ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
1 ಅರಸುಗಳು
4ನೇ ಅಧ್ಯಾಯ
- Verse 1: ಸೊಲೊಮೋನರಾಜನು ಸರ್ವ ಇಸ್ರಯೇಲರ ಮೇಲೆ ಅರಸನಾಗಿದ್ದನು.
- Verse 2: ಅವನ ಮುಖ್ಯ ಪದಾಧಿಕಾರಿಗಳು ಇವರು : ಚಾದೋಕನ ಮಗ ಅಜರ್ಯನು - ಯಾಜಕನು;
- Verse 3: ಶೀಷನ ಮಕ್ಕಳಾದ ಎಲೀಹೋರೆಫ್ ಹಾಗು ಅಹೀಯಾಹು ಎಂಬುವರು ಕಾರ್ಯದರ್ಶಿಗಳು; ಅಹೀಲೂದನ ಮಗ ಯೆಹೋಷಾಫಾಟನು ಅವನ ಮಂತ್ರಿ;
- Verse 4: ಯೆಹೋಯಾದಾವನ ಮಗ ಬೆನಾಯನು - ಸೇನಾಪತಿ; ಎಬ್ಯಾತಾರ ಹಾಗು ಚಾದೋಕ - ಯಾಜಕರು;
- Verse 5: ನಾತಾನನ ಮಗ ಅಜರ್ಯನು - ಪ್ರದೇಶಾಧಿಪತಿಗಳ ಮುಖ್ಯಸ್ಥ; ನಾತಾನನ ಮಗ ಜಾಬೂದನು ಯಾಜಕ ಹಾಗು ಅರಸನ ಮಿತ್ರ;
- Verse 6: ಅಹೀಷಾರನು - ರಾಜ್ಯಗೃಹಾಧಿಪತಿ; ಅಬ್ದನ ಮಗನಾದ ಅದೋನೀರಾಮನು - ಬಿಟ್ಟೀ ಕೆಲಸಮಾಡಿಸುವವರ ಮುಖ್ಯಸ್ಥ.
- Verse 7: ಸರ್ವ ಇಸ್ರಯೇಲರ ಮೇಲೆ ಸೊಲೊಮೋನನು ಹನ್ನೆರಡು ಜನ ಜಿಲ್ಲಾಧಿಕಾರಿಗಳನ್ನು ನೇಮಿಸಿದ್ದನು. ಅವರು ತಮ್ಮ ಜಿಲ್ಲೆಗಳಿಂದ ಅರಸನಿಗೂ ಅರಮನೆಯವರಿಗೂ ಬೇಕಾದ ಆಹಾರ ಪದಾರ್ಥಗಳನ್ನು ಪೂರೈಸುತ್ತಿದ್ದರು. ಪ್ರತಿಯೊಬ್ಬನೂ ವರ್ಷದಲ್ಲಿ ಒಂದೊಂದು ತಿಂಗಳು ಪೂರೈಸಬೇಕಾಗಿತ್ತು.
- Verse 8: ಅವರ ಹೆಸರುಗಳು ಹಾಗು ಜಿಲ್ಲೆಗಳ ಹೆಸರುಗಳು ಇವು:
- Verse 9: ಬಿನ್ಹೂರ - ಎಫ್ರಯಿಮಿನ ಮಲೆನಾಡಿನ ಪ್ರದೇಶ;
- Verse 10: ಬಿನ್ ದೆಕೆರ್ - ಮಾಕಚ್, ಶಾಲ್ಬೀಮ್, ಬೀತ್ ಷೆಮೆಷ್, ಏಲೋನ್, ಬೇತ್ ಹಾನಾನ್;
- Verse 11: ಬಿನ್ ಹೆಸೆದ್ - ಅರುಬ್ಬೋತ್ (ಸೋಕೋಹೇಫೆರ್ ಎಂಬ ಪ್ರದೇಶಗಳು ಅವನ ವಶದಲ್ಲಿದ್ದವು).
