ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಪ್ರೇಷಿತರ ಕಾರ್ಯಕಲಾಪಗಳು
28ನೇ ಅಧ್ಯಾಯ
- Verse 1: ನಾವು ಸುರಕ್ಷಿತವಾಗಿ ದಡವನ್ನು ಸೇರಿದ ಮೇಲೆ ಅದು ಮಾಲ್ಟ ದ್ವೀಪವೆಂದು ತಿಳಿದು ಬಂದಿತು.
- Verse 2: ಅಲ್ಲಿಯ ನಿವಾಸಿಗಳು ನಮಗೆ ವಿಶೇಷ ಸಹಾನುಭೂತಿಯನ್ನು ತೋರಿದರು. ಮಳೆ ಹೊಯ್ದು ಚಳಿಯಾಗುತ್ತಿದ್ದುದರಿಂದ ಅವರು ಬೆಂಕಿಮಾಡಿ ನಮ್ಮೆಲ್ಲರನ್ನು ಬರಮಾಡಿಕೊಂಡರು.
- Verse 3: ಪೌಲನು ಒಂದು ಹೊರೆ ಕಟ್ಟಿಗೆಯನ್ನು ಕೂಡಿಸಿ ತಂದು ಬೆಂಕಿಯ ಮೇಲೆ ಹಾಕುತ್ತಿದ್ದಾಗ ಬೆಂಕಿಯ ಶಾಖಕ್ಕೆ ವಿಷಸರ್ಪವೊಂದು ಹೊರಬಂದು ಅವನ ಕೈಗೆ ಸುತ್ತಿಕೊಂಡಿತು.
- Verse 4: ದ್ವೀಪದ ನಿವಾಸಿಗಳು ಪೌಲನ ಕೈಯಿಂದ ನೇತಾಡುತ್ತಿರುವ ಹಾವನ್ನು ಕಂಡು, “ಇವನೊಬ್ಬ ಕೊಲೆಗಡುಕನೇ ಸರಿ; ಇವನು ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ವಿಧಿ ಇವನನ್ನು ಉಳಿಸಲಿಲ್ಲ,” ಎಂದು ತಮ್ಮಲ್ಲೇ ಮಾತನಾಡಿಕೊಂಡರು.
- Verse 5: ಆದರೆ ಪೌಲನು ಹಾವನ್ನು ಬೆಂಕಿಗೆ ಒದರಿಬಿಟ್ಟನು. ಅವನಿಗೆ ಯಾವ ಅಪಾಯವೂ ಆಗಲಿಲ್ಲ.
- Verse 6: ಆ ಜನರು, “ಈಗ ಅವನ ಮೈ ಊದಿಕೊಳ್ಳುತ್ತದೆ; ಈಗಲೇ ಅವನು ಫಕ್ಕನೆ ಸತ್ತುಬೀಳುತ್ತಾನೆ,” ಎಂದು ಕಾದಿದ್ದರು. ಎಷ್ಟುಹೊತ್ತು ಕಾದರೂ ಅವನಿಗೆ ಯಾವ ಹಾನಿಯೂ ಆಗಲಿಲ್ಲ. ಇದನ್ನು ಕಂಡ ಅವರು ತಮ್ಮ ಅಭಿಪ್ರಾಯವನ್ನು ಬದಲಿಸಿದರು. “ಇವನೊಬ್ಬ ದೇವರು,” ಎಂದುಕೊಂಡರು.
- Verse 7: ಆ ದ್ವೀಪದ ಮುಖ್ಯಸ್ಥನಾದ ಪೊಪ್ಲಿಯನ ಹೊಲಗದ್ದೆಗಳು ನಾವಿದ್ದ ಸ್ಥಳದ ಪಕ್ಕದಲ್ಲೇ ಇದ್ದವು. ಅವನು ನಮ್ಮನ್ನು ಸ್ವಾಗತಿಸಿ ಮೂರು ದಿನಗಳವರೆಗೆ ಆದರದಿಂದ ಸತ್ಕರಿಸಿದನು.
- Verse 8: ಪೊಪ್ಲಿಯನ ತಂದೆ ಜ್ವರದಿಂದಲೂ ರಕ್ತಬೇಧಿಯಿಂದಲೂ ಹಾಸಿಗೆ ಹಿಡಿದಿದ್ದನು. ಪೌಲನು ಅವನ ಬಳಿಗೆ ಹೋಗಿ, ಪ್ರಾರ್ಥನೆ ಮಾಡಿ, ತನ್ನ ಕರಗಳನ್ನು ಅವನ ಮೇಲಿಟ್ಟು, ಅವನನ್ನು ಗುಣಪಡಿಸಿದನು.
