ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
2 ಪೂರ್ವಕಾಲದ ಇತಿಹಾಸ
3ನೇ ಅಧ್ಯಾಯ
- Verse 1: ಸೊಲೊಮೋನನು ಜೆರುಸಲೇಮ್ ಪಟ್ಟಣದಲ್ಲಿ ತನ್ನ ತಂದೆ ದಾವೀದನಿಗೆ ದೇವದರ್ಶನ ಉಂಟಾದ ಮೋರೀಯಾ ಗುಡ್ಡದಲ್ಲಿ, ಸರ್ವೇಶ್ವರನ ಆಲಯವನ್ನು ಕಟ್ಟಿಸ ತೊಡಗಿದನು. ಈ ಮೊದಲು, ಯೆಬೂಸಿಯನಾದ ಒರ್ನಾನನ ಕಣವಾಗಿದ್ದ ಆ ಸ್ಥಳವನ್ನು, ದಾವೀದನು ಇದಕ್ಕಾಗಿ ಸಿದ್ಧಮಾಡಿದ್ದನು.
- Verse 2: ಸೊಲೊಮೋನನು ತನ್ನ ಆಳ್ವಿಕೆಯ ನಾಲ್ಕನೆಯ ವರ್ಷದ ಎರಡನೆಯ ತಿಂಗಳಿನ ಎರಡನೆಯ ದಿನದಲ್ಲಿ ಕಟ್ಟಡದ ಕೆಲಸವನ್ನು ಪ್ರಾರಂಭಿಸಿದನು.
- Verse 3: ಅವನು ಕಟ್ಟಿಸಿದ ದೇವಾಲಯದ ಅಸ್ತಿವಾರದ ಉದ್ದ ಇಪ್ಪತ್ತೇಳು ಮೀಟರ್ ಹಾಗೂ ಅಗಲ ಒಂಬತ್ತು ಮೀಟರ್.
- Verse 4: ದೇವಾಲಯದ ಮುಂದುಗಡೆಯಲ್ಲಿದ್ದ ಮಂಟಪದ ಉದ್ದ ಆಲಯದ ಅಗಲಕ್ಕೆ ಸರಿಯಾಗಿ ಒಂಬತ್ತು ಮೀಟರ್, ಎತ್ತರ ಇಪ್ಪತ್ತನಾಲ್ಕು ಮೀಟರ್, ಸೊಲೊಮೋನನು ದೇವಾಲಯದ ಒಳಮೈಯನ್ನು ಚೊಕ್ಕಬಂಗಾರದ ತಗಡಿನಿಂದ ಹೊದಿಸಿದನು.
- Verse 5: ದೊಡ್ಡ ಕೋಣೆಯನ್ನು ತುರಾಯಿ ಮರದ ಹಲಗೆಗಳಿಂದಲೂ ಆ ಹಲಗೆಗಳನ್ನು ತೋರಣ, ಖರ್ಜೂರಗಳ ಚಿತ್ರಗಳುಳ್ಳ ಚೊಕ್ಕ ಬಂಗಾರದ ತಗಡಿನಿಂದಲೂ ಹೊದಿಸಿ, ಅದನ್ನು ರತ್ನಗಳಿಂದ ಅಲಂಕರಿಸಿದನು.
- Verse 6: ಆ ಬಂಗಾರ ಪರ್ವಯಿಮ್ ದೇಶದ್ದು.
- Verse 7: ಹೀಗೆ ಆಲಯದಲ್ಲಿನ ತೊಲೆ, ಹೊಸ್ತಿಲು, ಗೋಡೆ, ಕದ ಇವುಗಳನ್ನು ಬಂಗಾರದ ತಗಡಿನಿಂದ ಹೊದಿಸಿ, ಗೋಡೆಗಳ ಮೇಲೆ ಕೆರೂಬಿಗಳ ಚಿತ್ರಗಳನ್ನು ಕೆತ್ತಿಸಿದನು.
- Verse 8: ಇದಲ್ಲದೆ, ಅವನು ‘ಮಹಾಪರಿಶುದ್ಧ ಸ್ಥಳವನ್ನು’ ಮಾಡಿಸಿದನು.ಅದರ ಉದ್ದ ಆಲಯದ ಅಗಲಕ್ಕೆ ಸರಿಯಾಗಿ ಒಂಬತ್ತು ಮೀಟರ್; ಅದರ ಅಗಲ ಒಂಬತ್ತು ಮೀಟರ್. ಅದನ್ನು ಸುಮಾರು 20 ಮೆಟ್ರಿಕ್ ಟನ್ ಚೊಕ್ಕ ಬಂಗಾರದ ತಗಡಿನಿಂದ ಹೊದಿಸಿದನು.
- Verse 9: ಬಂಗಾರದ ಮೊಳೆಗಳ ತೂಕ 570 ಕಿಲೋಗ್ರಾಂ. ಮೇಲುಪ್ಪರಿಗೆಗಳನ್ನು ಬಂಗಾರದ ತಗಡಿನಿಂದ ಹೊದಿಸಿದನು.
