ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಜೆಫನ್ಯ
3ನೇ ಅಧ್ಯಾಯ
- Verse 1: ದಬ್ಬಾಳಿಕೆ ನಡೆಸುವ, ದಂಗೆಯೇಳುವ ದುಷ್ಟ ನಗರಕ್ಕೆ ಧಿಕ್ಕಾರ!
- Verse 2: ಅದು ಯಾರ ಬುದ್ಧಿಮಾತಿಗೂ ಕಿವಿಗೊಡಲಿಲ್ಲ. ಶಿಕ್ಷಣಕ್ಕೆ ಒಳಪಡಲಿಲ್ಲ. ಸರ್ವೇಶ್ವರಸ್ವಾಮಿಯಲ್ಲಿ ಭರವಸೆ ಇಡಲಿಲ್ಲ, ತನ್ನ ದೇವರ ಸನ್ನಿಧಿಗೆ ಬರಲಿಲ್ಲ.
- Verse 3: ಅದರ ಪ್ರಮುಖರು ಗರ್ಜಿಸುವ ಸಿಂಹಗಳು. ಅದರ ನ್ಯಾಯಾಧಿಪತಿಗಳು ಹಸಿದ ತೋಳಗಳು. ಕಡಿಯುವುದಕ್ಕೆ ಎಲುಬನ್ನು ಕೂಡ ಮರುದಿನದವರೆಗೆ ಉಳಿಸವು.
- Verse 4: ಅದರ ಪ್ರವಾದಿಗಳು ಬಡಾಯಿಕೊಚ್ಚುವವರು, ವಿಶ್ವಾಸದ್ರೋಹಿಗಳು. ಅದರ ಯಾಜಕರು ಪವಿತ್ರವಾದುದನ್ನು ಹೊಲೆಗೆಡಿಸುವಂಥವರು, ಧರ್ಮವಿಧಿಗಳನ್ನು ಭಂಗಪಡಿಸುವಂಥವರು.
- Verse 5: ಆದರೆ ಅದರ ಮಧ್ಯೆಯಿರುವ ಸರ್ವೇಶ್ವರ ನ್ಯಾಯಸ್ವರೂಪಿ, ಎಂದಿಗೂ ಅನ್ಯಾಯ ಮಾಡುವುದಿಲ್ಲ. ದಿನದಿನವೂ ತಪ್ಪದೆ ನ್ಯಾಯ ದೊರಕಿಸುತ್ತಾರೆ. ಅವರಿಗೆ ಗುಟ್ಟಾಗಿರುವುದು ಯಾವುದೂ ಇಲ್ಲ. ಅನ್ಯಾಯಮಾಡುವವನಿಗಾದರೋ ನಾಚಿಕೆ ಎಂಬುದೇ ಇಲ್ಲ.
- Verse 6: ಸರ್ವೇಶ್ವರ ಇಂತೆನ್ನುತ್ತಾರೆ: “ನಾನು ರಾಷ್ಟ್ರಗಳನ್ನು ಧ್ವಂಸಮಾಡಿದ್ದೇನೆ. ಅವುಗಳ ಕೋಟೆಕೊತ್ತಲಗಳು ಪಾಳುಬಿದ್ದಿವೆ. ಅವುಗಳ ಹಾದಿಬೀದಿಗಳನ್ನು ನಿರ್ಜನವಾಗಿಸಿದ್ದೇನೆ. ಯಾರೂ ಅವುಗಳಲ್ಲಿ ಹಾದುಹೋಗುವಂತಿಲ್ಲ. ಅವರ ಪಟ್ಟಣಗಳು ನಾಶವಾಗಿವೆ; ನಿರ್ನಿವಾಸವಾಗಿ ಶೂನ್ಯವಾಗಿವೆ.
- Verse 7: ಇದರಿಂದಲಾದರೂ ಜೆರುಸಲೇಮ್ ನಗರ ನನಗೆ ಭಯಪಡುವುದು, ನಾನು ಕಲಿಸಿದ ಪಾಠವನ್ನು ಎಂದಿಗೂ ಮರೆಯದು’ ಎಂದುಕೊಂಡೆ. ಆದರೆ ಅದರ ನಿವಾಸಿಗಳು ತಮ್ಮ ನಡತೆಯನ್ನು ಕೆಡಿಸಿಕೊಳ್ಳಲು ಮತ್ತಷ್ಟು ಕಾತರರಾದರು.”
