ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
26ನೇ ಅಧ್ಯಾಯ
- Verse 1: ಬೇಸಿಗೆಯಲ್ಲಿ ಮಂಜು ಬೀಳುತ್ತದೆಯೇ? ಸುಗ್ಗಿಯಲ್ಲಿ ಮಳೆ ಬರುತ್ತದೆಯೇ? ಹಾಗೆಯೆ ಬುದ್ಧಿಹೀನನಿಗೆ ತೋರುವ ಮಾನಮರ್ಯಾದೆ.
- Verse 2: ಕುಪ್ಪಳಿಸುವ ಗುಬ್ಬಿಯಂತೆ, ಹಾರಾಡುವ ಬಾನಕ್ಕಿಯಂತೆ, ಕಾರಣವಿಲ್ಲದೆ ಕೊಟ್ಟ ಶಾಪ ಗಾಳಿ ಪಾಲಾಗುತ್ತದೆ.
- Verse 3: ಕುದುರೆಗೆ ಚಬುಕು, ಕತ್ತೆಗೆ ಕಡಿವಾಣ, ಮೂಢನಿಗಾದರೊ ಬೆನ್ನಿಗೆ ಬೆತ್ತ.
- Verse 4: ಮೂಢನ ಪ್ರಶ್ನೆಗೆ ಉತ್ತರಕೊಡಬೇಡ; ಮೂರ್ಖನಂತೆ ಕೊಟ್ಟರೆ ನೀನೂ ಆದಿಯೇ ಅವನಂತೆ.
- Verse 5: ಮೂಢನಿಗೆ ಅವನ ಮೂರ್ಖತನ ತಿಳಿಯುವಂತೆ ಉತ್ತರಕೊಡು; ಇಲ್ಲವಾದರೆ ತನ್ನನ್ನು ಜ್ಞಾನಿಯೆಂದು ಎಣಿಸಿಕೊಂಡಾನು.
- Verse 6: ಮೂಢನನ್ನು ದೂತನನ್ನಾಗಿ ಕಳುಹಿಸುವವನು ತನ್ನ ಕಾಲನ್ನು ತಾನೆ ಕಡಿದುಕೊಳ್ಳುವನು, ತನ್ನ ಕೇಡನ್ನು ತಾನೆ ಕುಡಿಯುವನು.
- Verse 7: ತುಂಟ ಆಡುವ ಜ್ಞಾನೋಕ್ತಿಯು ಕುಂಟಕಾಲಿನ ಜೋಲಾಟವು.
- Verse 8: ಮೂಢನಿಗೆ ಕೊಡುವ ಮಾನ ಕವಣೆಗೆ ಕಟ್ಟಿದ ಕಲ್ಲು.
- Verse 9: ಮೂಢನ ಬಾಯಿಗೆ ಸಿಕ್ಕಿದ ಜ್ಞಾನೋಕ್ತಿಯು ಕುಡುಕನ ಕೈಗೆ ಸಿಕ್ಕಿದ ಮುಳ್ಳುಗೋಲು.
- Verse 10: ಮೂಢರನ್ನೂ ದಾರಿಹೋಕರನ್ನೂ ಕೂಲಿಗೆ ಕರೆಯುವವನು ಯಾರಿಗಾದರೂ ತಗಲಲಿ ಎಂದು ಬಾಣ ಎಸೆಯುವವನಿಗೆ ಸಮಾನ.
- Verse 11: ನಾಯಿ ತಾನು ಕಕ್ಕಿದ್ದನ್ನು ನೆಕ್ಕಲು ತಿರುಗಿ ಬರುವುದು; ಮೂಢನು ತಾನು ಮಾಡಿದ ಮೂರ್ಖತನಕ್ಕೆ ಹಿಂದಿರುಗುವನು.
- Verse 12: ತಾನೇ ಜ್ಞಾನಿಯೆಂದು ಎಣಿಸಿಕೊಳ್ಳುವವನನ್ನು ನೋಡು; ಅಂಥವನಿಗಿಂತ ಮೂಢನ ಸುಧಾರಣೆ ಹೆಚ್ಚು ಸಾಧ್ಯ.
- Verse 13: “ಬೀದಿಯಲ್ಲಿದೆ, ಹೊರಗೆ ಓಡಾಡುತ್ತಿದೆ ಸಿಂಹ", ಇದು ಮೈಗಳ್ಳನ ಪಿಳ್ಳೆಯ ನೆವ.
- Verse 14: ಕೀಲುಗುಣಿಯಲ್ಲಿ ಬಾಗಿಲು ತಿರುಗುವಂತೆ ಸುತ್ತಾಡುತ್ತಾನೆ ಸೋಮಾರಿ ಹಾಸಿಗೆಯಲ್ಲೆ.
