పరిశుద్ధ గ్రంథము
ಹಳೆಯ ಒಡಂಬಡಿಕೆ
ಕೀರ್ತನೆಗಳು
9ನೇ ಅಧ್ಯಾಯ
- Verse 1: ಮನಃಪೂರ್ವಕವಾಗಿ ಪ್ರಭು, ನಿನ್ನ ಕೊಂಡಾಡುವೆನು I ನಿನ್ನದ್ಭುತಕಾರ್ಯಗಳೆಲ್ಲವನು ನಾ ವರ್ಣಿಸುವೆನು II
- Verse 2: ಪರಾತ್ಪರನೇ, ಮಾಡುವೆನು ನಿನ್ನ ನಾಮಸ್ತುತಿ I ಹರ್ಷಾನಂದಗೊಳ್ವೆನು ದೇವಾ, ನಿನ್ನಲ್ಲತಿ II
- Verse 3: ನಿನ್ನ ಕಂಡು ನನ್ನ ವೈರಿಗಳು ಗೈದರು ಪಲಾಯನ I ಎದ್ದು ಬಿದ್ದು ಅವರೆಲ್ಲರೂ ಹೊಂದಿದರು ವಿನಾಶನ II
- Verse 4: ನ್ಯಾಯಪೀಠದಲಿ ಕುಳಿತೆನ್ನ ವ್ಯಾಜ್ಯ ತೀರಿಸಿದೆ I ನೀತಿಗನುಸಾರವಾಗಿ ನ್ಯಾಯ ಸ್ಥಾಪಿಸಿದೆ II
- Verse 5: ಭ್ರಷ್ಟರನು ದಂಡಿಸಿದೆ, ರಾಷ್ಟ್ರಗಳನು ಖಂಡಿಸಿದೆ I ಎಂದೆಂದೂ ಹೆಸರಿಲ್ಲದಂತೆ ಅವರನು ಅಳಿಸಿಹಾಕಿದೆ II
- Verse 6: ನಿಶ್ಶೇಷವಾಗಿ ಹೋದರು ವಿರೋಧಿಗಳು I ನಾಶವಾಗಿ ಹೋದವು ಅವರ ನಗರಗಳು I ಇಲ್ಲವಾದವು ಅವರ ಯಾವ ನೆನಪುಗಳು II
- Verse 7: ಪ್ರಭುವಿನ ರಾಜ್ಯಾಡಳಿತ ಶಾಶ್ವತ I ಆತನ ನ್ಯಾಯಪೀಠ ಸುಸ್ಥಾಪಿತ II
- Verse 8: ಜಗಕೆ ನ್ಯಾಯ ತೀರಿಸುವನು ನೀತಿಗನುಸಾರ I ಜನಾಂಗಕೆ ತೀರ್ಪು ಕೊಡುವನು ಸತ್ಯಕ್ಕನುಸಾರ II
- Verse 9: ದಲಿತರಿಗೆ ಪ್ರಭು ದುರ್ಗಸ್ಥಾನ I ಆಪತ್ತಿನಲ್ಲಿ ಆಶ್ರಯ ಸ್ಥಾನ II
- Verse 10: ನಿನ್ನನು ಅರಸುವವರನು ಹೇ ಪ್ರಭು, ನೀ ಕೈ ಬಿಡುವವನಲ್ಲ I ನಿನ್ನಲ್ಲಿ ಭರವಸೆ ಇಡುವರು ನಿನ್ನ ನಾಮವನರಿತವರೆಲ್ಲ II
- Verse 11: ಸಂಕೀರ್ತಿಸಿರಿ ಸಿಯೋನಿನಲಿ ವಾಸಿಸುವ ಪ್ರಭುವನು I ಪ್ರಕಟಿಸಿರಿ ಜನತೆಗೆ ಆತನ ಮಹತ್ಕಾರ್ಯಗಳನು II
- Verse 12: ರಕ್ತಪಾತ ಲೆಕ್ಕಿಸಿ ಸೇಡು ತೀರಿಸುವಾತ I ದೀನದಲಿತರ ಮೊರೆಯನೆಂದಿಗು ಮರೆಯನಾತ II
- Verse 13: ಮೃತ್ಯುವಿನ ಬಾಯಿಂದೆನ್ನ ಬದುಕಿಸುವ ಪ್ರಭು, ಕನಿಕರಿಸು I ವೈರಿ-ವಿರೋಧಿಗಳೆನಗೆ ಗೈದ ಕಿರುಕುಳವನು, ನೀ ಗಮನಿಸು II
- Verse 14: ಆಗ ಸಿಯೋನ್ ನಗರಿಯ ದ್ವಾರದಲೆ ನಿಲ್ಲುವೆನು I ನಿನ್ನ ಗುಣಾತಿಶಯಗಳನು ಪ್ರಸಿದ್ಧಪಡಿಸುವೆನು I ನೀನಿತ್ತ ಮುಕ್ತಿಗಾಗಿ ಆನಂದಗೊಳ್ಳುವೆನು II
- Verse 15: ಬಿದ್ದರು ಹೊರನಾಡಿಗರು ತಾವು ತೋಡಿದ ಗುಣಿಯಲೆ I ಸಿಕ್ಕಿಕೊಂಡಿತವರ ಕಾಲು ಅವರೊಡ್ಡಿದ ಬಲೆಯಲೆ II
- Verse 16: ಪ್ರಭುವಿತ್ತ ನ್ಯಾಯತೀರ್ಪೇ ಆತನಿಗೆ ಪ್ರಚಾರಕ I ದುಷ್ಟರು ಗೈದ ಕುಯುಕ್ತಿಯೇ ಅವರಿಗೆ ಸಂಹಾರಕ II
- Verse 17: ಕೆಳ ಪಾತಾಳವೊಂದೇ ಗತಿ ದುಷ್ಟರಿಗೆ I ದೇವರನು ಕೈಬಿಟ್ಟಾ ರಾಷ್ಟ್ರಗಳಿಗೆ II
- Verse 18: ದರಿದ್ರರನು ದೇವರು ಎಂದಿಗು ಮರೆಯುವುದಿಲ್ಲ I ನಿರ್ಗತಿಕರ ನಿರೀಕ್ಷೆ ಕೈಗೂಡದೆ ಇರುವುದಿಲ್ಲ II
- Verse 19: ಎದ್ದೇಳು ಪ್ರಭೂ, ಜಯ ದೊರಕದಿರಲಿ ನರಮಾನವನಿಗೆ I ನಡೆಯಲಿ ನಿನ್ನ ಮುಂದೆಯೆ ನ್ಯಾಯನಿರ್ಣಯ ಜನಾಂಗಗಳಿಗೆ II
- Verse 20: ಮೂಡಿಸು ಹೇ ಪ್ರಭೂ, ಅವರಲಿ ಭಯಭ್ರಾಂತಿಯನು I ಕಲಿಸು ಜನಾಂಗಕೆ ತಾವು ಹುಲು ಮಾನವರೆಂಬುದನು II