ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
1 ಕೊರಿಂಥಿಯರಿಗೆ
5ನೇ ಅಧ್ಯಾಯ
- Verse 1: ಅನ್ಯಜನರಲ್ಲಿ ಕೂಡ ಇಲ್ಲದಂಥ ದುರ್ನಡತೆ ನಿಮ್ಮಲ್ಲಿದೆಯೆಂಬುದಾಗಿ ವರದಿ ಬಂದಿದೆ. ನಿಮ್ಮಲ್ಲಿ ಒಬ್ಬನು ತನ್ನ ತಂದೆಯ ಪತ್ನಿಯನ್ನೇ ಇಟ್ಟುಕೊಂಡಿದ್ದಾನಂತೆ.
- Verse 2: ಹೀಗಿರಲು, ನೀವು ಸೊಕ್ಕಿನಿಂದ ಮೆರೆಯಲು ಕಾರಣವಾದರೂ ಎಲ್ಲಿದೆ? ಬದಲಿಗೆ, ನೀವು ವ್ಯಸನಪಟ್ಟು ಅವನನ್ನು ನಿಮ್ಮ ಸಭಾಕೂಟದಿಂದ ಬಹಿಷ್ಕರಿಸಬೇಕಾಗಿತ್ತಲ್ಲವೆ?
- Verse 3: ನಾನು ಶಾರೀರಿಕವಾಗಿ ನಿಮ್ಮಿಂದ ದೂರವಿದ್ದರೂ ಆತ್ಮಿಕವಾಗಿ ನಿಮ್ಮ ಹತ್ತಿರವಿದ್ದೇನೆ. ನಿಮ್ಮ ಸಂಗಡವೇ ಇರುವವನಂತೆ ಅವನಿಗೆ ಏನುಮಾಡಬೇಕೆಂದು ಈಗಾಗಲೇ ತೀರ್ಮಾನಿಸಿದ್ದೇನೆ.
- Verse 4: ಅದೇನೆಂದರೆ: ನೀವು ಸಭೆಸೇರಿ, ಪ್ರಭು ಯೇಸುವಿನ ಶಕ್ತಿಯ ಆಧಾರದ ಮೇಲೆ ಅವನನ್ನು ಸೈತಾನನಿಗೆ ಒಪ್ಪಿಸಿಬಿಡಬೇಕು. ನಾನು ಆತ್ಮಿಕವಾಗಿ ನಿಮ್ಮ ಮಧ್ಯೆಯಿರುತ್ತೇನೆ.
- Verse 5: ಅವನ ದೇಹವು ದಂಡನೆಗೊಳಗಾದರೂ ಅವನ ಆತ್ಮ ಪ್ರಭು ಯೇಸುವಿನ ದಿನದಂದು ಉದ್ಧಾರವಾಗುವಂತೆ ಹೀಗೆ ಮಾಡಬೇಕು.
- Verse 6: ನೀವು ಜಂಬ ಕೊಚ್ಚಿಕೊಳ್ಳುವುದು ತರವಲ್ಲ. ಒಂದಿಷ್ಟು ಹುಳಿ, ಹಿಟ್ಟನ್ನೆಲ್ಲಾ ಹುದುಗೆಬ್ಬಿಸುತ್ತದೆಂಬುದನ್ನು ನೀವು ಚೆನ್ನಾಗಿ ಬಲ್ಲಿರಿ.
- Verse 7: ನೀವು ಹುಳಿಯಿಲ್ಲದ ಕಣಕವಾಗಿದ್ದೀರಿ. ಅಪ್ಪಟ ರೊಟ್ಟಿಯಾಗುವಂತೆ ಹುಳಿಯನ್ನು ತೆಗೆದುಹಾಕಿರಿ. ಏಕೆಂದರೆ, ಪಾಸ್ಕ ಯಜ್ಞದ ಕುರಿಮರಿಯಾದ ಕ್ರಿಸ್ತಯೇಸು ಬಲಿಯಾಗಿದ್ದಾರೆ.
