पवित्र बाइबिल
ಹಳೆಯ ಒಡಂಬಡಿಕೆ
ಸಂಖ್ಯಾಕಾಂಡ
13ನೇ ಅಧ್ಯಾಯ
- Verse 1: ಸರ್ವೇಶ್ವರ ಸ್ವಾಮಿ ಮೋಶೆಗೆ:
- Verse 2: “ನಾನು ಇಸ್ರಯೇಲರಿಗೆ ಕೊಡಲಿರುವ ಕಾನಾನ್ ನಾಡನ್ನು ಸಂಚರಿಸಿ ನೋಡಿಬರಲು ಒಂದೊಂದು ಕುಲದಿಂದ ಒಬ್ಬೊಬ್ಬ ಮುಖ್ಯಸ್ಥನನ್ನು ಕಳಿಸು,” ಎಂದು ಆಜ್ಞಾಪಿಸಿದರು.
- Verse 3: ಸರ್ವೇಶ್ವರನ ಅಪ್ಪಣೆಯ ಮೇರೆಗೆ ಮೋಶೆ ಪಾರಾನ್ ಮರುಭೂಮಿಯಿಂದ ಇಸ್ರಯೇಲರ ಮುಖ್ಯಸ್ಥರನ್ನು ಕಳಿಸಿದನು.
- Verse 4: ಆ ಮುಖ್ಯಸ್ಥರ ಹೆಸರುಗಳು ಇವು - ರೂಬೇನ್ ಕುಲದ ಜಕ್ಕೂರನ ಮಗ ಶಮ್ಮೂವ
- Verse 5: ಸಿಮೆಯೋನ್ ಕುಲದ ಹೋರಿಯ ಮಗನದ ಶಾಫಾಟ್
- Verse 6: ಯೆಹೂದ ಕುಲದ ಯೆಫುನ್ನೆಯ ಮಗನಾದ ಕಾಲೇಬ
- Verse 7: ಇಸ್ಸಾಕಾರ್ ಕುಲದ ಜೋಸೆಫನ ಮಗ ಇಗಾಲ್
- Verse 8: ಎಫ್ರಾಯೀಮ್ ಕುಲದ ನೂನನ ಮಗ ಹೋಶೇಯ
- Verse 9: ಬೆನ್ಯಾಮೀನ್ ಕುಲದ ರಾಫೂವನ ಮಗ ಪಲ್ಟೀ
- Verse 10: ಜೆಬುಲೂನ್ ಕುಲದ ಸೋದಿಯ ಮಗ ಗದ್ದೀಯೇಲ್
- Verse 11: ಜೋಸೆಫ್ ಅಂದರೆ ಮನಸ್ಸೆ ಕುಲದ ಸೂಸೀಯ ಮಗ ಗದ್ದೀ
- Verse 12: ದಾನ್ ಕುಲದ ಗೆಮಲ್ಲೀಯನ ಮಗ ಅಮ್ಮೀಯೇಲ್
- Verse 13: ಅಶೇರ್ ಕುಲದ ಮಿಕಾಯೇಲನ ಮಗ ಸೆತೂರ್
- Verse 14: ನಫ್ತಾಲಿ ಕುಲದ ವಾಪೆಸೀಯನ ಮಗ ನಹಬೀ
- Verse 15: ಗಾದ್ ಕುಲದ ಮಾಕಿಯನ ಮಗ ಗೆಯೂವೇಲ್
- Verse 16: ನಾಡನ್ನು ಸಂಚರಿಸಿ ನೋಡಿಬರುವುದಕ್ಕೆ ಮೋಶೆ ಕಳಿಸಿದ್ದ ವ್ಯಕ್ತಿಗಳ ಹೆಸರುಗಳು ಇವೇ. ಮೋಶೆ ನೂನನ ಮಗ ಹೋಶೇಯನಿಗೆ ‘ಯೆಹೋಶುವ’ ಎಂದು ಹೆಸರಿಟ್ಟನು.
- Verse 17: ಕಾನಾನ್ ನಾಡನ್ನು ಸಂಚರಿಸಿ ನೋಡಿ ಬರುವುದಕ್ಕೆ ಅವರನ್ನು ಕಳಿಸುವಾಗ ಮೋಶೆ ಹೀಗೆಂದು ಸಂಬೋಧಿಸಿದನು: “ನೀವು ನೆಗೆಬಾ ಮಾರ್ಗವಾಗಿ ಮಲೆನಾಡಿಗೆ ಹತ್ತಿಹೋಗಿರಿ.
