ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಗಲಾತ್ಯರಿಗೆ
5ನೇ ಅಧ್ಯಾಯ
- Verse 1: ನಾವು ಮುಕ್ತ ಸ್ವಾತಂತ್ರ್ಯದಿಂದ ಬಾಳಬೇಕೆಂದು ಕ್ರಿಸ್ತಯೇಸು ನಮ್ಮನ್ನು ಬಿಡುಗಡೆಮಾಡಿದರು. ಆದ್ದರಿಂದ ದೃಢವಾಗಿರಿ. ಗುಲಾಮಗಿರಿಯ ನೊಗಕ್ಕೆ ಪುನಃ ಕೊರಳನ್ನು ಒಡ್ಡದಿರಿ.
- Verse 2: ಪೌಲನಾದ ನಾನು ಹೇಳುವುದನ್ನು ಕೇಳಿ: ನೀವು ಸುನ್ನತಿ ಮಾಡಿಸಿಕೊಂಡರೆ ಕ್ರಿಸ್ತಯೇಸುವಿನಿಂದ ನಿಮಗೆ ಯಾವ ಪ್ರಯೋಜನವೂ ಆಗುವುದಿಲ್ಲ.
- Verse 3: ಸುನ್ನತಿಮಾಡಿಸಿಕೊಳ್ಳುವ ಪ್ರತಿಯೊಬ್ಬನೂ ಇಡೀ ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸಲು ಬದ್ಧನಾಗಿದ್ದಾನೆ ಎಂದು ಪುನಃ ನಿಮಗೆ ನಾನು ಒತ್ತಿ ಹೇಳುತ್ತೇನೆ.
- Verse 4: ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸುವುದರ ಮೂಲಕವೇ ದೇವರೊಡನೆ ಸತ್ಸಂಬಂಧ ಪಡೆಯಬೇಕೆಂದಿರುವ ನೀವು ಕ್ರಿಸ್ತಯೇಸುವಿನಿಂದ ಬೇರ್ಪಟ್ಟಿದ್ದೀರಿ. ದೈವಾನುಗ್ರಹದಿಂದ ದೂರವಾಗಿದ್ದೀರಿ.
- Verse 5: ನಾವಾದರೋ ಪವಿತ್ರಾತ್ಮರ ಮುಖಾಂತರ ವಿಶ್ವಾಸದಿಂದ ದೇವರೊಂದಿಗೆ ಸತ್ಸಂಬಂಧವನ್ನು ಹೊಂದುತ್ತೇವೆಂಬ ನಿರೀಕ್ಷೆ ಉಳ್ಳವರಾಗಿದ್ದೇವೆ; ಈ ನಿರೀಕ್ಷೆ ಸಫಲವಾಗುವುದನ್ನು ಎದುರುನೋಡುತ್ತಿದ್ದೇವೆ.
- Verse 6: ಕ್ರಿಸ್ತಯೇಸುವಿನಲ್ಲಿ ಬಾಳುವವರಿಗೆ ಸುನ್ನತಿ ಮಾಡಿಸಿಕೊಳ್ಳುವುದೋ ಅಥವಾ ಮಾಡಿಸಿಕೊಳ್ಳದಿರುವುದೋ ಮುಖ್ಯವಲ್ಲ. ಪ್ರೀತಿಯಿಂದ ಕಾರ್ಯ ಎಸಗುವ ವಿಶ್ವಾಸವೇ ಪ್ರಮುಖವಾದುದು.
- Verse 7: ಇದುವರೆಗೂ ನಿಮ್ಮ ಬದುಕಿನ ಓಟ ಚೆನ್ನಾಗಿ ಸಾಗುತ್ತಿತ್ತು. ಸತ್ಯಕ್ಕೆ ಶರಣರಾಗದಂತೆ ಈಗ ನಿಮ್ಮನ್ನು ತಡೆದವರು ಯಾರು?
- Verse 8: ಹಾಗೆ ಅಡ್ಡಿಮಾಡಿದವರು, ನಿಮ್ಮನ್ನು ಕರೆದ ದೇವರೇನೂ ಅಲ್ಲ.
- Verse 9: ಒಂದಿಷ್ಟು ಹುಳಿ ಸಾಕು, ಹಿಟ್ಟನ್ನೆಲ್ಲಾ ಹುದುಗೆಬ್ಬಿಸಲು!