- Verse 12: ಬಿನ್ ಅಬೀನಾದಾಬ್ - ನಾಪೋತ್ ದೋರ್ (ಇವನು ಸೊಲೊಮೋನನ ಮಗಳು ಟಾಫತಳನ್ನು ವಿವಾಹವಾಗಿದ್ದನು);
- Verse 13: ಅಹೀಲೂದನ ಮಗ ಬಾಣಾ - ತಾಣಕ್, ಮೆಗಿದ್ದೋ, ಚಾರೆತಾನಿನ ಬಳಿಯಲ್ಲಿರುವ ಜೆಸ್ರೀಲಿನ ಅಡಿಯಲ್ಲಿದ್ದ ಬೇತ್ಷೆಯಾನಿನಿಂದ ಆಬೇಲ್ ಮೆಹೋಲದವರೆಗೂ ಇದ್ದ, ಯೊಕ್ಮೆಯಾನಿನ ಆಚೆಗೆ ವಿಸ್ತರಿಸಿಕೊಂಡಿದ್ದ ಬೇತ್ಷೆಯಾನಿನ ಎಲ್ಲಾ ಪ್ರದೇಶ;
- Verse 14: ಬಿನ್ ಗೆಬೆರ್ - ರಾಮೋತ್ ಗಿಲ್ಯಾದ್ (ಗಿಲ್ಯಾದಿನಲ್ಲಿ ಮನಸ್ಸೆಯ ಮಗ ಯಾಯೀರನ ಗ್ರಾಮಗಳಿಗೂ ಬಾಷಾನಿನಲ್ಲಿ ಪೌಳಿಗೋಡೆಗಳಿಂದಲೂ ಕಬ್ಬಿಣದ ಅಗುಳಿಗಳಿಂದಲೂ ಭದ್ರಮಾಡಲ್ಪಟ್ಟ ಅರವತ್ತು ಪಟ್ಟಣಗಳಿದ್ದ ಅರ್ಗೋಬ ಪ್ರದೇಶ); ಇದ್ದೋವಿನ ಮಗ ಅಹೀನಾದಾಬನು - ಮಹನಯಿಮ್;
- Verse 15: ಅಹೀಮಾಚ - ನಫ್ತಾಲಿ ಪ್ರದೇಶ (ಇವನು ಸೊಲೊಮೋನನ ಮಗಳು ಬಾಸೆಮತಳನ್ನು ವಿವಾಹವಾಗಿದ್ದನು);
- Verse 16: ಹೂಷೈಯ ಮಗ ಬಾಣ - ಅಶೇರ ಹಾಗು ಅಲೋತ್;
- Verse 17: ಫಾರೂಹನ ಮಗ ಯೆಹೋಷಾಫಾಟನು - ಇಸ್ಸಾಕಾರ ಪ್ರದೇಶ;
- Verse 18: ಏಲನ ಮಗ ಶಿಮ್ಮಿ - ಬೆನ್ಯಾಮೀನರ ಪ್ರದೇಶ;
- Verse 19: ಉರಿಯನ ಮಗ ಗೆಬೆರ್ - ಗಿಲ್ಯಾದ (ಅಮೋರಿಯರ ಅರಸ ಸೀಹೋನ್, ಬಾಷಾನಿನ ಅರಸ ಓಗ್ ಇವರ ಪ್ರದೇಶ) ಪ್ರದೇಶಕ್ಕೆಲ್ಲಾ ಅವನೊಬ್ಬನೇ ಜಿಲ್ಲಾಧಿಕಾರಿಯಾಗಿದ್ದನು.
- Verse 20: ಇಸ್ರಯೇಲ್ ಹಾಗು ಯೆಹೂದ್ಯರು ಸಮುದ್ರ ತೀರದ ಮರಳಿನಷ್ಟು ಅಸಂಖ್ಯಾತರಾದರು; ಅನ್ನ ಪಾನಗಳಲ್ಲಿ ಸಂತೃಪ್ತರಾಗಿ ಸಂತೋಷದಿಂದ ಬಾಳುತ್ತಿದ್ದರು.
