ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಲೂಕ
20ನೇ ಅಧ್ಯಾಯ
- Verse 1: ಒಂದು ದಿನ ಯೇಸುಸ್ವಾಮಿ ಮಹಾದೇವಾಲಯದಲ್ಲಿ ಜನರಿಗೆ ಬೋಧನೆಮಾಡುತ್ತಾ ಶುಭಸಂದೇಶವನ್ನು ಪ್ರಕಟಿಸುತ್ತಾ ಇದ್ದರು. ಆಗ ಮುಖ್ಯಯಾಜಕರು, ಧರ್ಮಶಾಸ್ತ್ರಿಗಳು ಮತ್ತು ಸಭಾಪ್ರಮುಖರು ಅಲ್ಲಿಗೆ ಬಂದು,
- Verse 2: “ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಿರುವೆ? ನಿನಗೆ ಈ ಅಧಿಕಾರವನ್ನು ಕೊಟ್ಟವರು ಯಾರು? ನಮಗೆ ತಿಳಿಸು,” ಎಂದು ಕೇಳಿದರು.
- Verse 3: ಅದಕ್ಕೆ ಯೇಸು ಪ್ರತ್ಯುತ್ತರವಾಗಿ, “ನಾನೂ ನಿಮಗೆ ಒಂದು ಪ್ರಶ್ನೆ ಹಾಕುತ್ತೇನೆ;
- Verse 4: ಸ್ನಾನದೀಕ್ಷೆ ಕೊಡುವ ಅಧಿಕಾರ ಯೊವಾನ್ನನಿಗೆ ಎಲ್ಲಿಂದ ಬಂದಿತು? ದೇವರಿಂದಲೋ, ಮನುಷ್ಯರಿಂದಲೋ? ನನಗೆ ತಿಳಿಸಿರಿ,” ಎಂದರು.
- Verse 5: ಇದನ್ನು ಕೇಳಿದ ಅವರೆಲ್ಲರೂ ತಮ್ಮತಮ್ಮೊಳಗೆ ಸಮಾಲೋಚಿಸುತ್ತಾ ಸಂವಾದಿಸುತ್ತಾ, “ದೇವರಿಂದ ಬಂದಿತು, ಎಂದು ನಾವು ಹೇಳಿದರೆ, ‘ನೀವೇಕೆ ಆತನನ್ನು ನಂಬಲಿಲ್ಲ?’ ಎಂದು ಕೇಳುವನು;
- Verse 6: ಮನುಷ್ಯರಿಂದ ಬಂದಿತೆಂದು ಹೇಳಿದೆ ವಾದರೆ ಯೊವಾನ್ನನು ಪ್ರವಾದಿಯೆಂದು ಜನರೆಲ್ಲರಿಗೆ ಮನದಟ್ಟಾಗಿರುವುದರಿಂದ ಅವರು ನಮ್ಮನ್ನು ಕಲ್ಲೆಸೆದು ಕೊಲ್ಲುವರು,” ಎಂದುಕೊಂಡರು.
- Verse 7: ಅನಂತರ ಬಂದು, “ಅದು ಎಲ್ಲಿಂದ ಬಂದಿತೋ ನಮಗೆ ತಿಳಿಯದು,” ಎಂದು ಉತ್ತರಕೊಟ್ಟರು.
- Verse 8: ಅದಕ್ಕೆ ಯೇಸು, “ಹಾಗಾದರೆ ನಾನು ಕೂಡ ಯಾವ ಅಧಿಕಾರದಿಂದ ಇದೆಲ್ಲವನ್ನು ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು.
- Verse 9: ಬಳಿಕ ಯೇಸುಸ್ವಾಮಿ ಜನರಿಗೆ ಈ ಸಾಮತಿಯನ್ನು ಹೇಳತೊಡಗಿದರು: “ಒಬ್ಬಾತ ಒಂದು ದ್ರಾಕ್ಷಿತೋಟ ಮಾಡಿಸಿದ. ಕಾರಣಾಂತರ ಅದನ್ನು ಗೇಣಿದಾರರಿಗೆ ವಹಿಸಿ, ದೀರ್ಘಕಾಲ ಹೊರನಾಡಿಗೆ ಪ್ರವಾಸ ಹೋದ.
