ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
1 ತಿಮೊಥೇಯನಿಗೆ
5ನೇ ಅಧ್ಯಾಯ
- Verse 1: ಹಿರಿಯರನ್ನು ಗದರಿಸಬೇಡ; ಅವರನ್ನು ತಂದೆಯಂತೆ ಭಾವಿಸಿ ಗೌರವದಿಂದ ತಿಳುವಳಿಕೆ ನೀಡು. ಯುವಕರೊಡನೆ ಸೋದರಭಾವನೆಯಿಂದ ವರ್ತಿಸು.
- Verse 2: ವೃದ್ಧೆಯರೊಡನೆ ಮಾತೃಭಾವನೆಯಿಂದ ನಡೆದುಕೋ. ಯುವತಿಯರನ್ನು ಅಕ್ಕತಂಗಿಯರೆಂದು ಪರಿಗಣಿಸಿ, ಪರಿಶುದ್ಧ ಭಾವನೆಯಿಂದ ನಡೆದುಕೋ.
- Verse 3: ದಿಕ್ಕಿಲ್ಲದ ವಿಧವೆಯರನ್ನು ಸಂರಕ್ಷಿಸು.
- Verse 4: ವಿಧವೆಯಾದವಳಿಗೆ ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ, ಆ ಮಕ್ಕಳು ಮೊತ್ತಮೊದಲು ತಮ್ಮ ಸ್ವಂತ ಕುಟುಂಬಕ್ಕೆ ಸಹಾಯಮಾಡಬೇಕಾದುದು ಅವರ ಧಾರ್ಮಿಕ ಕರ್ತವ್ಯವೆಂಬುದು ಅವರಿಗೆ ತಿಳಿದಿರಲಿ. ಹೀಗೆ ಅವರು ತಮ್ಮ ತಂದೆತಾಯಿಯರಿಗೆ ಪ್ರತ್ಯುಪಕಾರಮಾಡಿದಂತಾಗುತ್ತದೆ. ಅಲ್ಲದೆ, ಇದು ದೇವರ ದೃಷ್ಟಿಯಲ್ಲಿ ಮೆಚ್ಚುಗೆ ಪಡೆದುದು.
- Verse 5: ದಿಕ್ಕಿಲ್ಲದೆ ಒಬ್ಬಂಟಿಗಳಾಗಿರುವ ವಿಧವೆ ದೇವರ ಮೇಲೆ ಭರವಸೆಯಿಟ್ಟು ಹಗಲಿರುಳು ಪ್ರಾರ್ಥನೆಗಳಲ್ಲೂ ವಿಜ್ಞಾಪನೆಗಳಲ್ಲೂ ನಿರತಳಾಗಿರುತ್ತಾಳೆ.
- Verse 6: ವಿಲಾಸಿಯಾದ ವಿಧವೆಯಾದರೋ ಬದುಕಿದ್ದರೂ ಸತ್ತಂತೆಯೇ.
- Verse 7: ವಿಧವೆಯರು ಯಾವ ದೋಷಾರೋಪಣೆಗೂ ಗುರಿಯಾಗದಂತೆ, ಅವರಿಗೆ ಈ ಆಜ್ಞೆಗಳನ್ನು ಕೊಡು.
- Verse 8: ಯಾರಾದರೂ ತನ್ನ ಸಂಬಂಧಿಕರನ್ನು, ವಿಶೇಷವಾಗಿ ಸ್ವಂತ ಕುಟುಂಬದವರನ್ನು ಸಂರಕ್ಷಿಸದೆಹೋದರೆ, ಅಂಥವನು ವಿಶ್ವಾಸಭ್ರಷ್ಟನೂ ಅವಿಶ್ವಾಸಿಗಳಿಗಿಂತ ತುಚ್ಛನಾದವನೂ ಆಗಿದ್ದಾನೆ.
- Verse 9: ಅರವತ್ತು ವರ್ಷಕ್ಕೆ ಕಡಿಮೆಯಿಲ್ಲದ ವಿಧವೆಯನ್ನು, ವಿಧವೆಯರ ಪಟ್ಟಿಗೆ ಸೇರಿಸಿಕೊಳ್ಳಬಹುದು. ಅಂಥವಳು ಒಂದೇ ಸಾರಿ ಮದುವೆ ಆದವಳಾಗಿರಬೇಕು.
