ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯಾಜಕಕಾಂಡ
14ನೇ ಅಧ್ಯಾಯ
- Verse 1: ಸರ್ವೇಶ್ವರ ಸ್ವಾಮಿ ಮೋಶೆಗೆ ಹೇಳಿದ್ದೇನೆಂದರೆ -
- Verse 2: ಕುಷ್ಠರೋಗಿ ಶುದ್ಧನಾಗುವ ದಿನದಲ್ಲಿ ಅವನ ವಿಷಯದಲ್ಲಿ ಅನುಸರಿಸಬೇಕಾದ ಕ್ರಮ ಇದು: ಅವನನ್ನು ಯಾಜಕನಿಗೆ ತೋರಿಸಬೇಕು.
- Verse 3: ಯಾಜಕನು ಪಾಳೆಯದ ಹೊರಕ್ಕೆ ಹೋಗಿ ಅವನನ್ನು ಪರೀಕ್ಷಿಸಬೇಕು. ಆಗ ಅವನಲ್ಲಿದ್ದ ಕುಷ್ಠವು ವಾಸಿಯಾಯಿತೆಂದು ಕಂಡರೆ
- Verse 4: ಶುದ್ಧಮಾಡಿಸಿಕೊಳ್ಳುವವನ ಪರವಾಗಿ ಸಜೀವವಾದ ಎರಡು ಶುದ್ಧಪಕ್ಷಿಗಳನ್ನೂ ದೇವದಾರಿನ ಕಟ್ಟಿಗೆಯನ್ನೂ ರಕ್ತವರ್ಣವುಳ್ಳ ದಾರವನ್ನೂ ಹಿಸ್ಸೋಪ್ ಗಿಡದ ಬರಲನ್ನೂ ತರಬೇಕೆಂದು ಯಾಜಕನು ಆಜ್ಞಾಪಿಸಬೇಕು.
- Verse 5: ಆ ಪಕ್ಷಿಗಳಲ್ಲಿ ಒಂದನ್ನು ಒರತೆ ನೀರಿನ ಮೇಲೆ ಮಣ್ಣಿನ ಪಾತ್ರೆಯಲ್ಲಿ ವಧಿಸಬೇಕೆಂದು ಯಾಜಕನು ಆಜ್ಞಾಪಿಸಿ, ಮತ್ತೊಂದು ಪಕ್ಷಿಯನ್ನೂ
- Verse 6: ಆ ದೇವದಾರಿನ ಕಟ್ಟಿಗೆಯನ್ನೂ ರಕ್ತವರ್ಣವುಳ್ಳ ದಾರವನ್ನೂ ಹಿಸ್ಸೋಪ್ ಗಿಡದ ಬರಲನ್ನೂ ತೆಗೆದುಕೊಂಡು ಒರತೆ ನೀರಿನ ಮೇಲೆ ವಧಿಸಿದ ಆ ಮೊದಲನೆಯ ಪಕ್ಷಿಯ ರಕ್ತದಲ್ಲಿ ಅವುಗಳನ್ನೆಲ್ಲಾ ಆ ಪಕ್ಷಿಯನ್ನು ಸಜೀವವಾಗಿಯೇ ಅದ್ದಿ
- Verse 7: ಕುಷ್ಠರೋಗದ ವಿಷಯದಲ್ಲಿ ಶುದ್ಧಮಾಡಿಸಿಕೊಳ್ಳುವವನ ಮೇಲೆ ಏಳು ಸಾರಿ ಆ ರಕ್ತವನ್ನು ಚಿಮುಕಿಸಿ ಅವನನ್ನು ಶುದ್ಧನೆಂದು ನಿರ್ಣಯಿಸಿ ಆ ಜೀವವುಳ್ಳ ಪಕ್ಷಿಯನ್ನು ಅಡವಿಯ ಕಡೆಗೆ ಬಿಟ್ಟುಬಿಡಬೇಕು.
