ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ದಾನಿಯೇಲನು
2ನೇ ಅಧ್ಯಾಯ
- Verse 1: ನೆಬೂಕದ್ನೆಚ್ಚರನು ತನ್ನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಒಂದು ಕನಸು ಕಂಡು ತತ್ತರಗೊಂಡನು. ಅವನಿಗೆ ನಿದ್ರೆ ತಪ್ಪಿತು.
- Verse 2: ಆಗ ಆ ರಾಜನು ತನ್ನ ಕನಸಿನ ಅರ್ಥ ತಿಳಿಸಬೇಕೆಂದು ಜೋಯಿಸರನ್ನೂ ಮಂತ್ರವಾದಿಗಳನ್ನೂ ಮಾಟಗಾರರನ್ನೂ ಪಂಡಿತರನ್ನೂ ಕರೆಯಿಸಿದನು. ಅವರು ಆಸ್ಥಾನಕ್ಕೆ ಬಂದು ರಾಜನ ಮುಂದೆ ನಿಂತುಕೊಂಡರು.
- Verse 3: ರಾಜನು ಅವರಿಗೆ, “ನಾನು ಒಂದು ಕನಸು ಕಂಡೆ. ಅದರ ಅರ್ಥವೇನೋ ಎಂದು ನನ್ನ ಮನಸ್ಸು ತತ್ತರಗೊಂಡಿದೆ,” ಎಂದನು.
- Verse 4: ಆ ಪಂಡಿತರು ಅರಮೀಯ ಭಾಷೆಯಲ್ಲಿ ರಾಜನಿಗೆ, “ಅರಸರೇ, ಚಿರಂಜೀವಿಯಾಗಿರಿ! ಆ ಕನಸನ್ನು ನಿಮ್ಮ ದಾಸರಾದ ನಮಗೆ ಹೇಳಿ. ಅದರ ತಾತ್ಪರ್ಯವನ್ನು ತಿಳಿಸುತ್ತೇವೆ,” ಎಂದು ಅರಿಕೆಮಾಡಿದರು.
- Verse 5: ಆಗ ರಾಜನು ಆ ಪಂಡಿತರಿಗೆ, “ನನ್ನ ಈ ಮಾತು ಖಂಡಿತ; ನೀವು ಈ ಕನಸನ್ನೂ ಅದರ ಉದ್ದೇಶವನ್ನೂ ನನಗೆ ತಿಳಿಸದಿದ್ದರೆ ನಿಮ್ಮನ್ನು ತುಂಡುತುಂಡಾಗಿ ಕತ್ತರಿಸುವೆನು; ನಿಮ್ಮ ಮನೆಗಳನ್ನು ತಿಪ್ಪೆಗುಂಡಿಯನ್ನಾಗಿಸುವೆನು.
- Verse 6: ನೀವು ಆ ಕನಸನ್ನೂ ಅದರ ಉದ್ದೇಶವನ್ನೂ ತಿಳಿಸಿದ್ದೇ ಆದರೆ ನನ್ನಿಂದ ನಿಮಗೆ ದಾನ ಬಹುಮಾನಗಳೂ ವಿಶೇಷ ಸನ್ಮಾನಗಳೂ ದೊರಕುವುವು. ಆದಕಾರಣ ಆ ಕನಸನ್ನೂ ಅದರ ಉದ್ದೇಶವನ್ನೂ ನನಗೆ ತಿಳಿಸಿ,” ಎಂದನು.
- Verse 7: ಪಂಡಿತರು, “ರಾಜರು ತಮ್ಮ ದಾಸರಿಗೆ ಕನಸನ್ನು ತಿಳಿಸೋಣವಾಗಲಿ, ನಾವು ಅದರ ತಾತ್ಪರ್ಯವನ್ನು ವಿವರಿಸುವೆವು,” ಎಂದು ಮತ್ತೊಮ್ಮೆ ಉತ್ತರಕೊಟ್ಟರು.
- Verse 8: ಅದಕ್ಕೆ ರಾಜನು, “ನೀವು ಆ ಕನಸನ್ನು ನನಗೆ ತಿಳಿಸದಿದ್ದರೆ ನಿಮಗೆ ಮರಣದಂಡನೆಯಾಗುವುದು ಖಚಿತವೆಂದು ತಿಳಿದೇ ಕಾಲಹರಣ ಮಾಡುತ್ತಿದ್ದೀರಿ. ಇದು ನನಗೆ ಚೆನ್ನಾಗಿ ಗೊತ್ತು.