- Verse 21: ಯೂಫ್ರೆಟಿಸ್ ನದಿ ಮೊದಲ್ಗೊಂಡು ಫಿಲಿಷ್ಟಿಯರ ಮತ್ತು ಈಜಿಪ್ಟಿಯರ ದೇಶಗಳವರೆಗೂ ಇರುವ ಎಲ್ಲ ರಾಜ್ಯಗಳ ಪ್ರಜೆಗಳನ್ನು ಸೊಲೊಮೋನನು ಆಳುತ್ತಿದ್ದನು. ಆ ದೇಶದವರು, ತಮ್ಮ ಜೀವಮಾನದಲ್ಲೆಲ್ಲಾ ಅಧೀನರಾಗಿದ್ದು, ಕಪ್ಪಕಾಣಿಕೆಗಳನ್ನು ಸಲ್ಲಿಸುತ್ತಿದ್ದರು.
- Verse 22: ಸೊಲೊಮೋನನ ಅರಮನೆಗೆ ದಿನಂಪ್ರತಿ ಬೇಕಾಗಿದ್ದ ಆಹಾರಪದಾರ್ಥಗಳ ಪಟ್ಟಿ: ಐದು ಸಾವಿರ ಲೀಟರ್ ಗೋದಿಯ ಹಿಟ್ಟು, ಹತ್ತು ಸಾವಿರ ಲೀಟರ್ ಜವೆಗೋದಿಯ ಹಿಟ್ಟು;
- Verse 23: ಹತ್ತು ಕಟ್ಟಿ ಮೇಯಿಸಿದ ಎತ್ತುಗಳು, ಇಪ್ಪತ್ತು ಬಿಟ್ಟು ಮೇಯಿಸಿದ ಎತ್ತುಗಳು, ನೂರು ಕುರಿಗಳು; ಇವುಗಳ ಜೊತೆಗೆ, ದುಪ್ಪಿ, ಜಿಂಕೆ, ಸಾರಂಗ, ಕೊಬ್ಬಿದ ಕೋಳಿಗಳು.
- Verse 24: ಅವನು ಯೂಫ್ರೆಟಿಸ್ ನದಿಯ ಈಚೆಯಲ್ಲಿ ತಿಪ್ಸಹು ಮೊದಲ್ಗೊಂಡು ಗಾಜದವರೆಗಿರುವ ಈಚೆಯ ಎಲ್ಲಾ ರಾಜರಿಗೂ ಅಧಿಪತಿಯಾಗಿದ್ದನು. ಸುತ್ತಮುತ್ತಲಿನ ರಾಜರೊಡನೆ ಶಾಂತಿಸಮಾಧಾನದಿಂದಿದ್ದನು.
- Verse 25: ಸೊಲೊಮೋನನ ಆಳ್ವಿಕೆಯಲ್ಲೆಲ್ಲಾ ದಾನ್ ಪಟ್ಟಣದಿಂದ ಬೇರ್ಷೆಬದವರೆಗಿರುವ ಸಮಸ್ತ ಇಸ್ರಯೇಲರು ಹಾಗು ಯೆಹೂದ್ಯರು ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರದಗಿಡ, ಇವುಗಳ ನೆರಳಿನಲ್ಲಿ ವಾಸಿಸುತ್ತಾ ಸುರಕ್ಷಿತರಾಗಿದ್ದರು.
- Verse 26: ಸೊಲೊಮೋನನ ಲಾಯಗಳಲ್ಲಿ ನಾಲ್ವತ್ತು ಸಾವಿರ ರಥಾಶ್ವಗಳಿಗೆ ಸ್ಥಳವಿತ್ತು; ಅವನಿಗೆ ಹನ್ನೆರಡು ಸಾವಿರ ಮಂದಿ ರಾಹುತರಿದ್ದರು.
- Verse 27: ಮೇಲೆ ಹೇಳಿದ ಜಿಲ್ಲಾಧಿಕಾರಿಗಳು ತಮತಮಗೆ ನೇಮಕವಾದ ತಿಂಗಳಲ್ಲಿ ಅರಸ ಸೊಲೊಮೋನನಿಗೂ ಅವನ ಪಂಕ್ತಿಯಲ್ಲಿ ಊಟಕ್ಕೆ ಕುಳಿತುಕೊಳ್ಳುತ್ತಿದ್ದ ಎಲ್ಲರಿಗೂ ಬೇಕಾಗುವ ಆಹಾರ ಪದಾರ್ಥಗಳನ್ನು ಯಾವ ಕೊರತೆಯೂ ಇಲ್ಲದೆ ಒದಗಿಸುತ್ತಿದ್ದರು.