- Verse 8: ಆಗ ಶುದ್ಧಮಾಡಿಸಿಕೊಳ್ಳುವವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸರ್ವಾಂಗಕ್ಷೌರ ಮಾಡಿಸಿಕೊಂಡು ಸ್ನಾನಮಾಡಿದ ಮೇಲೆ ಶುದ್ಧನಾಗುವನು. ತರುವಾಯ ಅವನು ಪಾಳೆಯದೊಳಗೆ ಬರಬಹುದು; ಆದರೂ ಏಳು ದಿನಗಳ ತನಕ ತನ್ನ ಡೇರೆಯ ಹೊರಗೇ ಇರಬೇಕು.
- Verse 9: ಏಳನೆಯ ದಿನದಲ್ಲಿ ತನ್ನ ತಲೆಗೂದಲು, ಗಡ್ಡ, ಹುಬ್ಬು, ಮೈಗೂದಲು ಇವುಗಳನ್ನೆಲ್ಲಾ ಕ್ಷೌರ ಮಾಡಿಸಿಕೊಂಡು ತನ್ನ ಬಟ್ಟೆಗಳನ್ನು ಒಗೆದುಕೊಂಡು ಜಲಸ್ನಾನ ಮಾಡಬೇಕು. ಆಗಿನಿಂದ ಶುದ್ಧನಾಗುವನು.
- Verse 10: ಎಂಟನೆಯ ದಿನದಲ್ಲಿ ಅವನು ಪೂರ್ಣಾಂಗವಾದ ಎರಡು ಟಗರುಗಳನ್ನೂ ಪೂರ್ಣಾಂಗವಾದ ಒಂದು ವರುಷದ ಕುರಿಯನ್ನೂ ನೈವೇದ್ಯಕ್ಕಾಗಿ ಎಣ್ಣೆ ಕಲಸಿದ ಒಂಬತ್ತು ಸೇರು ಗೋಧಿಹಿಟ್ಟನ್ನೂ ಒಂದು ಸೇರು ಎಣ್ಣೆಯನ್ನೂ ತೆಗೆದುಕೊಂಡು ಬರಬೇಕು.
- Verse 11: ಶುದ್ಧಿಮಾಡುವ ಯಾಜಕನು ಶುದ್ಧಮಾಡಿಸಿಕೊಳ್ಳುವವನನ್ನು ಇವುಗಳೊಂದಿಗೆ ದೇವದರ್ಶನದ ಗುಡಾರದ ಬಾಗಿಲಲ್ಲಿ
- Verse 12: ಸರ್ವೇಶ್ವರನ ಸನ್ನಿಧಿಯಲ್ಲಿ ನಿಲ್ಲಿಸಿ ಆ ಟಗರುಗಳಲ್ಲಿ ಒಂದನ್ನೂ ಆ ಒಂದು ಸೇರು ಎಣ್ಣೆಯನ್ನೂ ಪ್ರಾಯಶ್ಚಿತ್ತ ಬಲಿಯಾಗಿ ಸಮರ್ಪಿಸಬೇಕು: ಅವುಗಳನ್ನು ನೈವೇದ್ಯವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಆರತಿ ಎತ್ತಬೇಕು.
- Verse 13: ದೋಷಪರಿಹಾರಕ ಬಲಿಪ್ರಾಣಿಯನ್ನೂ ದಹನ ಬಲಿಪ್ರಾಣಿಯನ್ನೂ ವಧಿಸುವ ಸ್ಥಳದಲ್ಲೇ, ಅಂದರೆ ದೇವಸ್ಥಾನದ ಪ್ರಾಕಾರದೊಳಗೆ ಆ ಟಗರನ್ನು ವಧಿಸಬೇಕು. ಏಕೆಂದರೆ ದೋಷಪರಿಹಾರಕ ಬಲಿದ್ರವ್ಯದಂತೆಯೇ ಪ್ರಾಯಶ್ಚಿತ್ತ ಬಲಿದ್ರವ್ಯವೂ ಯಾಜಕನಿಗೆ ಸಲ್ಲತಕ್ಕದ್ದು; ಅದು ಮಹಾಪರಿಶುದ್ಧವಾದದ್ದು;
- Verse 14: ಆಗ ಯಾಜಕನು ಆ ಪ್ರಾಯಶ್ಚಿತ್ತ ಬಲಿಪ್ರಾಣಿಯ ರಕ್ತದಲ್ಲಿ ಸ್ವಲ್ಪ ತೆಗೆದುಕೊಂಡು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಬೇಕು.
