P. O. C ബൈബിള്
ಹಳೆಯ ಒಡಂಬಡಿಕೆ
ಸಂಖ್ಯಾಕಾಂಡ
35ನೇ ಅಧ್ಯಾಯ
- Verse 1: ಜೋರ್ಡನ್ ನದಿಯ ತೀರದಲ್ಲಿ ಜೆರಿಕೋ ನಗರದ ಹತ್ತಿರವಿರುವ ಮೋವಾಬ್ಯರ ಮೈದಾನದಲ್ಲಿ ಸರ್ವೇಶ್ವರ ಸ್ವಾಮಿ ಮೋಶೆಗೆ ಹೇಳಿದ್ದೇನೆಂದರೆ -
- Verse 2: “ಇಸ್ರಯೇಲರು ತಾವು ಹೊಂದುವ ಸೊತ್ತಿನಲ್ಲಿ ಕೆಲವು ಊರುಗಳನ್ನು ಹಾಗು ಆ ಊರಿನ ಸುತ್ತಲಿನ ಭೂಮಿಯನ್ನು ಲೇವಿಯರಿಗೆ ನಿವಾಸಕ್ಕಾಗಿ ಕೊಡಬೇಕೆಂದು ಅವರಿಗೆ ಆಜ್ಞಾಪಿಸು.
- Verse 3: ಆ ಊರುಗಳು ಲೇವಿಯರ ನಿವಾಸಕ್ಕೆ ಆಗುವುದು; ಅವುಗಳ ಸುತ್ತಲಿನ ಭೂಮಿಗಳು ಅವರ ದನಕುರಿ, ಪ್ರಾಣಿಪಶುಗಳ ಪ್ರಯೋಜನಕ್ಕಾಗುವುದು.
- Verse 4: ಲೇವಿಯರಿಗೆ ನೀವು ಕೊಡುವ ಊರುಗಳ ಸುತ್ತಲಿನ ಭೂಮಿ ಊರಿನ ಗೋಡೆಯಿಂದ ನಾಲ್ಕು ಕಡೆಗೂ ಸಾವಿರ ಮೊಳದಷ್ಟು ವಿಸ್ತಾರವಾಗಿರಲಿ.
- Verse 5: “ಊರಿನ ಹೊರಗಡೆ ನಾಲ್ಕು ದಿಕ್ಕುಗಳಲ್ಲೂ ಎರಡೆರಡು ಸಾವಿರ ಮೊಳಗಳಷ್ಟು ದೂರದಲ್ಲಿ ಎಲ್ಲೆಗಳನ್ನು ಗೊತ್ತುಮಾಡಬೇಕು. ಆ ಭೂಮಿಯ ನಡುವೆ ಊರಿರಬೇಕು. ಮಿಕ್ಕದ್ದು ಹುಲ್ಲುಗಾವಲಾಗಿರಬೇಕು.
- Verse 6: ಮನುಷ್ಯಹತ್ಯೆ ಮಾಡಿದವರು ಆಶ್ರಯಕ್ಕಾಗಿ ಓಡಿಹೋಗಲು ನೀವು ನೇಮಿಸುವ ಆರು ಆಶ್ರಯನಗರಗಳನ್ನೂ ಬೇರೆ ನಾಲ್ವತ್ತೆರಡು ಪಟ್ಟಣಗಳನ್ನೂ, ಹೀಗೆ ನಾಲ್ವತ್ತೆಂಟು ಊರುಗಳನ್ನೂ
- Verse 7: ಇವುಗಳ ಸುತ್ತಲಿನ ಭೂಮಿಯನ್ನೂ ಲೇವಿಯರಿಗೆ ಕೊಡಬೇಕು.
- Verse 8: ಇಸ್ರಯೇಲರ ಸೊತ್ತಿನಲ್ಲಿ ಆಯಾ ಕುಲದ ಸೊತ್ತಿನ ಅಳತೆಗೆ ತಕ್ಕಹಾಗೆ, ಅಂದರೆ ಹೆಚ್ಚು ಉಳ್ಳವರಿಂದ ಹೆಚ್ಚಾಗಿಯೂ ಕಡಿಮೆ ಉಳ್ಳವರಿಂದ ಕಡಿಮೆಯಾಗಿಯೂ ಲೇವಿಯರಿಗೆ ಊರುಗಳನ್ನು ಕೊಡಿಸಬೇಕು.”