- Verse 10: ಫಲಕಾಲ ಬಂದಾಗ ತನಗೆ ಬರಬೇಕಾದ ಪಾಲನ್ನು ತರುವುದಕ್ಕಾಗಿ ಒಬ್ಬ ಸೇವಕನನ್ನು ಕಳುಹಿಸಿದ. ಗೇಣಿದಾರರು ಅವನನ್ನು ಹೊಡೆದು ಬರಿಗೈಯಲ್ಲಿ ಹಿಂದಕ್ಕೆ ಅಟ್ಟಿದರು.
- Verse 11: ತೋಟದ ಯಜಮಾನ ಇನ್ನೊಬ್ಬ ಸೇವಕನನ್ನು ಕಳುಹಿಸಿದ. ಅವನನ್ನೂ ಹೊಡೆದು, ಬಡಿದು ಅವಮಾನ ಮಾಡಿ ಬರಿಗೈಯಲ್ಲೇ ಕಳುಹಿಸಿಬಿಟ್ಟರು.
- Verse 12: ಯಜಮಾನ ಮೂರನೆಯವನನ್ನು ಕಳುಹಿಸಿದ. ಇವನನ್ನೂ ಚೆನ್ನಾಗಿ ಥಳಿಸಿ, ಗಾಯಗೊಳಿಸಿ, ಹೊರಕ್ಕೆ ದಬ್ಬಿದರು.
- Verse 13: ಕಡೆಗೆ ತೋಟದ ಯಜಮಾನನು, ‘ಏನುಮಾಡಲಿ? ನನ್ನ ಮುದ್ದುಮಗನನ್ನೇ ಕಳುಹಿಸುತ್ತೇನೆ; ಬಹುಶಃ ಅವನಿಗಾದರೂ ಮರ್ಯಾದೆಕೊಟ್ಟಾರು,’ ಎಂದುಕೊಂಡ.
- Verse 14: ಆದರೆ ಗೇಣಿದಾರರು ಯಜಮಾನನ ಮಗನನ್ನು ಕಂಡದ್ದೇ ತಡ, ‘ತೋಟಕ್ಕೆ ಇವನೇ ಉತ್ತರಾಧಿಕಾರಿ. ಇವನನ್ನು ಮುಗಿಸಿಬಿಡೋಣ; ಆಸ್ತಿ ನಮ್ಮದಾಗುವುದು,’ ಎಂದು ಒಳಸಂಚು ಮಾಡಿಕೊಂಡರು.
- Verse 15: ಅಂತೆಯೇ ಅವನನ್ನು ತೋಟದಿಂದ ಹೊರಕ್ಕೆ ದಬ್ಬಿಕೊಂಡು ಹೋಗಿ ಕೊಂದುಹಾಕಿದರು.
- Verse 16: “ಹೀಗಿರುವಲ್ಲಿ, ತೋಟದ ಯಜಮಾನ ಇವರಿಗೆ ಏನು ಮಾಡುತ್ತಾನೆ?” ಎಂದು ಕೇಳಿದ ಯೇಸು, ತಾವೇ ಉತ್ತರಿಸುತ್ತಾ, “ಅವನು ಬಂದು ಗೇಣಿದಾರರನ್ನು ಸಂಹರಿಸಿ ತೋಟವನ್ನು ಬೇರೆ ಗೇಣಿದಾರರಿಗೆ ಒಪ್ಪಿಸುತ್ತಾನೆ,” ಎಂದು ಹೇಳಿದರು.
