ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
14ನೇ ಅಧ್ಯಾಯ
- Verse 1: “ದೇವನಿಲ್ಲ” ಎನ್ನುವವರು ಮನದಲಿ ದುರ್ಮತಿಗಳು I ಹೇಯ ಕೃತ್ಯವೆಸಗುವರು ಆ ಭ್ರಷ್ಟಚಾರಿಗಳು I ಒಳಿತನ್ನು ಮಾಡುವರಾರೂ ಇಲ್ಲ ಅವರೊಳು II
- Verse 2: ಮಾನವರನು ಪ್ರಭು ಸ್ವರ್ಗದಿಂದ ಸಮೀಕ್ಷಿಸುತಿಹನು I ದೇವರನು ಅರಸುವ ಸನ್ಮತಿಗಳಾರೆಂದು ವೀಕ್ಷಿಸುತಿಹನು II
- Verse 3: ದಾರಿತಪ್ಪಿಹೋದ ದ್ರೋಹಿಗಳು ಅವರೆಲ್ಲ I ಒಳಿತನ್ನು ಮಾಡುವವನಿಲ್ಲ; ಓರ್ವನೂ ಇಲ್ಲ II
- Verse 4: ದುರ್ಜನರೆನ್ನ ಜನರನು ಅನ್ನದಂತೆ ನುಂಗುವುದೇಕೆ? I ಪ್ರಭುವನು ನೆನೆಯದಾ ದುಷ್ಕರ್ಮಿಗಳಿಗೆ ಅರಿವಿಲ್ಲವೇಕೆ? I
- Verse 5: ಸಜ್ಜನರ ಸಂಗದೊಳು ದೇವನಿರಲು I ದುರ್ಜನರಿದೋ ದಿಗ್ಭ್ರಾಂತರಾಗುವರು II
- Verse 6: ಕೆಡಿಸಬಹುದವರು ಬಡಜನರ ಯೋಜನೆಯನು I ಪ್ರಭುವಾದರೊ ಅವರಿಗೆ ಆಶ್ರಯವಾಗಿರುವನು II
- Verse 7: ಬರಲಿ ಇಸ್ರಯೇಲಿಗೆ ಜೀವೋದ್ಧಾರ ಸಿಯೋನಿನಿಂದ I ತರಲಿ ಪ್ರಭು ತನ್ನ ಪ್ರಜೆಗೆ ಮರಳಿ ಸಿರಿಸಂಪತ್ತ I ಸಿಗಲಿ ಯಕೋಬ - ಇಸ್ರಯೇಲ ಜನತೆಗೆ ಹರ್ಷಾನಂದ II