- Verse 9: ಕಾಲ ಬದಲಾಗುತ್ತಿರುತ್ತದೆ ಎಂದುಕೊಂಡೇ ನನ್ನ ಮುಂದೆ ಇಲ್ಲಸಲ್ಲದ್ದನ್ನು ಆಡಲು ಒಪ್ಪಂದ ಮಾಡಿಕೊಂಡಿದ್ದೀರಿ. ಅಂತು ಆ ಕನಸನ್ನು ನೀವು ನನಗೆ ತಿಳಿಸಲೇಬೇಕು. ಆಗ ಅದರ ಉದ್ದೇಶವನ್ನು ವಿವರಿಸಬಲ್ಲಿರೆಂದು ನಾನು ತಿಳಿದುಕೊಳ್ಳುವೆನು,” ಎಂದು ಹೇಳಿದನು.
- Verse 10: ಆಗ ಆ ಪಂಡಿತರು ಸನ್ನಿಧಿಯ ಮುಂದೆ, “ರಾಜರು ಕೇಳುವ ಸಂಗತಿಯನ್ನು ತಿಳಿಸಬಲ್ಲವನು ಈ ಲೋಕದಲ್ಲಿ ಯಾವನೂ ಇಲ್ಲ. ಎಷ್ಟೆಷ್ಟೋ ಬಲಿಷ್ಠರಾದ , ಪ್ರಬಲರಾದ ಯಾವ ಅರಸರೂ ಜೋಯಿಸನನ್ನಾಗಲಿ, ಮಾಟಗಾರನನ್ನಾಗಲಿ, ಪಂಡಿತನನ್ನಾಗಲಿ, ಇಂಥ ಸಂಗತಿಯನ್ನು ಎಂದೂ ಕೇಳಿದ್ದಿಲ್ಲ.
- Verse 11: ರಾಜರು ಕೇಳುತ್ತಿರುವ ಸಂಗತಿ ಅತಿಕಷ್ಟವಾದುದು. ನರಮಾನವರ ನಡುವೆ ವಾಸಮಾಡದ ದೇವರುಗಳೇ ಹೊರತು ಇನ್ನಾರೂ ರಾಜರ ಸಮ್ಮುಖದಲ್ಲಿ ಇದನ್ನು ತಿಳಿಸಲಾರರು,” ಎಂದು ಉತ್ತರಕೊಟ್ಟರು.
- Verse 12: ಇದನ್ನು ಕೇಳಿ ರಾಜನು ಉಗ್ರಕೋಪಗೊಂಡನು. ಬಾಬಿಲೋನಿನ ಸಕಲ ವಿದ್ವಾಂಸರನ್ನು ಕೊಲ್ಲಬೇಕೆಂದು ಆಜ್ಞಾಪಿಸಿದನು.
- Verse 13: ಕೂಡಲೆ ಆ ಆಜ್ಞೆ ಹೊರಪಟ್ಟಿತು. ವಿದ್ವಾಂಸರು ಪ್ರಾಣಾಪಾಯಕ್ಕೆ ಗುರಿಯಾದರು. ಅಂತೆಯೇ ದಾನಿಯೇಲನನ್ನೂ ಅವನ ಗೆಳೆಯರೆಲ್ಲರನ್ನೂ ಕೊಲ್ಲಲಿಕ್ಕೆ ಹುಡುಕಿದರು.
- Verse 14: ರಾಜನ ಮೈಗಾವಲಿನವರ ದಳವಾಯಿಯಾದ ಅರ್ಯೋಕನು ಬಾಬಿಲೋನಿನ ವಿದ್ವಾಂಸರ ಸಂಹಾರಕ್ಕಾಗಿ ಹೊರಟಾಗ ದಾನಿಯೇಲನು ಬುದ್ಧಿವಿವೇಕಗಳಿಂದ ಅವನ ಸಂಗಡ ಮಾತಾಡಿದನು.
- Verse 15: “ಈ ರಾಜಾಜ್ಞೆಯೇಕೆ ಇಷ್ಟು ತೀಕ್ಷ್ಣ?” ಎಂದು ಕೇಳಿದನು. ಅರ್ಯೋಕನು ನಡೆದ ಸಂಗತಿಯನ್ನು ದಾನಿಯೇಲನಿಗೆ ತಿಳಿಸಿದನು.