- Verse 17: ಇದನ್ನು ಜನರು ಕೇಳಿದ್ದೇ, “ಅಯ್ಯೋ, ಹಾಗೆ ಎಂದಿಗೂ ಸಂಭವಿಸದಿರಲಿ!” ಎಂದರು. ಯೇಸು ಅವರನ್ನು ದಿಟ್ಟಿಸಿ ನೋಡಿ, “ಹಾಗಾದರೆ; ‘ಮನೆ ಕಟ್ಟುವವರು ಬೇಡವೆಂದು ಬಿಸಾಡಿದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು.’ ಎಂದು ಪವಿತ್ರಗ್ರಂಥದಲ್ಲಿ ಹೇಳಿರುವುದರ ಅರ್ಥ ಆದರೂ ಏನು?
- Verse 18: ಈ ಕಲ್ಲಿನ ಮೇಲೆ ಬೀಳುವ ಪ್ರತಿಯೊಬ್ಬನೂ ಛಿದ್ರಛಿದ್ರವಾಗುವನು. ಯಾವನ ಮೇಲೆ ಈ ಕಲ್ಲು ಬೀಳುವುದೋ ಅವನು ಜಜ್ಜಿಹೋಗುವನು,” ಎಂದರು.
- Verse 19: ತಮ್ಮನ್ನೇ ಕುರಿತು ಈ ಸಾಮತಿಯನ್ನು ಹೇಳಿದ್ದಾರೆಂದು ಅರಿತುಕೊಂಡ ಧರ್ಮಶಾಸ್ತ್ರಿಗಳು ಮತ್ತು ಮುಖ್ಯಯಾಜಕರು ಅಲ್ಲೇ ಯೇಸುವನ್ನು ಬಂಧಿಸಲು ಯತ್ನಿಸಿದರು. ಆದರೆ ಜನಸಮೂಹಕ್ಕೆ ಭಯಪಟ್ಟರು.
- Verse 20: ಆದುದರಿಂದ ಸೂಕ್ತ ಸಂದರ್ಭ ಹುಡುಕತೊಡಗಿದರು. ಯೇಸುವನ್ನು ರಾಜ್ಯಪಾಲನ ವಶಕ್ಕೂ ನ್ಯಾಯಾಧಿಕಾರಕ್ಕೂ ಒಪ್ಪಿಸುವ ಉದ್ದೇಶದಿಂದ ಗೂಢಚಾರರನ್ನು ಕಳುಹಿಸಿದರು. ಇವರು ನಿಷ್ಕಪಟಿಗಳಂತೆ ನಟಿಸುತ್ತಾ ಯೇಸುವಿನ ಮಾತಿನಲ್ಲಿ ತಪ್ಪು ಕಂಡುಹಿಡಿಯಲು ಪ್ರಯತ್ನಿಸಿದರು.
- Verse 21: “ಬೋಧಕರೇ, ನೀವು ಹೇಳುವುದು ಹಾಗೂ ಬೋಧಿಸುವುದು ನ್ಯಾಯಬಧ್ಧವಾಗಿಯೇ ಇದೆ. ಮುಖದಾಕ್ಷಿಣ್ಯವಿಲ್ಲದೆ ಸತ್ಯಕ್ಕನುಸಾರವಾಗಿ ಧರ್ಮಮಾರ್ಗವನ್ನು ಬೋಧಿಸುತ್ತೀರಿ. ಇದನ್ನು ನಾವು ಚೆನ್ನಾಗಿ ಬಲ್ಲೆವು.
- Verse 22: ಹೀಗಿರುವಲ್ಲಿ, ನಾವು ರೋಮ್ ಚಕ್ರಾಧಿಪತಿಗೆ ತೆರಿಗೆ ಕೊಡುವುದು ಧರ್ಮಸಮ್ಮತವೋ ಅಲ್ಲವೋ ತಿಳಿಸಿ,” ಎಂದು ಕೇಳಿದರು.
- Verse 23: ಅವರ ಕುಯುಕ್ತಿಯನ್ನು ಅರಿತುಕೊಂಡ ಯೇಸು,
- Verse 24: “ಒಂದು ನಾಣ್ಯವನ್ನು ತೋರಿಸಿರಿ. ಇದರಲ್ಲಿರುವುದು ಯಾರ ಮುದ್ರೆ? ಯಾರ ಲಿಪಿ?” ಎಂದು ಕೇಳಿದರು. ಅದಕ್ಕೆ ಅವರು, “ರೋಮ್ ಚಕ್ರವರ್ತಿಯವು,” ಎಂದರು.
