ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
9ನೇ ಅಧ್ಯಾಯ
- Verse 1: ಅದಕ್ಕೆ ಯೋಬನು ಉತ್ತರಿಸುತ್ತಾ ಹೀಗೆಂದನು:
- Verse 2: “ಹೌದು, ನೀನು ಹೇಳುವುದು ಸರಿಯೆಂದು ನನಗೆ ಗೊತ್ತು: ನರಮಾನವ ದೇವರ ಮುಂದೆ ಸತ್ಯವಂತನಾಗಿರುವುದೆಂತು?
- Verse 3: ಯಾರಾದರೂ ಆತನೊಡನೆ ವಾದಿಸಲು ಇಷ್ಟಪಟ್ಟರೂ ಆತನ ಸಹಸ್ರ ಪ್ರಶ್ನೆಗಳೊಂದಕ್ಕೂ ಉತ್ತರಿಸಲಾಗದು.
- Verse 4: ದೇವರ ಹೃದಯ ಧೀಮಂತ, ಅವರ ಶಕ್ತಿ ಅತುಳ ಆತನನ್ನು ಪ್ರತಿಭಟಿಸಿ ಜಯಗಳಿಸಿದವನಿಲ್ಲ.
- Verse 5: ಆತ ಪರ್ವತಗಳನ್ನೇ ಸರಿಸುತ್ತಾನೆ ಅರಿಯದಂತೆ ಅವುಗಳನ್ನು ಉರುಳಿಸುತ್ತಾನೆ ಸಿಟ್ಟುಗೊಂಡಂತೆ.
- Verse 6: ಅದರ ಸ್ಥಾನದಿಂದ ಭೂಮಿಯನೆ ಕದಲಿಸುತ್ತಾನೆ ಅದರ ಸ್ತಂಭಗಳು ನಡುಗುವಂತೆ ಮಾಡುತ್ತಾನೆ.
- Verse 7: ಆತ ಆಜ್ಞೆ ಮಾಡಿದ್ದೇ ಆದರೆ ಸೂರ್ಯನು ಉದಯಿಸನು ಮುದ್ರೆ ಹಾಕಿದ್ದೇ ಆದರೆ ನಕ್ಷತ್ರವೂ ಮಿನುಗದು.
- Verse 8: ಆಕಾಶಮಂಡಲವನ್ನು ಹರಡಿದವನು ದೇವರೇ ಕಡಲಿನ ತರಂಗಗಳನ್ನು ಮೆಟ್ಟಿದವನು ಆತನೊಬ್ಬನೇ.
- Verse 9: ದಕ್ಷಿಣದ ನಕ್ಷತ್ರಗ್ರಹಗಳನೂ ಸಪ್ತರ್ಷಿಮಂಡಲವನೂ ಮೃಗಶಿರವನೂ ಕೃತ್ತಿಕೆಯನೂ ನಿರ್ಮಿಸಿದವನು ಆತನೇ.
- Verse 10: ಅಪ್ರತಿಮ ಮಹಾಕಾರ್ಯಗಳನ್ನು ಎಸಗಿರುವನು ಅಸಂಖ್ಯ ಅದ್ಭುತಕರ ಪವಾಡಗಳನ್ನು ಮಾಡಿರುವನು.
- Verse 11: ಇಗೋ, ಪಕ್ಕದಲ್ಲೇ ಆತ ದಾಟಿಹೋದರೂ ಕಾಣಿಸನು ನನ್ನ ಮುಂದುಗಡೆಯೇ ಹಾದುಹೋದರೂ ತಿಳಿಯದು.
- Verse 12: ಕಿತ್ತುಕೊಂಡು ಹೋಗುವ ಆತನಿಗೆ ಅಡ್ಡಿಮಾಡುವವರಾರು? ‘ಏನು ಮಾಡುತ್ತಿರುವೆ?’ ಎಂದು ಆತನನ್ನು ಕೇಳುವವರಾರು?
- Verse 13: ರಹೆಬನ ಸಹಾಯಕರು ಕಾಲಿಗೆರಗಿದರೂ ದೇವರು ತನ್ನ ಸಿಟ್ಟು ಸಿಡುಕನು ಬಿಟ್ಟುಬಿಡನು.