- Verse 16: ಆಮೇಲೆ ದಾನಿಯೇಲನು ಅರಮನೆಗೆ ಹೋಗಿ, “ನನಗೆ ಸಮಯಕೊಟ್ಟರೆ ಆ ಕನಸಿನ ಅರ್ಥವನ್ನು ರಾಜರಿಗೆ ನಾನು ವಿವರಿಸಬಲ್ಲೆ,” ಎಂದು ಅರಿಕೆ ಮಾಡಿದನು.
- Verse 17: ಬಳಿಕ ದಾನಿಯೇಲನು ತನ್ನ ಮನೆಗೆ ಹಿಂತಿರುಗಿ ಹನನ್ಯ, ಮೀಶಾಯೇಲ ಮತ್ತು ಅಜರ್ಯ ಎಂಬ ತನ್ನ ಗೆಳೆಯರಿಗೆ ಈ ಸಮಾಚಾರ ತಿಳಿಸಿದನು.
- Verse 18: “ನಾವು ಬಾಬಿಲೋನಿನ ಇತರ ವಿದ್ವಾಂಸರೊಂದಿಗೆ ನಾಶವಾಗದಂತೆ ಪರಲೋಕ ದೇವರು ಈ ರಹಸ್ಯದ ವಿಷಯವಾಗಿ ಕೃಪೆತೋರುವಂತೆ ಬೇಡಿಕೊಳ್ಳೋಣ,” ಎಂದು ಹೇಳಿದನು.
- Verse 19: ಆ ರಾತ್ರಿಯೇ ಸ್ವಪ್ನದಲ್ಲಿ ಕನಸಿನ ಗುಟ್ಟು ದಾನಿಯೇಲನಿಗೆ ವ್ಯಕ್ತವಾಯಿತು. ಕೂಡಲೆ ಆತನು ಪರಲೋಕ ದೇವರನ್ನು ಹೀಗೆಂದು ಸ್ತುತಿಸಿದನು:
- Verse 20: ಯುಗಯುಗಾಂತರಕ್ಕೂ ದೇವರ ನಾಮಕ್ಕೆ ಸ್ತುತಿಸ್ತೋತ್ರ! ಏಕೆಂದರೆ ಜ್ಞಾನವೂ ಶಕ್ತಿಯೂ ಆತನಿಗೆ ಸ್ವಂತ.
- Verse 21: ಕಾಲಗಳು ಋತುಗಳು ಆತನ ಕೈಯಲ್ಲಿವೆ ರಾಜರನ್ನು ಕೆಳಕ್ಕಿಳಿಸುವವನು, ಮೇಲೆ ನಿಲ್ಲಿಸುವವನು ಆತನೆ. ಜ್ಞಾನಿಗಳ ಜ್ಞಾನ, ವಿವೇಕಿಗಳ ವಿವೇಕ ಆತನ ಕೊಡುಗೆ.
- Verse 22: ಅಗಾಧ ವಿಷಯಗಳನ್ನೂ ನಿಗೂಢ ರಹಸ್ಯಗಳನ್ನೂ ತರುವನಾತ ಬಯಲಿಗೆ. ಕಗ್ಗತ್ತಲೆಯಲ್ಲಿ ಅಡಗಿರುವುದೂ ಆತನಿಗೆ ಗೋಚರ ಏಕೆಂದರೆ ಬೆಳಕು ಆತನಲ್ಲೇ ಸುಸ್ಥಿರ.
- Verse 23: ನನ್ನ ಪಿತೃಗಳ ದೇವಾ, ಮಾಡುವೆ ನಿನ್ನ ಗುಣಗಾನ, ನಿನಗೆ ನನ್ನ ಧನ್ಯವಾದ. ಏಕೆಂದರೆ ನೀನೇ ನನಗೆ ಜ್ಞಾನಶಕ್ತಿಗಳನ್ನು ದಯಪಾಲಿಸಿದಾತ. ನಾವು ಬೇಡಿದ್ದನ್ನು ನನಗೆ ತೋರ್ಪಡಿಸಿದಾತ ನೀನೇ ಹೌದು, ರಾಜ ಬಯಸಿದ ಗುಟ್ಟನ್ನು ನಮಗೆ ವ್ಯಕ್ತಪಡಿಸಿದಾತ ನೀನೇ.