- Verse 25: ಆಗ ಯೇಸು, “ಹಾಗಾದರೆ ಚಕ್ರವರ್ತಿಗೆ ಸಲ್ಲತಕ್ಕದ್ದನ್ನು ಚಕ್ರವರ್ತಿಗೂ, ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ,” ಎಂದರು.
- Verse 26: ಯೇಸು ಕೊಟ್ಟ ಈ ಉತ್ತರಕ್ಕೆ ಬೆರಗಾಗಿ ಆ ಗೂಢಚಾರರು ಬಾಯಿ ಮುಚ್ಚಿಕೊಂಡರು. ಜನರ ಮುಂದೆ, ಯೇಸುವಿನ ಮಾತುಗಳಲ್ಲಿ ತಪ್ಪು ಕಂಡುಹಿಡಿಯಲು ಅವರಿಂದ ಸಾಧ್ಯವಾಗಲಿಲ್ಲ.
- Verse 27: ಅನಂತರ, ಸತ್ತಮೇಲೆ ಪುನರುತ್ಥಾನ ಇಲ್ಲ, ಎಂದು ವಾದಿಸುತ್ತಿದ್ದ ಸದ್ದುಕಾಯರಲ್ಲಿ ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು ಈ ಪ್ರಶ್ನೆ ಹಾಕಿದರು:
- Verse 28: “ಬೋಧಕರೇ, ‘ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು,’ ಎಂದು ಮೋಶೆ ನಮಗಾಗಿ ಬರೆದಿಟ್ಟಿದ್ದಾನಲ್ಲವೆ?
- Verse 29: ಒಮ್ಮೆ ಏಳುಮಂದಿ ಅಣ್ಣತಮ್ಮಂದಿರಿದ್ದರು. ಅವರಲ್ಲಿ ಮೊದಲನೆಯವನಿಗೆ ಮದುವೆಯಾಯಿತು; ಆದರೆ ಅವನು ಮಕ್ಕಳಿಲ್ಲದೆ ಮೃತನಾದ.
- Verse 30: ಅವನ ಹೆಂಡತಿಯನ್ನು ಎರಡನೆಯವನು,
- Verse 31: ಅನಂತರ ಮೂರನೆಯವನು, ತದನಂತರ ಮಿಕ್ಕವರು, ಹೀಗೆ ಏಳುಮಂದಿಯೂ ಒಬ್ಬರಾದ ಮೇಲೆ ಒಬ್ಬರು ಮದುವೆಯಾಗಿ ಸಂತಾನ ಇಲ್ಲದೆಯೇ ನಿಧನರಾದರು.
- Verse 32: ಕಟ್ಟಕಡೆಗೆ ಆ ಮಹಿಳೆಯೂ ಮರಣಹೊಂದಿದಳು.
- Verse 33: ಹೀಗಿರುವಲ್ಲಿ ಪುನರುತ್ಥಾನದ ದಿನ ಸತ್ತವರೆಲ್ಲರೂಜೀವದಿಂದ ಎದ್ದುಬರುವಾಗ, ಆಕೆ ಯಾರ ಪತ್ನಿಯಾಗುವಳು? ಏಳುಮಂದಿ ಸಹೋದರರೂ ಆಕೆಯನ್ನು ವಿವಾಹ ಆಗಿದ್ದರಲ್ಲವೆ?” ಎಂದರು.
- Verse 34: ಅದಕ್ಕೆ ಯೇಸು, “ಈ ಲೋಕದ ಜೀವನದಲ್ಲಿ ಜನರು ಮದುವೆ ಮಾಡಿಕೊಳ್ಳುತ್ತಾರೆ, ಮದುವೆ ಮಾಡಿಕೊಡುತ್ತಾರೆ.
