ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
16ನೇ ಅಧ್ಯಾಯ
- Verse 1: ಆಲೋಚನೆ ಮಾಡುವುದು ಮನುಷ್ಯನ ಇಚ್ಛೆ; ಅದನ್ನು ಸಫಲವಾಗಿಸುವುದು ಸರ್ವೇಶ್ವರನ ಇಚ್ಛೆ.
- Verse 2: ಮನುಷ್ಯನ ನಡತೆಯೆಲ್ಲಾ ಸ್ವಂತ ದೃಷ್ಟಿಗೆ ಶುದ್ಧ; ಆದರೆ ಅವನ ಅಂತರಂಗವನ್ನು ವೀಕ್ಷಿಸುವಂಥವನು ಸರ್ವೇಶ್ವರ.
- Verse 3: ನಿನ್ನ ಕಾರ್ಯಭಾರವನ್ನು ಸರ್ವೇಶ್ವರನಿಗೆ ವಹಿಸು; ಆಗ ಸಫಲವಾಗುವುದು ನಿನ್ನ ಯೋಜನೆಯು.
- Verse 4: ಸರ್ವೇಶ್ವರ ಒಂದೊಂದನ್ನೂ ಸೃಷ್ಟಿಸಿರುವುದು ಒಂದು ಗುರಿಯಿಟ್ಟೇ ಹೌದು; ಕೆಡುಕರನ್ನು ಉಂಟುಮಾಡಿರುವುದು ಕೇಡಿನ ದಿನಕ್ಕಾಗಿಯೇ.
- Verse 5: ಗರ್ವಿಷ್ಠನು ಯಾರೇ ಆಗಿರಲಿ, ಅವನು ಸರ್ವೇಶ್ವರನಿಗೆ ಅಸಹ್ಯ; ಅವನಿಗೆ ದಂಡನೆ ತಪ್ಪದು, ಇದು ಖಂಡಿತ.
- Verse 6: ಪ್ರೀತಿ ಸತ್ಯತೆಗಳಿಂದ ಪಾಪನಿವಾರಣೆ; ಸರ್ವೇಶ್ವರನ ಭಯಭಕ್ತಿಯಿಂದ ಹಾನಿ ನಿವಾರಣೆ.
- Verse 7: ಒಬ್ಬನ ನಡತೆಯನ್ನುಸರ್ವೇಶ್ವರ ಮೆಚ್ಚಿದರೆ, ಅವನ ಶತ್ರುಗಳನ್ನು ಆತ ಮಿತ್ರರನ್ನಾಗಿಸುತ್ತಾನೆ.
- Verse 8: ಅನ್ಯಾಯದಿಂದ ಗಳಿಸಿದ ಅಪಾರ ನಿಧಿಗಿಂತಲು ನ್ಯಾಯದಿಂದ ಕೂಡಿಸಿದ ಅಲ್ಪ ಧನ ಲೇಸು.
- Verse 9: ಮನುಷ್ಯ ಮನಬಂದಂತೆ ಮಾರ್ಗವನ್ನಾರಿಸಿಕೊಂಡರೂ ಸರ್ವೇಶ್ವರನೇ ಅವನ ನಡತೆಯನ್ನು ಪರಾಂಬರಿಸುವವನು.
- Verse 10: ದೈವೋಕ್ತಿ ಹೊರಡುವುದು ಅರಸನ ಬಾಯಿಂದ; ತಪ್ಪುಮಾಡದು ಅವನ ಬಾಯಿ ತೀರ್ಪು ನೀಡುವಾಗ.
- Verse 11: ನ್ಯಾಯದ ತ್ರಾಸುತಕ್ಕಡಿಗಳೆಲ್ಲ ಸರ್ವೇಶ್ವರನ ಏರ್ಪಾಡು; ಚೀಲದ ಕಲ್ಲುತೂಕಗಳೆಲ್ಲ ಆತನ ಕೈಕೆಲಸ.
- Verse 12: ರಾಜರಲ್ಲಿ ದುಷ್ಟಕಾರ್ಯ ಖಂಡನೀಯ; ಸದಾಚಾರ ಸಿಂಹಾಸನಕ್ಕೆ ನಿಜ ಆಧಾರ.
- Verse 13: ನೀತಿಯುತ ಮಾತನ್ನು ಅರಸನು ಮೆಚ್ಚುವನು; ಸತ್ಯವಾದಿಯನ್ನು ಆತನು ಪ್ರೀತಿಸುವನು.
- Verse 14: ಭೂಪನ ಕೋಪ ಮೃತ್ಯುವಿನ ದೂತ; ಅದನ್ನು ಶಮನಪಡಿಸಲು ಜಾಣನು ಶಕ್ತ.
- Verse 15: ಪ್ರಭುವಿನ ಮುಖಪ್ರಸನ್ನತೆ ಜೀವದ ಒರತೆ; ಆತನ ಕರುಣೆ ಮುಂಗಾರು ಮಳೆ.
- Verse 16: ಬಂಗಾರಕ್ಕಿಂತ ಜ್ಞಾನಾರ್ಜನೆ ಎಷ್ಟೋ ಮೇಲು; ಬೆಳ್ಳಿಗಿಂತ ವಿವೇಕಾರ್ಜನೆ ಎಷ್ಟೋ ಲೇಸು.