- Verse 24: ತರುವಾಯ ದಾನಿಯೇಲನು ಬಾಬಿಲೋನಿನ ವಿದ್ವಾಂಸರನ್ನು ಕೊಲ್ಲುವುದಕ್ಕೆ ರಾಜನು ನೇಮಿಸಿದ್ದ ಅರ್ಯೋಕನ ಬಳಿಗೆ ಹೋದನು. ಅವನಿಗೆ, “ಬಾಬಿಲೋನಿನ ವಿದ್ವಾಂಸರನ್ನು ಕೊಲ್ಲಬೇಡ. ನನ್ನನ್ನು ರಾಜನ ಸನ್ನಿಧಿಗೆ ಸೇರಿಸಿಬಿಡು, ನಾನು ಆ ಕನಸಿನ ಉದ್ದೇಶವನ್ನು ರಾಜನಿಗೆ ತಿಳಿಸುವೆನು,” ಎಂದು ಕೇಳಿಕೊಂಡನು.
- Verse 25: ಕೂಡಲೆ ಅರ್ಯೋಕನು ದಾನಿಯೇಲನನ್ನು ರಾಜನ ಸನ್ನಿಧಿಗೆ ಬೇಗಬೇಗನೆ ಕರೆದುಕೊಂಡು ಬಂದನು. “ರಾಜರೇ, ಆ ಕನಸಿನ ಉದ್ದೇಶವನ್ನು ನಿಮಗೆ ತಿಳಿಸಬಲ್ಲ ಒಬ್ಬನು ನನಗೆ ಸಿಕ್ಕಿದ್ದಾನೆ. ಅವನು ಜುದೇಯದಿಂದ ಸೆರೆಯಾಳಾಗಿ ತಂದವರಲ್ಲಿ ಒಬ್ಬನಾಗಿದ್ದಾನೆ,” ಎಂದು ಅರಿಕೆಮಾಡಿದನು.
- Verse 26: ರಾಜನು ಬೇಲ್ತೆಶಚ್ಚರನೆಂದು ಹೆಸರು ಪಡೆದಿದ್ದ ದಾನಿಯೇಲನನ್ನು ನೋಡಿ, “ನಾನು ಕಂಡ ಕನಸನ್ನೂ ಅದರ ಅರ್ಥವನ್ನೂ ತಿಳಿಸಬಲ್ಲೆಯಾ?” ಎಂದು ವಿಚಾರಿಸಿದನು.
- Verse 27: ಅದಕ್ಕೆ ದಾನಿಯೇಲನು ಸನ್ನಿಧಿಯಲ್ಲಿ, “ರಾಜರು ಕೇಳುವ ರಹಸ್ಯವನ್ನು ವಿದ್ವಾಂಸರಾಗಲಿ, ಮಾಟಗಾರರಾಗಲಿ, ಜೋಯಿಸರಾಗಲಿ, ಶಕುನದವರಾಗಲಿ ಯಾರೂ ತಿಳಿಸಲಾರರು.
- Verse 28: ಆದರೆ ರಹಸ್ಯಗಳನ್ನು ವ್ಯಕ್ತಪಡಿಸಬಲ್ಲವರು ಒಬ್ಬರಿದ್ದಾರೆ. ಅವರೇ ಪರಲೋಕದಲ್ಲಿರುವ ದೇವರು. ಬರಲಿರುವ ಕಾಲದಲ್ಲಿ ನಡೆಯತಕ್ಕದ್ದನ್ನು ರಾಜ ನೆಬೂಕದ್ನೆಚ್ಚರರಾದ ನಿಮಗೆ ಅವರೇ ತಿಳಿಯಪಡಿಸಿದ್ದಾರೆ. ನೀವು ಕಂಡ ಕನಸು, ಹಾಸಿಗೆಯ ಮೇಲೆ ಮಲಗಿದ್ದಾಗ ನಿಮ್ಮ ಮನಸ್ಸಿಗೆ ತೋಚಿದ ಸ್ವಪ್ನಗಳು ಹೀಗಿವೆ:
- Verse 29: “ರಾಜರೇ, ನೀವು ಹಾಸಿಗೆಯ ಮೇಲೆ ಮಲಗಿರುವಾಗ ಮುಂದೆ ಏನು ಸಂಭವಿಸುವುದೋ ಎಂಬ ಯೋಚನೆ ನಿಮ್ಮಲ್ಲಿ ಹುಟ್ಟಿತ್ತು. ಗುಟ್ಟುಗಳನ್ನು ಬಟ್ಟಬಯಲಾಗಿಸುವಾತ ಮುಂದೆ ಸಂಭವಿಸುವುದನ್ನು ನಿಮಗೆ ಗೋಚರಪಡಿಸಿದ್ದಾರೆ.