- Verse 18: ಆ ನಾಡು ಹೇಗಿದೆ, ಅಲ್ಲಿನ ನಿವಾಸಿಗಳು ಬಲಿಷ್ಠರೋ ಬಲಹೀನರೋ, ಅವರ ಸಂಖ್ಯೆ ದೊಡ್ಡದೋ ಚಿಕ್ಕದೋ
- Verse 19: ಅವರ ವಾಸಸ್ಥಳ ಒಳ್ಳೆಯದೋ ಕೆಟ್ಟದೋ, ಅವು ಪಾಳೆಯಗಳೋ ಕೋಟೆಗಳೋ
- Verse 20: ಭೂಮಿ ಸಾರವತ್ತಾದುದೋ ನಿಸ್ಸಾರವಾದುದೋ ಮರಗಿಡಗಳಿಂದ ಕೂಡಿದೆಯೋ ಬೈಲುಪ್ರದೇಶವಾಗಿದೆಯೋ ನೋಡಿ ತಿಳಿದುಕೊಳ್ಳಿ. ಅದಲ್ಲದೆ, ಆ ನಾಡಿನ ಉತ್ಪನ್ನಗಳಲ್ಲಿ ಕೆಲವನ್ನು ಪ್ರಯಾಸಪಟ್ಟು ತರಬೇಕು.” ಅದು ದ್ರಾಕ್ಷೆಯ ಪ್ರಥಮ ಫಲಕಾಲವಾಗಿತ್ತು.
- Verse 21: ಅವರು ಬೆಟ್ಟವನ್ನು ಹತ್ತಿ ಚಿನ್ ಮರುಭೂಮಿಯಿಂದ ಹಮಾತಿನ ದಾರಿಯಲ್ಲಿರುವ ರೆಹೋಬಿನವರೆಗೆ ಆ ನಾಡನ್ನು ಸಂಚರಿಸಿ ನೋಡಿದರು.
- Verse 22: ಅವರು ಬೆಟ್ಟವನ್ನು ಹತ್ತಿ ನೆಗೆಬನ್ನು ದಾಟಿ, ಹೆಬ್ರೋನಿಗೆ ಬಂದರು. ಅಲ್ಲಿ ‘ಅನಕಿಮ್’ ವಂಶಸ್ಥರಾದ ಅಹೀಮನ್, ಶೇಷೈ, ತಲ್ಮೈ ಎಂಬವರು ಇದ್ದರು. (ಹೆಬ್ರೋನ್ ಪಟ್ಟಣ ಈಜಿಪ್ಟ್ ದೇಶದಲ್ಲಿರುವ ಚೋಮ್ ಪಟ್ಟಣಕ್ಕಿಂತ ಏಳು ವರ್ಷ ಮೊದಲೆ ಕಟ್ಟಲ್ಪಟ್ಟಿತ್ತು)
- Verse 23: ಎಷ್ಕೋಲ್ ಎಂಬ ತಗ್ಗಿಗೆ ಬಂದು ಅಲ್ಲಿ ದ್ರಾಕ್ಷಿ ಹಣ್ಣಿನ ಗೊಂಚಲಿದ್ದ ಒಂದು ಕೊಂಬೆಯನ್ನು ಕೊಯ್ದರು. ಅದನ್ನು ಅಡ್ಡದಂಡಿಗೆಯಲ್ಲಿ ಇಬ್ಬರು ಹೊತ್ತು ತಂದರು. ಕೆಲವು ದಾಳಿಂಬೆ ಹಣ್ಣುಗಳನ್ನೂ ಅಂಜೂರದ ಹಣ್ಣುಗಳನ್ನು ತಂದರು.
- Verse 24: ಇಸ್ರಯೇಲರು ಅಲ್ಲಿಯೇ ದ್ರಾಕ್ಷಿಯ ಗೊಂಚಲನ್ನು ಕೊಯ್ದದ್ದರಿಂದ ಆ ಸ್ಥಳಕ್ಕೆ ‘ಎಷ್ಕೋಲ್’ ಎಂದು ಹೆಸರಾಯಿತು.
- Verse 25: ನಾಲ್ವತ್ತು ದಿವಸ ಆ ನಾಡನ್ನು ಸಂಚರಿಸಿ ನೋಡಿ ಆದಮೇಲೆ ಅವರು ಹಿಂದಿರುಗಿ ಬಂದರು.
- Verse 26: ಪಾರಾನ್ ಮರುಭೂಮಿಯ ಕಾದೇಶಿನಲ್ಲಿದ್ದ ಮೋಶೆ, ಆರೋನ್ ಹಾಗೂ ಇಸ್ರಯೇಲ್ ಜನಸಮೂಹದ ಬಳಿಗೆ ಬಂದು ಅವರಿಗೆ ಸಮಾಚಾರವನ್ನು ತಿಳಿಸಿ ಆ ನಾಡಿನ ಹಣ್ಣುಗಳನ್ನು ತೋರಿಸಿದರು.
