పరిశుద్ధ గ్రంథము
ಹಳೆಯ ಒಡಂಬಡಿಕೆ
ಕೀರ್ತನೆಗಳು
144ನೇ ಅಧ್ಯಾಯ
- Verse 1: ಸ್ತುತಿಸ್ತೋತ್ರ ಪ್ರಭುವಿಗೆ, ನನ್ನ ಆಶ್ರಯದುರ್ಗಕ್ಕೆ I ಕಲಿಸಿಹನು ಕದನ ಕೈಗೆ, ಕಾಳಗ ನನ್ನ ಬೆರಳಿಗೆ II
- Verse 2: ಆತನೇ ನನಗೆ ಬಂಡೆ, ಕೋಟೆ, ದುರ್ಗ, ಉದ್ಧಾರಕ I ನನಗೆ ರಕ್ಷಾಕವಚ, ಆಶ್ರಯ, ಶತ್ರು ವಿಧ್ವಂಸಕ II
- Verse 3: ಹೇ ಪ್ರಭೂ, ಮನುಜನು ಎಷ್ಟರವನು, ನೀನವನನು ಲಕ್ಷಿಸಲು I ನರಮಾನವನು ಏತರವನು, ನೀನವನನು ಪರಾಮರಿಸಲು II
- Verse 4: ಮಾನವನು ಕೇವಲ ಉಸಿರಿಗೆ ಸಮಾನ I ಮರೆಯಾಗುವ ನೆರಳು ಅವನ ಜೀವನ II
- Verse 5: ಆಕಾಶವನು ತಗ್ಗಿಸಿ ಬಾ ಪ್ರಭು ಇಳಿದು I ಬೆಟ್ಟಗಳನು ನೀ ಮುಟ್ಟಲು, ಹೊಗೆ ಹೊರಹೊಮ್ಮುವುದು II
- Verse 6: ಸಿಡಿಲಿನಿಂದ ಚೆದರಿಸಿಬಿಡು ಶತ್ರುಗಳನು I ನಿನ್ನಂಬುಗಳಿಂದ ಭ್ರಾಂತಗೊಳಿಸವರನು II
- Verse 7: ನನ್ನ ಸೆಳೆದುಕೊ ಮಹಾಜಲರಾಶಿಯಿಂದ I ನಿನ್ನ ಕೈಚಾಚಿ ಮೇಲಣಲೋಕದಿಂದ I ನನ್ನನು ಬಿಡಿಸು ಅನ್ಯಜನರ ಕೈಯಿಂದ II
- Verse 8: ಅವರ ಬಾಯಿಂದ ಬರುವ ಮಾತು ಅಸತ್ಯ I ಅವರು ಕೈಯೆತ್ತಿ ಮಾಡುವ ಶಪಥ ಮಿಥ್ಯ II
- Verse 9: ಹಾಡುವೆ ದೇವಾ, ನಿನಗೆ ನೂತನ ಕೀರ್ತನೆಯನು I ಪಾಡುವೆ ನುಡಿಸುತ್ತಾ ದಶತಂತಿಯ ವೀಣೆಯನು II
- Verse 10: ನೀನೇ ಅರಸುಗಳಿಗೆ ಜಯಪ್ರದನು I ದಾಸ ದಾವೀದನನು ಬಿಡಿಸಿದವನು II
- Verse 11: ಕ್ರೂರ ವೈರಿಗಳಿಂದೆನ್ನ ಬಿಡಿಸಯ್ಯಾ I ಅವರ ಬಾಯಿಂದ ಬರುವ ಮಾತು ಅಸತ್ಯ I ಅವರು ಕೈಯೆತ್ತಿ ಮಾಡುವ ಶಪಥ ಮಿಥ್ಯ II
- Verse 12: ನಮ್ಮ ಗಂಡು ಮಕ್ಕಳಿರಲಿ I ಯೌವನಾವಸ್ಥೆಯಲಿ ಹುಲುಸಾಗಿ ಬೆಳೆದ ಗಿಡಗಳಂತೆ II ನಮ್ಮ ಹೆಣ್ಣುಮಕ್ಕಳಿರಲಿ I ಅರಮನೆಯಲ್ಲಿ ಕೆತ್ತಿದ ಸುಂದರ ಮೂಲೆಗಂಬಗಳಂತೆ II
- Verse 13: ತುಂಬಿರಲಿ ಸಕಲ ವಿಧ ಧಾನ್ಯಗಳಿಂದ ನಮ್ಮ ಕಣಜಗಳು I ಈಯಲಿ ಸಾವಿರಾರು ಮರಿಗಳನು ನಮ್ಮ ಹೊಲದ ಕುರಿಗಳು II
- Verse 14: ನಮ್ಮ ಹಸುಗಳು ನೂರಾರು ಕರುಗಳನ್ನೀಯಲಿ I ಮೈಯಿಳಿಯದೆ, ಲೋಪವಿಲ್ಲದೆಯೆ ಗರ್ಭಧರಿಸಲಿ I ನಮ್ಮ ಬೀದಿಗಳಲಿ ಗೋಳಾಟ ಕೇಳಿಬರದಿರಲಿ II
- Verse 15: ಇಂತಹ ಸಮೃದ್ಧಿ ಪಡೆದಿರುವ ಜನರು ಭಾಗ್ಯವಂತರು I ಯಾರಿಗೆ ದೇವರು ಪ್ರಭುವಾಗಿಹನೋ ಅವರು ಧನ್ಯರು II