- Verse 30: ಆ ಗುಟ್ಟನ್ನು ನನಗೂ ವ್ಯಕ್ತಪಡಿಸಿದ್ದಾರೆ. ನಾನು ಎಲ್ಲ ಜೀವಂತರಿಗಿಂತ ಹೆಚ್ಚು ಬುದ್ಧಿಯುಳ್ಳವನು ಎಂದೇನೂ ಅಲ್ಲ. ಆ ಕನಸಿನ ಉದ್ದೇಶ ರಾಜರಾದ ತಮಗೆ ಗೋಚರವಾಗಿ ನಿಮ್ಮ ಮನದಾಲೋಚನೆಗಳು ನಿಮಗೆ ಅರ್ಥವಾಗಲಿ ಎಂದು ನನಗೂ ವ್ಯಕ್ತಪಡಿಸಲಾಗಿದೆ.
- Verse 31: “ರಾಜರೇ ಕೇಳಿ, ತಾವು ಕಂಡದ್ದು ಒಂದು ಅದ್ಭುತ ಪ್ರತಿಮೆ. ಥಳಥಳನೆ ಹೊಳೆಯುವ ಆ ದೊಡ್ಡ ಪ್ರತಿಮೆ ನಿಮ್ಮೆದುರಿಗೆ ನಿಂತಿತ್ತು. ಭಯಂಕರವಾಗಿ ಕಾಣಿಸುತ್ತಿತ್ತು.
- Verse 32: ಆ ಪ್ರತಿಮೆಯ ತಲೆ ಅಪ್ಪಟ ಬಂಗಾರದ್ದು. ಎದೆ ತೋಳುಗಳು ಬೆಳ್ಳಿಯವು. ಹೊಟ್ಟೆ ಸೊಂಟಗಳು ಕಂಚಿನವು.
- Verse 33: ಕಾಲುಗಳು ಕಬ್ಬಿಣದವು. ಪಾದಗಳು ಕಬ್ಬಿಣ ಮತ್ತು ಮಣ್ಣಿನಿಂದ ಮಾಡಿದವು.
- Verse 34: ನೀವು ನೋಡುತ್ತಿದ್ದ ಹಾಗೆ ಬೆಟ್ಟದಿಂದ ಒಂದು ಗುಂಡು ಬಂಡೆ, ಯಾವ ಕೈಯೂ ಮುಟ್ಟದೆಯೇ, ಸಿಡಿದುಬಂದು ಆ ಪ್ರತಿಮೆಯ ಕಬ್ಬಿಣ ಮಣ್ಣಿನಿಂದಾದ ಆ ಪಾದಗಳಿಗೆ ಬಡಿದು ಚೂರುಚೂರು ಮಾಡಿಬಿಟ್ಟಿತು.
- Verse 35: ಆಗ ಕಬ್ಬಿಣ-ಮಣ್ಣು-ಕಂಚು-ಬೆಳ್ಳಿ-ಬಂಗಾರ ಇವುಗಳೆಲ್ಲವೂ ಪುಡಿಪುಡಿಯಾದವು; ಸುಗ್ಗಿಯ ಕಣಗಳ ಹೊಟ್ಟಿನಂತಾದವು. ಗಾಳಿ ಅವುಗಳನ್ನು ತೂರಿಕೊಂಡುಹೋಯಿತು. ಅವುಗಳಿಗೆ ನೆಲೆಯೇ ಇಲ್ಲವಾಯಿತು. ಪ್ರತಿಮೆಗೆ ಬಡಿದ ಆ ಬಂಡೆ ಮಹಾ ಪರ್ವತವಾಗಿ ಭೂಲೋಕದಲ್ಲೆಲ್ಲಾ ತುಂಬಿಕೊಂಡಿತು.
- Verse 36: “ಅರಸರೇ, ಇದೇ ನೀವು ಕಂಡ ಕನಸು. ಇದರ ಅರ್ಥವನ್ನೂ ತಮ್ಮ ಸನ್ನಿಧಿಯಲ್ಲಿ ಅರಿಕೆಮಾಡುತ್ತೇವೆ.