- Verse 15: ಆಗ ಯಾಜಕನು ಆ ಸೇರು ಎಣ್ಣೆಯಲ್ಲಿ ಸ್ವಲ್ಪವನ್ನು ತನ್ನ ಎಡಗೈಯಲ್ಲಿ ಹೊಯ್ದಕೊಂಡು
- Verse 16: ತನ್ನ ಬಲಗೈಯ ಬೆರಳನ್ನು ಅದರಲ್ಲಿ ಅದ್ದಿ ಸರ್ವೇಶ್ವರನ ಸನ್ನಿಧಿಯಲ್ಲಿ ಏಳು ಸಾರಿ ಬೆರಳಿನಿಂದ ಚಿಮುಕಿಸಬೇಕು.
- Verse 17: ಅವನು ತನ್ನ ಕೈಯಲ್ಲಿರುವ ಮಿಕ್ಕ ಎಣ್ಣೆಯಲ್ಲಿ ಸ್ವಲ್ಪವನ್ನು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆರಳಿಗೂ ಪ್ರಾಯಶ್ಚಿತ್ತ ಬಲಿಪ್ರಾಣಿಯ ರಕ್ತವನ್ನು ಹಚ್ಚಿದ ಸ್ಥಳಗಳಲ್ಲಿಯೇ ಹಚ್ಚಿ
- Verse 18: ಕೈಯಲ್ಲಿರುವ ಮಿಕ್ಕ ಎಣ್ಣೆಯನ್ನು ಶುದ್ಧ ಮಾಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ದುಬಿಡಬೇಕು. ಹೀಗೆ ಯಾಜಕನು ಸರ್ವೇಶ್ವರನ ಸನ್ನಿಧಿಯಲ್ಲಿ ಅವನ ದೋಷವನ್ನು ಪರಿಹರಿಸುವನು.
- Verse 19: ಅದಲ್ಲದೆ, ಯಾಜಕನು ಶುದ್ಧಮಾಡಿಸಿಕೊಳ್ಳುವವನ ಅಪವಿತ್ರತೆಯನ್ನು ಹೋಗಲಾಡಿಸುವುದಕ್ಕೆ ಆ ಕುರಿಯನ್ನು ದೋಷಪರಿಹಾರಕ ಬಲಿಯಾಗಿ ಸಮರ್ಪಿಸಿ ಅವನ ದೋಷವನ್ನು ಪರಿಹರಿಸುವನು. ಆಮೇಲೆ ಯಾಜಕನು ಆ ಎರಡನೆಯ ಟಗರುಮರಿಯನ್ನು ದಹನಬಲಿಯಾಗಿ ವಧಿಸಬೇಕು.
- Verse 20: ಅವನು ಆ ದಹನಬಲಿಯನ್ನೂ, ನೈವೇದ್ಯವನ್ನೂ ಬಲಿಪೀಠದ ಮೇಲೆ ಸಮರ್ಪಿಸಬೇಕು. ಯಾಜಕನು ಅವನ ಪರವಾಗಿ ಹೀಗೆ ದೋಷಪರಿಹಾರ ಮಾಡಿದಾಗ ಅವನು ಶುದ್ಧನಾಗುವನು.
- Verse 21: ಅವನು ಬಡವನಾಗಿದ್ದು ಅಷ್ಟನ್ನು ಸಮರ್ಪಿಸುವುದಕ್ಕೆ ಅಶಕ್ತನಾಗಿದ್ದರೆ ಪ್ರಾಯಶ್ಚಿತ್ತ ಬಲಿಗಾಗಿ ಒಂದು ಟಗರುಮರಿಯನ್ನು ತಂದು ದೋಷಪರಿಹಾರ ಮಾಡಿಸಿಕೊಳ್ಳಲು (ಯಾಜಕನ ಕೈಯಿಂದ) ನೈವೇದ್ಯವಾಗಿ ಆರತಿಯೆತ್ತಿಸಬೇಕು; ಮತ್ತು ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಕಲಸಿದ ಒಂದು ಕಿಲೋಗ್ರಾಂ ಗೋಧಿ ಹಿಟ್ಟನ್ನೂ ಸುಮಾರು ಕಾಲು ಲೀಟರ್ ಎಣ್ಣೆಯನ್ನೂ ತರಬೇಕು.