- Verse 8: ಆದುದರಿಂದ ಸರ್ವೇಶ್ವರ ಇಂತೆನ್ನುತ್ತಾರೆ: “ಸ್ವಲ್ಪತಾಳಿರಿ, ನಾನು ತಪ್ಪನ್ನು ನಿಮಗೆ ತೋರಿಸುವ ದಿನಕ್ಕಾಗಿ ಕಾದಿರಿ. ರಾಷ್ಟ್ರಗಳನ್ನು ಒಂದಾಗಿಸಲು, ರಾಜ್ಯಗಳನ್ನು ಒಂದುಗೂಡಿಸಲು ನಿರ್ಧರಿಸಿದ್ದೇನೆ; ಹೀಗೆ ಅವುಗಳ ಮೇಲೆ ನನ್ನ ರೌದ್ರವನ್ನು, ಹೌದು, ನನ್ನ ಉಗ್ರಕೋಪವನ್ನು ಸುರಿಸಲು ತೀರ್ಮಾನಿಸಿದ್ದೇನೆ. ಲೋಕವೆಲ್ಲವು ನನ್ನ ಕೋಪಾಗ್ನಿಯಿಂದ ಧ್ವಂಸವಾಗುವುದು.
- Verse 9: “ಆಗ ಎಲ್ಲರೂ ಒಮ್ಮನಸ್ಸಿನಿಂದ ನನ್ನನ್ನು ಪೂಜಿಸಿ ನನ್ನ ಹೆಸರೆತ್ತಿ ಪ್ರಾರ್ಥಿಸುವಂತೆ ಜನಾಂಗಗಳ ಬಾಯನ್ನು ಪರಿವರ್ತಿಸಿ ಶುದ್ಧೀಕರಿಸುವೆನು.
- Verse 10: ಚದರಿಹೋಗಿರುವ ನನ್ನ ಜನರು, ನನ್ನ ಭಕ್ತಾದಿಗಳು, ಸುಡಾನಿನ ನದಿಗಳ ಆಚೆಯಿಂದಲೂ ನನಗೆ ಕಾಣಿಕೆಯನ್ನು ತಂದೊಪ್ಪಿಸುವರು.ಚದರಿಹೋಗಿರುವ ನನ್ನ ಜನರು, ನನ್ನ ಭಕ್ತಾದಿಗಳು, ಸುಡಾನಿನ ನದಿಗಳ ಆಚೆಯಿಂದಲೂ ನನಗೆ ಕಾಣಿಕೆಯನ್ನು ತಂದೊಪ್ಪಿಸುವರು.
- Verse 11: ನೀನು ನನಗೆ ಎದುರಾಗಿ ದಂಗೆಯೆದ್ದು ಮಾಡಿದ ನಾನಾ ದುಷ್ಕೃತ್ಯಗಳಿಗಾಗಿ ಆ ದಿನದಂದು ನೀನು ನಾಚಿಕೆಪಡುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಅತಿ ಗರ್ವದಿಂದ ಮೆರೆಯುವವರನ್ನು ನಿನ್ನ ಮಧ್ಯೆಯಿಂದ ತೊಲಗಿಸಿಬಿಡುವೆನು. ಅಂದಿನಿಂದ ನನ್ನ ಪವಿತ್ರ ಪರ್ವತದ ಮೇಲೆ ನೀನು ಗರ್ವಪಡದೆ ಬಾಳುವೆ.
- Verse 12: ದೀನರೂ ನಮ್ರರೂ ಆದ ಜನರನ್ನು ನಿನ್ನಲ್ಲಿ ಉಳಿಸುವೆನು. ಅವರು ಪ್ರಭುವಿನ ನಾಮದಲ್ಲಿ ಭಯಭಕ್ತಿಯಿಂದಿರುವರು.
- Verse 13: ಇಸ್ರಯೇಲಿನಲ್ಲಿ ಅಳಿದುಳಿದವರು ಅನ್ಯಾಯಮಾಡರು, ಸುಳ್ಳಾಡರು. ಅವರ ಬಾಯಲ್ಲಿ ಮೋಸವಿರದು. ಕುರಿಮಂದೆಯಂತೆ ಮೇದು ಸುರಕ್ಷಿತವಾಗಿರುವರು. ಅವರನ್ನು ಯಾರೂ ಹೆದರಿಸರು.”