- Verse 9: ಇದಾದ ನಂತರ ದ್ವೀಪದಲ್ಲಿದ್ದ ಮಿಕ್ಕರೋಗಿಗಳೂ ಬಂದು ಪೌಲನಿಂದ ಆರೋಗ್ಯವನ್ನು ಪಡೆದರು.
- Verse 10: ಅವರೆಲ್ಲರು ನಮ್ಮನ್ನು ಹಲವಾರು ವಿಧದಲ್ಲಿ ಬಹುಮಾನಿಸಿದರು; ಮಾತ್ರವಲ್ಲ, ನಾವು ಅಲ್ಲಿಂದ ನೌಕಾಯಾನವನ್ನು ಮುಂದುವರಿಸಿದಾಗ, ನಮಗೆ ಅವಶ್ಯವಾದುದೆಲ್ಲವನ್ನು ತಂದು ಹಡಗಿನಲ್ಲಿಟ್ಟರು.
- Verse 11: ಈಗಾಗಲೇ ಮೂರು ತಿಂಗಳು ಕಳೆದಿದ್ದವು. ಅಲೆಕ್ಸಾಂಡ್ರಿಯಕ್ಕೆ ಸೇರಿದ ‘ಅಶ್ವಿನಿ’ ಎಂಬ ಹಡಗೊಂದು ಚಳಿಗಾಲದ ನಿಮಿತ್ತ ಅಲ್ಲಿ ಲಂಗರುಹಾಕಿತ್ತು. ನಾವು ಅದನ್ನು ಹತ್ತಿ ಪ್ರಯಾಣ ಮುಂದುವರಿಸಿದೆವು.
- Verse 12: ಸಿರಾಕೂಸ್ ಎಂಬ ಪಟ್ಟಣವನ್ನು ಸೇರಿ ಅಲ್ಲಿ ಮೂರು ದಿನ ತಂಗಿದೆವು.
- Verse 13: ಅಲ್ಲಿಂದ ಮುಂದುವರಿದು ರೇಗಿಯ ಪಟ್ಟಣಕ್ಕೆ ಬಂದೆವು. ಮಾರನೆಯ ದಿನ ತೆಂಕಣಗಾಳಿ ಬೀಸತೊಡಗಿತು. ಎರಡೇ ದಿನಗಳಲ್ಲಿ ನಾವು ಪುತೋಲಿ ರೇವನ್ನು ಮುಟ್ಟಿದೆವು.
- Verse 14: ಅಲ್ಲಿ ಕೆಲವು ಕ್ರೈಸ್ತಭಕ್ತಾದಿಗಳನ್ನು ಕಂಡೆವು. ತಮ್ಮೊಡನೆ ಒಂದು ವಾರ ತಂಗಬೇಕೆಂದು ಅವರು ನಮ್ಮನ್ನು ಕೇಳಿಕೊಂಡರು. ತರುವಾಯ ನಾವು ರೋಮಿಗೆ ಬಂದೆವು.
- Verse 15: ಅಲ್ಲಿದ್ದ ಕ್ರೈಸ್ತಭಕ್ತಾದಿಗಳು ನಾವು ಬಂದ ವಿಷಯವನ್ನು ಕೇಳಿ ನಮ್ಮನ್ನು ಎದುರುಗೊಳ್ಳಲು ‘ಅಪ್ಪಿಯಾ’ ಮಾರುಕಟ್ಟೆಗೂ ತ್ರಿಛತ್ರದ ಬಳಿಗೂ ಬಂದರು. ಅವರನ್ನು ಕಂಡದ್ದೇ ಪೌಲನಿಗೆ ಪ್ರೋತ್ಸಾಹ ಉಂಟಾಯಿತು. ಅವನು ದೇವರಿಗೆ ಸ್ತೋತ್ರ ಸಲ್ಲಿಸಿದನು.
- Verse 16: ನಾವು ರೋಮ್ ನಗರಕ್ಕೆ ಆಗಮಿಸಿದ ಮೇಲೆ, ತನ್ನನ್ನು ಕಾಯುತ್ತಿದ್ದ ಒಬ್ಬ ಸೈನಿಕನೊಂದಿಗೆ ಪ್ರತ್ಯೇಕವಾಗಿರಲು ಪೌಲನಿಗೆ ಅಪ್ಪಣೆ ಕೊಡಲಾಯಿತು.