- Verse 22: ಅದಲ್ಲದೆ ತನ್ನ ಸ್ಥಿತಿಗೆ ತಕ್ಕಂತೆ ಎರಡು ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ತಂದು ದೋಷಪರಿಹಾರಕ ಬಲಿಯಾಗಿ ಒಂದನ್ನೂ ದಹನಬಲಿಯಾಗಿ ಮತ್ತೊಂದನ್ನೂ ಸಮರ್ಪಿಸಬೇಕು.
- Verse 23: ಅವನು ತನ್ನ ಶುದ್ಧೀಕರಣಕ್ಕಾಗಿ ಎಂಟನೆಯ ದಿನದಲ್ಲಿ ಇವುಗಳನ್ನು ದೇವದರ್ಶನದ ಗುಡಾರದ ಬಾಗಿಲಿಗೆ ಸರ್ವೇಶ್ವರನ ಸನ್ನಿಧಿಗೆ ತಂದು ಯಾಜಕನಿಗೆ ಒಪ್ಪಿಸಬೇಕು.
- Verse 24: ಯಾಜಕನು ಪ್ರಾಯಶ್ಚಿತ್ತ ಬಲಿಯ ಕುರಿಯನ್ನೂ ಆ ಸೇರು ಎಣ್ಣೆಯನ್ನೂ ಸರ್ವೇಶ್ವರನ ಸನ್ನಿಧಿಯಲ್ಲಿ ನೈವೇದ್ಯವಾಗಿ ಆರತಿಯೆತ್ತಬೇಕು.
- Verse 25: ಪ್ರಾಯಶ್ಚಿತ್ತ ಬಲಿಯ ಕುರಿಯನ್ನು ವಧಿಸಿದ ನಂತರ ಯಾಜಕನು ಅದರ ರಕ್ತದಲ್ಲಿ ಸ್ವಲ್ಪ ತೆಗೆದುಕೊಂಡು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಬೇಕು.
- Verse 26: ಮತ್ತು ಯಾಜಕನು ಆ ಎಣ್ಣೆಯಲ್ಲಿ ಸ್ವಲ್ಪವನ್ನು ತನ್ನ ಎಡಗೈಯಲ್ಲಿ ಹೊಯ್ದುಕೊಂಡು
- Verse 27: ಅದರಲ್ಲಿ ಸ್ವಲ್ಪವನ್ನು ಬಲಗೈಯ ಬೆರಳಿನಿಂದ ಏಳು ಸಾರಿ ಸರ್ವೇಶ್ವರನ ಸನ್ನಿಧಿಯಲ್ಲಿ ಚಿಮುಕಿಸಬೇಕು.
- Verse 28: ಮತ್ತು ಯಾಜಕನು ತನ್ನ ಕೈಯಲ್ಲಿರುವ ಎಣ್ಣೆಯಲ್ಲಿ ಸ್ವಲ್ಪವನ್ನು ಶುದ್ಧಿಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆಟ್ಟಿಗೂ ಪ್ರಾಯಶ್ಚಿತ್ತ ಬಲಿಪ್ರಾಣಿಯ ರಕ್ತವನ್ನು ಹಚ್ಚಿದ ಸ್ಥಳಗಳಲ್ಲಿಯೇ ಹಚ್ಚಬೇಕು.
- Verse 29: ಶುದ್ಧಮಾಡಿಸಿಕೊಳ್ಳುವವನ ಪರವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡುವುದಕ್ಕಾಗಿ ಯಾಜಕನು ತನ್ನ ಕೈಯಲ್ಲಿರುವ ಮಿಕ್ಕ ಎಣ್ಣೆಯನ್ನೆಲ್ಲಾ ಅವನ ತಲೆಯ ಮೇಲೆ ಹೊಯ್ಯಬೇಕು.
