಘದಲ್ಲಿ ಅವರು ಅದೃಶ್ಯರಾದಾಗ ಶಿಷ್ಯರು ದಿಗಿಲುಗೊಂಡರು.
- Verse 35: ಅದರೊಳಗಿಂದ, “ಈತನು ನನ್ನ ಪುತ್ರನು; ನಾನು ಆರಿಸಿಕೊಂಡವನು. ಈತನ ಮಾತಿಗೆ ಕಿವಿಗೊಡಿರಿ,” ಎಂಬ ವಾಣಿ ಕೇಳಿಸಿತು.
- Verse 36: ಆ ವಾಣಿ ಆದಮೇಲೆ ಕಾಣಿಸಿಕೊಂಡವರು ಯೇಸು ಮಾತ್ರ. ಶಿಷ್ಯರು ತಾವು ನೋಡಿದ್ದನ್ನು ಕುರಿತು ಆ ದಿನಗಳಲ್ಲಿ ಏನನ್ನೂ ಹೇಳದೆ, ಯಾರಿಗೂ ತಿಳಿಸದೆ, ತತ್ಕಾಲ ಮೌನದಿಂದ ಇದ್ದರು.
- Verse 37: ಮಾರನೇ ದಿನ ಯೇಸುಸ್ವಾಮಿ ಮತ್ತು ಮೂವರು ಶಿಷ್ಯರು ಬೆಟ್ಟದಿಂದ ಇಳಿದುಬಂದಾಗ, ದೊಡ್ಡ ಗುಂಪೊಂದು ಅವರನ್ನು ಎದುರುಗೊಂಡಿತು.
- Verse 38: ಆ ಗುಂಪಿನಲ್ಲಿದ್ದ ಒಬ್ಬನು, “ಬೋಧಕರೇ, ನನ್ನ ಮಗನನ್ನು ಕಟಾಕ್ಷಿಸಿರಿ, ನನಗೆ ಇವನೊಬ್ಬನೇ ಮಗ.
- Verse 39: ಇವನನ್ನು ದೆವ್ವ ಹಿಡಿಯುತ್ತದೆ. ಆಗ ಇದ್ದಕ್ಕಿದ್ದ ಹಾಗೆ ಕಿರುಚಿಕೊಳ್ಳುತ್ತಾನೆ; ವಿಲವಿಲನೆ ಒದ್ದಾಡುತ್ತಾನೆ; ಬಾಯಲ್ಲಿ ನೊರೆ ಕಿತ್ತುಕೊಳ್ಳುತ್ತದೆ; ಆ ದೆವ್ವವು ಇವನನ್ನು ನಿಶ್ಯಕ್ತನನ್ನಾಗಿ ಮಾಡಿಬಿಡುವ ತನಕ ಬಿಟ್ಟುಹೋಗುವುದೇ ಇಲ್ಲ.
- Verse 40: ಅದನ್ನು ಬಿಡಿಸಬೇಕೆಂದು ತಮ್ಮ ಶಿಷ್ಯರನ್ನು ಬೇಡಿಕೊಂಡೆ; ಆದರೆ ಅವರಿಂದ ಸಾಧ್ಯವಾಗಲಿಲ್ಲ,” ಎಂದು ಕೂಗಿ ಕೇಳಿಕೊಂಡನು.
- Verse 41: ಇದನ್ನಾಲಿಸಿದ ಯೇಸು, “ಅಯ್ಯೋ, ವಿಶ್ವಾಸವಿಲ್ಲದ ದುಷ್ಟ ಪೀಳಿಗೆಯೇ, ಇನ್ನೆಷ್ಟುಕಾಲ ನಿಮ್ಮೊಂದಿಗಿದ್ದು ನಿಮ್ಮನ್ನು ಸಹಿಸಿಕೊಳ್ಳಲಿ?” ಎಂದು ಹೇಳಿ, “ನಿನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ,” ಎಂದು ಆಜ್ಞಾಪಿಸಿದರು.
- Verse 42: ಆ ಹುಡುಗನು ಬರುತ್ತಿರುವಾಗಲೇ ದೆವ್ವವು ಅವನನ್ನು ನೆಲಕ್ಕೆ ಅಪ್ಪಳಿಸಿ ವಿಲವಿಲನೆ ಒದ್ದಾಡಿಸಿತು. ಆಗ ಯೇಸು ದೆವ್ವವನ್ನು ಗದರಿಸಿ, ಹುಡುಗನನ್ನು ಸ್ವಸ್ಥಮಾಡಿ, ಅವನನ್ನು ಅವನ ತಂದೆಗೆ ಒಪ್ಪಿಸಿದರು.