- Verse 27: ಮೋಶೆಗೆ, “ನೀವು ನಮ್ಮನ್ನು ಕಳಿಸಿದ ನಾಡಿಗೆ ಹೋಗಿದ್ದೆವು. ಅದು ಹಾಲು-ಜೇನು ಹರಿಯುವಂಥ ನಾಡು. ಅಲ್ಲಿನ ಹಣ್ಣುಹಂಪಲುಗಳು ಇಂಥವು.
- Verse 28: ಅಂತೆಯೇ ಆ ನಾಡಿನ ನಿವಾಸಿಗಳು ಬಲಿಷ್ಠರು. ಅವರಿರುವ ಪಟ್ಟಣಗಳು ದೊಡ್ಡವು; ಅವು ಕೋಟೆ ಕೊತ್ತಲುಗಳಿಂದ ಕೂಡಿವೆ. ಅದೂ ಅಲ್ಲದೆ ಅಲ್ಲಿ ‘ಅನಕಿಮ್’ ವಂಶಸ್ಥರನ್ನು ಕಂಡೆವು.
- Verse 29: ದಕ್ಷಿಣ ಪ್ರಾಂತದಲ್ಲಿ ಅಮಾಲೇಕ್ಯರು, ಮಲೆನಾಡಿನಲ್ಲಿ ಹಿತ್ತಿಯರು ಯೆಬೂಸಿಯರು ಹಾಗು ಅಮೋರಿಯರು ಮತ್ತು ಸಮುದ್ರ ತೀರದಲ್ಲಿ ಹಾಗೂ ಜೋರ್ಡನ್ ನದಿಯ ಪರಿಸರದಲ್ಲಿ ಕಾನಾನ್ಯರು ವಾಸವಾಗಿದ್ದಾರೆ,” ಎಂದು ವರದಿ ಮಾಡಿದರು.
- Verse 30: ಮೋಶೆಗೆ ವಿರುದ್ಧ ಗುಣಗುಟ್ಟುತ್ತಿದ್ದವರನ್ನು ಕಾಲೇಬನು ಸಮಾಧಾನಗೊಳಿಸುತ್ತಾ, “ನಾವು ಧೈರ್ಯದಿಂದ ಆ ಮಲೆನಾಡಿಗೆ ಹೋಗಿ ಅದನ್ನು ಸ್ವಾಧೀನ ಪಡಿಸಿಕೊಳ್ಳೋಣ. ಅದನ್ನು ಜಯಿಸಲು ನಮ್ಮಿಂದ ಸಾಧ್ಯ,” ಎಂದನು.
- Verse 31: ಆದರೆ ಅವನ ಜೊತೆಯಲ್ಲಿ ಹೋಗಿದ್ದವರು, “ಆ ಜನರು ನಮಗಿಂತ ಬಲಿಷ್ಠರು! ಅವರ ಮೇಲೆ ಜಯ ಸಾಧಿಸಲು ನಮಗೆ ಶಕ್ತಿ ಸಾಲದು,” ಎಂದರು.
- Verse 32: ಅದಲ್ಲದೆ ತಾವು ಸಂಚರಿಸಿ ನೋಡಿ ಬಂದ ನಾಡಿನ ವಿಷಯವಾಗಿ ಇಸ್ರಯೇಲರಿಗೆ ಅಶುಭ ಸಮಾಚಾರವನ್ನೇ ಹೇಳುವವರಾದರು. “ನಾವು ಸಂಚಾರಮಾಡಿ ನೋಡಿ ಬಂದ ನಾಡು ತನ್ನಲ್ಲಿ ವಾಸಿಸುವವರನ್ನೇ ಕಬಳಿಸುವಂತಿದೆ. ನಾವು ಅಲ್ಲಿ ನೋಡಿದ ಜನರೆಲ್ಲರು ಬಹು ಎತ್ತರವಾದ ವ್ಯಕ್ತಿಗಳು.
- Verse 33: ಅಲ್ಲಿ ‘ನೆಫೀಲಿಯರನ್ನು’ ಅಂದರೆ ನೆಫೀಲಿಯನ ವಂಶದವರಾದ ‘ಅನಕಿಮ್’ರನ್ನು ನೋಡಿದೆವು. ಅವರ ಮುಂದೆ ನಾವು ಮಿಡತೆಗಳಂತೆ ಇದ್ದೆವು. ಅವರಿಗೂ ನಾವು ಹಾಗೆಯೆ ಕಾಣಿಸಿಕೊಂಡೆವು,” ಎಂದರು.