- Verse 14: ದೇವರೊಂದಿಗೆ ವಾದಿಸಲು ನಾನು ಅಶಕ್ತನು ಆತನಿಗೆ ತಕ್ಕ ಉತ್ತರ ಕೊಡಲು ನಾನೆಷ್ಟರವನು!
- Verse 15: ನಾನು ಸತ್ಯವಂತನಾಗಿದ್ದರೂ ವಾದಿಸಲಾರೆನು ನನ್ನ ನ್ಯಾಯಾಧೀಶನಲ್ಲಿ ದಯೆಯನು ಕೋರುವೆನು.
- Verse 16: ನಾನು ಕರೆದಾಗ ಓಗೊಟ್ಟಿದ್ದರೂ ನನ್ನ ವಿಜ್ಞಾಪನೆಯನ್ನು ಆಲಿಸುವನೆಂದು ನಂಬುತ್ತಿರಲಿಲ್ಲ.
- Verse 17: ನನ್ನನ್ನು ಬಿರುಗಾಳಿಯಿಂದ ಬಡಿಯುತ್ತಾನೆ ಕಾರಣವಿಲ್ಲದೆ ಗಾಯದ ಮೇಲೆ ಗಾಯ ಮಾಡುತ್ತಾನೆ.
- Verse 18: ನನಗೆ ಉಸಿರಾಡಲೂ ಬಿಡದೆ ನನ್ನ ಹೊಟ್ಟೆಯನ್ನು ಕಹಿಯಾದವುಗಳಿಂದ ತುಂಬಿಸುತ್ತಾನೆ.
- Verse 19: ಶಕ್ತಿಪ್ರಯೋಗದ ಮಾತೆತ್ತಿದರೆ, ‘ಇಗೋ, ನಾನೇ ಶಕ್ತಿಸ್ವರೂಪ’ ಎನ್ನುತ್ತಾನೆ. ನ್ಯಾಯವಿಚಾರಣೆ ಆಗಲಿಯೆಂದರೆ, ‘ನನ್ನನ್ನು ಕರೆಯಿಸುವವನಾರು?’ ಎನ್ನುತ್ತಾನೆ.
- Verse 20: ನಾನು ಸತ್ಯವಂತನಾಗಿದ್ದರೂ ಬಾಯೇ ನಾನು ಅಪರಾಧಿಯೆಂದು ಒಪ್ಪಿಕೊಳ್ಳುತ್ತದೆ. ನಾನು ನಿರ್ದೋಷಿಯಾಗಿದ್ದರೂ ‘ನಿನ್ನದು ವಕ್ರಬುದ್ಧಿ’ ಎನ್ನುತ್ತದೆ.
- Verse 21: ನಾನು ನಿರ್ದೋಷಿಯೇ ಹೌದು; ಅದರ ಬಗ್ಗೆ ನನಗಿಲ್ಲ ಚಿಂತೆ. ನನ್ನ ಪ್ರಾಣ ಕೂಡ ನನಗೆ ತೃಣವಾಗಿಬಿಟ್ಟಿದೆ.
- Verse 22: ಎಲ್ಲವೂ ಒಂದೇ ಆಗಿಬಿಟ್ಟಿದೆ. ಆದ್ದರಿಂದಲೇ ಇಂತೆನ್ನುತ್ತೇನೆ: ‘ದೋಷಿಯೋ ನಿರ್ದೋಷಿಯೋ’ ದೇವರು ಎಲ್ಲರನೂ ನಾಶಗೊಳಿಸುತ್ತಾನೆ.
- Verse 23: ಅಕಸ್ಮಾತ್ತಾಗಿ ಮಹಾವಿನಾಶ ಬಂದೊದಗಿದರೂ ನಿರ್ದೋಷಿಗಳ ಅವಸ್ಥೆ ಕಂಡು ಹಾಸ್ಯಮಾಡುತ್ತಾನೆ.