- Verse 43: ದೇವರ ಮಹತ್ವವನ್ನು ಕಂಡ ಎಲ್ಲರೂ ಆಶ್ಚರ್ಯಚಕಿತರಾದರು. ಯೇಸುಸ್ವಾಮಿ ಮಾಡಿದ ಸಕಲ ಮಹತ್ಕಾರ್ಯಗಳನ್ನು ಕುರಿತು ಜನರೆಲ್ಲರೂ ಸೋಜಿಗಪಡುತ್ತಿರುವಲ್ಲಿ, ಶಿಷ್ಯರಿಗೆ,
- Verse 44: “ಈ ನನ್ನ ಮಾತು ನಿಮ್ಮ ಕಿವಿಗೆ ಇಳಿಯಲಿ. ಅದೇನೆಂದರೆ: “ನರಪುತ್ರನು ಜನರ ವಶಕ್ಕೆ ಒಪ್ಪಿಸಲ್ಪಡಲಿದ್ದಾನೆ,” ಎಂದರು.
- Verse 45: ಯೇಸು ಹೇಳಿದ ಈ ಮಾತನ್ನು ಶಿಷ್ಯರು ಗ್ರಹಿಸಿಕೊಳ್ಳಲಿಲ್ಲ; ಒಗಟಿನ ಹಾಗೆ ಇದ್ದುದರಿಂದ ಅರ್ಥಮಾಡಿಕೊಳ್ಳಲಿಲ್ಲ. ಅದನ್ನು ಕುರಿತು ಯೇಸುವನ್ನು ಕೇಳುವುದಕ್ಕೂ ಅವರು ಅಂಜಿದರು.
- Verse 46: ಒಮ್ಮೆ, ತಮ್ಮಲ್ಲಿ ಅತಿ ಶ್ರೇಷ್ಠನು ಯಾರೆಂಬ ವಾದ ಶಿಷ್ಯರಲ್ಲಿ ಎದ್ದಿತು.
- Verse 47: ಅವರ ಮನಸ್ಸಿನ ಆಲೋಚನೆಗಳನ್ನು ಅರಿತ ಯೇಸು, ಒಂದು ಚಿಕ್ಕ ಮಗುವನ್ನು ತಂದು ತಮ್ಮ ಪಕ್ಕದಲ್ಲಿ ನಿಲ್ಲಿಸಿಕೊಂಡು,
- Verse 48: “ಯಾವನು ನನ್ನ ಹೆಸರಿನಲ್ಲಿ ಈ ಮಗುವನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನೇ ಸ್ವೀಕರಿಸುತ್ತಾನೆ; ಯಾವನು ನನ್ನನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸುತ್ತಾನೆ. ನಿಮ್ಮೆಲ್ಲರಲ್ಲಿ ಅತ್ಯಲ್ಪನಾದವನೇ ಅತ್ಯುತ್ತಮನು,” ಎಂದರು.
- Verse 49: ಆಗ ಯೊವಾನ್ನನು ಯೇಸುವಿಗೆ, “ಗುರುವೇ, ಯಾವನೋ ಒಬ್ಬನು ತಮ್ಮ ಹೆಸರಿನಲ್ಲಿ ದೆವ್ವ ಬಿಡಿಸುವುದನ್ನು ಕಂಡೆವು. ಅವನು ನಮ್ಮವನಲ್ಲದ ಕಾರಣ ಅವನನ್ನು ತಡೆದೆವು,” ಎಂದನು.
- Verse 50: ಅದಕ್ಕೆ ಯೇಸು, “ಅವನನ್ನು ತಡೆಯಬೇಡಿ, ನಿಮ್ಮ ವಿರೋಧಿ ಅಲ್ಲದವನು ನಿಮ್ಮ ಪರವಾದಿ,” ಎಂದು ಉತ್ತರಕೊಟ್ಟರು.
- Verse 51: ತಾವು ಸ್ವರ್ಗಾರೋಹಣವಾಗುವ ದಿನಗಳು ಸಮೀಪಿಸಲು ಯೇಸುಸ್ವಾಮಿ ಜೆರುಸಲೇಮಿಗೆ ಅಭಿಮುಖವಾಗಿ ಹೊರಡಲು ನಿರ್ಧರಿಸಿದರು.
- Verse 52: ಅಲ್ಲದೆ ತಮಗೆ ಮುಂದಾಗಿ ದೂತರನ್ನು ಕಳುಹಿಸಿದರು. ಇವರು ಹೊರಟು ಯೇಸುವಿಗೆ ಬೇಕಾದುದನ್ನು ಸಿದ್ಧಮಾಡಲು ಸಮಾರಿಯದ ಒಂದು ಹಳ್ಳಿಗೆ ಬಂದರು.
