ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
4ನೇ ಅಧ್ಯಾಯ
- Verse 1: ಆಗ ತೇಮಾನ್ಯನಾದ ಎಲೀಫಜನು ಹೀಗೆಂದನು:
- Verse 2: “ಯಾರಾದರೂ ನಿನ್ನೊಡನೆ ಮಾತನಾಡಿದರೆ ಬೇಸರವೇಕೆ ನಿನಗೆ? ಆದರೂ ಯಾರಿಂದಾದೀತು ಮಾತನಾಡದೆ ಸುಮ್ಮನಿರುವುದಕ್ಕೆ?
- Verse 3: ನೋಡು, ನೀನೇ ಅನೇಕರಿಗೆ ಶಿಕ್ಷಣವಿತ್ತೆ ಜೋಲುಬಿದ್ದ ಕೈಗಳಿಗೆ ಶಕ್ತಿಯನ್ನಿತ್ತೆ.
- Verse 4: ನಿನ್ನ ನುಡಿ ಎಡವಿಬೀಳುವವರನ್ನು ನಿಲ್ಲಗೊಳಿಸಿತು ಕುಸಿದುಬೀಳುವ ಮೊಣಕಾಲುಗಳನ್ನು ಬಲಪಡಿಸಿತು.
- Verse 5: ಈಗಲಾದರೂ ಆ ದುರಿತಗಳಿಂದ ನೀನೇ ಧೃತಿಗೆಟ್ಟಿರುವೆ ಅವು ನಿನಗೆ ತಗಲಿ ನೀನೇ ತಲ್ಲಣಗೊಂಡಿರುವೆ!
- Verse 6: ನಿನ್ನ ನಂಬಿಕೆಗೆ ಆಧಾರ ನಿನ್ನ ಭಯಭಕ್ತಿಯಲ್ಲವೆ? ನಿನ್ನ ನಿರೀಕ್ಷೆಗೆ ಅಸ್ತಿವಾರ ನಿನ್ನ ಆದರ್ಶವಲ್ಲವೆ?
- Verse 7: ಆಲೋಚಿಸಿ ನೋಡು, ನಿರಪರಾಧಿ ಎಂದಾದರೂ ನಾಶವಾದುದುಂಟೆ ಸತ್ಯ-ಸಂಧರು ಎಲ್ಲಿಯಾದರೂ ನಿರ್ಮೂಲವಾದುದುಂಟೆ?
- Verse 8: ನನಗೆ ತಿಳಿದಮಟ್ಟಿಗೆ, ಕೆಟ್ಟದ್ದನ್ನು ನೆಡುವವರು, ದುಷ್ಟತನವನು ಬಿತ್ತುವವರು, ಅದನ್ನೆ ಕೊಯ್ಯುವರು.
- Verse 9: ಅಂಥವರು ದೇವರ ಉಸಿರಿನಿಂದಲೆ ನಾಶವಾಗುವರು ಆತನ ಸಿಟ್ಟಿನಿಂದಲೆ ಸತ್ತುಹೋಗುವರು.
- Verse 10: ಸಿಂಹಗರ್ಜನೆ, ಭೀಕರ ಸಿಂಹದಾರ್ಭಟಗಳು ಅಡಗುವವು ಯುವಸಿಂಹದ ಕೋರೆಗಳು ಮುರಿದುಹೋಗುವವು.
- Verse 11: ಬೇಟೆಯಿಲ್ಲದೆ ಮೃಗರಾಜ ಸಾಯುವನು ಸಿಂಹದ ಮರಿಗಳು ಚದರಿಹೋಗುವವು.
- Verse 12: ನನಗೆ ವಿಷಯವೊಂದು ಗುಟ್ಟಾಗಿ ತಿಳಿದುಬಂತು ಪಿಸುಪಿಸುಮಾತಾಗಿ ಅದು ನನ್ನ ಕಿವಿಗೆ ಬಿತ್ತು.
- Verse 13: ಜನರಿಗೆ ಗಾಢನಿದ್ರೆ ಹತ್ತುವ ಹೊತ್ತಿನಲಿ ರಾತ್ರಿಕಾಲದ ಸ್ವಪ್ನಯೋಚನೆಗಳ ಸುಳಿಯಲಿ
- Verse 14: ಭೀಕರ ದಿಗಿಲು ಉಂಟಾಯಿತು ನನ್ನೆಲುಬುಗಳೆಲ್ಲವನ್ನು ನಡುಗಿಸಿತು.
- Verse 15: ಆಗ ಆತ್ಮವೊಂದು ಮುಖದ ಮುಂದೆ ಹಾದುಹೋಯಿತು ನನ್ನ ಮೈಯೆಲ್ಲ ನಿಲುಗೂದಲಾಯಿತು.
- Verse 16: ರೂಪವೊಂದು ನನ್ನ ಕಣ್ಮುಂದೆ ನಿಂತಿತ್ತು ಆದರೂ ಅದೇನೆಂಬುದು ನನಗೆ ತಿಳಿಯದೆಹೋಯಿತು ಸೂಕ್ಷ್ಮವಾಣಿಯೊಂದು ನನಗೆ ಕೇಳಿಬಂತು:
- Verse 17: “ದೇವರ ದೃಷ್ಟಿಯಲ್ಲಿ ಸತ್ಯವಂತನಾಗಿರಲು ಮಾನವನಿಗೆ ಸಾಧ್ಯವೆ? ಸೃಷ್ಟಿಕರ್ತನ ಸನ್ನಿಧಿಯಲ್ಲಿ ಪರಿಶುದ್ಧನಾಗಿರಲು ಅವನಿಂದ ಸಾಧ್ಯವೆ?”
- Verse 18: ತನ್ನ ಸೇವಕರಲ್ಲೂ ದೇವರು ನಂಬಿಕೆಯಿಡುವುದಿಲ್ಲವಲ್ಲಾ! ತನ್ನ ದೂತರ ಮೇಲೂ ಆತನು ತಪ್ಪುಹೊರಿಸುತ್ತಾನಲ್ಲಾ!
- Verse 19: ಇಂತಿರಲು ದೂಳಿನಲ್ಲಿ ತಳವೂರಿ, ಮಣ್ಣಿನೊಡಲ ಹೊಕ್ಕು ಬಾಳಿ ಹುಳುವಿನಷ್ಟು ಸುಲಭವಾಗಿ ಅಳಿದುಹೋಗುವವರಲ್ಲಿ ಮತ್ತೆಷ್ಟು ತಪ್ಪೆಣಿಸಲಾರನಾತ ಅಂಥ ನರಮಾನವರಲ್ಲಿ?
- Verse 20: ಅವರು ಉದಯಾಸ್ತಮಾನಗಳ ನಡುವೆ ಜಜ್ಜಿಹೋಗುವರು ಯಾರ ಲಕ್ಷ್ಯವೂ ಇಲ್ಲದೆ ನಿತ್ಯವಿನಾಶ ಹೊಂದುವರು.
- Verse 21: ಅವರ ಗುಡಾರದ ಗೂಟವನ್ನು ಕೀಳಲಾಗುವುದು ಬುದ್ಧಿಹೀನರಾಗಿಯೆ ಅವರು ಸತ್ತುಹೋಗುವರು.