- Verse 17: ಸಜ್ಜನರ ರಾಜಮಾರ್ಗ ಹಾನಿಗೆ ದೂರ; ಸನ್ನಡತೆಯುಳ್ಳವ ಪ್ರಾಣಸಂರಕ್ಷಕ.
- Verse 18: ವಿನಾಶಕ್ಕೆ ಮುಂಚೆ ವಿಪರೀತ ಬುದ್ಧಿ; ನೆಲಕ್ಕುರುಳುವುದಕ್ಕೆ ಮುಂಚೆ ನೆತ್ತಿಗೇರಿತು ಸೊಕ್ಕು.
- Verse 19: ಸೊಕ್ಕಿನವರ ಸಂಗಡ ಸೂರೆಹಂಚಿಕೊಳ್ಳುವುದಕ್ಕಿಂತಲು ದೀನದಲಿತರ ಸಂಗಡ ದೈನ್ಯದಿಂದಿರುವುದು ಮೇಲು.
- Verse 20: ದೇವರ ವಾಕ್ಯ ಸ್ಮರಿಸುವವನು ಸುಕ್ಷೇಮದಿಂದ ಬಾಳುವನು; ಸರ್ವೇಶ್ವರನಲ್ಲಿ ಭರವಸೆ ಇಡುವವನು ಭಾಗ್ಯವಂತನು.
- Verse 21: ಜ್ಞಾನ ಹೃದಯರಿಗೆ ಜಾಣರೆಂಬ ಬಿರುದು; ಮಧುರ ಮಾತಿನಿಂದ ಬೋಧನಾಶಕ್ತಿ ಹಿರಿದು.
- Verse 22: ವಿವೇಕಿಗೆ ವಿವೇಕವೇ ಜೀವದ ಬುಗ್ಗೆ; ಮೂರ್ಖನಿಗೆ ಮೂರ್ಖತನವೇ ತಕ್ಕ ದಂಡನೆ.
- Verse 23: ಜ್ಞಾನಿಯ ಹೃದಯದಿಂದ ಬಾಯಿಗೆ ಜಾಣತನ; ಅವನ ತುಟಿಗಳಿಗೆ ಕಲಿಕೆಯ ಚೂಟಿತನ.
- Verse 24: ಸವಿನುಡಿಯು ಜೇನಿನ ಕೊಡವು; ಅದು ಆತ್ಮಕ್ಕೆ ಇಂಪು, ದೇಹಕ್ಕೆ ತಂಪು.
- Verse 25: ಒಂದು ಮಾರ್ಗ ಒಬ್ಬನಿಗೆ ನೇರವೆಂದು ತೋರಬಹುದು; ಕೊನೆಗೆ ಅದು ಮರಣಕ್ಕೆ ಒಯ್ಯುವ ಹಾದಿಯಾಗಬಹುದು.
- Verse 26: ದುಡಿಯುವವನು ಹೊಟ್ಟೆಪಾಡಿಗಾಗಿ ದುಡಿಯುತ್ತಾನೆ; ಹೊಟ್ಟೆಕಾಟವೆ ಸಾಕು ಅವನನ್ನು ದುಡಿಸಲಿಕ್ಕೆ.
- Verse 27: ನೀಚನು ಕೇಡೆಂಬ ಗುಳಿಯನ್ನು ತೋಡುತ್ತಾನೆ; ಸುಡುವ ಬೆಂಕಿಯ ಜ್ಞಾಲೆ ಅವನ ನಾಲಿಗೆ.
- Verse 28: ತುಂಟನು ಜಗಳವನ್ನು ಹುಟ್ಟಿಸುತ್ತಾನೆ; ಚಾಡಿಕೋರನು ಮಿತ್ರರನ್ನು ಬೇರ್ಪಡಿಸುತ್ತಾನೆ.
- Verse 29: ಹಿಂಸಾತ್ಮಕನು ನೆರೆಯವನನ್ನು ಮರುಳುಗೊಳಿಸುತ್ತಾನೆ; ಅವನನ್ನು ದುರ್ಮಾರ್ಗಕ್ಕೆ ಎಳೆಯುತ್ತಾನೆ.
- Verse 30: ಕಣ್ಣುಮಿಟುಕಿಸುವವನು ಕುಯುಕ್ತಿಯನ್ನು ಕಲ್ಪಿಸುತ್ತಾನೆ; ತುಟಿಕಚ್ಚುವವನು ಕೇಡನ್ನು ಸಾಧಿಸುತ್ತಾನೆ.
- Verse 31: ನರೆಗೂದಲು ಸುಂದರ ಕಿರೀಟ, ಸನ್ನಡತೆಗೆ ಸಿಗುವ ಪ್ರತಿಫಲ.
- Verse 32: ದೀರ್ಘಶಾಂತನು ಪರಾಕ್ರಮಶಾಲಿಗಿಂತ ಶ್ರೇಷ್ಠ; ತನ್ನನ್ನು ತಾನೆ ಗೆದ್ದವನು ಪಟ್ಟಣ ಗೆದ್ದವನಿಗಿಂತ ಬಲಿಷ್ಠ.
- Verse 33: ಅದೃಷ್ಟದ ಚೀಟನ್ನು ಕುಲುಕಿ ಮಡಲಿಗೆ ಹಾಕಬಹುದು; ಆದರೆ ತೀರ್ಪು ಸರ್ವೇಶ್ವರನ ಕೈಯಲ್ಲಿರುವುದು.