P. O. C ബൈബിള്
ಹಳೆಯ ಒಡಂಬಡಿಕೆ
ಜೆಕರ್ಯ
12ನೇ ಅಧ್ಯಾಯ
- Verse 1: ಇಸ್ರಯೇಲಿನ ವಿಷಯವಾಗಿ ಸರ್ವೇಶ್ವರಸ್ವಾಮಿ ನುಡಿದ ದೈವೋಕ್ತಿ: ಆಕಾಶಮಂಡಲವನ್ನು ಹರಡಿ, ಭೂಲೋಕಕ್ಕೆ ಅಸ್ತಿಭಾರವನ್ನು ಹಾಕಿ, ಮಾನವನ ಜೀವಾತ್ಮವನ್ನು ಸೃಷ್ಟಿಸುವ ಸರ್ವೇಶ್ವರ ಇಂತೆನ್ನುತ್ತಾರೆ:
- Verse 2: “ನಾನು ಜೆರುಸಲೇಮನ್ನು ಮದ್ಯದ ಬುಡ್ಡಿಯನ್ನಾಗಿ ಮಾಡುವೆನು. ಅದರ ಸುತ್ತಮುತ್ತಲಿರುವ ರಾಷ್ಟ್ರಗಳು ಆ ಬುಡ್ಡಿಯಿಂದ ಕುಡಿದು ಮತ್ತರಾಗಿ, ಅತ್ತಿತ್ತ ಓಲಾಡುವರು. ಜೆರುಸಲೇಮಿಗೆ ಅವರು ಮುತ್ತಿಗೆ ಹಾಕುವಾಗ ಜುದೇಯವೆಲ್ಲವೂ ಇಕ್ಕಟ್ಟಿಗೆ ಒಳಗಾಗುವುದು.
- Verse 3: ಆ ದಿನದಂದು ಜೆರುಸಲೇಮನ್ನು ಭಾರಿ ಬಂಡೆಯನ್ನಾಗಿ ಮಾಡುವೆನು. ಅದನ್ನು ಎತ್ತಲು ಯತ್ನಿಸುವವರೆಲ್ಲರಿಗೂ ತೀವ್ರ ಗಾಯವಾಗುವುದು. ವಿಶ್ವದ ರಾಷ್ಟ್ರಗಳು ಅದನ್ನು ಎತ್ತಿಹಾಕಲು ಕೂಡಿಬರುವುವು.
- Verse 4: ಆಗ ಅವರ ಕುದುರೆಗಳೆಲ್ಲ ತಬ್ಬಿಬ್ಬಾಗುವಂತೆ ಮಾಡುವೆನು. ರಾಹುತರನ್ನು ದಿಗ್ಭ್ರಮೆಗೊಳಿಸುವೆನು. ಜುದೇಯ ಮನೆತನವನ್ನು ಕಟಾಕ್ಷಿಸಿ, ಇತರ ರಾಷ್ಟ್ರಗಳ ಕುದುರೆಗಳನ್ನೆಲ್ಲಾ ಕುರುಡಾಗಿಸುವೆನು.
- Verse 5: ಆಗ ಜುದೇಯದ ನಾಯಕರೆಲ್ಲ ತಮ್ಮ ತಮ್ಮೊಳಗೇ: ‘ಜೆರುಸಲೇಮಿನ ನಿವಾಸಿಗಳ ಶಕ್ತಿಸಾಮರ್ಥ್ಯ ಸೇನಾಧೀಶ್ವರ ಸರ್ವೇಶ್ವರನಾದ ದೇವರೇ’ ಎಂದುಕೊಳ್ಳುವರು.
- Verse 6: “ಆ ದಿನದಂದು ಜುದೇಯದ ಕುಲನಾಯಕರನ್ನು ಕಟ್ಟಿಗೆಯ ಮಧ್ಯೆ ಇರುವ ಅಗ್ಗಿಷ್ಟಿಕೆಯನ್ನಾಗಿಯೂ ಸಿವುಡುಗಳ ನಡುವೆ ಉರಿಯುವ ಪಂಜನ್ನಾಗಿಯೂ ಮಾಡುವೆನು. ಅವರು ಸುತ್ತಮುತ್ತಲಿನ ರಾಷ್ಟ್ರಗಳನ್ನು ಎಡಬಲವೆನ್ನದೆ ನಾಶಮಾಡುವರು. ಜೆರುಸಲೇಮಿನ ನಿವಾಸಿಗಳಾದರೋ ತಮ್ಮ ನಗರದಲ್ಲೇ ಸುರಕ್ಷಿತವಾಗಿರುವರು.
