P. O. C ബൈബിള്
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
7ನೇ ಅಧ್ಯಾಯ
- Verse 1: ಮಗನೇ, ನನ್ನ ಮಾತುಗಳನ್ನು ಅನುಸರಿಸು, ನನ್ನ ಆಜ್ಞೆಗಳನ್ನು ಮನಸ್ಸಿನಲ್ಲಿ ಇಡು.
- Verse 2: ಕನೀನಿಕೆಯಂತೆ ನನ್ನ ಕಟ್ಟಳೆಯನ್ನು ಪಾಲಿಸು, ನನ್ನ ಆಜ್ಞೆಗಳನ್ನು ಕೈಗೊಂಡು ಬಾಳು.
- Verse 3: ಅವು ನಿನ್ನ ಬೆರಳಿಗೆ ಉಂಗುರವಾಗಿರಲಿ, ನಿನ್ನ ಹೃದಯದ ಹಲಗೆಯಲ್ಲಿ ಬರೆದಿರಲಿ.
- Verse 4: ಜ್ಞಾನವನ್ನು ‘ಅಕ್ಕಾ’ ಎಂದು ಕರೆ; ವಿವೇಕವನ್ನು ಆಪ್ತಳೆಂದು ಬಗೆ.
- Verse 5: ಅವು ನಿನ್ನನ್ನು ಕಾಪಾಡುವುವು ವ್ಯಭಿಚಾರಿಣಿಯಿಂದ, ಸವಿಮಾತಾಡುವ ಆ ಪರಸ್ತ್ರೀಯಿಂದ.
- Verse 6: ಒಮ್ಮೆ ಮನೆಯ ಕಿಟಕಿಯಿಂದ ಇಣಕಿನೋಡುವಾಗ,
- Verse 7: ಜನಸಾಮಾನ್ಯರ ನಡುವೆ, ಯೌವನಸ್ಥರ ಮಧ್ಯೆ ಮತಿಗೆಟ್ಟ ಯುವಕನೊಬ್ಬ ನಡೆವುದನ್ನು ನಾನು ಕಂಡೆ.
- Verse 8: ಹೊತ್ತು ಮೀರಿ, ಸಂಜೆಯಾಗಿ, ಕತ್ತಲು ಕವಿದಿದ್ದಾ ರಾತ್ರಿಯಲ್ಲಿ, ಅವನು ಹಾದುಹೋಗುತ್ತಿದ್ದ ಬೀದಿಯ ಮೂಲೆ ಮನೆಯ ಬಳಿ.
- Verse 9: ಒಬ್ಬಾಕೆಯ ಮನೆಯ ಕಡೆಗೆ ಆತ ತಿರುಗುವುದನ್ನು ನಾ ಕಂಡೆ;
- Verse 10: ಇಗೋ, ಅವನನ್ನು ಎದುರುಗೊಳ್ಳುತ್ತಾಳೆ ವೇಷಧಾರಿಯಾದ ಕಪಟಸ್ತ್ರೀಯೊಬ್ಬಳು.
- Verse 11: ಹಟಮಾರಿ, ಕೂಗಾಟದವಳು, ಮನೆಯಲ್ಲಿ ನಿಲ್ಲಲಾರದವಳು.
- Verse 12: ಹೊಂಚುಹಾಕುತ್ತಾಳೆ ಅವಳು ಮೂಲೆ ಮೂಲೆಗಳಲ್ಲಿ; ಒಮ್ಮೆ ಬೀದಿಯಲ್ಲಿ ಮತ್ತೊಮ್ಮೆ ಚೌಕಗಳಲ್ಲಿ.
- Verse 13: ಅವನನ್ನು ಬಿಗಿಹಿಡಿದು ಮುದ್ದಾಡುತ್ತಾಳೆ. ಲಜ್ಜೆಗೆಟ್ಟ ಮೋರೆಯುಳ್ಳ ಅವಳು ಹೀಗೆನ್ನುತ್ತಾಳೆ:
- Verse 14: “ನನ್ನ ಬಯಕೆ ಈಡೇರಲೆಂದು ಬಲಿಯರ್ಪಿಸಿದ್ದೇನೆ; ಇಂದೇ ನನ್ನ ಹರಕೆಯನ್ನು ತೀರಿಸಿದ್ದೇನೆ.