- Verse 10: ಆಕೆ ಮಕ್ಕಳನ್ನು ಯೋಗ್ಯವಾಗಿ ಸಾಕಿಸಲಹಿದವಳೂ ಅತಿಥಿಸತ್ಕಾರ ಮಾಡಿದವಳೂ ಆಗಿರಬೇಕು. ಅಲ್ಲದೆ, ದೇವಜನರ ಪಾದಸೇವೆ ಮಾಡಿದವಳೂ ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದವಳೂ ಆಗಿರಬೇಕು. ಇಂಥಾ ಪುಣ್ಯಕಾರ್ಯಗಳನ್ನು ಮಾಡಿ ಸತ್ಕ್ರಿಯೆಗಳಿಗೆ ಹೆಸರಾದವಳೂ ಆಗಿರಬೇಕು.
- Verse 11: ಯೌವನಸ್ಥ ವಿಧವೆಯರನ್ನು ಆ ಪಟ್ಟಿಯಲ್ಲಿ ಸೇರಿಸಬೇಡ. ಏಕೆಂದರೆ, ಯೇಸುಕ್ರಿಸ್ತರಿಂದ ವಿಮುಖರನ್ನಾಗಿಸುವ ಕಾಮನೆಗಳು ಇವರನ್ನು ಮರುಮದುವೆಗೆ ಹುರಿದುಂಬಿಸಬಹುದು.
- Verse 12: ಹೀಗೆ, ಅವರು ಮೊದಲು ಮಾಡಿದ ವಾಗ್ದಾನವನ್ನು ಉಲ್ಲಂಘಿಸಿ ತೀರ್ಪಿಗೆ ಗುರಿಯಾಗುತ್ತಾರೆ.
- Verse 13: ಇದಲ್ಲದೆ ಅವರು ಮನೆಮನೆಗಳನ್ನು ಸುತ್ತುತ್ತಾ ಅಲೆದಾಡುತ್ತಾ ಹರಟೆಮಲ್ಲರೂ ಸೋಮಾರಿಗಳೂ ಆಗಬಹುದು. ಇತರರ ವಿಷಯಗಳಲ್ಲಿ ತಲೆಹಾಕಬಹುದು.
- Verse 14: ಆದ್ದರಿಂದ, ತರುಣಿ ವಿಧವೆಯರು ವಿವಾಹಮಾಡಿಕೊಂಡು, ಮಕ್ಕಳನ್ನು ಹೆತ್ತು ಸಂಸಾರವನ್ನು ನಡೆಸುವುದೇ ಒಳ್ಳೆಯದೆಂದು ನನ್ನ ಭಾವನೆ. ಆಗ ನಮ್ಮನ್ನು ನಿಂದಿಸಲು ವಿರೋಧಿಗಳಿಗೆ ಆಸ್ಪದವಿರುವುದಿಲ್ಲ.
- Verse 15: ಏಕೆಂದರೆ, ಈಗಾಗಲೇ ಕೆಲವು ವಿಧವೆಯರು ದಾರಿತಪ್ಪಿ ಸೈತಾನನನ್ನು ಹಿಂಬಾಲಿಸಿದ್ದಾರೆ.
- Verse 16: ಕ್ರೈಸ್ತವಿಶ್ವಾಸಿಯಾದ ಒಬ್ಬ ಮಹಿಳೆಯ ಮನೆಯಲ್ಲಿ ವಿಧವೆಯಿದ್ದರೆ, ಆಕೆಯೇ ಅವರನ್ನು ಸಂರಕ್ಷಿಸಲಿ. ಅವರ ಪೋಷಣೆಯ ಹೊಣೆಯನ್ನು ಧರ್ಮಸಭೆ ವಹಿಸಿಕೊಳ್ಳುವುದು ತಪ್ಪುತ್ತದೆ. ಆಗ ನಿಜವಾಗಿಯೂ ದಿಕ್ಕಿಲ್ಲದ ವಿಧವೆಯರಿಗೆ ಸಭೆ ನೆರವು ನೀಡಲು ಸಾಧ್ಯವಾಗುತ್ತದೆ.
- Verse 17: ಸರಿಯಾಗಿ ಆಡಳಿತವನ್ನು ನಿರ್ವಹಿಸುತ್ತಿರುವ ಸಭಾಹಿರಿಯರು, ವಿಶೇಷವಾಗಿ ಬೋಧನೆಯಲ್ಲೂ ಉಪದೇಶದಲ್ಲೂ ಶ್ರಮಿಸುತ್ತಿರುವವರು, ಇಮ್ಮಡಿ ಸಂಭಾವನೆಗೆ ಯೋಗ್ಯರು.