- Verse 7: “ಸರ್ವೇಶ್ವರನಾದ ನಾನು ಜುದೇಯದ ಸೈನ್ಯಗಳು ಮೊದಲು ಜಯಗಳಿಸುವಂತೆ ಮಾಡುವೆನು. ಆಗ ದಾವೀದ ವಂಶದವರ ಹಾಗೂ ಜೆರುಸಲೇಮಿನವರ ಘನತೆ ಗೌರವ ಜುದೇಯದವರ ಘನತೆ ಗೌರವವನ್ನು ಮೀರದು.
- Verse 8: ಅಂದು, ಸರ್ವೇಶ್ವರ ಜೆರುಸಲೇಮಿನ ನಿವಾಸಿಗಳನ್ನು ಕೋಟೆಯಂತೆ ಕಾಪಾಡುವರು. ಈ ಕಾರಣ, ಅವರಲ್ಲಿ ದುರ್ಬಲನು ದಾವೀದನಂತೆ ಬಲಾಢ್ಯನಾಗುವನು. ದಾವೀದನವಂಶ ದೇವದೂತರಂತೆ, ಹೌದು, ದೇವರಂತೆ, ಅವರಿಗೆ ಮುಂದಾಳಾಗುವುದು.
- Verse 9: ಆ ದಿನದಂದು ಜೆರುಸಲೇಮಿನ ಮೇಲೆ ಬೀಳುವ ರಾಷ್ಟ್ರಗಳೆಲ್ಲವನ್ನು ನಾನೇ ಧ್ವಂಸಮಾಡುವೆನು.
- Verse 10: “ದಾವೀದನ ವಂಶಜರಲ್ಲೂ ಜೆರುಸಲೇಮಿನ ನಿವಾಸಿಗಳ ಮನದಲ್ಲೂ ಕರುಣಿಸುವ ಹಾಗೂ ಪ್ರಾರ್ಥಿಸುವ ಮನೋಭಾವವನ್ನು ಸುರಿಸುವೆನು. ತಾವು ಇರಿದವನನ್ನೇ ಅವರು ಆಗ ದಿಟ್ಟಿಸಿ ನೋಡುವರು. ಏಕೈಕ ಮಗನನ್ನು ಕಳೆದುಕೊಂಡಂತೆ ಅವನಿಗಾಗಿ ಗೋಳಾಡುವರು. ಕಾಲವಾದ ಜ್ಯೇಷ್ಠ ಪುತ್ರನಿಗಾಗಿ ಎಂಬಂತೆ ಅತ್ತು ಪ್ರಲಾಪಿಸುವರು.
- Verse 11: ಮೆಗಿದ್ದೋವಿನ ಕಣಿವೆಯಲ್ಲಿ ಆದಂತೆ, ಹದಾಧ್ - ರೀಮೋನ್ನಲ್ಲಿ ನಡೆದಂತೆ ಜೆರುಸಲೇಮಿನಲ್ಲಿ ಆ ದಿನದಂದು ದೊಡ್ಡ ಗೋಳಾಟವಾಗುವುದು.
- Verse 12: ನಾಡೆಲ್ಲ ಗೋಳಾಡುವುದು, ಒಂದೊಂದು ಕುಟುಂಬವೂ ಪ್ರತ್ಯೇಕವಾಗಿ ಗೋಳಾಡುವುದು. “ದಾವೀದ ವಂಶದ ಕುಟುಂಬವೇ ಬೇರೆಯಾಗಿ, ಅದರಲ್ಲಿನ ಗಂಡಸರು ಹೆಂಗಸರು ಬೇರೆಬೇರೆಯಾಗಿ; ನಾತಾನ ವಂಶದ ಕುಟುಂಬವೇ ಬೇರೆಯಾಗಿ, ಅದರಲ್ಲಿನ ಗಂಡಸರು ಹೆಂಗಸರು ಬೇರೆಬೇರೆಯಾಗಿ;
- Verse 13: ಲೇವಿ ವಂಶದ ಕುಟುಂಬವೇ ಬೇರೆಯಾಗಿ, ಅದರಲ್ಲಿನ ಗಂಡಸರು ಹೆಂಗಸರು ಬೇರೆಬೇರೆಯಾಗಿ; ಶಿಮ್ಮಿಯ ಸಂತಾನದ ಕುಟುಂಬವೇ ಬೇರೆಯಾಗಿ, ಅದರಲ್ಲಿನ ಗಂಡಸರು ಹೆಂಗಸರು ಬೇರೆಬೇರೆಯಾಗಿ;
- Verse 14: ಮಿಕ್ಕ ಕುಟುಂಬಗಳೆಲ್ಲ ಬೇರೆಯಾಗಿ, ಅವುಗಳ ಗಂಡಸರು ಹೆಂಗಸರು ಬೇರೆಬೇರೆಯಾಗಿ; ಹೀಗೆ ಎಲ್ಲರು ಗೋಳಾಡುವರು ಬೇರೆಬೇರೆಯಾಗಿ.”