- Verse 8: ಆದಕಾರಣ ನಾವು ದುಷ್ಟತನ, ಕೆಡುಕುತನವೆಂಬ ಹುಳಿಹಿಟ್ಟನ್ನು ವರ್ಜಿಸೋಣ. ಪರಿಶುದ್ಧತೆ ಮತ್ತು ಸತ್ಯತೆ ಎಂಬ ಹುಳಿಯಿಲ್ಲದ ಹೊಸರೊಟ್ಟಿಯನ್ನು ತಿಂದು ಪಾಸ್ಕಹಬ್ಬವನ್ನು ಆಚರಿಸೋಣ.
- Verse 9: ದುರಾಚಾರಿಗಳ ಸಹವಾಸ ನಿಮಗೆ ಸಲ್ಲದು, ಎಂದು ನಾನು ಬರೆದಿದ್ದೆ.
- Verse 10: ಅಂದರೆ, ಈ ಲೋಕದಲ್ಲಿರುವ ದುರಾಚಾರಿಗಳು, ಲೋಭಿಗಳು, ಸುಲಿಗೆಗಾರರು, ವಿಗ್ರಹಾರಾಧಕರು - ಇಂಥವರ ಸಹವಾಸವನ್ನು ಬಿಟ್ಟುಬಿಡಬೇಕೆಂಬುದು ನನ್ನ ಮಾತಿನ ಅರ್ಥವಲ್ಲ. ಹಾಗೆ ಮಾಡಿದರೆ ನೀವು ಈ ಲೋಕವನ್ನೇ ಬಿಟ್ಟುಹೋಗಬೇಕಾದೀತು.
- Verse 11: ಆದರೆ ತಾನು ಕ್ರೈಸ್ತ ಸಹೋದರ ಎನಿಸಿಕೊಂಡು, ದುರಾಚಾರಿಯಾಗಿಯೋ ಲೋಭೀಯಾಗಿಯೋ ವಿಗ್ರಹಾರಾಧಕನಾಗಿಯೋ ಪರನಿಂದಕನಾಗಿಯೋ ಕುಡುಕನಾಗಿಯೋ ಸುಲಿಗೆಗಾರನಾಗಿಯೋ ಯಾರಾದರೂ ಇದ್ದರೆ, ಅಂಥವನ ಸಹವಾಸ ನಿಮಗೆ ಸಲ್ಲದು. ಇದು ನನ್ನ ಪತ್ರದ ಉದ್ದೇಶ.
- Verse 12: ಧರ್ಮಸಭೆಗೆ ಸೇರದೆ ಇರುವವರ ಬಗ್ಗೆ ತೀರ್ಪುಮಾಡುವುದು ನನ್ನ ಕೆಲಸವಲ್ಲ. ಅವರನ್ನು ಕುರಿತು ದೇವರೇ ತೀರ್ಪುನೀಡುವರು. ನೀವು ತೀರ್ಪುಮಾಡಬೇಕಾದುದು ಧರ್ಮಸಭೆಗೆ ಸೇರಿದವರನ್ನು ಕುರಿತು ದುರುಳನನ್ನು ನಿಮ್ಮಿಂದ ದೂರತಳ್ಳಿರಿ.
- Verse 13: ಧರ್ಮಸಭೆಗೆ ಸೇರದೆ ಇರುವವರ ಬಗ್ಗೆ ತೀರ್ಪುಮಾಡುವುದು ನನ್ನ ಕೆಲಸವಲ್ಲ. ಅವರನ್ನು ಕುರಿತು ದೇವರೇ ತೀರ್ಪುನೀಡುವರು. ನೀವು ತೀರ್ಪುಮಾಡಬೇಕಾದುದು ಧರ್ಮಸಭೆಗೆ ಸೇರಿದವರನ್ನು ಕುರಿತು ದುರುಳನನ್ನು ನಿಮ್ಮಿಂದ ದೂರತಳ್ಳಿರಿ.