- Verse 17: ಮೂರು ದಿನಗಳ ನಂತರ ಪೌಲನು ಸ್ಥಳೀಯ ಯೆಹೂದ್ಯ ಮುಖಂಡರು ತನ್ನ ಬಳಿಗೆ ಬರುವಂತೆ ಹೇಳಿಕಳುಹಿಸಿದನು. ಅವರು ಬಂದಾಗ, “ನನ್ನ ಸೋದರ ಇಸ್ರಯೇಲರೇ, ನಾನು ನಮ್ಮ ಜನರಿಗೆ ವಿರೋಧವಾಗಿಯಾಗಲಿ, ನಮ್ಮ ಪೂರ್ವಜರಿಂದ ಬಂದ ಸಂಪ್ರದಾಯಗಳಿಗೆ ವಿರೋಧವಾಗಿಯಾಗಲಿ, ಏನನ್ನೂ ಮಾಡಿಲ್ಲ; ಆದರೂ ಜೆರುಸಲೇಮಿನಲ್ಲಿ ನನ್ನನ್ನು ಕೈದಿಯನ್ನಾಗಿಸಿ ರೋಮನರ ಕೈಗೆ ಒಪ್ಪಿಸಲಾಯಿತು.
- Verse 18: ಇವರು ನನ್ನನ್ನು ವಿಚಾರಣೆಗೆ ಒಳಪಡಿಸಿದರು. ಮರಣದಂಡನೆಗೆ ಗುರಿಮಾಡುವಂಥ ಅಪರಾಧ ಏನನ್ನೂ ನನ್ನಲ್ಲಿ ಕಾಣಲಿಲ್ಲ. ಈ ಕಾರಣ ನನ್ನನ್ನು ಬಿಡುಗಡೆ ಮಾಡಬೇಕೆಂದಿದ್ದರು.
- Verse 19: ಆದರೆ ಯೆಹೂದ್ಯರು ಇದನ್ನು ಪ್ರತಿಭಟಿಸಿದರು. ಆಗ ನಾನು ಚಕ್ರವರ್ತಿಗೇ ಅಪೀಲುಮಾಡಬೇಕಾಯಿತು. ನನ್ನ ಸ್ವದೇಶೀಯರ ಮೇಲೆ ದೋಷಾರೋಪಣೆ ಮಾಡಬೇಕೆಂದು ನಾನು ಹಾಗೆ ಮಾಡಲಿಲ್ಲ.
- Verse 20: ಈ ಕಾರಣದಿಂದಲೇ ನಿಮ್ಮನ್ನು ನೋಡಿ ಮಾತನಾಡಲು ಬಯಸಿದೆ. ಇಸ್ರಯೇಲ್ ಜನತೆ ಯಾರ ನಿರೀಕ್ಷೆಯಲ್ಲಿ ಇದೆಯೋ, ಅವರ ನಿಮಿತ್ತವೇ ನಾನು ಹೀಗೆ ಸರಪಣಿಗಳಿಂದ ಬಂಧಿತನಾಗಿದ್ದೇನೆ,” ಎಂದನು.
- Verse 21: ಅದಕ್ಕೆ ಅವರು, “ನಿನ್ನ ವಿಷಯವಾಗಿ ಜುದೇಯದಿಂದ ಯಾವ ಪತ್ರವೂ ಬಂದಿಲ್ಲ. ಅಲ್ಲಿಂದ ಬಂದ ಸಹೋದರರು ಯಾರೂ ಏನನ್ನೂ ವರದಿಮಾಡಿಲ್ಲ. ಯಾವ ದೋಷಾರೋಪಣೆಯನ್ನೂ ತಂದಿಲ್ಲ.
- Verse 22: ಆದರೆ ನೀನು ಅನುಸರಿಸುವ ಪಂಥದ ವಿರುದ್ಧ ಎಲ್ಲೆಲ್ಲೂ ಜನರು ಮಾತನಾಡುತ್ತಿದ್ದಾರೆಂದು ಬಲ್ಲೆವು. ಆದುದರಿಂದ ನಿನ್ನ ಅಭಿಪ್ರಾಯವನ್ನು ನಿನ್ನ ಬಾಯಿಂದಲೇ ಕೇಳಬಯಸುತ್ತೇವೆ,” ಎಂದರು.
- Verse 23: ಅದಕ್ಕಾಗಿ ಒಂದು ದಿನವನ್ನು ಗೊತ್ತುಮಾಡಿದರು. ಅಂದು ಅವರೆಲ್ಲರು ಪೌಲನು ವಾಸಮಾಡುತ್ತಿದ್ದ ಬಿಡಾರಕ್ಕೆ ಅಧಿಕ ಸಂಖ್ಯೆಯಲ್ಲಿ ಬಂದರು. ಪೌಲನು ಬೆಳಿಗ್ಗೆಯಿಂದ ಸಂಜೆಯವರೆಗೆ ದೇವರ ಸಾಮ್ರಾಜ್ಯವನ್ನು ಕುರಿತ ಶುಭಸಂದೇಶವನ್ನು ವಿವರಿಸಿದನು; ಮೋಶೆಯ ಧರ್ಮಶಾಸ್ತ್ರದ ಹಾಗೂ ಪ್ರವಾದಿಗಳ ಗ್ರಂಥಗಳ ಆಧಾರದ ಮೇಲೆ ಯೇಸುಸ್ವಾಮಿಯ ವಿಷಯವಾಗಿ ಅವರನ್ನು ಮನವೊಲಿಸಲು ಪ್ರಯತ್ನಿಸಿದನು.