- Verse 30: ತರುವಾಯ ಅವನು ತನ್ನ ಸ್ಥಿತಿಗೆ ತಕ್ಕಂತೆ ತಂದ ಎರಡು ಬೆಳವಕ್ಕಿಗಳಲ್ಲಿಯಾಗಲಿ
- Verse 31: ಪಾರಿವಾಳದ ಮರಿಗಳಲ್ಲಿಯಾಗಲಿ ದೋಷಪರಿಹಾರಕ ಬಲಿಯಾಗಿ ಒಂದನ್ನೂ ದಹನಬಲಿಯಾಗಿ ಒಂದನ್ನೂ ನೈವೇದ್ಯದ್ರವ್ಯವನ್ನೂ ಸಮರ್ಪಿಸಬೇಕು. ಹೀಗೆ ಯಾಜಕನು ಶುದ್ಧಿಮಾಡಿಸಿಕೊಳ್ಳುವವನ ಪರವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡುವನು.
- Verse 32: ಶುದ್ಧೀಕರಣ ಬಲಿಗಳನ್ನು ಅರ್ಪಿಸುವುದಕ್ಕೆ ಗತಿಯಿಲ್ಲದ ಕುಷ್ಠರೋಗಿಯ ವಿಷಯದಲ್ಲಿ ಇದೇ ವಿಧಿಯನ್ನು ಅನುಸರಿಸಬೇಕು.
- Verse 33: ಸರ್ವೇಶ್ವರಸ್ವಾಮಿ ಮೋಶೆ ಮತ್ತು ಆರೋನರಿಗೆ ಹೇಳಿದ್ದೇನೆಂದರೆ -
- Verse 34: “ನಿಮಗೆ ಸ್ವದೇಶವಾಗಿ ನಾನು ಕೊಡುವ ಕಾನಾನ್ ನಾಡಿಗೆ ನೀವು ಬಂದ ನಂತರ ಆ ನಾಡಿನ ಯಾವ ಮನೆಯ ಗೋಡೆಗಳಲ್ಲಿ ನಾನು ಕುಷ್ಠದ ಗುರುತನ್ನು ಸೂಚಿಸುತ್ತೇನೋ
- Verse 35: ಆ ಮನೆಯ ಒಡೆಯನು ಯಾಜಕನ ಬಳಿಗೆ ಬಂದು - “ನನ್ನ ಮನೆಯಲ್ಲಿ ಕುಷ್ಠರೋಗದ ಗುರುತು ಇರುವಂತೆ ತೋರುತ್ತದೆ,” ಎಂದು ಅವನಿಗೆ ತಿಳಿಸಬೇಕು.
- Verse 36: ಯಾಜಕನು ತಾನು ಆ ರೋಗದ ಗುರುತನ್ನು ನೋಡಲು ಬರುವುದಕ್ಕೆ ಮುಂಚೆ ಆ ಮನೆಯನ್ನು ಬರಿದು ಮಾಡಲು ಆಜ್ಞಾಪಿಸಬೇಕು. ಹಾಗೆ ಬರಿದು ಮಾಡದಿದ್ದರೆ ಆ ಮನೆಯಲ್ಲಿರುವ ಎಲ್ಲಾ ವಸ್ತುಗಳೂ ಅಶುದ್ಧವಾಗುವುವು. ಬರಿದು ಮಾಡಿದ ಮೇಲೆ ಯಾಜಕನು ಆ ಮನೆಯನ್ನು ಪರೀಕ್ಷಿಸುವುದಕ್ಕೆ ಒಳಗೆ ಹೋಗಬೇಕು.
- Verse 37: ಅವನು ಮನೆಯ ಗೋಡೆಗಳಲ್ಲಿರುವ ರೋಗದ ಗುರುತುಗಳನ್ನು ನೋಡುವಾಗ ಆ ಗುರುತುಗಳು ಹಸುರಾಗಿ ಅಥವಾ ಕೆಂಪಾಗಿ ಇದ್ದು ಗೋಡೆಯ ಮಟ್ಟಕ್ಕಿಂತ ತಗ್ಗಾಗಿ ತೋರಿದರೆ ಯಾಜಕನು ಹೊರಗೆ ಬಂದು
- Verse 38: ಆ ಮನೆಯನ್ನು ಏಳು ದಿನಗಳವರೆಗೂ ಮುಚ್ಚಿಸಿಬಿಡಬೇಕು.