- Verse 14: ಹರ್ಷಧ್ವನಿಗೈ, ಸಿಯೋನ್ ಕುವರಿಯೇ ಘೋಷಿಸು, ಇಸ್ರಯೇಲ್ ದೇಶವೇ, ಹೃತ್ಪೂರ್ವಕವಾಗಿ ಸಂತೋಷಿಸು, ಜೆರುಸಲೇಮ್ ನಗರವೇ.
- Verse 15: ತಪ್ಪಿಸಿಹನು ಸರ್ವೇಶ ನಿನಗೆ ವಿಧಿಸಿರುವ ದಂಡನೆಗಳನು ತಳ್ಳಿ ಹೊರಗಟ್ಟಿಹನು ನಿನ್ನ ಶತ್ರುಗಳನು ಇಸ್ರಯೇಲಿನ ರಾಜನಾದ ಸರ್ವೇಶ ಇಹನು ನಿನ್ನ ಮಧ್ಯೆ ನೀನಿರುವೆ ಇನ್ನೆಂದಿಗೂ ಕೇಡಿಗಂಜದೆ.
- Verse 16: ಜೆರುಸಲೇಮಿಗೆ ಈ ಪರಿ ಹೇಳುವರು ಆ ದಿನದೊಳು: “ಅಂಜಬೇಡ ಸಿಯೋನ್, ಸೋತು ಜೋಲುಬೀಳದಿರಲಿ ನಿನ್ನ ಕೈಗಳು.”
- Verse 17: ಪ್ರಸನ್ನವಾಗಿಹನು ದೇವ, ಸರ್ವೇಶ ನಿನ್ನ ಮಧ್ಯೆ ಕೊಡುವನಾ ಶೂರ ನಿನಗೆ ರಕ್ಷಣೆ ಹರ್ಷಾನಂದಗೊಳ್ಳುವನು ನಿನ್ನ ವಿಷಯದಲಿ ಪುನಶ್ಚೇತನಗೊಳಿಸುವನು ನಿನ್ನನು ಪ್ರಶಾಂತ ಪ್ರೀತಿಯಲಿ ಗಾನಗೀತೆಗಳಿಂದ ತೋಷಿಸುವನು ನಿನ್ನಲಿ ಹಬ್ಬಹುಣ್ಣಿಮೆಗಳ ತರದಲಿ.
- Verse 18: ತಡೆದುಬಿಡುವನು ಸರ್ವವಿನಾಶವನು ದೂರಮಾಡುವನು ನಿನ್ನಿಂದ ನಿಂದೆ ಅಪಮಾನವನು.
- Verse 19: ಆ ದಿನದಲಿ ಇಂತೆನ್ನುವನು: “ದಂಡಿಸುವೆನು ನಿನ್ನನು ಬಾಧಿಸಿದವರನು ಉದ್ಧರಿಸುವೆನು ನಿನ್ನಲ್ಲಿ ಕುಂಟುವವರನು ಒಂದುಗೂಡಿಸುವೆನು ಚದರಿಹೋದವರನು ಬರಮಾಡುವೆನು ಅವಮಾನಿತರಿಗೆ ಸನ್ಮಾನವನು ಗಿಟ್ಟಿಸುವೆನು ನಿಮಗೆ ಜಗದಲ್ಲೆಲ್ಲ ಕೀರ್ತಿಯನು.
- Verse 20: ಕರೆದು ತರುವೆನು ನಿಮ್ಮನ್ನು ಆ ಕಾಲದೊಳು ಮರಳಿಸುವೆನು ಮನೆಗೆ ಆ ದಿನದೊಳು. ಹಿಂದಿನ ಸಮೃದ್ಧಿಯನ್ನು ಬರಮಾಡುವೆನು ನಿನ್ನ ಕಣ್ಮುಂದೆ ದೊರಕುವುದಾಗ ನಿನಗೆ ಸ್ತುತಿಕೀರ್ತಿ ಜನಾಂಗಗಳ ಮುಂದೆ.” - ಸರ್ವೇಶ್ವರಸ್ವಾಮಿಯ ನುಡಿಯಿದು.