- Verse 35: ಆದರೆ ಸತ್ತವರು ಪುನರುತ್ಥಾನ ಹೊಂದಿ ಮರುಲೋಕ ಜೀವನಕ್ಕೆ ಯೋಗ್ಯರಾದಾಗ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ.
- Verse 36: ಅವರು ಅಲ್ಲಿ ದೇವದೂತರಿಗೆ ಸಮಾನರಾಗಿರುವರು; ಅವರು ಎಂದಿಗೂ ಸಾಯುವಂತಿಲ್ಲ; ಪುನರುತ್ಥಾನದ ಫಲ ಆಗಿರುವ ಅವರು ದೇವರ ಮಕ್ಕಳಾಗಿರುವರು.
- Verse 37: ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯ ಗ್ರಂಥದಲ್ಲಿ, ಅಂದರೆ ‘ಉರಿಯುವ ಪೊದೆ’ಯ ಪ್ರಸ್ತಾಪವಿರುವ ಭಾಗದಲ್ಲಿ ಸ್ಪಷ್ಟಪಡಿಸಲಾಗಿದೆ. ಅಲ್ಲಿ ಸರ್ವೇಶ್ವರನನ್ನು, ‘ಅಬ್ರಹಾಮನ ದೇವರು, ಇಸಾಕನ ದೇವರು, ಯಕೋಬನ ದೇವರು ಆಗಿದ್ದಾರೆ’ ಎಂದು ಹೇಳಲಾಗಿದೆ.
- Verse 38: ಹೀಗಿರುವಲ್ಲಿ ದೇವರು ಜೀವಂತರ ದೇವರೇ ಹೊರತು ಮೃತರ ದೇವರಲ್ಲ; ಅವರ ದೃಷ್ಟಿಯಲ್ಲಿ ಸರ್ವರೂ ಜೀವಂತರು,” ಎಂದರು.
- Verse 39: ಇದನ್ನು ಕೇಳಿದ ಕೆಲವು ಧರ್ಮಶಾಸ್ತ್ರಿಗಳು, “ಬೋಧಕರೇ, ಚೆನ್ನಾಗಿ ಹೇಳಿದಿರಿ,” ಎಂದರು.
- Verse 40: ಮುಂದೆ ಯಾವ ಪ್ರಶ್ನೆ ಕೇಳುವುದಕ್ಕೂ ಅವರಾರು ಧೈರ್ಯಗೊಳ್ಳಲಿಲ್ಲ.
- Verse 41: ಬಳಿಕ ಯೇಸುಸ್ವಾಮಿ, “ಅಭಿಷಿಕ್ತ ಆದ ಲೋಕೋದ್ಧಾರಕನನ್ನು ‘ದಾವೀದನ ಪುತ್ರ’ ಎಂದು ಕರೆಯುತ್ತಾರಲ್ಲಾ, ಅದು ಹೇಗಾದೀತು? ಕೀರ್ತನಾ ಗ್ರಂಥದಲ್ಲಿ ಸ್ವತಃ ದಾವೀದನೇ ಹೀಗೆ ಹೇಳಿದ್ದಾನೆ:
- Verse 42: “ನಿನ್ನ ಶತ್ರುಗಳನ್ನು ನಾನು ನಿನ್ನ ಪಾದಪೀಠವಾಗಿ ಮಾಡುವ ತನಕ ನನ್ನ ಬಲಗಡೆಯಲ್ಲಿ ಆಸೀನನಾಗಿರು ಎಂದು ‘ನನ್ನ ಪ್ರಭುವಿಗೆ’ ಸರ್ವೇಶ್ವರ ಹೇಳಿದ್ದಾರೆ.”
- Verse 43: “ನಿನ್ನ ಶತ್ರುಗಳನ್ನು ನಾನು ನಿನ್ನ ಪಾದಪೀಠವಾಗಿ ಮಾಡುವ ತನಕ ನನ್ನ ಬಲಗಡೆಯಲ್ಲಿ ಆಸೀನನಾಗಿರು ಎಂದು ‘ನನ್ನ ಪ್ರಭುವಿಗೆ’ ಸರ್ವೇಶ್ವರ ಹೇಳಿದ್ದಾರೆ.”
