P. O. C ബൈബിള്
ಹೊಸ ಒಡಂಬಡಿಕೆ
ಪ್ರಕಟನೆ
4ನೇ ಅಧ್ಯಾಯ
- Verse 1: ಇದಾದ ಬಳಿಕ ಮತ್ತೊಂದು ದಿವ್ಯದರ್ಶನವನ್ನು ಕಂಡೆ. ಸ್ವರ್ಗದ ಬಾಗಿಲು ತೆರೆದಿತ್ತು. ಮೊದಲು ನನ್ನೊಡನೆ ಮಾತನಾಡಿದ ತುತೂರಿಯಂಥ ನಾದವು ನನಗೆ ಕೇಳಿಸಿತು. ಅದು, “ಮೇಲೆ ಬಾ, ಮುಂದೆ ಸಂಭವಿಸಲಿರುವ ಘಟನೆಗಳನ್ನು ನಿನಗೆ ತೋರಿಸುವೆನು,” ಎಂದು ಹೇಳಿತು.
- Verse 2: ಕೂಡಲೇ, ನಾನು ದೇವರಾತ್ಮವಶನಾದೆ. ಆಗ ಸ್ವರ್ಗದಲ್ಲಿ ಒಂದು ಸಿಂಹಾಸನ ಇರುವುದನ್ನೂ ಅದರಲ್ಲಿ ಒಬ್ಬರು ಆಸೀನರಾಗಿರುವುದನ್ನೂ ಕಂಡೆ.
- Verse 3: ಅವರ ಮುಖ ಸೂರ್ಯಕಾಂತ ಮತ್ತು ಪದ್ಮರಾಗ ಹರಳುಗಳಂತೆ ಹೊಳೆಯುತ್ತಿತ್ತು. ಸಿಂಹಾಸನದ ಸುತ್ತಲೂ ಮರಕತದಂತೆ ಹೊಳೆಯುವ ಮುಗಿಲುಬಿಲ್ಲೊಂದು ಹೊಳೆಯುತ್ತಿತ್ತು.
- Verse 4: ಈ ಸಿಂಹಾಸನದ ಸುತ್ತಲೂ ಇಪ್ಪತ್ನಾಲ್ಕು ಪೀಠಗಳು ಇದ್ದವು. ಶ್ವೇತವಸ್ತ್ರಧಾರಿಗಳಾದ ಇಪ್ಪತ್ನಾಲ್ಕುಮಂದಿ ಸಭಾಪ್ರಮುಖರು ಆ ಪೀಠಗಳಲ್ಲಿ ಕುಳಿತಿದ್ದರು. ಅವರು ತಮ್ಮ ತಲೆಗಳ ಮೇಲೆ ಚಿನ್ನದ ಕಿರೀಟಗಳನ್ನು ಧರಿಸಿದ್ದರು.
- Verse 5: ಸಿಂಹಾಸನದಿಂದ ಮಿಂಚು, ಗುಡುಗು, ಗರ್ಜನೆಗಳು ಹೊರಹೊಮ್ಮುತ್ತಿದ್ದವು. ಆ ಸಿಂಹಾಸನದ ಮುಂದೆ ದೇವರ ಸಪ್ತ ಆತ್ಮಗಳನ್ನು ಸೂಚಿಸುವ ಸಪ್ತದೀಪಗಳು ಬೆಳಗುತ್ತಿದ್ದವು.
- Verse 6: ಇದಲ್ಲದೆ, ಸಿಂಹಾಸನದ ಮುಂದೆ ಸ್ಫಟಿಕದಂಥ ಗಾಜಿನ ಸಮುದ್ರವೊಂದು ಇದ್ದಂತೆ ಕಂಡುಬಂದಿತು. ಸಿಂಹಾಸನದ ಸುತ್ತಲೂ ಅದರ ನಾಲ್ಕು ಪಾರ್ಶ್ವಗಳಲ್ಲಿ ನಾಲ್ಕು ಜೀವಿಗಳು ಇದ್ದವು. ಅವುಗಳಿಗೆ ಮುಂದೆಯೂ ಹಿಂದೆಯೂ ಅನೇಕ ಕಣ್ಣುಗಳಿದ್ದವು.