- Verse 15: ಎಂತಲೇ ನಿನ್ನನ್ನು ಎದುರುಗೊಳ್ಳಲು ಬಂದೆ ಆಕಾಂಕ್ಷೆಯಿಂದ ಹುಡುಕಿ; ಇಗೋ ನಿನ್ನನ್ನು ಕಂಡುಕೊಂಡೆ.
- Verse 16: ಮೆತ್ತೆ ಸುಪ್ಪತ್ತಿಗೆಯಿಂದ, ಚಿತ್ರವಿಚಿತ್ರ ವಸ್ತುಗಳಿಂದ, ಈಜಿಪ್ಟಿನ ನಾರುಮಡಿಯಿಂದ ಸಿದ್ಧಮಾಡಿರುವೆ ಹಾಸಿಗೆಯನ್ನು.
- Verse 17: ರಸಗಂಧ, ಅಗರು, ಲವಂಗ ಚಕ್ಕೆಗಳಿಂದ ಅದನ್ನು ಘಮಘಮಗೊಳಿಸಿರುವೆ.
- Verse 18: ಬೆಳಗಿನ ತನಕ ಬೇಕಾದಷ್ಟು ರಮಿಸೋಣ ಬಾ, ಕಾಮವಿಲಾಸಗಳಿಂದ ಸಂತೃಪ್ತಿ ಪಡೆಯೋಣ ಬಾ.
- Verse 19: ಯಜಮಾನ ಮನೆಯಲ್ಲಿ ಇಲ್ಲ; ಕೈಗೊಂಡು ಇದ್ದಾನೆ ದೂರ ಪ್ರಯಾಣ.
- Verse 20: ಹಣದ ಗಂಟನ್ನು ತೆಗೆದುಕೊಂಡು ಹೋಗಿದ್ದಾನೆ; ಮನೆಗೆ ಬರುವಂತಿಲ್ಲ ಹುಣ್ಣಿಮೆಯ ತನಕ.”
- Verse 21: ಹೀಗೆ ಮೋಹಕ ಮಾತುಗಳಿಂದ ಒತ್ತಾಯಪಡಿಸುತ್ತಾಳೆ, ಅತಿಯಾದ ಒಲುಮೆಯಿಂದ ಪುಸಲಾಯಿಸುತ್ತಾಳೆ.
- Verse 22: ವಧ್ಯಸ್ಥಾನಕ್ಕೆ ಹೋಗುವ ಹೋರಿಯಂತೆ, ಬಲೆಗೆ ಸಿಕ್ಕಿಬೀಳುವ ಜಿಂಕೆಯಂತೆ,
- Verse 23: ಉರುಳಿನತ್ತ ಹಾರುವ ಹಕ್ಕಿಯಂತೆ, ಕರುಳನ್ನು ತಿವಿಯುವ ಬಾಣದಂತೆ, ತನ್ನ ಪ್ರಾಣಕ್ಕಿರುವ ಅಪಾಯವನ್ನು ತಿಳಿಯದೆ, ಅವಳನ್ನು ತಡಮಾಡದೆ ಹಿಂಬಾಲಿಸುತ್ತಾನೆ ಆತ.
- Verse 24: ಆದ್ದರಿಂದ ಮಕ್ಕಳೇ, ನನಗೆ ಕಿವಿಗೊಡಿರಿ; ನನ್ನ ಮಾತುಗಳನ್ನು ಆಲಿಸಿರಿ.
- Verse 25: ನಿಮ್ಮ ಹೃದಯ ಅವಳ ದಾರಿಯತ್ತ ತಿರುಗದಿರಲಿ; ಅಪ್ಪಿತಪ್ಪಿ ನಿಮ್ಮ ಕಾಲು ಅವಳ ಹಾದಿಯನ್ನು ತುಳಿಯದಿರಲಿ.
- Verse 26: ಅವಳಿಗೆ ಬಲಿಯಾಗಿ ಬಿದ್ದವರು ಬಹುಮಂದಿ; ಹತರಾದವರೋ ಲೆಕ್ಕವಿಲ್ಲದಷ್ಟು ಮಂದಿ.
- Verse 27: ಅವಳ ಮನೆ ಪಾತಾಳಕ್ಕೆ ಹಾದಿ; ಮರಣದ ಗುಡಾರಗಳಿಗೆ ಇಳಿದಾರಿ.