ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
98ನೇ ಅಧ್ಯಾಯ
- Verse 1: ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು I ಎಸಗಿಹನಾತನು ಪವಾಡಕಾರ್ಯಗಳನು I ಗಳಿಸಿತಾತನ ಕೈ ಪೂತಭುಜ ಗೆಲುವನು II
- Verse 2: ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿವಿಧಾನವನು I ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು II
- Verse 3: ಕಂಡುಬಂದಿತು ಜಗದ ಎಲ್ಲೆ ಎಲ್ಲೆಗೆ I ನಮ್ಮ ದೇವ ಸಾಧಿಸಿದ ಜಯಗಳಿಕೆ II ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು I ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು II
- Verse 4: ಭೂನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ I ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ II
- Verse 5: ಪ್ರಭುವನು ಸ್ತುತಿಸಿರಿ ಕಿನ್ನರಿಯೊಂದಿಗೆ I ಭಜಿಸಿರಿ ಆತನನು ವಾದ್ಯಮೇಳದೊಂದಿಗೆ II
- Verse 6: ಊದಿರಿ ಕೊಂಬನು, ತುತೂರಿಯನು I ಉದ್ಘೋಷಿಸಿರಿ ಪ್ರಭು ರಾಜನನು II
- Verse 7: ಗರ್ಜಿಸಲಿ ಸಮುದ್ರವು ಅದರಲ್ಲಿರುವುದೆಲ್ಲವು I ಕೀರ್ತಿಸಲಿ ಜಗವು, ಅದರೊಳು ವಾಸಿಸುವ ಜನರೆಲ್ಲರು II
- Verse 8: ಚಪ್ಪಾಳೆ ಹೊಡೆಯಲಿ ನದಿಗಳು I ತಟ್ಟಾಡಲಿ ಬೆಟ್ಟಗುಡ್ಡಗಳು II
- Verse 9: ಏಕೆನೆ ಬರುವನಾತ ಇಹಲೋಕಕೆ ನ್ಯಾಯತೀರಿಸಲು I ಜಗಕು, ಜನತೆಗು, ನ್ಯಾಯನೀತಿಗನುಸಾರ ತೀರ್ಪುಕೊಡಲು II