- Verse 15: ಮೈಗಳ್ಳ ಕೈಹಾಕುತ್ತಾನೆ ತುತ್ತಿಗೆ, ಅದನ್ನು ಬಾಯಿಗೆ ಎತ್ತಲಾರದಷ್ಟು ಆಯಾಸ ಅವನಿಗೆ.
- Verse 16: ವಿವೇಕದಿಂದ ಉತ್ತರಿಸಬಲ್ಲ ಏಳು ಬುದ್ಧಿವಂತರಿಗಿಂತ ತಾನೇ ಜ್ಞಾನಿ ಎಂದುಕೊಳ್ಳುತ್ತಾನೆ ಸೋಮಾರಿ.
- Verse 17: ಬೇರೆಯವರ ವ್ಯಾಜ್ಯದಲ್ಲಿ ತಲೆಹಾಕುವವನು ಬೀದಿ ನಾಯಿಯ ಬಾಲ ಎಳೆದ ದಾರಿಹೋಕನಿಗೆ ಸಮಾನನು.
- Verse 18: ನೆರೆಯವನನ್ನು ಮೋಸಗೊಳಿಸಿ “ತಮಾಷೆಗಾಗಿ ಮಾಡಿದೆ” ಎನ್ನುವನವನು
- Verse 19: ಬೆಂಕಿಕೊಳ್ಳಿಗಳನ್ನೂ ಕೊಲ್ಲುವ ಬಾಣಗಳನ್ನೂ ಬೀರುವ ದೊಡ್ಡ ಹುಚ್ಚನಿಗೆ ಸಮಾನನು.
- Verse 20: ಸೌದೆಯಿಲ್ಲದಿದ್ದರೆ ಬೆಂಕಿ ಆರುವುದು; ಚಾಡಿಕೋರನಿಲ್ಲದಿದ್ದರೆ ಜಗಳ ಶಮನವಾಗುವುದು.
- Verse 21: ಕೆಂಡಕ್ಕೆ ಇದ್ದಲುಬೇಕು, ಬೆಂಕಿಗೆ ಸೌದೆ ಬೇಕು; ವ್ಯಾಜ್ಯ ಕೆರಳಿಸಲು ಜಗಳಗಂಟಿ ಇರಲೇಬೇಕು.
- Verse 22: ಚಾಡಿಕೋರನ ಮಾತು ರುಚಿಕರವಾದ ತುತ್ತು; ಹೊಟ್ಟೆಯೊಳಕ್ಕೆ ಗುಳುಕ್ಕನೆ ಇಳಿಯುತ್ತದೆ ಅದು.
- Verse 23: ಕೆಟ್ಟ ಹೃದಯದಿಂದ ಸವಿನುಡಿಯು ತುಟಿ, ಬೆಳ್ಳಿ ಮೆರುಗಿನಿಂದ ಥಳಿಸುವ ಮಣ್ಣಿನ ಬೋಕಿ.
- Verse 24: ಹಗೆಗಾರನ ತುಟಿಯಲ್ಲಿ ಸ್ನೇಹಭಾವದ ನಟನೆ; ಹೊಟ್ಟೆಯಲ್ಲಾದರೊ ಹುದುಗಿದೆ ವಂಚನೆ.
- Verse 25: ಹಗೆಗಾರ ಸವಿನುಡಿದರೂ ನಂಬಬೇಡ; ಹೃದಯದಲ್ಲಿದೆ ಏಳ್ಮಡಿ ಹೇಯ ಕೃತ್ಯ.
- Verse 26: ಹಗೆಯನ್ನು ವಂಚನೆಯಿಂದ ಮರೆಮಾಚಿದ್ದರೂ ಸಭೆಯಲ್ಲಿ ಕೆಟ್ಟತನ ಬಟ್ಟಬಯಲಾಗದಿರದು.
- Verse 27: ಗುಂಡಿಯನ್ನು ತೋಡುವವನು ತಾನೇ ಅದರಲ್ಲಿ ಬೀಳುವನು; ಹೊರಳಿಸುವವನ ಮೇಲೆಯೆ ಗುಂಡು ಹೊರಳುವುದು.
- Verse 28: ಸುಳ್ಳುನಾಲಿಗೆ ಹಗೆಮಾಡುತ್ತದೆ ಸತ್ಯವನ್ನು; ಹೊಗಳುಭಟ್ಟನ ಬಾಯಿ ತರುತ್ತದೆ ನಷ್ಟವನ್ನು.