- Verse 7: ಮೊದಲನೆಯ ಜೀವಿ ಸಿಂಹದಂತೆ ಇತ್ತು. ಎರಡನೆಯ ಜೀವಿ ಹೋರಿಯಂತಿತ್ತು. ಮೂರನೆಯ ಜೀವಿಯ ಮುಖವು ಮನುಷ್ಯನ ಮುಖದಂತಿತ್ತು ಮತ್ತು ನಾಲ್ಕನೆಯ ಜೀವಿಯು ಹಾರುತ್ತಿರುವ ಗರುಡ ಪಕ್ಷಿಯಂತಿತ್ತು.
- Verse 8: ಆ ನಾಲ್ಕು ಜೀವಿಗಳಲ್ಲಿ ಪ್ರತಿಯೊಂದಕ್ಕೂ ಆರು ರೆಕ್ಕೆಗಳಿದ್ದವು. ಅವುಗಳ ಸುತ್ತಲು ಮತ್ತು ಒಳಗು ಅನೇಕ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳೂ : “ಪರಿಶುದ್ಧರು, ಪರಿಶುದ್ಧರು, ಪರಿಶುದ್ಧರು! ಸರ್ವಶಕ್ತರಾದ ಪ್ರಭು ದೇವರು ವರ್ತಮಾನಕಾಲದಲ್ಲಿ ಇರುವವರೂ ಭೂತಕಾಲದಲ್ಲಿ ಇದ್ದವರೂ ಭವಿಷ್ಯತ್ಕಾಲದಲ್ಲಿ ಬರುವವರೂ ಆಗಿದ್ದಾರೆ,” ಎಂದು ಹಾಡುತ್ತಿದ್ದವು.
- Verse 9: ಯುಗಯುಗಾಂತರಕ್ಕೂ ಜೀವಿಸುವ ಹಾಗೂ ಸಿಂಹಾಸನಾರೂಢರಾಗಿರುವ ವ್ಯಕ್ತಿಗೆ ಆ ಜೀವಿಗಳು ಘನತೆ, ಗೌರವ ಮತ್ತು ಕೃತಜ್ಞತಾಸ್ತುತಿಗಳನ್ನು ಸಲ್ಲಿಸುತ್ತಿದ್ದವು.
- Verse 10: ಆ ಇಪ್ಪತ್ನಾಲ್ಕು ಸಭಾಪ್ರಮುಖರು ತಮ್ಮ ಕಿರೀಟಗಳನ್ನು ತೆಗೆದು ಬದಿಗಿಟ್ಟು, ಸರ್ವಕಾಲಕ್ಕೂ ಜೀವಿಸುವ ಹಾಗೂ ಸಿಂಹಾಸನದಲ್ಲಿ ಆಸೀನರಾಗಿದ್ದ ವ್ಯಕ್ತಿಯ ಪಾದಗಳಿಗೆ ಅಡ್ಡಬಿದ್ದು ಯುಗಯುಗಾಂತರಗಳಲ್ಲಿಯೂ ಜೀವಿಸುವವರನ್ನು ಆರಾಧಿಸುತ್ತಾ :
- Verse 11: ನೀನೆಮ್ಮ ಪ್ರಭು ಹೇ ದೇವಾ, ಘನಮಾನ ಶಕ್ತಿಸನ್ಮಾನಗಳಿಗರ್ಹ, ಸಮಸ್ತವನು ನೀ ಸೃಷ್ಟಿಸಿದಾತ ಇರುವುದೆಲ್ಲವು ಜೀವಿಪುದೆಲ್ಲವು ನಿನ್ನ ಚಿತ್ತದಿಂದ,” ಎಂದು ಹಾಡುತ್ತಿದ್ದರು.