- Verse 44: ಹೀಗೆ ದಾವೀದನೇ ಆತನನ್ನು, ‘ನನ್ನ ಪ್ರಭು,’ ಎಂದು ಕರೆದಿರುವಲ್ಲಿ ಆತನು ದಾವೀದನ ಪುತ್ರನು ಆಗಿರುವುದು ಹೇಗೆ?” ಎಂದು ಪ್ರಶ್ನಿಸಿದರು.
- Verse 45: ಜನರೆಲ್ಲರು ಕಿವಿಗೊಟ್ಟು ಕೇಳುತ್ತಿದ್ದಂತೆ ಯೇಸುಸ್ವಾಮಿ ತಮ್ಮ ಶಿಷ್ಯರನ್ನು ನೋಡಿ, “ಧರ್ಮಶಾಸ್ತ್ರಿಗಳ ಬಗ್ಗೆ ಎಚ್ಚರಿಕೆಯಿಂದಿರಿ! ಅವರು ನಿಲುವಂಗಿಗಳನ್ನು ಧರಿಸಿಕೊಂಡು ತಿರುಗಾಡುತ್ತಾರೆ; ಪೇಟೆಬೀದಿಗಳಲ್ಲಿ ತಮಗೆ ವಂದನೋಪಚಾರ ಸಲ್ಲಬೇಕೆಂದು ಆಶಿಸುತ್ತಾರೆ; ಪ್ರಾರ್ಥನಾಮಂದಿರಗಳಲ್ಲಿ ಉನ್ನತ ಆಸನಗಳನ್ನೂ ಔತಣಕೂಟಗಳಲ್ಲಿ ಶ್ರೇಷ್ಠ ಸ್ಥಾನಮಾನಗಳನ್ನೂ ಅಪೇಕ್ಷಿಸುತ್ತಾರೆ.
- Verse 46: ಜನರೆಲ್ಲರು ಕಿವಿಗೊಟ್ಟು ಕೇಳುತ್ತಿದ್ದಂತೆ ಯೇಸುಸ್ವಾಮಿ ತಮ್ಮ ಶಿಷ್ಯರನ್ನು ನೋಡಿ, “ಧರ್ಮಶಾಸ್ತ್ರಿಗಳ ಬಗ್ಗೆ ಎಚ್ಚರಿಕೆಯಿಂದಿರಿ! ಅವರು ನಿಲುವಂಗಿಗಳನ್ನು ಧರಿಸಿಕೊಂಡು ತಿರುಗಾಡುತ್ತಾರೆ; ಪೇಟೆಬೀದಿಗಳಲ್ಲಿ ತಮಗೆ ವಂದನೋಪಚಾರ ಸಲ್ಲಬೇಕೆಂದು ಆಶಿಸುತ್ತಾರೆ; ಪ್ರಾರ್ಥನಾಮಂದಿರಗಳಲ್ಲಿ ಉನ್ನತ ಆಸನಗಳನ್ನೂ ಔತಣಕೂಟಗಳಲ್ಲಿ ಶ್ರೇಷ್ಠ ಸ್ಥಾನಮಾನಗಳನ್ನೂ ಅಪೇಕ್ಷಿಸುತ್ತಾರೆ.
- Verse 47: ವಿಧವೆಯರ ಮನೆಮಾರುಗಳನ್ನು ದೋಚಿಕೊಳ್ಳುವ ಈ ಜನ ನಟನೆಗಾಗಿ ಜಪತಪಗಳನ್ನು ದೀರ್ಘವಾಗಿ ಮಾಡುತ್ತಾರೆ. ಇವರನ್ನು ದೇವರು ಬಹಳ ಕಠಿಣವಾದ ದಂಡನೆಗೆ ಗುರಿಪಡಿಸುವರು,” ಎಂದರು.