- Verse 10: ಭಿನ್ನಾಭಿಪ್ರಾಯಗಳಿಗೆ ನೀವು ಮಣಿಯುವುದಿಲ್ಲವೆಂದು ನಿಮ್ಮನ್ನು ಕುರಿತು ಪ್ರಭುವಿನಲ್ಲಿ ನನಗೆ ದೃಢವಾದ ನಂಬಿಕೆ ಇದೆ. ನಿಮ್ಮಲ್ಲಿ ಗೊಂದಲ ಎಬ್ಬಿಸುವವನು ಯಾರೇ ಆಗಿರಲಿ, ಅವನು ದೈವದಂಡನೆಗೆ ಗುರಿಯಾಗುತ್ತಾನೆ.
- Verse 11: ಸಹೋದರರೇ, ಸುನ್ನತಿಮಾಡಿಸಿಕೊಳ್ಳುವುದು ಅವಶ್ಯಕವೆಂದು ನಾನು ಇನ್ನೂ ಬೋಧಿಸುತ್ತಿರುವುದಾಗಿ ಕೆಲವರು ಹೇಳುತ್ತಿದ್ದಾರಲ್ಲವೇ? ಹಾಗೆ ಬೋಧಿಸುತ್ತಿರುವುದಾದರೆ ನಾನೇಕೆ ಹೀಗೆ ಹಿಂಸೆಬಾಧೆಗಳನ್ನು ಅನುಭವಿಸಬೇಕಾಗುತ್ತಿತ್ತು? ನಾನು ಹಾಗೇನಾದರೂ ಬೋಧಿಸಿದ್ದರೆ, ಶಿಲುಬೆಯ ಸಂದೇಶದಿಂದ ಯಾವ ಅಡ್ಡಿ ಆತಂಕವೂ ಉಂಟಾಗುತ್ತಿರಲಿಲ್ಲ.
- Verse 12: ನಿಮಗೆ ಕಿರುಕುಳ ಕೊಡುತ್ತಿರುವವರು ತಮ್ಮ ಅಂಗಚ್ಛೇದವನ್ನಾದರೂ ಮಾಡಿಕೊಂಡರೆ ಲೇಸು.
- Verse 13: ಸಹೋದರರೇ, ನೀವು ಮುಕ್ತ ಸ್ವತಂತ್ರ ಜೀವನವನ್ನು ನಡೆಸಬೇಕೆಂದು ದೇವರು ನಿಮ್ಮನ್ನು ಕರೆದಿದ್ದಾರೆ. ಆದರೆ, ಆ ಸ್ವಾತಂತ್ರ್ಯವನ್ನು ದೈಹಿಕ ಬಯಕೆಗಳಿಗೆ ಸಾಧನವಾಗಿ ಮಾಡಿಕೊಳ್ಳಬೇಡಿ. ಬದಲಾಗಿ, ನೀವು ಒಬ್ಬರಿಗೊಬ್ಬರು ಪ್ರೀತಿಯಿಂದ ಸೇವೆಮಾಡಿರಿ.
- Verse 14: “ನೀನು ನಿನ್ನನ್ನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವರನ್ನು ಪ್ರೀತಿಸು,” ಎಂಬ ಒಂದೇ ವಚನದಲ್ಲಿ ಇಡೀ ಧರ್ಮಶಾಸ್ತ್ರವು ಅಡಗಿದೆ.
- Verse 15: ಆದರೆ ನೀವು ನಿಮ್ಮ ಕಚ್ಚಾಟ, ಕಿತ್ತಾಟ, ನುಂಗಾಟ - ಇವುಗಳನ್ನು ನಿಲ್ಲಿಸದಿದ್ದರೆ ಒಬ್ಬರಿಂದೊಬ್ಬರು ವಿನಾಶವಾದೀರಿ ಎಚ್ಚರಿಕೆ!
- Verse 16: ನಾನು ಹೇಳುವುದೇನೆಂದರೆ: ನೀವು ಪವಿತ್ರಾತ್ಮರ ಪ್ರೇರಣೆಗನುಸಾರವಾಗಿ ನಡೆದುಕೊಳ್ಳಬೇಕು. ಆಗ, ದೈಹಿಕ ವ್ಯಾಮೋಹಕ್ಕೆ ನೀವು ಈಡಾಗಲಾರಿರಿ.