- Verse 37: ನೀವು ರಾಜಾಧಿರಾಜರು, ಪರಲೋಕ ದೇವರು ನಿಮಗೆ ರಾಜ್ಯಬಲ, ಪರಾಕ್ರಮ ಹಾಗು ವೈಭವಗಳನ್ನು ದಯಪಾಲಿಸಿದ್ದಾರೆ.
- Verse 38: ನರಮಾನವರು ವಾಸಿಸುವ ಸಕಲ ಪ್ರಾಂತ್ಯಗಳಲ್ಲಿ ಆಕಾಶಪಕ್ಷಿಗಳನ್ನೂ ಭೂಜಂತುಗಳನ್ನೂ ನಿಮ್ಮ ಕೈಗೆ ಒಪ್ಪಿಸಿದ್ದಾರೆ.
- Verse 39: ನಿಮ್ಮ ಕಾಲವಾದ ಮೇಲೆ ನಿಮಗಿಂತ ಬೀಳಾದ ಮತ್ತೊಂದು ರಾಜ್ಯ ತಲೆಯೆತ್ತಿಕೊಳ್ಳುವುದು. ಅನಂತರ ಬೇರೊಂದು ರಾಜ್ಯ ಕಂಚಿನದಾಗಿ ಕಾಣಿಸಿಕೊಂಡು ಭೂಮಂಡಲವನ್ನೆಲ್ಲ ಆಳುವುದು.
- Verse 40: ನಾಲ್ಕನೆಯ ರಾಜ್ಯ ಕಬ್ಬಿಣದಷ್ಟು ಗಟ್ಟಿಗೆ ಕಬ್ಬಿಣ ಎಲ್ಲ ವಸ್ತುಗಳನ್ನು ಚೂರುಚೂರಾಗಿ ಒಡೆದುಹಾಕುತ್ತದೆ. ಅಂತೆಯೇ ಅದು ಎಲ್ಲವನ್ನು ಚೂರುಚೂರಾಗಿಸಿ ಧ್ವಂಸ ಮಾಡುವುದು.
- Verse 41: ಪಾದಗಳಲ್ಲಿ ಹಾಗು ಪಾದಬೆರಳುಗಳಲ್ಲಿ ಒಂದು ಅಂಶ ಕಬ್ಬಿಣ ಮತ್ತೊಂದು ಅಂಶ ಮಣ್ಣು ಆಗಿದ್ದನ್ನು ನೀವು ನೋಡಿದಿರಿ. ಅಂತೆಯೇ ಆ ರಾಜ್ಯವು ಭಿನ್ನಭಿನ್ನವಾಗಿರುವುದು. ಜೇಡಿಮಣ್ಣಿನೊಂದಿಗೆ ಕಬ್ಬಿಣ ಮಿಶ್ರವಾಗಿದ್ದನ್ನು ನೀವು ನೋಡಿದಂತೆ ಆ ರಾಜ್ಯದಲ್ಲಿ ಕಬ್ಬಿಣದ ಬಲ ಸೇರಿರುವುದು.
- Verse 42: ಕಾಲ್ಬೆರಳುಗಳ ಒಂದಂಶ ಮಣ್ಣು ಆಗಿದ್ದ ಹಾಗೆ ಆ ರಾಜ್ಯದ ಒಂದಂಶ ಗಟ್ಟಿ ಇನ್ನೊಂದು ಅಂಶ ಬೆಂಡು.
- Verse 43: ಕಬ್ಬಿಣ ಜೇಡಿಮಣ್ಣಿನೊಂದಿಗೆ ಬೆರೆತಿರುವುದನ್ನು ನೀವು ನೋಡಿದ ಮೇರೆಗೆ ಆ ರಾಜ್ಯಾಂಶಗಳು ಮದುವೆ ಸಂಬಂಧದಿಂದ ಬೆರೆತುಕೊಳ್ಳುವುವು. ಆದರೆ ಕಬ್ಬಿಣ ಮಣ್ಣಿನೊಂದಿಗೆ ಹೇಗೆ ಕಲೆಯುವುದಿಲ್ಲವೋ ಹಾಗೆ ಅವು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ.