- Verse 24: ಅವನು ಹೇಳಿದ್ದು ಕೆಲವರಿಗೆ ಮನದಟ್ಟಾಯಿತು; ಮತ್ತೆ ಕೆಲವರು ನಂಬದೆಹೋದರು.
- Verse 25: ಹೀಗೆ ಅವರು ತಮ್ಮತಮ್ಮೊಳಗೆ ಭಿನ್ನಾಭಿಪ್ರಾಯವುಳ್ಳವರಾಗಿ ಅಲ್ಲಿಂದ ಹೊರಟುಹೋಗಲಾರಂಭಿಸಿದರು. ಆಗ ಪೌಲನು ಹೀಗೆಂದನು : “ಪವಿತ್ರಾತ್ಮ ಅವರು ಯೆಶಾಯ ಪ್ರವಾದಿಯ ಮುಖಾಂತರ ನಿಮ್ಮ ಪೂರ್ವಜರಿಗೆ ಎಷ್ಟೊಂದು ವಿಹಿತವಾಗಿ ಹೇಳಿದ್ದಾರೆ:
- Verse 26: ‘ನೀನು ಆ ಜನರ ಬಳಿಗೆ ಹೋಗಿ ಅವರಿಗೆ ಇಂತೆನ್ನು: ಕೇಳಿ ಕೇಳಿಯೂ ಗ್ರಹಿಸರು ನೋಡಿ ನೋಡಿಯೂ ಕಾಣರೀ ಜನರು
- Verse 27: ಇವರ ಹೃದಯ ಕಲ್ಲಾಗಿದೆ, ಕಿವಿ ಮಂದವಾಗಿದೆ, ಕಣ್ಣು ಮಬ್ಬಾಗಿದೆ. ಇಲ್ಲದಿರೆ ಇವರ ಕಣ್ಣು ಕಾಣುತ್ತಾ, ಕಿವಿ ಕೇಳುತ್ತಾ, ಹೃದಯ ಗ್ರಹಿಸುತ್ತಾ, ನನ್ನತ್ತ ತಿರುಗುತ್ತಿದ್ದರು. ದೇವರಾದ ನಾನಿವರನ್ನು ಸ್ವಸ್ಥಪಡಿಸುತ್ತಿದ್ದೆ.’
- Verse 28: ಎಂದೇ ದೇವರಿಂದ ಬಂದಿರುವ ಜೀವ ಉದ್ಧಾರಕ ಸಂದೇಶವನ್ನು ಯೆಹೂದ್ಯೇತರರಿಗೆ ಕಳುಹಿಸಲಾಗಿದೆ. ಅವರು ಅದಕ್ಕೆ ಕಿವಿಗೊಡುವರು. ಇದು ನಿಮಗೆ ತಿಳಿದಿರಲಿ.”
- Verse 29: ಈ ಮಾತುಗಳನ್ನು ಕೇಳಿ ಆದಮೇಲೆ ಯೆಹೂದ್ಯರು ತಮ್ಮತಮ್ಮೊಳಗೆ ತೀವ್ರವಾಗಿ ಚರ್ಚಿಸುತ್ತಾ ಹೊರಟುಹೋದರು.
- Verse 30: ಪೌಲನು ತಾನು ಬಾಡಿಗೆಗೆ ತೆಗೆದುಕೊಂಡಿದ್ದ ಮನೆಯಲ್ಲಿ ಎರಡು ವರ್ಷಗಳವರೆಗೆ ವಾಸವಾಗಿದ್ದನು. ತನ್ನನ್ನು ನೋಡಲು ಬಂದವರನ್ನೆಲ್ಲಾ ಆದರದಿಂದ ಬರಮಾಡಿಕೊಳ್ಳುತ್ತಿದ್ದನು.
- Verse 31: ಭಯಭೀತಿಯಿಲ್ಲದೆ ಹಾಗೂ ಅಡ್ಡಿಆತಂಕವಿಲ್ಲದೆ ದೇವರ ಸಾಮ್ರಾಜ್ಯವನ್ನು ಕುರಿತು ಪ್ರಬೋಧಿಸುತ್ತಿದ್ದನು; ಸ್ವಾಮಿ ಯೇಸುಕ್ರಿಸ್ತರ ವಿಷಯವಾಗಿ ಉಪದೇಶಿಸುತ್ತಿದ್ದನು.