- Verse 28: ಇದಲ್ಲದೆ, ಅವರು ರಥಾಶ್ವಗಳಿಗಾಗಿ ಹಾಗು ಸವಾರಿಕುದುರೆಗಳಿಗಾಗಿ ನೇಮಕವಾದಷ್ಟು ಜವೆಗೋದಿಯನ್ನೂ ಹುಲ್ಲನ್ನೂ ಕುದುರೆಗಳಿದ್ದ ಸ್ಥಳಕ್ಕೆ ತಂದು ಒಪ್ಪಿಸುತ್ತಿದ್ದರು.
- Verse 29: ದೇವರು ಸೊಲೊಮೋನನಿಗೆ ಸಮುದ್ರತೀರದ ಮರಳಿನಷ್ಟು ಅಪರಿಮಿತವಾದ ಜ್ಞಾನವಿವೇಕಗಳನ್ನೂ ಮನೋವಿಶಾಲತೆಯನ್ನೂ ಅನುಗ್ರಹಿಸಿದ್ದರು.
- Verse 30: ಅವನ ಜ್ಞಾನ ಮೂಡಣದೇಶದವರೆಲ್ಲರ ಜ್ಞಾನಕ್ಕಿಂತಲು, ಈಜಿಪ್ಟರ ಸರ್ವಜ್ಞಾನಕ್ಕಿಂತಲು ಮಿಗಿಲಾಗಿತ್ತು.
- Verse 31: ಅವನು ಜೆರಹನ ಮಗನಾದ ಏತಾನ್, ಮಾಹೋಲನ ಮಕ್ಕಳಾದ ಹೇಮಾನ್, ಕಲ್ಕೋಲ್, ದರ್ದ ಮೊದಲಾದ ಎಲ್ಲರಿಗಿಂತಲೂ ಜ್ಞಾನಿಯಾಗಿದ್ದನು. ಸುತ್ತಮುತ್ತಲಿನ ಜನಾಂಗಗಳಲ್ಲೆಲ್ಲಾ ಅವನ ಹೆಸರು ಪ್ರಸಿದ್ಧವಾಯಿತು.
- Verse 32: ಅವನು ನುಡಿದ ಜ್ಞಾನೋಕ್ತಿಗಳು ಮೂರು ಸಾವಿರ, ರಚಿಸಿದ ಗೀತೆಗಳು ಸಾವಿರದ ಐದು.
- Verse 33: ಅವನು, ಲೆಬನೋನಿನ ದೇವದಾರುವೃಕ್ಷ ಮೊದಲ್ಗೊಂಡು ಗೋಡೆಯಲ್ಲಿ ಬೆಳೆಯುವ ಹಿಸ್ಸೋಪ್ ಗಿಡದವರೆಗಿರುವ ಎಲ್ಲಾ ವನಸ್ಪತಿಗಳನ್ನು ಕುರಿತು, ಎಲ್ಲಾ ಪಶುಪಕ್ಷಿ, ಜಲಜಂತು, ಕ್ರಿಮಿಕೀಟಗಳನ್ನು ಕುರಿತು ಪ್ರಸ್ತಾಪಿಸಬಲ್ಲವನಾಗಿದ್ದನು.
- Verse 34: ಸೊಲೊಮೋನನ ಜ್ಞಾನವಿಶೇಷವನ್ನು ಕುರಿತು ಕೇಳಿದ ಸರ್ವಜನಾಂಗಗಳ ಭೂಪಾಲರಲ್ಲಿ ಅನೇಕರು ಅವನ ಜ್ಞಾನವಾಕ್ಯಗಳನ್ನು ಕೇಳುವುದಕ್ಕಾಗಿ ಬರುತ್ತಿದ್ದರು.