- Verse 44: ಆ ರಾಜರ ಕಾಲದಲ್ಲಿ ಪರಲೋಕ ದೇವರು ಒಂದು ಸಾಮ್ರಾಜ್ಯವನ್ನು ಸ್ಥಾಪಿಸುವರು. ಅದು ಎಂದಿಗೂ ಅಳಿಯದು. ಅದರ ಪ್ರಾಬಲ್ಯವು ಬೇರೆ ರಾಷ್ಟ್ರಕ್ಕೆ ಜಾರಿಹೋಗದು. ರಾಷ್ಟ್ರಗಳನ್ನೆಲ್ಲಾ ಭಂಗಪಡಿಸಿ, ನಿರ್ನಾಮಮಾಡಿ ಆ ಸಾಮ್ರಾಜ್ಯ ಶಾಶ್ವತವಾಗಿ ನಿಲ್ಲುವುದು.
- Verse 45: ಬೆಟ್ಟದಿಂದ ಒಂದು ಗುಂಡುಬಂಡೆ, ಯಾವ ಕೈಯೂ ಮುಟ್ಟದೆಯೇ, ಸಿಡಿದುಬಂದು ಕಬ್ಬಿಣ-ಕಂಚು-ಮಣ್ಣು-ಬೆಳ್ಳಿ-ಬಂಗಾರ ಇವುಗಳನ್ನು ಚೂರುಚೂರು ಮಾಡಿದ್ದನ್ನು ನೀವು ನೋಡಿದಿರಿ. ಇದರಿಂದ ಪರಲೋಕ ದೇವರು ಮುಂದೆ ನಡೆಯಲಿರುವ ವಿಷಯಗಳನ್ನು ರಾಜರಾದ ತಮಗೆ ತಿಳಿಯಪಡಿಸಿದ್ದಾರೆ. ಆ ಕನಸು ನಿಜವಾದುದು. ಅದರ ಅರ್ಥವೂ ನಂಬತಕ್ಕದ್ದು,” ಎಂದು ವಿವರಿಸಿದನು.
- Verse 46: ಇದನ್ನು ಆಲಿಸಿದ ರಾಜ ನೆಬೂಕದ್ನೆಚ್ಚರನು ಎದ್ದು ಅಡ್ಡಬಿದ್ದನು. ದಾನಿಯೇಲನನ್ನು ಪೂಜಿಸಿ, ಅವನಿಗೆ ನೈವೇದ್ಯಮಾಡಿ, ಧೂಪಾರತಿ ಎತ್ತಬೇಕೆಂದು ಆಜ್ಞಾಪಿಸಿದನು.
- Verse 47: ದಾನಿಯೇಲನ ವಿವರಕ್ಕೆ ಉತ್ತರವಾಗಿ, “ನೀನು ಈ ಗುಟ್ಟನ್ನು ಬಯಲಿಗೆ ತರಲು ಸಮರ್ಥನಾದ ಕಾರಣ ನಿಮ್ಮ ದೇವರು ದೇವಾಧಿದೇವರು, ರಾಜಾಧಿರಾಜರು, ಗುಟ್ಟನ್ನು ಬಟ್ಟಬಯಲಾಗಿಸುವವರು! ಇದು ಸತ್ಯ,” ಎಂದು ಹೇಳಿದನು.
- Verse 48: ಬಳಿಕ ರಾಜನು ದಾನಿಯೇಲನನ್ನು ದೊಡ್ಡ ಪದವಿಗೆ ಏರಿಸಿದನು. ಅಮೂಲ್ಯವಾದ ಬಹುಮಾನಗಳನ್ನು ಕೊಟ್ಟನು. ಬಾಬಿಲೋನಿನ ಸಂಸ್ಥಾನವನ್ನೆಲ್ಲ ಅವನಿಗೆ ಅಧೀನಪಡಿಸಿ ಬಾಬಿಲೋನಿನ ಎಲ್ಲಾ ವಿದ್ವಾಂಸರಿಗೂ ಅವನನ್ನು ಅಧ್ಯಕ್ಷನನ್ನಾಗಿ ನೇಮಿಸಿದನು.
- Verse 49: ದಾನಿಯೇಲನ ಕೋರಿಕೆಯ ಪ್ರಕಾರ ರಾಜನು ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಎಂಬುವರನ್ನು ಬಾಬಿಲೋನಿನ ಪ್ರಾಂತ್ಯಾಧಿಪತಿಗಳನ್ನಾಗಿ ನೇಮಿಸಿದನು. ದಾನಿಯೇಲನು ಮಾತ್ರ ಅರಮನೆಯಲ್ಲೇ ಕಾರ್ಯನಿರತನಾದನು.