- Verse 39: ಏಳನೆಯ ದಿನದಲ್ಲಿ ಯಾಜಕನು ಬಂದು ನೋಡುವಾಗ ಆ ಗುರುತು ಮನೆಯ ಗೋಡೆಗಳಲ್ಲಿ ಹಬ್ಬಿಕೊಂಡಿದ್ದರೆ
- Verse 40: ಆ ಗುರುತುಗಳು ಇರುವ ಕಲ್ಲುಗಳನ್ನು ತೆಗಿಸಿಬಿಟ್ಟು ಊರಿನ ಹೊರಗೆ ಅಪವಿತ್ರವಾದ ಸ್ಥಳದಲ್ಲಿ ಹಾಕಿಸಬೇಕು.
- Verse 41: ಅದಲ್ಲದೆ ಅವನು ಆ ಮನೆಯ ಗೋಡೆಗಳ ಒಳಗಡೆಯನ್ನೆಲ್ಲಾ ಗೀಚಿಸಿ, ಗೀಚಿದ ಮಣ್ಣನ್ನು ಊರಿನ ಹೊರಗೆ ಅಪವಿತ್ರ ಸ್ಥಳದಲ್ಲಿ ಹಾಕಿಸಬೇಕು.
- Verse 42: ಆಗ ಬೇರೆ ಕಲ್ಲುಗಳನ್ನು ತರಿಸಿ ಮೊದಲಿದ್ದ ಕಲ್ಲುಗಳ ಸ್ಥಳದಲ್ಲಿ ಹಾಕಿಸಿ ಹೊಸಮಣ್ಣನ್ನು ತರಿಸಿ ಆ ಗೋಡೆಗಳಿಗೆ ಮೆತ್ತಬೇಕು.
- Verse 43: ಅವನು ಆ ಕಲ್ಲುಗಳನ್ನು ತೆಗೆಸಿ ಮನೆಯ ಗೋಡೆಗಳನ್ನು ಗೀಚಿಸಿ ಮಣ್ಣು ಮೆತ್ತಿದ ಮೇಲೆ ಆ ರೋಗದ ಗುರುತು ತಿರಿಗಿ ಕಾಣಬಂದರೆ ಯಾಜಕನು ಬಂದು ಪರೀಕ್ಷಿಸಬೇಕು.
- Verse 44: ಆ ಗುರುತು ಮನೆಯ ಗೋಡೆಗಳಲ್ಲಿ ಹಬ್ಬಿಕೊಂಡಿದ್ದರೆ ಅದು ಪ್ರಾಣಹಾನಿಕರವಾದ ಕುಷ್ಠವೇ; ಆ ಮನೆ ಅಶುದ್ಧವಾಗಿರುವುದು.
- Verse 45: ಅವನು ಆ ಮನೆಯನ್ನು ಕೆಡವಿ ಅದರ ಎಲ್ಲಾ ಕಲ್ಲುಗಳನ್ನೂ ತೊಲೆಗಳನ್ನೂ ಮಣ್ಣನ್ನೂ ಊರಿನ ಹೊರಗೆ ಅಪವಿತ್ರ ಸ್ಥಳದಲ್ಲಿ ಹಾಕಿಸಬೇಕು.
- Verse 46: ಆ ಮನೆಯು ಮುಚ್ಚಿರುವ ದಿನಗಳಲ್ಲಿ ಯಾವನಾದರೂ ಒಳಕ್ಕೆ ಹೋದರೆ ಅವನು ಆ ದಿನದ ಸಂಜೆಯವರೆಗೆ ಅಶುದ್ಧನಾಗಿರುವನು.
- Verse 47: ಆ ಮನೆಯಲ್ಲಿ ಮಲಗಿಕೊಂಡವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು; ಅಲ್ಲಿ ಊಟಮಾಡಿದವನೂ ಬಟ್ಟೆಗಳನ್ನು ಒಗೆದುಕೊಳ್ಳಬೇಕು.
- Verse 48: ಆದರೆ ತಾನು ಆ ಮನೆಗೆ ಹೊಸದಾಗಿ ಮಣ್ಣು ಮೆತ್ತಿಸಿದ ಮೇಲೆ ಯಾಜಕನು ಬಂದು ನೋಡುವಾಗ ಆ ರೋಗದ ಗುರುತು ಕಾಣಿಸದೆಹೋದರೆ ರೋಗಪರಿಹಾರವಾಗಿ ಆ ಮನೆ ಶುದ್ಧವಾಯಿತೆಂದು ನಿರ್ಣಯಿಸಬೇಕು.