- Verse 9: ಸರ್ವೇಶ್ವರ ಮೋಶೆಗೆ ಹೇಳಿದ್ದು ಇದು:
- Verse 10: “ನೀನು ಇಸ್ರಯೇಲರಿಗೆ ಹೀಗೆಂದು ಆಜ್ಞಾಪಿಸು - ನೀವು ಜೋರ್ಡನ್ ನದಿಯನ್ನು ದಾಟಿ ಕಾನಾನ್ ನಾಡನ್ನು ಸೇರಿದ ನಂತರ
- Verse 11: ಆಶ್ರಯಧಾಮಗಳಿಗಾಗಿ ಪಟ್ಟಣಗಳನ್ನು ನಿಗದಿಮಾಡಿರಿ. ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಅವುಗಳಲ್ಲಿ ಒಂದಕ್ಕೆ ಓಡಿಹೋಗಿ ಸುರಕ್ಷಿತನಾಗಿರಬಹುದು.
- Verse 12: ಅಂಥವನು ಸಭೆಯವರಿಂದ ತೀರ್ಪುಹೊಂದುವುದಕ್ಕಿಂತ ಮೊದಲೇ ಹತನಾದವನ ಸಮೀಪ ಬಂಧುವಿನಿಂದ ಸಾಯದಂತೆ ಈ ಆಶ್ರಯಧಾಮಗಳು ನಿಮ್ಮಲ್ಲಿ ಇರಬೇಕು.
- Verse 13: ಹೀಗೆ ಆಶ್ರಯಧಾಮಗಳಾಗಿರಲು ಜೋರ್ಡನ್ ನದಿಯ ಈಚೆಕಡೆ
- Verse 14: ಮೂರು ಕಾನಾನ್ ನಾಡಿನಲ್ಲಿ ಮೂರು ಹೀಗೆ ಆರು ಪಟ್ಟಣಗಳನ್ನು ನಿಗದಿಮಾಡಬೇಕು.
- Verse 15: ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಇಸ್ರಯೇಲನಾಗಿರಲಿ, ಪರದೇಶದವನಾಗಿರಲಿ ಅಥವಾ ನಿಮ್ಮ ಮಧ್ಯೆ ವಾಸಿಸುವವನಾಗಿರಲಿ, ಆ ಆರು ಪಟ್ಟಣಗಳೊಳಗೆ ಒಂದಕ್ಕೆ ಓಡಿಹೋಗಿ ಆಶ್ರಯಪಡೆಯಲಿ.
- Verse 16: “ಆದರೆ ಒಬ್ಬನು ಕಬ್ಬಿಣದ ಆಯುಧದಿಂದ ಮತ್ತೊಬ್ಬನನ್ನು ಹೊಡೆದು ಕೊಂದರೆ ಅಂಥವನು ನರಹತ್ಯ ಮಾಡಿದವನೆಂದು ನೀವು ನಿರ್ಣಯಿಸಬೇಕು. ಅವನಿಗೆ ಮರಣಶಿಕ್ಷೆಯಾಗಬೇಕು.
- Verse 17: ಒಬ್ಬನನ್ನು ಕೊಲ್ಲುವಷ್ಟು ದೊಡ್ಡ ಕಲ್ಲಿನಿಂದ ಮತ್ತೊಬ್ಬನನ್ನೂ ಹೊಡೆದುಕೊಂದರೆ ಅವನೂ ನರಹತ್ಯಗಾರನೇ; ಅಂಥವನಿಗೂ ಮರಣಶಿಕ್ಷೆಯಾಗಬೇಕು.
- Verse 18: ಒಬ್ಬನನ್ನು ಕೊಲ್ಲುವಷ್ಟು ದೊಡ್ಡ ಮರದ ಆಯುಧದಿಂದ ಮತ್ತೊಬ್ಬನನ್ನು ಹೊಡೆದುಕೊಂದರೆ ಅವನೂ ನರಹತ್ಯಗಾರನೇ. ಅಂಥವನಿಗೂ ಮರಣಶಿಕ್ಷೆಯಾಗಬೇಕು.