- Verse 53: ಯೇಸು ಜೆರುಸಲೇಮಿಗೆ ಹೋಗುತ್ತಿದ್ದ ಕಾರಣ ಅವರನ್ನು ಅಲ್ಲಿಯ ಜನರು ಬರಗೊಳಿಸಲಿಲ್ಲ.
- Verse 54: ಇದನ್ನು ಕಂಡು ಶಿಷ್ಯರಾದ ಯಕೋಬ ಮತ್ತು ಯೊವಾನ್ನ, “ಪ್ರಭೂ, ಆಕಾಶದಿಂದ ಅಗ್ನಿಮಳೆ ಸುರಿದು ಇವರನ್ನು ನಾಶಮಾಡಲಿ ಎಂದು ಆಜ್ಞೆಮಾಡಬಹುದಲ್ಲವೇ?” ಎಂದರು.
- Verse 55: ಯೇಸು ಅವರ ಕಡೆ ತಿರುಗಿ, “ನೀವು ಎಂಥ ಸ್ವಭಾವಿಗಳೆಂದು ನಿಮಗೇ ತಿಳಿಯದು. ನರಪುತ್ರನು ಬಂದಿರುವುದು ಮಾನವ ಜೀವಿಗಳ ವಿನಾಶಕ್ಕೆ ಅಲ್ಲ, ಉದ್ಧಾರಕ್ಕೆ,” ಎಂದು ಅವರನ್ನು ಖಂಡಿಸಿದರು.
- Verse 56: ಅನಂತರ ಯೇಸು ಮತ್ತು ಶಿಷ್ಯರು ಬೇರೆ ಹಳ್ಳಿಗೆ ಹೋದರು.
- Verse 57: ಅವರೆಲ್ಲರೂ ದಾರಿಯಲ್ಲಿ ಹೋಗುತ್ತಿದ್ದಾಗ ಒಬ್ಬನು ಯೇಸುವಿಗೆ, “ನೀವು ಎಲ್ಲಿಗೆ ಹೋದರೂ ನಿಮ್ಮನ್ನು ಹಿಂಬಾಲಿಸುತ್ತೇನೆ,” ಎಂದನು.
- Verse 58: ಯೇಸು ಅವನಿಗೆ, “ನರಿಗಳಿಗೆ ಗುಹೆಗಳುಂಟು; ಆಕಾಶದ ಪಕ್ಷಿಗಳಿಗೆ ಗೂಡುಗಳುಂಟು; ಆದರೆ ನರಪುತ್ರನಿಗೆ ತಲೆಯಿಡುವುದಕ್ಕೂ ಸ್ಥಳವಿಲ್ಲ,” ಎಂದರು.
- Verse 59: ಇನ್ನೊಬ್ಬನಿಗೆ ಯೇಸು, “ನನ್ನನ್ನು ಹಿಂಬಾಲಿಸು,” ಎಂದು ಹೇಳಿದಾಗ ಅವನು, “ಸ್ವಾಮೀ, ಮೊದಲು ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮುಗಿಸುವ ತನಕ ಸಮಯಕೊಡಿ,” ಎಂದನು.
- Verse 60: ಅವನಿಗೆ ಯೇಸು, “ಸತ್ತವರೇ ತಮ್ಮ ಸತ್ತವರನ್ನು ಸಮಾಧಿಮಾಡಿಕೊಳ್ಳಲಿ; ನೀನಾದರೋ, ಹೋಗು, ದೇವರ ಸಾಮ್ರಾಜ್ಯವನ್ನು ಪ್ರಚಾರಮಾಡು,” ಎಂದು ಹೇಳಿದರು.
- Verse 61: ಮತ್ತೊಬ್ಬನು, “ನಿಮ್ಮನ್ನು ಹಿಂಬಾಲಿಸುತ್ತೇನೆ ಪ್ರಭೂ, ಆದರೆ ಮೊದಲು ಮನೆಯವರನ್ನು ಬೀಳ್ಕೊಟ್ಟು ಬರಲು ಅಪ್ಪಣೆ ಆಗಬೇಕು,” ಎಂದನು.
- Verse 62: ಯೇಸು ಅವನನ್ನು ನೋಡಿ, “ನೇಗಿಲಿಗೆ ಕೈಹಾಕಿ ಹಿಂದಕ್ಕೆ ನೋಡುವವನು ದೇವರ ಸಾಮ್ರಾಜ್ಯಕ್ಕೆ ತಕ್ಕವನಲ್ಲ,” ಎಂದರು.