- Verse 49: ಆ ಮನೆಯ ಶುದ್ಧೀಕರಣಕ್ಕಾಗಿ ಅವನು ಎರಡು ಪಕ್ಷಿಗಳನ್ನೂ ದೇವದಾರಿನ ಕಟ್ಟಿಗೆಯನ್ನೂ ರಕ್ತವರ್ಣವುಳ್ಳ ದಾರವನ್ನೂ ಹಿಸ್ಸೋಪ್ ಗಿಡದ ಬರಲನ್ನೂ ತೆಗೆದುಕೊಂಡು ಒಂದು ಪಕ್ಷಿಯನ್ನು
- Verse 50: ಒರತೆ ನೀರಿನ ಮೇಲೆ ಮಣ್ಣಿನ ಪಾತ್ರೆಯಲ್ಲಿ ವಧಿಸಿ
- Verse 51: ಆ ದೇವದಾರಿನ ಕಟ್ಟಿಗೆಯನ್ನೂ ಹಿಸ್ಸೋಪಿನ ಬರಲನ್ನೂ ರಕ್ತವರ್ಣವುಳ್ಳ ದಾರವನ್ನೂ ಸಜೀವವಾದ ಮತ್ತೊಂದು ಪಕ್ಷಿಯನ್ನೂ ತೆಗೆದುಕೊಂಡು ತಾನು ವಧಿಸಿದ ಪಕ್ಷಿಯ ರಕ್ತದಲ್ಲಿಯೂ ಒರತೆಯ ನೀರಿನಲ್ಲಿಯೂ ಅದ್ದಿ ಏಳು ಸಾರಿ ಆ ಮನೆಯ ಗೋಡೆಗಳಿಗೆ ಪ್ರೋಕ್ಷಿಸಬೇಕು.
- Verse 52: ಹಾಗೆ ಆ ಪಕ್ಷಿಯ ರಕ್ತ, ಒರತೆ ನೀರು, ಸಜೀವಪಕ್ಷಿ, ದೇವದಾರಿನ ಆ ಕಟ್ಟಿಗೆ, ಹಿಸ್ಸೋಪು, ರಕ್ತವರ್ಣದ ದಾರ ಇವುಗಳಿಂದ ಆ ಮನೆಯನ್ನು ಶುದ್ಧಿ ಮಾಡುವನು.
- Verse 53: ಅವನು ಆ ಜೀವವುಳ್ಳ ಪಕ್ಷಿಯನ್ನು ಊರ ಹೊರಕ್ಕೆ ಅಡವಿಯ ಕಡೆಗೆ ಬಿಟ್ಟುಬಿಡಬೇಕು. ಹೀಗೆ ಅವನು ಆ ಮನೆಗಾಗಿ ದೋಷಪರಿಹಾರ ಮಾಡಿದಾಗ ಅದು ಶುದ್ಧವಾಗಿರುವುದು.
- Verse 54: ನಾನಾ ವಿಧವಾದ ಕುಷ್ಠರೋಗದ ಗುರುತುಗಳು, ಅಂದರೆ ಕೂದಲು ಬೆಳೆಯದ ಇಸಬು,
- Verse 55: ಬಟ್ಟೆಯಲ್ಲಿ ಅಥವಾ ಮನೆಯ ಗೋಡೆಯಲ್ಲಿ ಕಾಣಿಸುವ ಕುಷ್ಠರೋಗದ ಗುರುತು,
- Verse 56: ಶರೀರದ ಚರ್ಮದ ಮೇಲೆ ಉಂಟಾಗುವ ಬಾವು, ಗುಳ್ಳೆ, ಹೊಳೆಯುವ ಕಲೆ
- Verse 57: ಇವುಗಳಲ್ಲಿ ಶುದ್ಧಾಶುದ್ಧಬೇಧವನ್ನು ನಿರ್ಣಯಿಸುವ ನಿಯಮಗಳು ಇವು.