- Verse 17: ಏಕೆಂದರೆ, ದೈಹಿಕ ವ್ಯಾಮೋಹವು ಪವಿತ್ರಾತ್ಮರಿಗೆ ವಿರುದ್ಧವಾಗಿದೆ. ಪವಿತ್ರಾತ್ಮ ಆ ವ್ಯಾಮೋಹಕ್ಕೆ ವಿರುದ್ಧವಾಗಿದ್ದಾರೆ. ಇವೆರಡೂ ಒಂದಕ್ಕೊಂದು ಕಾದಾಡುವುದರಿಂದ ನಿಮ್ಮ ಬಯಕೆ ಕೈಗೂಡುವುದಿಲ್ಲ.
- Verse 18: ನೀವು ಪವಿತ್ರಾತ್ಮ ನಡೆಸುವ ಮಾರ್ಗದಲ್ಲಿ ನಡೆಯುವವರಾದರೆ, ಧರ್ಮಶಾಸ್ತ್ರದ ವಿಧಿನಿಯಮಗಳಿಗೆ ನೀವು ಅಧೀನರಲ್ಲ.
- Verse 19: ದೈಹಿಕ ವ್ಯಾಮೋಹದ ದುಷ್ಪರಿಣಾಮಗಳು ತಿಳಿದೇ ಇವೆ: ಹಾದರ, ಅಶುದ್ಧತೆ, ಕಾಮುಕತನ,
- Verse 20: ವಿಗ್ರಹಾರಾಧನೆ, ಮಾಟಮಂತ್ರ, ಹಗೆತನ, ಜಗಳ, ಹೊಟ್ಟೆಕಿಚ್ಚು, ಕ್ರೋಧ, ಸ್ವಾರ್ಥಭೇದ, ಪಕ್ಷಪಾತ, ಮತ್ಸರ, ಕುಡಿಕತನ, ದುಂದೌತಣ - ಇತ್ಯಾದಿಗಳು.
- Verse 21: ಇಂಥ ಕೃತ್ಯಗಳನ್ನು ಮಾಡುವವರು ದೇವರ ಸಾಮ್ರಾಜ್ಯಕ್ಕೆ ಬಾಧ್ಯರಲ್ಲ ಎಂದು ಈಗಾಗಲೇ ನಿಮ್ಮನ್ನು ಎಚ್ಚರಿಸಿದ್ದೇನೆ; ಈಗಲೂ ಎಚ್ಚರಿಸುತ್ತೇನೆ.
- Verse 22: ಪವಿತ್ರಾತ್ಮದತ್ತವಾದ ಸತ್ಫಲಗಳು ಯಾವುವೆಂದರೆ: ಪ್ರೀತಿ, ಆನಂದ, ಶಾಂತಿಸಮಾಧಾನ, ಸಹನೆ, ದಯೆ, ಸದ್ಗುಣ, ಪ್ರಾಮಾಣಿಕತೆ, ಸೌಭಾಗ್ಯ, ಸಂಯಮ - ಇಂಥವುಗಳೇ.
- Verse 23: ಇವುಗಳನ್ನು ಯಾವ ಧರ್ಮಶಾಸ್ತ್ರವೂ ಆಕ್ಷೇಪಿಸುವುದಿಲ್ಲ.
- Verse 24: ಕ್ರಿಸ್ತಯೇಸುವಿಗೆ ಸೇರಿದ ಎಲ್ಲರೂ ತಮ್ಮ ದೈಹಿಕ ವ್ಯಾಮೋಹವನ್ನು ಅದರ ಆಶಾಪಾಶಗಳ ಹಾಗೂ ದುರಿಚ್ಛೆಗಳ ಸಮೇತ ಶಿಲುಬೆಗೆ ಜಡಿದುಬಿಟ್ಟಿದ್ದಾರೆ.
- Verse 25: ಪವಿತ್ರಾತ್ಮ ನಮ್ಮ ಜೀವಾಳವಾಗಿದ್ದರೆ, ಅವರೇ ನಮ್ಮ ಜೀವನದ ಮಾರ್ಗದರ್ಶಿಯೂ ಆಗಿರಬೇಕು.
- Verse 26: ನಾವು ಅಹಂಕಾರಿಗಳಾಗಿರಬಾರದು; ಒಬ್ಬರನ್ನೊಬ್ಬರು ಕೆಣಕಬಾರದು; ಒಬ್ಬರ ಮೇಲೊಬ್ಬರು ಹೊಟ್ಟೆಕಿಚ್ಚು ಪಡಬಾರದು.