- Verse 18: ‘ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬೇಡ’ ಎಂದೂ, ‘ಕಾರ್ಮಿಕನು ಕೂಲಿಗೆ ಅರ್ಹನು’ ಎಂದೂ ಧರ್ಮಶಾಸ್ತ್ರ ಹೇಳುತ್ತದೆಯಲ್ಲವೇ?
- Verse 19: ಸಭಾಹಿರಿಯರ ವಿರುದ್ಧ ಯಾರಾದರೂ ದೂರು ತಂದರೆ, ಇಬ್ಬರ ಅಥವಾ ಮೂವರ ಸಾಕ್ಷಿ ಇಲ್ಲದೆ ಅದನ್ನು ಲಕ್ಷ್ಯಕ್ಕೆ ತಂದುಕೊಳ್ಳಬೇಡ.
- Verse 20: ಯಾರಾದರೂ ಪಾಪದಲ್ಲಿಯೇ ಮುಂದುವರಿಯುತ್ತಾ ಇದ್ದರೆ, ಅಂಥವರನ್ನು ಬಹಿರಂಗವಾಗಿಯೇ ಖಂಡಿಸು. ಇದು ಇತರರಿಗೂ ಎಚ್ಚರಿಕೆಯಾಗಿರಲಿ.
- Verse 21: ದೇವರ ಸನ್ನಿಧಿಯಲ್ಲಿಯೂ ಕ್ರಿಸ್ತಯೇಸುವಿನ ಪ್ರಸನ್ನತೆಯಲ್ಲಿಯೂ ಹಾಗೂ ಆಯ್ಕೆಯಾದ ದೇವದೂತರ ಮುಂದೆಯೂ ನಾನು ನಿನಗೆ ಆಜ್ಞಾಪಿಸುವುದಿದು: ಪೂರ್ವಾಗ್ರಹದಿಂದಾಗಲಿ, ಪಕ್ಷಪಾತದಿಂದಾಗಲಿ ಏನೂ ಮಾಡಬೇಡ.
- Verse 22: ದೇವರ ಸೇವೆಗೆಂದು ಅವಸರದಿಂದ ಯಾರ ಮೇಲೂ ಹಸ್ತನಿಕ್ಷೇಪ ಮಾಡಿ ದೀಕ್ಷೆ ನೀಡಬೇಡ. ಹಾಗೆ ಮಾಡಿದರೆ, ಅವರ ಪಾಪಗಳಲ್ಲಿ ನೀನೂ ಭಾಗಿಯಾಗುವೆ. ನೀನು ಪರಿಶುದ್ಧನಾಗಿರುವ ಹಾಗೆ ನೋಡಿಕೋ.
- Verse 23: ಆಗಾಗ್ಗೆ ನೀನು ಅಸ್ವಸ್ಥನಾಗುವುದುಂಟು. ಆದ್ದರಿಂದ ಬರೀ ನೀರನ್ನು ಕುಡಿದರೆ ಸಾಲದು. ನಿನ್ನ ಜೀರ್ಣಶಕ್ತಿಯ ಸುಧಾರಣೆಗಾಗಿ ಸ್ವಲ್ಪ ದ್ರಾಕ್ಷಾರಸವನ್ನೂ ಸೇವಿಸು.
- Verse 24: ಕೆಲವರ ಪಾಪಕೃತ್ಯಗಳು ತೀರ್ಪಿಗೆ ಮುಂಚೆಯೇ ಬಟ್ಟಬಯಲಾಗುತ್ತವೆ; ಇನ್ನು ಕೆಲವರ ಪಾಪಗಳು ಮರೆಯಾಗಿದ್ದು ಕ್ರಮೇಣ ಬೆಳಕಿಗೆ ಬರುತ್ತವೆ.
- Verse 25: ಅಂತೆಯೇ, ಕೆಲವರ ಸತ್ಕಾರ್ಯಗಳು ಎಲ್ಲರಿಗೂ ಬೇಗನೆ ಗೋಚರವಾಗುತ್ತವೆ. ಇನ್ನು ಕೆಲವರ ಸತ್ಕಾರ್ಯಗಳು ಅಗೋಚರವಾಗಿದ್ದರೂ ಸದಾ ಗುಟ್ಟಾಗಿರಲಾರವು.