- Verse 19: ನರಹತ್ಯ ಮಾಡಿದವನನ್ನು ಕಂಡೊಡನೆ ಕೊಲ್ಲಬೇಕಾದವನು ಹತನಾದವನ ಸಮೀಪ ಬಂಧುವೇ.
- Verse 20: ಒಬ್ಬನು ಮತ್ತೊಬ್ಬನನ್ನು ಹಗೆಮಾಡಿ ನೂಕುವುದರಿಂದಾಗಲಿ, ಸಮಯ ನೋಡಿ ಅವನ ಮೇಲೆ ಏನನ್ನಾದರೂ ಎಸೆಯುವುದರಿಂದಾಗಲಿ,
- Verse 21: ದ್ವೇಷದಿಂದ ಕೈಯಾರೆ ಹೊಡೆಯುವುದರಿಂದಾಗಲಿ ಕೊಂದರೆ ಅವನು ಕೂಡ ನರಹತ್ಯಗಾರನೆ. ಅಂಥವನಿಗೂ ಮರಣಶಿಕ್ಷೆಯಾಗಬೇಕು. ಹತನಾದವನ ಸಮೀಪಬಂಧು ಅವನನ್ನು ಕಂಡೊಡನೆ ಕೊಲ್ಲಲಿ.
- Verse 22: “ಒಬ್ಬನು ಯಾವ ದ್ವೇಷವೂ ಇಲ್ಲದೆ, ಅಕಸ್ಮಾತ್ತಾಗಿ ನೂಕುವುದರಿಂದಾಗಲಿ, ಹೊಂಚು ಕಾಯದೆ ಏನನ್ನಾದರೂ ಎಸೆಯುವುದರಿಂದಾಗಲಿ,
- Verse 23: ಕೊಲ್ಲುವಷ್ಟು ದೊಡ್ಡಕಲ್ಲನ್ನು ತಿಳಿಯದೆ ಬೀಳಿಸುವುದರಿಂದಾಗಲಿ ಮತ್ತೊಬ್ಬನು ಸತ್ತರೆ ಅವನು ಆ ಮನುಷ್ಯನಿಗೆ ವೈರಿಯಾಗಿದ್ದನೆ? ಹಾನಿಮಾಡಬೇಕೆಂಬ ಅಭಿಪ್ರಾಯ ಅವನದಾಗಿತ್ತೆ? ಎಂದು ವಿಚಾರಿಸಬೇಕು.
- Verse 24: ಹಾಗಿಲ್ಲದ ಪಕ್ಷದಲ್ಲಿ ಸಭೆಯವರು ಹತ್ಯ ಮಾಡಿದವನಿಗೂ ಹತವಾದವನ ಸಮೀಪಬಂಧುವಿಗೂ ಈ ವಿಚಾರಗಳಿಗನುಸಾರ ನ್ಯಾಯ ತೀರಿಸಬೇಕು; ಹತ್ಯಮಾಡಿದವನನ್ನು ಆ ಸಮೀಪಬಂಧುವಿನ ಕೈಯಿಂದ ತಪ್ಪಿಸಬೇಕು.
- Verse 25: ಅವನು ಓಡಿಹೋಗಿದ್ದ ಆಶ್ರಯನಗರಕ್ಕೆ ತಿರುಗಿ ಸೇರಿಸಬೇಕು. ಪಟ್ಟಾಭಿಷೇಕ ಹೊಂದಿದ ಮಹಾಯಾಜಕನು ಜೀವದಿಂದಿರುವ ತನಕ ಅವನು ಆ ಪಟ್ಟಣದಲ್ಲೇ ವಾಸಿಸಬೇಕು.