- Verse 24: ದೇಶವು ದುರುಳರ ಕೈವಶವಾಗಿದ್ದರೂ ನ್ಯಾಯಾಧೀಶರ ಮುಖಕ್ಕೆ ಮುಸುಕುಹಾಕುತ್ತಾನೆ. ಇದನ್ನು ಮಾಡುವವರು ದೇವರಲ್ಲದೆ ಮತ್ತೆ ಯಾರು?
- Verse 25: ನನ್ನ ದಿನಗಳು ಓಟಗಾರನಿಗಿಂತ ವೇಗ ಅವು ಓಡುತ್ತವೆ ಕಾಣದೆ ಯಾವುದೊಂದು ಸುಖ.
- Verse 26: ಬೆಂಡಿನ ಹರಗಲು ದೌಡಾಯಿಸುವಂತೆ ಬೇಟೆಯ ಮೇಲೆ ಗರುಡವೆರಗುವಂತೆ ಕಳೆದುಹೋಗುತ್ತವೆ ಶೀಘ್ರಗತಿಯಲ್ಲೆ.
- Verse 27: ನನ್ನ ಪ್ರಲಾಪವನ್ನು ನಾನು ಮರೆತುಬಿಟ್ಟರೆ ಬಾಡಿದ ಮುಖವನ್ನು ಮಾರ್ಪಡಿಸಿಕೊಂಡರೆ ಹರ್ಷಿಸುವೆನೆಂದು ನಾನು ಮನಸ್ಸುಮಾಡಿದರೆ.
- Verse 28: ಸಮಸ್ತ ದುಃಖದುಗುಡಗಳ ನೆನಪು ನನಗೆ ತರುತ್ತವೆ ದಿಗಿಲು ನನಗೆ ಗೊತ್ತು, ನೀ ನನ್ನನು ನಿರಪರಾಧಿ ಎಂದೆಣಿಸಲಾರೆಯೆಂದು.
- Verse 29: ಅಪರಾಧಿಯೆಂದೇ ನನಗೆ ನಿರ್ಣಯವಾಗಬೇಕಿದ್ದಲ್ಲಿ ನಾನೇಕೆ ಪ್ರಯಾಸಪಡಬೇಕು ವ್ಯರ್ಥವಾಗಿ?
- Verse 30: ಹಿಮದಿಂದ ನಾನು ಸ್ನಾನಮಾಡಿದರೂ ಚೌಳಿನಿಂದ ನಾನು ಕೈತೊಳೆದರೂ
- Verse 31: ಮುಳುಗಿಸಿಬಿಡುವೆ ನನ್ನನ್ನು ತಿಪ್ಪೆಗುಂಡಿಯಲ್ಲಿ ನನ್ನ ಉಡಿಗೆ ತೊಡಿಗೆಗಳೂ ಅಸಹ್ಯಪಡುವುವು ನನ್ನನು ನೋಡಿ.
- Verse 32: ದೇವರು ನನ್ನಂಥ ನರನಲ್ಲ, ನಾನಾತನಿಗೆ ಉತ್ತರಿಸಲು ನಾವಿಬ್ಬರೂ ನ್ಯಾಯಾಲಯದಲ್ಲಿ ಕೂಡಿ ವಾದಿಸಲು.
- Verse 33: ನಮ್ಮಿಬ್ಬರ ನಡುವೆ ನಿರ್ಣಯಿಸತಕ್ಕವನು ಇಲ್ಲ ಮಧ್ಯಸ್ಥನಾಗಬಲ್ಲ ನ್ಯಾಯಾಧಿಪತಿ ಇಲ್ಲ.
- Verse 34: ನನ್ನ ಮೇಲೆತ್ತಿರುವ ಕೋಲನ್ನು ಬಿಸಾಡಲಿ ಆತನ ಭಯಭೀತಿ ನನ್ನನು ಹೆದರಿಸದಿರಲಿ.
- Verse 35: ಆಗ ಭಯಪಡದೆ ಮಾತನಾಡುವೆನು ಅಂಜಿಕೆಗೆ ನನ್ನಲ್ಲಿ ಆಸ್ಪದ ಇರದು.