- Verse 10: ಮಹಾಪರಿಶುದ್ಧ ಸ್ಥಳದಲ್ಲಿ ಎರಡು ಕೆರೂಬಿಗಳ ಪ್ರತಿಮೆಗಳನ್ನು ಮಾಡಿಸಿಟ್ಟು ಅವುಗಳನ್ನೂ ಬಂಗಾರದ ತಗಡಿನಿಂದ ಹೊದಿಸಿದನು.
- Verse 11: ಕೆರೂಬಿಗಳ ರೆಕ್ಕೆಗಳು ಒಟ್ಟಾಗಿ ಒಂಬತ್ತು ಮೀಟರ್ ಉದ್ದವಿದ್ದವು. (ಮೊದಲನೆಯ ಕೆರೂಬಿಯ) ಒಂದು ರೆಕ್ಕೆ 2:2 ಮೀಟರ್ ಉದ್ದವಾಗಿದ್ದು ಮನೆಯ ಗೋಡೆಗೆ ತಗಲುತ್ತಿತ್ತು. 2:2 ಮೀಟರ್ ಉದ್ದವಾದ ಇನ್ನೊಂದು ರೆಕ್ಕೆಯು ಎರಡನೆಯ ಕೆರೂಬಿಯ ರೆಕ್ಕೆಗೆ ತಗಲುತ್ತಿತ್ತು.
- Verse 12: ಅದರಂತೆಯೇ ಎರಡನೆಯ ಕೆರೂಬಿಯ 2:2 ಮೀಟರ್ ಉದ್ದವಾದ ಒಂದು ರೆಕ್ಕೆ ಮನೆಯ ಗೋಡೆಗೂ ಇನ್ನೊಂದು ರೆಕ್ಕೆ ಮೊದಲನೆಯ ಕೆರೂಬಿಯ ರೆಕ್ಕೆಗೂ ತಗಲುತ್ತಿದ್ದವು.
- Verse 13: ಈ ಕೆರೂಬಿಗಳು ತಮ್ಮ ರೆಕ್ಕೆಗಳನ್ನು ಒಂಬತ್ತು ಮೀಟರ್ ಉದ್ದಕ್ಕೆ ಚಾಚಿ ಕಾಲೂರಿ ನಿಂತುಕೊಂಡು ಪರಿಶುದ್ಧ ಸ್ಥಳದ ಕಡೆಗೆ ಮುಖ ಮಾಡಿದ್ದವು.
- Verse 14: ಸೊಲೊಮೋನನು ಪರದೆಯನ್ನು ನೀಲಿ, ಊದಾ, ಕೆಂಪು ವರ್ಣಗಳುಳ್ಳ ನಾರಿನಿಂದ ಮಾಡಿಸಿದನು. ಅದರಲ್ಲಿ ಕೆರೂಬಿಗಳನ್ನು ಕಸೂತಿ ಹಾಕಿಸಿದನು.
- Verse 15: ಇದಲ್ಲದೆ ಸೊಲೊಮೋನನು ದೇವಾಲಯದ ಮುಂದೆ ಎರಡು ಕಂಬಗಳನ್ನು ನಿಲ್ಲಿಸಿದನು. ಅವು 5:5 ಮೀಟರ್ ಎತ್ತರ ಇದ್ದವು. ಅವುಗಳ ತಲೆಗಳ ಮೇಲಣ ಕುಂಭಗಳು 2:2 ಮೀಟರ್ ಎತ್ತರವಿದ್ದವು.
- Verse 16: ಗರ್ಭಗುಡಿಯ ಸರಪಣಿಯಂಥ ಸರಪಣಿಗಳನ್ನು ಮಾಡಿಸಿ, ಆ ಕಂಬಗಳ ಮೇಲಣ ಕುಂಭಗಳಿಗೆ ಸಿಕ್ಕಿಸಿ, ಆ ಸರಪಣಿಗಳಲ್ಲಿ ನೂರು ನೂರು ತಾಮ್ರದ ದಾಳಿಂಬೆ ಹಣ್ಣುಗಳನ್ನು ಕಟ್ಟಿಸಿದನು.
- Verse 17: ಆ ಕಂಬಗಳನ್ನು, ದೇವಾಲಯದ ಮುಂಭಾಗದಲ್ಲಿ ಒಂದನ್ನು ಬಲಗಡೆಗೂ, ಇನ್ನೊಂದನ್ನು ಎಡಗಡೆಗೂ ನಿಲ್ಲಿಸಿ, ಬಲಗಡೆಯದಕ್ಕೆ ‘ಯಾಕೀನ್’ ಎಂದೂ ಎಡಗಡೆಯದಕ್ಕೆ ‘ಬೋವಜ್’ ಎಂದೂ ಹೆಸರಿಟ್ಟನು.