- Verse 26: “ಆ ಹತ್ಯ ಮಾಡಿದವನು ಎಂದಾದರು ತಾನು ಓಡಿಹೋಗಿದ್ದ ಆಶ್ರಯ ನಗರದ ಮೇರೆಗೆ ಹೊರಗೆ ಹೋಗಿದ್ದು
- Verse 27: ಹತವಾದವನ ಸಮೀಪ ಬಂಧು ಅವನನ್ನು ಕಂಡು ಕೊಂದುಹಾಕಿದರೆ ಕೊಲೆಪಾತಕನಾಗುವುದಿಲ್ಲ.
- Verse 28: ಏಕೆಂದರೆ ಮಹಾಯಾಜಕನು ಜೀವದಿಂದಿರುವ ತನಕ ಅವನು ಆಶ್ರಯನಗರದೊಳಗೇ ಇರಬೇಕಾಗಿತ್ತು. ಮಹಾಯಾಜಕನು ತೀರಿಹೋದ ನಂತರ ಅವನು ತನ್ನ ಆಸ್ತಿಪಾಸ್ತಿಯಿರುವ ಸ್ಥಳಕ್ಕೆ ಹೋಗಬಹುದು.
- Verse 29: ನೀವು ಮತ್ತು ನಿಮ್ಮ ಸಂತತಿಯವರು ಈ ವಿಧಿನಿಯಮಗಳಿಗನುಸಾರ ನಿಮ್ಮ ನಿವಾಸಗಳಲ್ಲೆಲ್ಲ ನ್ಯಾಯ ತೀರಿಸಬೇಕು.
- Verse 30: “ಒಬ್ಬನು ಮತ್ತೊಬ್ಬನನ್ನು ಕೊಂದಾಗ ನೀವು ಸಾಕ್ಷಿಗಳನ್ನು ವಿಚಾರಿಸಿಕೊಂಡೇ ಅವನಿಗೆ ಮರಣಶಿಕ್ಷೆ ವಿಧಿಸಬೇಕು. ಒಬ್ಬನೇ ಒಬ್ಬ ಸಾಕ್ಷಿ ಮಾತ್ರ ಇದ್ದರೆ ಮರಣಶಿಕ್ಷೆಯನ್ನು ವಿಧಿಸಕೂಡದು.
- Verse 31: ಮರಣಶಿಕ್ಷೆಗೆ ಪಾತ್ರನಾದ ಕೊಲೆಗಡುಕನನ್ನು ಉಳಿಸುವುದಕ್ಕೆ ಈಡನ್ನು ತೆಗೆದುಕೊಳ್ಳಕೂಡದು. ಅವನಿಗೆ ಮರಣಶಿಕ್ಷೆ ಆಗಲೇಬೇಕು.
- Verse 32: ಆಶ್ರಯನಗರಕ್ಕೆ ಓಡಿಹೋದವನಿಂದ ನೀವು ಹಣವನ್ನು ತೆಗೆದುಕೊಂಡು ಮಹಾಯಾಜಕನು ಜೀವದಿಂದಿರುವಾಗಲೇ ಸ್ವಂತ ಊರಿಗೆ ಹೋಗಬಿಡಕೂಡದು.
- Verse 33: “ನೀವು ಈ ಪ್ರಕಾರ ನಡೆದುಕೊಂಡರೆ ನಿಮ್ಮ ನಾಡು ಅಪವಿತ್ರವಾಗುವುದಿಲ್ಲ. ರಕ್ತಪಾತವು ನಾಡನ್ನು ಅಪವಿತ್ರಗೊಳಿಸುತ್ತದೆ. ಅದಕ್ಕೆ ಕೊಲ್ಲಲ್ಪಟ್ಟವನ ರಕ್ತಕ್ಕಾಗಿ ಕೊಂದವನ ರಕ್ತದಿಂದಲೇ ಹೊರತು ಬೇರೆ ಪ್ರಾಯಶ್ಚಿತ್ತವಿಲ್ಲ.
- Verse 34: ನೀವು ವಾಸಮಾಡುವ ನಾಡನ್ನು ಅಪವಿತ್ರ ಮಾಡಬೇಡಿ. ಸರ್ವೇಶ್ವರನೆಂಬ ನಾನೇ ಇಸ್ರಯೇಲರ ನಡುವೆ ಆ ನಾಡಿನಲ್ಲಿ ವಾಸಿಸುತ್ತೇನೆ.”